ಇಂಥ ನಾಟಕೀಯ ಉತ್ಪ್ರೇಕ್ಷೆಗಳಿಂದ ಸಾಧಿಸೋದಾದ್ರೂ ಏನನ್ನು?

author-geetha‘ಈ ತರಹ ಎಲ್ಲೂ ಇಲ್ಲ.. ನಮ್ಮ ಕರ್ನಾಟಕದಲ್ಲಿ ಖಂಡಿತಾ ಇಲ್ಲ..’

‘ನೀವು ಬೆಂಗಳೂರಿನಲ್ಲಿ ಕುಳಿತುಕೊಂಡು ಇಲ್ಲ ಅಂದುಬಿಟ್ರೆ? ನಾರ್ತ್ ಕರ್ನಾಟಕದಲ್ಲಿ ಬಾಲ್ಯ ವಿವಾಹ ಇದೆ..’

‘ಬಾಲ್ಯ ವಿವಾಹ ಇಲ್ಲ.. ಸರಿ ಇದೇ ಎಂದೇ ಅಂದುಕೊಳ್ಳೋಣ.. ಆದರೆ ಹೀಗೆ ಬಾಲವಿಧವೆ, ಕೇಶಮಂಡನ, ಒಂದು ದೊಡ್ಡ ಮನೆಯಲ್ಲಿ, ಮನೆ ತುಂಬಾ ಬಿಳೇ ಸೀರೆ ಉಟ್ಟ ವಿಲನ್ ಗಳ ತರಹ ಆಡುವ ವಿಧವೆಯರು.. ಎಲ್ಲಿ ಇದ್ದಾರೆ ಹೇಳ್ತಿರಾ..?’

‘ಇರೊದೇ ತೋರಿಸಬೇಕು ಅಂತ ರೂಲ್ಸು ಇದ್ಯ?’

‘ಬಾಲ್ಯ ವಿವಾಹ ಇದ್ದರೂ ಹತ್ತು ಹನ್ನೊಂದು ವರ್ಷದ ಹುಡುಗಿಯರನ್ನು ಅತ್ತೆ ಮನೆಗೆ ಕಳಿಸೊಲ್ಲ..’

ನೀವೇನು ಅಥಾರಿಟೀನ? ನಿಮಗೆ ತಿಳಿಯದ್ದು ಇಲ್ಲವೇ ಇಲ್ಲ ಎಂದು ಸಾಧಿಸಬೇಡಿ.. ನೀವು ಕಥೆ ಬರೆಯುತ್ತೀರಿ. ನಾವು ಸೀರಿಯಲ್ ಮಾಡ್ತೀವಿ.. ಒಂದು ಚೂರು ಉತ್ಪ್ರೇಕ್ಷೆ ಇರುತ್ತೇನೋ.. ಇದು ಕಾಲ್ಪನಿಕ.. ಬಾಲ್ಯ ವಿವಾಹ, ವಿಧವಾ ಪದ್ಧತಿಯನ್ನು ನಾವು ವೈಭವೀಕರಿಸುತ್ತಿಲ್ಲ ಎಂದು ಹಾಕುತ್ತೇವೆ ಬಿಡಿ.. ಜೊತೆಗೆ ಕೊನೆಯಲ್ಲಿ ನಮ್ಮ ನಾಯಕಿ ಈ ಅನಿಷ್ಠ ಪದ್ಧತಿಯ ವಿರುದ್ಧ ಹೋರಾಡಿ ಗೆಲ್ಲುತ್ತಾಳೆ ಅಂತ ತೋರಿಸುತ್ತೇವೆ. ಬೇರೆ ಭಾಷೆಗಳಲ್ಲಿ ಬಂದು ಸೂಪರ್ ಹಿಟ್ ಆಗಿದೆ ಈ ಕಥೆ..’

ಮಾತಿಗೆ ಮಾತು.. ಬುದ್ಧಿವಂತರಿಗೆ ತಮ್ಮ ತಪ್ಪನ್ನೂ ಸಮರ್ಥಿಸಿಕೊಳ್ಳುವುದು ಕಷ್ಟವೇನಲ್ಲ. ಅಫ್ಜಲ್ ಗುರು ಪರ ಘೋಷಣೆ ಕೂಗಿದ್ದನ್ನೇ ಸಮರ್ಥಿಸಿಕೊಳ್ಳುತ್ತಾರಂತೆ..! ಇನ್ನು ಒಂದು ಕಥೆಯನ್ನು ಸಮರ್ಥಿಸಿಕೊಳ್ಳುವುದು ಹೆಚ್ಚೇನು ಅಲ್ಲ.. ಆದರೆ ಒಂದು ಸಾಮಾಜಿಕ ಜವಾಬ್ದಾರಿ ಇರಬೇಕು ಸೀರಿಯಲ್ ಮಾಡುವವರಿಗೆ. ಕಾಗಕ್ಕ, ಗುಬ್ಬಕ್ಕನ ಕಥೆ, ಪ್ರೀತಿ ಪ್ರಣಯದ ಕಥೆ, ಅತ್ತೆ ಸೊಸೆಯರ ಜಗಳ, ಒಂದು ಗಂಡು-ಎರಡು ಹೆಣ್ಣುಗಳ ಪರದಾಟ.. ಅವೆಲ್ಲವನ್ನು ಅತ್ತ ಸರಿಸಬಹುದು. ಆದರೆ, ಬಾಲ್ಯವಿವಾಹ, ವಿಧವಾ ಪದ್ಧತಿ.. (ಅದದು ಹತ್ತು ಹನ್ನೆರಡು ವರ್ಷದ ಹುಡುಗಿಗೆ ಕೇಶಮುಂಡನ ಮಾಡಲು ಹೊರಡುವುದು), ವೇಶ್ಯೆಯರ ಸಮಸ್ಯೆ, ಆತ್ಮಹತ್ಯೆ.. ಮುಂತಾದವುಗಳನ್ನು ತೋರಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವಿಶೇಷವಾಗಿ ಟಿ.ವಿ ಮಾಧ್ಯಮದಲ್ಲಿ. ಟಿ.ವಿ ನೋಡುವವರು ತಮ್ಮ ಮನೆಯಿಂದ ಆಚೆ ಬಂದು, ಟಿಕೆಟ್ ಕೊಂಡು ಸೀರಿಯಲ್ ನೋಡುವುದಿಲ್ಲ. ಅವರ ಮನೆಯಲ್ಲಿಯೇ ಅವರ ತಂದೆ ತಾಯಿ, ಮಕ್ಕಳೊಂದಿಗೆ ನೋಡುತ್ತಾರೆ. ಕಥೆ ಪುಸ್ತಕದಂತೆ ವೈಯಕ್ತಿಕವಲ್ಲ. ಸೀರಿಯಲ್ಲಿನಲ್ಲಿ ಆ ಪಾತ್ರ ಪರಿಹಾರ ಕಾಣುವ ವೇಳೆಗೆ ನಾವು ನೊಂದು ಬೆಂದು ಆಗಿರುತ್ತದೆ. ಅದು ಬಾಲ್ಯ ವಿವಾಹದಂತಹ ಪುಟ್ಟ ವಿಧವೆಯನ್ನು, ಅವಳ ಸಮಸ್ಯೆಯನ್ನು ತೋರಿಸುವಾಗ ಹೆಚ್ಚು ಸೂಕ್ಷ್ಮವಾಗಿ ಇರಬೇಕು. ಅದೂ ಈಗ ಆ ಸಮಸ್ಯೆ ಇಲ್ಲ ನಮ್ಮ ಕರ್ನಾಟಕದಲ್ಲಿ. ಇಲ್ಲದ ಸಮಸ್ಯೆಯನ್ನು ವೈಭವೀಕರಿಸಿ, ತೋರಿಸಿ ಕೊನೆಯಲ್ಲಿ ಪರಿಹಾರ ಕೊಡುತ್ತೇವೆ ಎನ್ನುವ ನಿಲುವೇ ನನಗೆ ಅರ್ಥವಾಗುತ್ತಿಲ್ಲ. ಅಷ್ಟಾಗಿ ಮಾಡಲೇಬೇಕೆಂದಿದ್ದರೆ ಇದನ್ನು ಒಂದು ಪೀರಿಯಡ್ ಡ್ರಾಮ ತರಹ ಮಾಡಬಹುದು.

‘ಪ್ರಚಲಿತ ಸಮಸ್ಯೆಗಳು ಹಲವಾರು ಇರುವಾಗ ಒಂದು ಸೀರಿಯಲ್ ಬಗ್ಗೆ ಯಾಕೆ ಆಕ್ರೋಶ? ಮಾಡೋರು ಮಾಡ್ತಾರೆ.. ನೋಡೋರು ನೋಡ್ತಾರೆ.. ನಮ್ಮ ಜನಕ್ಕೆ ತಿಳುವಳಿಕೆ ಇದೆ. ಇಷ್ಟವಾಗದಿದ್ದರೆ ತಮ್ಮ ಬೆರಳ ತುದಿಯಲ್ಲಿ ಇರುವ ಬಟನ್ ಒತ್ತಿ ಚಾನೆಲ್ ಬದಲಾಯಿಸುತ್ತಾರೆ. ಇಷ್ಟವಾದರೆ ನೋಡುತ್ತಾರೆ. ಬೇಡ ಅಂದರೆ ನೀವು ನೋಡಬೇಡಿ.. ಸೆನ್ಸಾರ್ ನವರು ನಮ್ಮ ಚಲನಚಿತ್ರಗಳನ್ನು ಕೆಟ್ಟದಾಗಿ ಸೆನ್ಸಾರ್ ಮಾಡಿ ನಮ್ಮ ಆಡು ಭಾಷೆ, ಶಿಷ್ಟ ಭಾಷೆ, ಎಲ್ಲದರ ಮೇಲೆ ಕೆಟ್ಟ ಒತ್ತಡ, ನಿರ್ಬಂಧ ಹೇರಿ ನಮ್ಮ ಚಿತ್ರಗಳನ್ನು ಹಾಳುಗೆಡವುತ್ತಿದ್ದಾರೆ.. ಇನ್ನು ಸೀರಿಯಲ್ಲುಗಳಿಗೆ ಸೆನ್ಸಾರ್ ಬಂದರೆ ನಾವು ಬರಿದೇ ಜಾಹಿರಾತುಗಳನ್ನು ನೋಡಬೇಕಾಗುತ್ತದೆ..’

ಹೀಗೆಂದು ಯಾರೂ ಹೇಳಬೇಕಾಗಿಲ್ಲ. ನನಗೇ ಗೊತ್ತು. ಆದರೆ ಕಥೆ ಮಾಡುವಾಗ, ಅದನ್ನು ಚಿತ್ರಿಸುವಾಗ.. ಸ್ವತಃ ಸೆನ್ಸಾರ್ ಹಾಕಿಕೊಂಡರೆ ಒಳಿತಲ್ಲವೇ?

ಕಥೆ, ಸೀರಿಯಲ್ ಬಿಟ್ಟು ಒಂದು ಯೋಚನೆ ಅಪ್ರಾಪ್ತ ವಯಸ್ಸಿನ ಚಾಲಕಿಯರ ವಿವಾಹದ ಬಗ್ಗೆ ಆಗಾಗ ಸುದ್ದಿ ಓದುತ್ತಿರುತ್ತೇವೆ. ಕಾಯಬೇಕಾದ ತಂದೆ ತಾಯಿಯರೇ ತಮ್ಮ ಮಗಳಿಗೆ ಮದುವೆ ಮಾಡಲು ಹವಣಿಸಿ, ಆ ಪುಟ್ಟ ಹುಡುಗಿಯೇ ಅಥವಾ ಅಕ್ಕಪಕ್ಕದವರು ಪೊಲೀಸ್ ಕಂಪ್ಲೇಂಟ್ ಕೊಟ್ಟು ತಪ್ಪಿಸಿರುವುದು ಓದಿದ್ದೇನೆ. ಆದರೆ ಮದುವೆ ಆಗಿಬಿಟ್ಟರೆ ಅದು ಸುದ್ದಿಯಾಗುವುದೇ ಇಲ್ಲ..

ಸುದ್ದಿಯಾಗುವುದು ಮುಖ್ಯ ಎಂದಲ್ಲ. ಬಾಲ್ಯ ವಿವಾಹ ಹಾಗೂ ಬಾಲ್ಯ ವಿಧವೆಯರ ಸಮಸ್ಯೆ ಇದೆಯೆಂದಾದರೆ, ಅದಕ್ಕೆ ನಾವೇನು ಮಾಡಬಹುದು? ಸೀರಿಯಲ್ ಮಾಡುವುದರ ಬದಲು..

ಎಂ.ಪಿ, ಎಂಎಲ್ಎ, ಕಾರ್ಪೊರೇಟರ್, ಪಂಚಾಯತ್ ಮೆಂಬರ್.. ಹೀಗೇ ರಾಜಕೀಯವಾಗಿ ನಾಯಕರುಗಳು.. ತಹಸಿಲ್ದಾರ್, ಕಮಿಷನರ್ .. ಹೀಗೇ ಸರ್ಕಾರಿ ಅಧಿಕಾರಿಗಳು.. ಇದರ ಮೇಲೆ ಮಹಿಳೆಯರ ಕಷ್ಟ, ವ್ಯಸನ ನೋಡಲು ಮಹಿಳಾ ಆಯೋಗ ಬೇರೆ.. ಜೊತೆಗೆ ಮಹಿಳೆಯರಿಗಾಗಿ ಶ್ರಮಿಸುವ ನೂರೆಂಟು ಎನ್ ಜಿಒಗಳು, ಮಹಿಳಾ ಸಂಘಗಳು.. ಇವರೆಲ್ಲಾ ಇತ್ತ ಕಡೆ ಗಮನಿಸಿದರೆ, ಹೊಸ ಕಾನೂನು, ಕ್ರಮ ಏನೂ ಬೇಡ.. ಇರುವುದನ್ನೇ ಅಚ್ಚುಕಟ್ಟಾಗಿ, ನಿಧಾನಿಸದೆ ಆಚರಣೆಗೆ ತಂದರೆ ಎಷ್ಟೋ ಮಕ್ಕಳ ಭವಿಷ್ಯ ಚೆಂದವಾಗುತ್ತದೆ.

ನಮ್ಮ ಅರಿವಿಗೆ ಇಂತಹ ವಿಷಯಗಳು ಬಂದರೆ.. ಕಥೆ ಬರೆದೋ, ಲೇಖನ ಬರೆದೋ, ಸೀರಿಯಲ್ ಮಾಡಿಯೋ ತಮ್ಮ ತುಡಿತ ತೀರಿಸಿಕೊಳ್ಳುವ ಬದಲು ರಾಜಕೀಯ ನಾಯಕರ, ಅಧಿಕಾರಿಗಳ, ಮಹಿಳಾ ಆಯೋಗದ ಅಧ್ಯಕ್ಷರ ಗಮನಕ್ಕೆ ತರಲು ನಮಗೆ ಒಂದು ಮಾಧ್ಯಮ ಬೇಕು.. ಇವರೆಲ್ಲಾ ಒಂದು ಕರೆಗೆ ಸ್ಪಂದಿಸುವಂತಿರಬೇಕು.

ಒಂದು ದೊಡ್ಡ ಹವೇಲಿಯಂಥಹ ಮನೆಯಲ್ಲಿ ಬಿಳಿ ಸೀರೆ ಉಟ್ಟ ವಿಲನ್ ಗಳಂಥ ವಿಧವೆಯರ ನಡುವೆ ಕೂದಲು ಕತ್ತರಿಸಿಕೊಳ್ಳುವುದಿಲ್ಲ ಎಂದು ಹೇಳುವ ಪುಟ್ಟ ವಿಧವೆಯ ಕಥೆ ನೋಡುವುದು ಬೇಕಿಲ್ಲ.

Leave a Reply