ಕೇಂದ್ರದ ಗ್ರಾಮ ವಿದ್ಯುದೀಕರಣ, ಈ ಹಳ್ಳಿಗಳಲ್ಲಿ ಅದೆಂಥ ಸಂಭ್ರಮ!

ಡಿಜಿಟಲ್ ಕನ್ನಡ ಟೀಮ್

ಎಲ್ಲ ಹಳ್ಳಿಗಳಿಗೆ ವಿದ್ಯುತ್. ಇದು ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಘೋಷಣೆಯಾದಾಗಿನಿಂದ ದಿನಕ್ಕೆ, ವಾರಕ್ಕೆಲ್ಲ ಆಗಿರುವ ಕೆಲಸದ ಬಗ್ಗೆ ವಿವರ ಬಿತ್ತರಿಸುತ್ತಿರುವುದನ್ನು ಇಲ್ಲಿ ಕಾಣಬಹುದು. ವಿದ್ಯುತ್ ಖಾತೆ ವಹಿಸಿಕೊಂಡಿರುವ ಪಿಯೂಶ್ ಗೋಯಲ್ ಇದನ್ನೊಂದು ತಪಸ್ಸಿನಂತೆ ಹಿಡಿದಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. garv.gov.in ತಾಣಕ್ಕೆ ಹೋದರೆ ವಿದ್ಯುದೀಕರಣದ ಪ್ರಗತಿಯ ಎಲ್ಲ ತಾಜಾ ಮಾಹಿತಿಗಳು ಲಭ್ಯ. ಸಚಿವ ಗೋಯಲ್ ಅವರಂತೂ ಯೋಜನೆಯಲ್ಲಾದ ಪ್ರಗತಿ ಬಗ್ಗೆ ಟ್ವೀಟಿಸುತ್ತಲೇ ಇರುತ್ತಾರೆ. ‘ಕಳೆದೊಂದು ವರ್ಷದಲ್ಲಿ ಉತ್ತರ ಪ್ರದೇಶದ 1023 ಹಳ್ಳಿಗಳನ್ನು ವಿದ್ಯುದೀಕರಣಗೊಳಿಸಲಾಗಿದೆ. ಅದಕ್ಕೂ ಹಿಂದಿನ ಏಳು ವರ್ಷಗಳಲ್ಲಿ 60 ಹಳ್ಳಿಗಳಿಗಷ್ಟೇ ವಿದ್ಯುತ್ ಕೊಡಲಾಗಿತ್ತು’ ಎಂಬುದು ಪಿಯೂಶರ ಇತ್ತೀಚಿನ ಟ್ವೀಟ್ ಮಾಹಿತಿ.

18 ಸಾವಿರ ಹಳ್ಳಿಗಳಿಗೆ ಸಾವಿರ ದಿನಗಳಲ್ಲಿ ವಿದ್ಯುತ್ ನೀಡಿಯೇ ಸಿದ್ಧ ಎಂದು ತಾವು ಕೆಂಪುಕೋಟೆ ಮೇಲೆ ನೀಡಿದ್ದ ವಾಗ್ದಾನವನ್ನು ಪ್ರಧಾನಿ ಮೋದಿ ಆಗಾಗ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ.  ಕೇಂದ್ರ ಸರ್ಕಾರದ ಈ ಅಭಿಯಾನ ಚಾಲನೆಗೆ ಬಂದ ನಂತರ ವಿದ್ಯುತ್ ಇಲ್ಲದ ಹಳ್ಳಿಗಳ ಸಂಖ್ಯೆ 18452 ದಿಂದ 12100ಕ್ಕೆ ಇಳಿದಿದೆ.

piyush-goyal

ಪಿಯೂಶ್ ಗೋಯೆಲ್ ನೇತೃತ್ವದ ಇಂಧನ ಸಚಿವಾಲಯವು ತುಂಬ ಆಸ್ಥೆಯಿಂದ ತೊಡಗಿಸಿಕೊಂಡಿರುವ ಈ ಯೋಜನೆಯನ್ನು ಅಂಕಿಅಂಶಗಳಲ್ಲಿ ಇನ್ನೂ ಹಲವು ವಿಧಗಳಲ್ಲಿ ಬಣ್ಣಿಸಬಹುದು.

ಆದರೆ…

ಹಳ್ಳಿಗಳಿಗೆ ವಿದ್ಯುದೀಕರಣ ಎಂಥ ಮಹತ್ವದ ಸಂಗತಿ, ಅದು ಹಳ್ಳಿಗರ ಬದುಕನ್ನು ಹೇಗೆಲ್ಲ ಪ್ರಭಾವಿಸುತ್ತಿದೆ ಎಂಬ ಚಿತ್ರಣವನ್ನು ಆ ಅನುಭವದ ಪುಳಕಕ್ಕೆ ಸಿಕ್ಕವರ ಬಳಿಯೇ ತಿಳಿದುಕೊಳ್ಳಬೇಕು. ನಗರವಾಸಿಗಳಿಗೆ ಕರೆಂಟ್ ಎಂದರೆ ಮೊಬೈಲ್ ಫೋನಿಗೆ ಚಾರ್ಜು ಹಾಕುವ, ಕಂಪ್ಯೂಟರ್ ಬೆಳಗಿಸುವ, ಟಿವಿ ನೋಡಲು ಅನುವಾಗುವ ಸೌಲಭ್ಯ ಎಂಬಂತೆ ಇದ್ದೇವೆ. ಆದರೆ ವಿದ್ಯುತ್ತೇ ಇಲ್ಲದ ಹಳ್ಳಿಗಳಲ್ಲಿ ಅದು ಸುಖ ಹೆಚ್ಚಿಸುವ ಸಂಗತಿ ಅಲ್ಲ. ಬದಲಿಗೆ ಅವರ ಜೀವನವನ್ನೇ ಗಾಢವಾಗಿ, ಹಿತವಾಗಿ ತಾಗುವ ಅಂಶ.

ಕೇಂದ್ರ ಸರ್ಕಾರದ ವಿದ್ಯುದೀಕರಣ ಯೋಜನೆ ಹಳ್ಳಿಗಳನ್ನು ತಡವುತ್ತಿರುವ ಸಂದರ್ಭದಲ್ಲಿ ಕತ್ತಲ ಸಾಮ್ರಾಜ್ಯದಲ್ಲಿದ್ದ ಅವರೆಲ್ಲರ ಅನುಭವ ಲೋಕ ಹೆಂಗೆಲ್ಲಅರಳುತ್ತಿದೆ ಅಂತ ಅರ್ಥ ಮಾಡಿಕೊಳ್ಳಬೇಕಾದರೆ, ಅಂಥ ಹಳ್ಳಿಗಳನ್ನು ಸಂದರ್ಶಿಸಿ ಗಾರ್ಡಿಯನ್ ಪತ್ರಿಕೆ ಮಾಡಿರುವ ವರದಿಯನ್ನು ಓದಿಕೊಳ್ಳಬೇಕು. ರಾಜಸ್ಥಾನದ ಹೊತಾಸರ್ ಎಂಬ ಕರೆಂಟ್ ಬರಮಾಡಿಕೊಳ್ಳುತ್ತಿರುವ ಹಳ್ಳಿಯ ಕುರಿತ ಆ ಸುದೀರ್ಘ ವರದಿಯ ಕೆಲವೇ ಆಸಕ್ತಿದಾಯಕ ಬಿಂಬಗಳನ್ನು ಇದೋ ಇಲ್ಲಿ ಹರಡಿ ಇಡುತ್ತಿದ್ದೇವೆ..

  • ವಿದ್ಯುತ್ ಬರುತ್ತಿದೆ ಎಂಬ ಸಂಭ್ರಮದ ವಾತಾವರಣದಲ್ಲೇ ಹುಸೇನ್ ಎಂಬ ಯುವಕ ವಿಷಾದವೊಂದನ್ನು ಹೊರಚೆಲ್ಲುತ್ತಾನೆ- ‘5 ನೇ ತರಗತಿ ತಲುಪಿದ ನಂತರ 3 ಬಾರಿ ನಪಾಸಾದೆ. ಕಾರಣ ಶಾಲೆಯಿಂದ ಮನೆಗೆ ಬಂದಾಗ ಓದಲು ವಿದ್ಯುತ್ ದೀಪ ಇರಲಿಲ್ಲ. ಕೊನೆಗೊಂದಿನ ನನ್ನ ತಂದೆ ‘ನೀನು ಶಾಲೆಗೆ ಹೋಗುವುದು ಅನುತ್ತೀರ್ಣನಾಗುವುದಕ್ಕಾ’ ಎಂದು ಶಾಲೆಯನ್ನು ಬಿಡಿಸಿದರು…
  • 10 ವರ್ಷದ ಕಾಟುಬಾಯ್ ಮಂಚದ ಬಳಿ ನಿಂತು ಹೊರಗೆ ಕೈ ತೋರಿಸಿ ಕಂಪಿಸುವ ಧ್ವನಿಯಲ್ಲಿ ಹೇಳ್ತಾಳೆ- ‘ರಾತ್ರಿ ಮೂತ್ರಕ್ಕೆ ಹೊರಹೋಗುವುದಕ್ಕೆ ಹೆದ್ರಿಕೆ ಆಗುತ್ತೆ. ಕತ್ತಲು. ಹಾವು- ಚೇಳು ಎಲ್ಲ ಇರ್ತಾವೆ..’ ಇದೇ ಕತ್ತಲನ್ನು ಉಪಯೋಗಿಸಿಕೊಂಡು ಹೆಂಗಸರ ಮೇಲೆ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳಗಳು ನಡೆಯುತ್ತವೆ ಎಂಬುದು ಹಳ್ಳಿಗರ ಕೆಟ್ಟ ಅನುಭವ.
  • ಜೈಸಲ್ಮೆರ್ ಜಿಲ್ಲೆಯ 126 ಹಳ್ಳಿಗಳಿಗೆ ವಿದ್ಯುತ್ ನೀಡುವ ಜವಾಬ್ದಾರಿ ಹೊತ್ತಿರುವ ಅಧಿಕಾರಿ ವಿಶಾಲ್ ಸಿಂಗ್ ಹೇಳ್ತಾರೆ-  ‘ಇಲ್ಲಿಗೆ ವಿದ್ಯುತ್ ನೀಡಲು ಯಾವುದೇ ನಕ್ಷೆಗಳು, ಹೆಗ್ಗುರುತುಗಳು ಅಥವಾ ಯಾವುದೇ ಗಡಿರೇಖೆಗಳು ಇಲ್ಲ. ಈ ಜಾಗಗಳಿಗೆ ತೆರಳಿ ಎಲ್ಲವನ್ನು ಗುರುತಿಸಿ ವಿದ್ಯುತ್ ಸೌಕರ್ಯ ನೀಡ್ತಿದ್ದೇವೆ…’
  • ಈ ವಿದ್ಯುದೀಕರಣ ಯೋಜನೆ ಬರೀ ಘೋಷಣೆಯಾಗಿಯಲ್ಲದೇ ವಾಸ್ತವದಲ್ಲಿ ತ್ವರಿತ ಅನುಷ್ಠಾನ ಹೊಂದುತ್ತಿದೆ ಎಂಬುದು ವಿದ್ಯುತ್ ಯೋಜನೆ ಗುತ್ತಿಗೆ ಪಡೆದ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ವಿನೋದ್ ಶರ್ಮಾ ಮಾತುಗಳಲ್ಲಿ ಸ್ಪಷ್ಟವಾಗುತ್ತದೆ. ‘ಸರ್ಕಾರ ಈ ಬಾರಿ ನಮ್ಮ ಬೆನ್ನಿಗಿದೆ. ಈ ಹಿಂದಿನ ಯೋಜನೆಗಳು ಕುಂಟಿತಗೊಂಡಿದ್ದವು. ಕಾರಣ ಪೂರ್ಣಗೊಳಿಸುವ ಬದ್ಧತೆ ಯಾರಿಗೂ ಇರಲಿಲ್ಲ. ಆದರೆ ಈಗ ಒಂದೇ ಒಂದು ಪೋನ್ ಕಾಲ್ ಮಾಡಿದರೆ ಮಾರನೆ ದಿನ ವಿದ್ಯುತ್ ಮಾರ್ಗಕ್ಕೆ ಬೇಕಿರುವ ಸಲಕರಣೆಗಳು ಸಿದ್ಧವಿರುತ್ತವೆ. ಸಂಸ್ಥೆ ನೀಡಿರುವ ಟಾರ್ಗೆಟ್ ತಲುಪದಿದ್ದಲ್ಲಿ ದಂಡ ಕಟ್ಟಬೇಕು. ಆದ್ದರಿಂದ ಸಾಧ್ಯವಾದಷ್ಟು ವೇಗವಾಗಿ ಕೆಲಸ ಮುಗಿಸುತ್ತಿದ್ದೇವೆ’
  • ಹಳ್ಳಿಗೆ ವಿದ್ಯುತ್ ಬರುತ್ತಿರುವುದು ಹಲವು ಸ್ಥಳೀಯರಿಗೆ ಬೇರೆಯದೇ ಪ್ರಪಂಚ ತೆರೆದಿರಿಸಿ ಅಚ್ಚರಿಯಲ್ಲಿ ಮುಳುಗಿಸಿಬಿಟ್ಟಿದೆ. ‘ಬಲ್ಬ್ ಅನ್ನು ಈವರೆಗೆ ನೋಡಿಯೇ ಇರಲಿಲ್ಲ’ ಅಂತ ಬೆರಗಿಗೆ ಬೀಳುತ್ತಾ ಮುಖವರಳಿಸಿಕೊಂಡಿರುವ 20 ವರ್ಷದ ಲೀಲಾಬಾಯ್ ಇಲ್ಲಿದ್ದಾರೆ! ‘ಹಳ್ಳಿ ಜನರ ಸಂತೋಷ ನೋಡಿ ನನ್ನ ಕೆಲಸದ ಬಗ್ಗೆ ಹೆಮ್ಮೆ ಅನ್ನಿಸುತ್ತಿದೆ’ ಅಂತ ಎಲೆಕ್ಟ್ರಿಶಿಯನ್ ಖಾನ್ ಎದೆಯುಬ್ಬಿಸಿಕೊಳ್ಳುತ್ತಾನೆ…

ಇದು ಬರಿ ಬೆಳಕಲ್ಲವೋ ಅಣ್ಣಾ!

Leave a Reply