ಬ್ರುಸೆಲ್ಸ್ ದುಃಖದಲ್ಲಿ ಭಾಗಿಯಾಗೋಣ, ಹಾಗೆಯೇ ಕೆಲ ನಿರ್ದಯ ಪ್ರಶ್ನೆಗಳನ್ನೂ ಕೇಳೋಣ!

ಪ್ರವೀಣ್ ಕುಮಾರ್

ಬೆಲ್ಜಿಯಂನ ಬ್ರುಸೆಲ್ಸ್ ನಗರ ಉಗ್ರದಾಳಿಗೆ ತುತ್ತಾಗಿರುವ ಸಂದರ್ಭದಲ್ಲಿ ಭಾರತವೂ ಸೇರಿದಂತೆ ಜಗತ್ತೇ ಅದರ ಜತೆ ನಿಲ್ಲಬೇಕು ಎಂಬುದೇನೋ ಸರಿ.

ಆದರೆ…

ಪ್ಯಾರಿಸ್ ದಾಳಿಗೆ ಒಳಗಾದಾಗ ಆ ದೇಶದ ಬಾವುಟ ಹೊದ್ದು ಜತೆಗಿದ್ದೇವೆ ಎಂದಂತೆ, ಈ ಬಾರಿ ಸ್ಮಾರಕಗಳ ಮೇಲೆಲ್ಲ ಬೆಲ್ಜಿಯಂ ರಾಷ್ಟ್ರಧ್ವಜದ ಬಣ್ಣಗಳನ್ನು ಬಿಟ್ಟು ಜಗತ್ತಿನೆಲ್ಲೆಡೆ ಸಂತಾಪ ಸೂಚಿಸಲಾಗುತ್ತಿದೆ. ಮಾನವತೆ, ಅನುಕಂಪ ಸೂಚಿಸುವ ಇಂಥ ಎಲ್ಲ ಬಗೆಗಳು ಇರಲಿ. ಆದರೆ ಉಗ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಸಾಮಾನ್ಯರು ಮಾಡಬಹುದಾದ ಕೆಲಸ ಎಂದರೆ ಕಠಿಣ ಪ್ರಶ್ನೆಗಳಿಗೆ ಮುಖಾಮುಖಿ ಆಗುವುದು, ಅಂಥವನ್ನು ನಿತ್ಯದ ಮಾತುಕತೆ, ಸಾಮಾಜಿಕ ಮಾಧ್ಯಮದಲ್ಲಿ ಇಡೋದು.

ಅಯ್ಯೋ ಪಾಪ, ಬ್ರುಸೆಲ್ಸ್… ಹೌದೇ? ಉಗ್ರವಾದದ ವಿಷಯದಲ್ಲಿ ಭಾರತಕ್ಕೆ ಈ ಮಾತು ಲಗತ್ತಾಗಬಹುದಷ್ಟೆ. ಏಕೆಂದರೆ ಗಡಿಯಾಚೆಗಿಂದ ಬಂದ ಉಗ್ರರೇ ಇಲ್ಲಿ ವಿಧ್ವಂಸಗಳನ್ನು ಸೃಷ್ಟಿಸಿದ್ದಾರೆ. ಅಂಥವರಿಗೆ ಈ ನೆಲದಲ್ಲೇ ಇದ್ದು ಸಹಕರಿಸುತ್ತಿರುವ ಆರೋಪ ಹೊತ್ತವರನ್ನು ಬಂಧಿಸಿ ವಿಚಾರಣೆಗೂ ಒಳಪಡಿಸಲಾಗುತ್ತಿದೆ.

ಇವತ್ತಿಗೆ ಯುರೋಪಿಯನ್ ರಾಷ್ಟ್ರಗಳಲ್ಲಿಆಗುತ್ತಿರೋದೇನು? ಅದೇಕೆ ಅವರದೇ ನಗರದ ಅಪಾರ್ಟ್ ಮೆಂಟ್ ಗಳಿಂದ ಜಿಹಾದಿಗಳು ಜಿರಳೆಗಳಂತೆ ಮಿಜಿಗುಡುತ್ತಿದ್ದಾರೆ? ಪ್ಯಾರಿಸ್ ಗಾಗಲೀ, ಬೆಲ್ಜಿಯಂಗಾಗಲೀ ಬಾಂಬಿಡುತ್ತಿರುವವರು ಹಾಗೆಯೇ ಟೂರಿಗೆ ಬಂದವರಾ? ನಿನ್ನೆಯಿಂದ ಇವತ್ತಿಗೆ ಏಕಾಏಕಿ ಆಗಿಬಿಟ್ಟ ಬೆಳವಣಿಗೆಯಾ ಇದು?

ಸ್ಸಾರಿ.. ಇದು ಯುರೋಪಿಯನ್ ರಾಷ್ಟ್ರಗಳ ಹಲವು ವರ್ಷಗಳ ನಿರ್ಲಕ್ಷ್ಯದ ಫಲ!

ನವೆಂಬರ್ ನಲ್ಲಿ ಪ್ಯಾರಿಸ್ ಮೇಲೆ ದಾಳಿಯಾಗಿ 130 ಮಂದಿ ಸತ್ತರಲ್ಲ. ಅದರ ಸಂಚು ರೂಪಿಸಿದವನು, ಆತನ ಸಹಚರರು ಅಲ್ಲೆಲ್ಲೋ ಅಫಘಾನಿಸ್ತಾನದ ಗುಹೆಯಲ್ಲಿ ಕುಳಿತಿದ್ದರಾ?

ಗೊತ್ತಿರಲಿ. ಅವರೆಲ್ಲರ ಬಂಧನವಾಗಿದ್ದು ಇದೇ ಬೆಲ್ಜಿಯಂನ ಮೊಲೆನ್ಬೀಕ್ ಎಂಬ ನಗರದಲ್ಲಿ. ಪ್ಯಾರಿಸ್ ಗೆ ಬಾಂಬಿಟ್ಟ ಮುಖ್ಯ ದಾಳಿಕೋರ ಉಗ್ರನೆಂಬ ಆರೋಪ ಹೊತ್ತಿರುವ ಸಲಾಹ್ ಅಬ್ದೆಸ್ಲಾಮ್, ಕೃತ್ಯ ಮುಗಿದ ಮಾರನೇ ದಿನವೇ ಬೆಲ್ಜಿಯಂಗೆ ವಾಪಸಾಗಿ ಮೊಲೆನ್ಬೀಕ್ ನಲ್ಲಿದ್ದ. ಆತನನ್ನು ಎಳೆದುಕೊಂಡುಹೋಗಿದ್ದು ತೀರ ಇತ್ತೀಚೆಗೆ ಅಂದರೆ ಮಾರ್ಚ್ 18ರಂದು. ಅವನ ಜತೆ ಒಂದಿಷ್ಟು ಸಹಚರರನ್ನೂ ಬಂಧಿಸಲಾಯಿತು.

ಈ ಬಂಧನಗಳಿಗೆ ಪ್ರತಿಯಾಗಿಯೇ ಬ್ರುಸೆಲ್ಸ್ ಗೆ ಇಸ್ಲಾಮಿಕ್ ಉಗ್ರರು ಬಾಂಬ್ ಇಟ್ಟಿದ್ದಾರೆ ಅಂತ ಈಗ ವ್ಯಾಖ್ಯಾನಗಳು ತೇಲಿಬರುತ್ತಿವೆ. ಸಲಾಹ್ ಮತ್ತು ಆತನ ಸಹಚರರಿಗೆ ಬೆಲ್ಜಿಯಂ ಸತ್ಕರಿಸಿಕೊಂಡಿದ್ದರೆ ಬಾಂಬ್ ಇಡುತ್ತಿರಲಿಲ್ಲವಾ ಹಾಗಾದರೆ? ಈ ಮಹಾಪುರುಷ ತನ್ನ ಫ್ಲಾಟ್ ನಲ್ಲೇ ಹಲವರನ್ನು ಇರಿಸಿಕೊಂಡು, ಸಂಚು ರೂಪಿಸುವುದಕ್ಕೆ ಯುರೋಪಿನಲ್ಲೆಲ್ಲ ಸುತ್ತಾಡಿಸಿ, ಬಾಂಬ್ ಸ್ಫೋಟದ ಉಪಕರಣಗಳನ್ನೂ ರೂಪಿಸಿದ್ದ. ಇದೀಗ ಬೆಲ್ಜಿಯಂ ಮಾಧ್ಯಮ ವಿಶ್ಲೇಷಕರು ಸಣ್ಣಧ್ವನಿಯಲ್ಲಿ ಹೇಳ್ತಿದಾರೆ- ನಮಗೆ ಇಂಥದೊಂದು ಉಗ್ರದಾಳಿ ಆಗಬಹುದೆಂಬ ಆತಂಕ ಇತ್ತು. ಇಷ್ಟು ಬೇಗ, ಇಷ್ಟು ತೀವ್ರತೆಯಲ್ಲಿ ಆಗಬಹುದೆಂದುಕೊಂಡಿರಲಿಲ್ಲ ಅಂತ!

ಅಯ್ಯೋ ಪಾಪ…

ಬೆಲ್ಜಿಯಂ ಏನೂ ಮುಗ್ಧರ ಸ್ವರ್ಗವಲ್ಲ. ಅಲ್ಲಿನ ಒಂದು ವರ್ಗ ಸಿರಿಯಾ ಮತ್ತು ಇರಾಕ್ ಗಳ ಜಿಹಾದಿ ಪಡೆಗಳನ್ನು ಸೇರಿಕೊಂಡ ವರದಿಗಳು ಸಾಕಷ್ಟಿವೆ. ಮೊರಾಕ್ಕೊ ಮೂಲದವರ ಜನಸಂಖ್ಯೆ ಹೆಚ್ಚಿರುವ ಮೊಲೆನ್ಬೀಕ್ ಸೇರಿದಂತೆ ಹಲವು ನಗರಗಳಲ್ಲಿ ಇಸ್ಲಾಮಿಕ್ ಕಟ್ಟರ್ ವಾದದ ಸೆಲ್ ಗಳು ನಿರ್ಮಾಣವಾಗುತ್ತಿವೆ ಎಂಬ ಸಂಗತಿ ಜಗತ್ತಿಗೇನೂ ಗೊತ್ತಿರದ್ದೇನಲ್ಲ. ಮೊಳಕೆಯಲ್ಲಿ ಚಿವುಟಬೇಕಿರುವುದು ಬುದ್ಧಿವಂತರ ಲಕ್ಷಣ. ಅಯ್ಯೋ, ಅಂಥ ತರಾತುರಿಗೆ ಬಿದ್ದರೆ ಕೆಲವರು ಏನಂದುಕೊಂಡುಬಿಡುತ್ತಾರೋ ಎಂಬ ಇಮೇಜ್ ಸಮಸ್ಯೆ ಕಾಡಿದರೆ ಅದು ತುಷ್ಟೀಕರಣ! ಇದರ ಫಲ ಒಂದಿಲ್ಲೊಂದು ದಿನ ಬುಡಕ್ಕೆ ಬಂದೇ ಬರುತ್ತದೆ. ಬೆಲ್ಜಿಯಂಗಾಗಿರೋದು ಅದೇ.

ನಿನ್ನೆ ಪ್ಯಾರಿಸ್ ಪರವಾಗಿ, ಇವತ್ತು ಬೆಲ್ಜಿಯಂ ಪರವಾಗಿ ಭಾರತೀಯರು ಕ್ಯಾಂಡಲ್ ಬೆಳಗಿಡಲಿ. ಫೇಸ್ಬುಕ್ ಭಾವಚಿತ್ರಗಳಿಗೂ ಬೆಲ್ಜಿಯಂ ರಾಷ್ಟ್ರಧ್ವಜದ ಬಣ್ಣ ಬಳಿದುಕೊಂಡೋ, ಇನ್ಯಾವುದೋ ರೀತಿಯಲ್ಲೋ ಯುರೋಪಿನ ಜೀವನಷ್ಟಕ್ಕೆ ಮಿಡಿಯುವುದೂ ತಪ್ಪಲ್ಲ.

ಅಷ್ಟೆಲ್ಲ ಮಾಡಿದ ನಂತರ ಗಟ್ಟಿ ಧ್ವನಿಯಲ್ಲಿ ಈ ಪಶ್ಚಿಮದ ರಾಷ್ಟ್ರಗಳಿಗೆ ಹೇಳಬೇಕಾಗುತ್ತದೆ- ಉಗ್ರವಾದಕ್ಕೆ ಫಲವತ್ತು ಭೂಮಿ ಒದಗಿಸಿ ನಿಸ್ಸಹಾಯಕತೆ ಮೆರೆಯುತ್ತಿರುವ ರೋಗಗ್ರಸ್ಥ ರಾಷ್ಟ್ರಗಳಿಗೆ ಯುದ್ಧ ವಿಮಾನ ಮಾರಿಕೊಂಡಿರುವ ಕೆಟ್ಟ ವ್ಯವಹಾರ ಮೊದಲು ನಿಲ್ಲಿಸಿ. ತೈಲ ರಾಜಕಾರಣಕ್ಕಾಗಿ ಯಾರ್ಯಾರ ಕೈಗೋ ಬಂದೂಕು ಕೊಟ್ಟ ಪಾಪಪ್ರಜ್ಞೆ ಈಗಲಾದರೂ ಕಾಡಲಿ.

ಸಿಸಿಟಿವಿ ದೃಶ್ಯದಲ್ಲಿಬ್ರುಸೆಲ್ಸ್ ವಿಮಾನ ನಿಲ್ದಾಣಕ್ಕೆ ಬಾಂಬಿಟ್ಟ ಶಂಕಿತ ಉಗ್ರರು ಹೀಗೆ ಕಾಣಿಸಿದ್ದಾರೆ.
ಸಿಸಿಟಿವಿ ದೃಶ್ಯದಲ್ಲಿಬ್ರುಸೆಲ್ಸ್ ವಿಮಾನ ನಿಲ್ದಾಣಕ್ಕೆ ಬಾಂಬಿಟ್ಟ ಶಂಕಿತ ಉಗ್ರರು ಹೀಗೆ ಕಾಣಿಸಿದ್ದಾರೆ.

Leave a Reply