ಹುಡುಗ್ರು ಹೆಚ್ಚು ಹಣ ಪಡೆಯೋ ವಿಷ್ಯದಲ್ಲಿ ಜೊಕೊವಿಚ್ ಹೇಳಿದ್ದುಕೇಳಿ ನಮ್ಮನ್ನು ಕಾಡಬೇಕಿರೋ ಯೋಚನೆ ಯಾವುದು?

ಸೋಮಶೇಖರ ಪಿ. ಭದ್ರಾವತಿ

ವಿಶ್ವದ ನಂಬರ್ ಒನ್ ಟೆನಿಸಿಗ ಸರ್ಬಿಯಾದ ನೊವಾಕ್ ಜೊಕೊವಿಚ್, ‘ಟೆನಿಸ್ ನಲ್ಲಿ ಮಹಿಳೆಯರಿಗಿಂತ ಪುರುಷರು ಹೆಚ್ಚು ಸಂಭಾವನೆ ಪಡೆಯೋದರಲ್ಲಿ ನ್ಯಾಯವಿದೆ’ ಎಂದಿದ್ದು ಈಗ ವ್ಯಾಪಕ ಚರ್ಚೆ- ಟೀಕೆಗಳಿಗೆ ದಾರಿ ಮಾಡಿಕೊಡುತ್ತಿದೆ. ಜೊಕೊವಿಚ್ ನಿಲುವನ್ನು ಹಲವರು ತರಾಟೆಗೆ ತೆಗೆದುಕೊಳ್ಳುತ್ತಲೇ, ‘ನಾನು ಹೇಳಿದ್ದು ಆ ಅರ್ಥದಲ್ಲಲ್ಲ’ ಅಂತ ಮೃದುವಾಗಿ, ನೋವಾದ್ರೆ ಕ್ಷಮೆ ಇರಲಿ ಎಂದಿದ್ದಾರೆ.

ಇದು ಕೇವಲ ಟೆನಿಸ್ ಅಥವಾ ಕ್ರೀಡಾಲೋಕಕ್ಕೆ ಸಂಬಂಧಿಸಿದ ವಿಷಯವಲ್ಲ. ಬಹಳಷ್ಟು ವಲಯಗಳಲ್ಲಿ ಇದೇ ಆಗುತ್ತಿರುವುದು. ಇದೀಗ ಇಂಥ ಸಮಾನ ಸಂಭಾವನೆಯ ಪ್ರಶ್ನೆ ಮೇಲ್ಮಟ್ಟದಲ್ಲಿ ಶುರುವಾಗಿದೆ. ಇದಕ್ಕಿಂತ ಮೊದಲು ಹಾಲಿವುಡ್ ಇಂಥದೊಂದು ಚರ್ಚೆಗೆ ಒಳಪಟ್ಟಿದೆ.

ಆಸ್ಕರ್ ಪ್ರಶಸ್ತಿ ವಿಜೇತೆ ಜೆನಿಫರ್ ಲಾರೆನ್ಸ್ ನಟಿಯರ ಸಂಭಾವನೆಯಲ್ಲೇಕೆ ತಾರತಮ್ಯ ಎಂಬ ಪ್ರಶ್ನೆ ಎತ್ತಿದ್ದರು. ‘ಅಮೆರಿಕನ್ ಹಸಲ್ ಚಿತ್ರದಲ್ಲಿ ನನ್ನ ಪಾತ್ರ ಪ್ರಮುಖವಾಗಿತ್ತು. ಆದರೆ ಪೋಷಕ ಪಾತ್ರದ ಸಹ ನಟನಿಗೆ ನನಗಿಂತ ಹೆಚ್ಚಿನ ಸಂಭಾವನೆ ಸಿಕ್ಕಿದೆ. ಇದೇಕೆ ಹೀಗೆ?’ ಎಂಬ ಪ್ರಶ್ನೆ ಎತ್ತಿದ್ದರು ಲಾರೆನ್ಸ್. ಈ ಆಕ್ರೋಶ ಹಾಲಿವುಡ್ ನಲ್ಲಿ ಸಮಾನ ಸಂಭಾವನೆಯ ಧ್ವನಿಗಳು ಬಲಪಡೆಯುವುದಕ್ಕೆ ಪ್ರೇರೇಪಿಸಿದೆ.

ಪ್ರಾರಂಭದಲ್ಲಿ ತಮ್ಮ ವಾದ ಸಮರ್ಥನೆಗೆ ಜೊಕೊವಿಚ್ ಹೇಳಿದ್ದು- ಪುರುಷರ ಟೆನಿಸ್ ಆಕರ್ಷಣೆಯೇ ಹೆಚ್ಚಿದೆ ಅನ್ನೋದು. ಬಹುಶಃ ಅವರ ಮಾತು ಕೆಲ ವರ್ಷಗಳ ಹಿಂದಿನ ಸ್ಥಿತಿಯಲ್ಲಾದರೆ ಸರಿ ಹೊಂದುತ್ತಿತ್ತು. ಆದರೆ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ, ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಟೂರ್ನಿಯ ಇತಿಹಾಸದಲ್ಲಿ ಕಳೆದ ವರ್ಷದ ಆವೃತ್ತಿಯಲ್ಲಿ ಮೊದಲ ಬಾರಿಗೆ ಪುರುಷರ ಸಿಂಗಲ್ಸ್ ಗಿಂತ ಮಹಿಳೆಯರ ಸಿಂಗಲ್ಸ್ ನ ಫೈನಲ್ ಪಂದ್ಯದ ಟಿಕೆಟ್ ಬೇಗನೆ ಬಿಕರಿಯಾಗಿತ್ತು.

2013 ಮತ್ತು 14ರ ಯುಎಸ್ ಓಪನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನ ಫೈನಲ್ ಪಂದ್ಯ, ಪುರುಷರ ಸಿಂಗಲ್ಸ್ ಪಂದ್ಯಕ್ಕಿಂತ ಹೆಚ್ಚು ಟಿವಿ ಪ್ರೇಕ್ಷಕರನ್ನು ಪಡೆದಿತ್ತು. 2013ರ ಅಂಕಿ ಅಂಶಕ್ಕೂ ಹಾಗೂ 2014ರ ಅಂಕಿ ಅಂಶವನ್ನು ನೋಡಿದಾಗ ಮಹಿಳೆಯರ ಪಂದ್ಯ ವೀಕ್ಷಣೆಯಲ್ಲಿ, ಟಿವಿ ಮತ್ತು ಡಿಜಿಟಲ್ ಪ್ರೇಕ್ಷಕರ ಪ್ರಮಾಣ ಬರೋಬ್ಬರಿ ಶೇ.22.5 ರಷ್ಟು ಹೆಚ್ಚಿದೆ.

ಆದರೆ ಈ ಮಟ್ಟಕ್ಕೆ ಬಂದು, ಜೊಕೊವಿಚ್ ಹೇಳಿಕೆಗೆ ಪ್ರತಿವಾದ ಮಂಡಿಸುವ ಸಾಮರ್ಥ್ಯ ಪಡೆದಿರುವ ಮಹಿಳಾ ಟೆನಿಸ್ ವಲಯ ಎಲ್ಲವನ್ನೂ ಏಕಾಏಕಿ ಸಾಧಿಸಿಲ್ಲ. ಮಹಿಳೆಯರ ಟೆನಿಸ್ ನಲ್ಲಿ ಪ್ರೇಕ್ಷಕರನ್ನು ಆಕರ್ಷಿಸಲು ಪ್ರಮುಖ ಕಾರಣ ಆಡಳಿತ ಮಂಡಳಿ (ಡಬ್ಲ್ಯೂಟಿಎ) ಮಹಿಳಾ ಆಟಕ್ಕೆ ನೀಡಿದ ಮಹತ್ವ.

ಕಳೆದ ವರ್ಷ ನಡೆದ ನಾಲ್ಕೂ ಗ್ರ್ಯಾನ್ ಸ್ಲಾಮ್ ಟೂರ್ನಿಗಳಲ್ಲಿ ಮಹಿಳಾ ಮತ್ತು ಪುರುಷ ಸಿಂಗಲ್ಸ್ ಚಾಂಪಿಯನ್ನರ ಬಹುಮಾನ ಮೊತ್ತ ಸಮನಾಗಿತ್ತು.. ಈ ವರ್ಷ ಜನವರಿಯಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ನಲ್ಲೂ ಉಭಯ ಸಿಂಗಲ್ಸ್ ವಿಜೇತರಿಗೆ ತಲಾ 2.5 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ನೀಡಲಾಯಿತು. ಇನ್ನು ಉಳಿದ ಮೂರು ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮೊತ್ತ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.

ಆದರೆ ಇದನ್ನು ಬೇರೆ ಕ್ರೀಡೆಗಳಿಗೆ ಹೋಲಿಸುವುದಕ್ಕೆ ಹೋದರೆ ಮಾತ್ರ, ‘ಹುಡುಗರ ಆಟಕ್ಕೆ ಹೆಚ್ಚು ಜನ ಸೇರೋದ್ರಿಂದ ಹೆಚ್ಚು ಕೊಡಬೇಕು’ ಎಂಬ ಜೊಕೊವಿಚ್ ವಾದವೇ ಗಟ್ಟಿಯಾಗುತ್ತದೆ. ಏಕೆಂದರೆ ಕ್ರಿಕೆಟ್ ಮತ್ತು ಫುಟ್ಬಾಲ್ ಗಳಂಥ ಕ್ರೀಡೆಗಳಲ್ಲಿ ಮಹಿಳಾ ಅವತರಣಿಕೆಗಳು ಪ್ರೇಕ್ಷಕರನ್ನು ಸೆಳೆ.ುವ ನಿಟ್ಟಿನಲ್ಲಿ ಇನ್ನೂ ಬಹಳ ದೂರ ಕ್ರಮಿಸಬೇಕಿದೆ. ಇದೇ ಕಾರಣಗಳನ್ನಿಟ್ಟುಕೊಂಡು ಸಂಭಾವನೆ- ಸವಲತ್ತುಗಳ ವ್ಯತ್ಯಾಸ ಜೋರಾಗಿದೆ. ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಬಹುಮಾನ ಮೊತ್ತದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಪುರುಷರ ಬಹುಮಾನ ಮೊತ್ತ ಸುಮಾರು ₹37.45 ಕೋಟಿಗಳಾಗಿದ್ದರೆ, ಅದೇ ಮಹಿಳೆಯರಿಗೆ ₹ 2.67 ಕೋಟಿಗಳಷ್ಟು ಮಾತ್ರ.  2014ರ ಫಿಫಾ ವಿಶ್ವಕಪ್ ನದ್ದು ಇದೇ ಪರಿಸ್ಥಿತಿ. ಪುರುಷರ ವಿಭಾಗಕ್ಕೆ ಬರೋಬ್ಬರಿ 35 ಮಿ. ಅಮೆರಿಕನ್ ಡಾಲರ್ (₹234 ಕೋಟಿ) ಆದರೆ, ಮಹಿಳೆಯರಿಗೆ 2 ಮಿಲಿಯನ್ ಡಾಲರ್ (₹13.37 ಕೋಟಿ).

ಕ್ರಿಕೆಟ್, ಫುಟ್ಬಾಲ್ ನಲ್ಲಿ ತಾರತಮ್ಯ ಸದ್ಯಕ್ಕೆ ಸರಿಹೋಗುವ ಯಾವ ಲಕ್ಷಣವೂ ಇಲ್ಲ. ಕಾರಣ, ಈ ಕ್ರೀಡಾ ಆಡಳಿತ ಮಂಡಳಿಗಳು ಮಹಿಳಾ ವಿಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಹಾಗಾಗಿ ಮಹಿಳೆಯರ ಕ್ರಿಕೆಟ್ ಮತ್ತು ಫುಟ್ಬಾಲ್ ಗಳೂ ಸಹ ಪ್ರೇಕ್ಷಕರನ್ನು ಆಕರ್ಷಿಸಲು ವಿಫಲವಾಗುತ್ತಿವೆ.

ಜೊಕೊವಿಚ್ ಸಂಭಾವನೆ ಬಗ್ಗೆ ಹೇಳಿರುವ ಮಾತು ಕೇವಲ ವಿವಾದ- ಟೀಕೆಯಲ್ಲಿ ಕೊನೆಯಾದರೆ ಉಪಯೋಗವಿಲ್ಲ. ಬದಲಿಗೆ ನಿರ್ದಿಷ್ಟ ಕ್ಷೇತ್ರವೊಂದರಲ್ಲಿ ಪುರುಷ- ಮಹಿಳೆ ಕೆಲಸ ಮಾಡುತ್ತಿದ್ದರೆ ಅದರಲ್ಲಿ ಒಂದು ವಿಭಾಗ ಸೊರಗಿರೋದೇಕೆ ಅಂತ ಗಮನಿಸಿ, ಅದರ ಉದ್ಧಾರಕಾರ್ಯವಾಗಬೇಕು.

ಕ್ರಿಕೆಟ್ ಎಂದರೆ ತೆಂಡುಲ್ಕರ್, ಕೋಹ್ಲಿ ನೆನಪಾಗುವಂತೆ ಮಹಿಳಾ ಸ್ಟಾರ್ ಗಳನ್ನೂ ಸಂಭ್ರಮಿಸುವ ಮಟ್ಟಿಗೆ ಪರಿಸ್ಥಿತಿ ಸುಧಾರಿಸಬೇಕಲ್ಲವೇ? ಸಮಾನ ಸಂಭಾವನೆ ವಿಷಯ ಹಾಗಿರಲಿ, ಮಹಿಳೆಗೆ ಸಮಾನ ಅವಕಾಶವೇ ಇರದ ಕ್ಷೇತ್ರಗಳು ದೊಡ್ಡಸಂಖ್ಯೆಯಲ್ಲಿ ಉಳಿದುಕೊಂಡಿರೋದು ಈ ಜಗತ್ತಿನ ವೈಫಲ್ಯ ಸಂಕೇತವಾಗಿ ಕಾಣದೇ?

Leave a Reply