ಸೋಮಶೇಖರ ಪಿ. ಭದ್ರಾವತಿ
ಧೋನಿ.. ಭಾರತ ಕಂಡ ಅತ್ಯುತ್ತಮ ನಾಯಕ..! ಈ ಬಗ್ಗೆ ಚರ್ಚೆ ಎತ್ತಿದಾಗಲೆಲ್ಲ ಪರ, ವಿರೋಧ ಮಾತುಗಳು ಕೇಳಿಬರುತ್ತವೆ. ಧೋನಿಯ ನಾಯಕತ್ವ ಮಹತ್ವವನ್ನು ಈಗಲೂ ಅದೇಷ್ಟೋ ಜನ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅವರೆಲ್ಲರ ಬಾಯಿಂದ ಬರೋ ಒಂದೇ ಮಾತು. ಆತ ಲಕ್ಕಿ.. ಕೇವಲ ಲಕ್ ನಿಂದ ಮಾತ್ರ ಗೆಲ್ತಾನೆ.. ಎಂಬ ಹಳೇ ರಾಗ. ಇವೆಲ್ಲದರ ನಡುವೆ ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧದ ಗೆಲವು ಧೋನಿ ಓರ್ವ ಪರಿಣಾಮಕಾರಿ ನಾಯಕ ಅನ್ನೊದಕ್ಕೆ ಪ್ರಬಲ ಸಾಕ್ಷಿ.
ಧೋನಿ ಬರೀ ಲಕ್ ನಿಂದ ಗೆಲ್ತಾನೆ ಎಂಬುದು ನಿಜವೇ ಆಗಿದ್ದರೆ ಅಬ್ಬಬ್ಬಾ ಅಂದ್ರೆ 2-3 ವರ್ಷ ಆತ ನಾಯಕನಾಗಿ ಉಳಿಯಬಹುದಿತ್ತು. 2-3 ಸಣ್ಣಪುಟ್ಟ ಟೂರ್ನಿ ಗೆಲ್ಲಬಹುದಿತ್ತು. ಆದರೆ, ಬಹುತೇಕ 9 ವರ್ಷಗಳ ಕಾಲ ಟೀಂ ಇಂಡಿಯಾದಂತ ತಂಡವನ್ನು ಮುನ್ನಡೆಸಿ, ಹಿಂದೆಂದೂ ಮಾಡದ ಸಾಧನೆ ಮಾಡಲು ಸಾಧ್ಯವಿತ್ತೆ? ಎಂಬ ಪ್ರಶ್ನೆಯನ್ನು ಟೀಕಾಕಾರರು ಹಾಕಿಕೊಳ್ಳೋದು ಉತ್ತಮ.
ಯಾರು ಏನೇ ಅನ್ನಲಿ, ಧೋನಿ ಮಾತ್ರ ತಂಡವನ್ನು ಹೆಮ್ಮೆಯಿಂದ ಮುನ್ನಡೆಸುತ್ತಾ ತನ್ನ ಸಾಮರ್ಥ್ಯವನ್ನು ಪದೇ ಪದೇ ಸಾಬೀತು ಪಡಿಸುತ್ತಿದ್ದಾನೆ. ತನ್ನ ಯಶಸ್ಸು ಕೇವಲ ಲಕ್ ನಿಂದಲ್ಲ, ಅದು ಕಠಿಣ ಪರಿಶ್ರಮ, ಮನೋಬಲ, ಸಮಯಪ್ರಜ್ಞೆ ಹಾಗೂ ಕ್ರೀಡೆಯಲ್ಲಿನ ಜಾಣ್ಮೆಯ ಪ್ರತಿಫಲ ಎಂದು ಖಚಿತಪಡಿಸುತ್ತಿದ್ದಾನೆ.
ಧೋನಿ ನಾಯಕತ್ವ ಎಷ್ಟು ಪ್ರಮುಖ ಎಂಬುದಕ್ಕೆ ಆತ ಮೈದಾನದಲ್ಲಿ ತೆಗೆದುಕೊಳ್ಳೊ ನಿರ್ಧಾರಗಳೇ ಸಾಕ್ಷಿ. ವಿಶ್ವದ ಇತರೆ ತಂಡಗಳ ನಾಯಕರು ಒಂದಿಬ್ಬರು ಆಟಗಾರರನ್ನು ಅಸ್ತ್ರದಂತೆ ಬಳಸೋದು ಸಾಮಾನ್ಯ. ಆದರೆ, ಧೋನಿ ತಂಡದ ಎಲ್ಲಾ ಆಟಗಾರರನ್ನು ಚಂದುರಂಗದ ಕಾಯಿಯಂತೆ ಬಳಸುತ್ತಾನೆ. ಪರಿಸ್ಥಿತಿಗೆ ತಕ್ಕಂತೆ, ಎದುರಾಳಿಗಳ ತಂತ್ರಕ್ಕೆ ಪ್ರತಿತಂತ್ರ ಎಣೆಯಲು ಯಾವ ಆಟಗಾರನನ್ನು ಬಳಸಿ ಚೇಕ್ ಮೇಟ್ ನೀಡಬಹುದೆಂದು ಧೋನಿಗೆ ಚೆನ್ನಾಗಿ ಗೊತ್ತು. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ರೈನಾ ಓವರ್ ನಲ್ಲಿ ಧೋನಿ ಮಾಡಿದ ಸ್ಟಂಪ್ ಅದ್ಭುತ. ಆ ರೀತಿಯೂ ಔಟಾಗುತ್ತಾರೆ ಎಂದು ಯಾರಾದರೂ ಊಹಿಸಿದ್ದರೇ.. ಆ ಸ್ಟಂಪ್ ಅನ್ನು ಎಲ್ಲೆಡೆ ಮ್ಯಾಜಿಕ್ ಎಂದೇ ಬಣ್ಣಿಸಲಾಗ್ತಿದೆ. ಧೋನಿ ಪಂದ್ಯದಲ್ಲಿ ವಿಕೆಟ್ ಪಡೆಯುವ ಅವಕಾಶ ಸೃಷ್ಟಿಸೋದು ಆತನ ನಾಯಕತ್ವದ ಸಾಮರ್ಥ್ಯಕ್ಕೆ ಉದಾಹರಣೆ.
ಕೇವಲ ಇದೊಂದೆ ಅಲ್ಲ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಧೋನಿ ತೆಗೆದುಕೊಂಡ ಮ್ಯಾಚ್ ವಿನ್ನಿಂಗ್ ನಿರ್ಧಾರಗಳು ಹೀಗಿವೆ ನೋಡಿ..
- ಭಾರತ ಬ್ಯಾಟಿಂಗ್ ಮಾಡುವಾಗ ಕುಸಿದಿದ್ದ ರನ್ ರೇಟ್ ಹೆಚ್ಚಿಸಲು ತನ್ನ ಹಾಗೂ ಯುವರಾಜ್ ಕ್ರಮಾಂಕಕ್ಕೂ ಮುನ್ನ ಯುವ ಆಟಗಾರ ಹಾರ್ದಿಕ್ ಪಾಂಡ್ಯ (15 ರನ್, 7 ಎಸೆತ) ಬ್ಯಾಟಿಂಗ್ ಕಳುಹಿಸಿದ್ದು.
- ಬಾಂಗ್ಲಾದ ಶಬ್ಬೀರ್ ರೆಹಮಾನ್ ಮತ್ತು ಶಕಿಬ್ ಉತ್ತಮ ಜತೆಯಾಟದಿಂದ ಇನಿಂಗ್ಸ್ ಕಟ್ಟುವಾಗ ರೈನಾರನ್ನು ದಾಳಿಗೆ ಇಳಿಸಿ ಬಾಂಗ್ಲಾ ವೇಗಕ್ಕೆ ಕಡಿವಾಣ ಹಾಕಿದ್ದು.
- ಬೌಲಿಂಗ್ ಬದಲಾವಣೆ ಮಾಡಿ ಅಶ್ವಿನ್ ಕೊನೆ ಓವರ್ ನ ಮೊದಲ ಎಸೆತದಲ್ಲಿ ಸ್ಲಿಪ್ ನಲ್ಲಿ ರೈನಾ ನಿಲ್ಲಿಸಿ ಶಕಿಬ್ ವಿಕೆಟ್ ಪಡೆದಿದ್ದು.
- ಆರಂಭದಲ್ಲಿ ಕೆಟ್ಟ ಫೀಲ್ಡಿಂಗ್ ನಿಂದ ಒತ್ತಡಕ್ಕೆ ಸಿಲುಕಿದ್ದ ಜಸ್ಪ್ರೀತ್ ಬುಮ್ರಾಗೆ ನೀಡಿದ ಬೆಂಬಲ, ಆತನಿಗೆ ಕೊನೆ ಓವರ್ ನಲ್ಲಿ ಬೌಲಿಂಗ್ ನೀಡೊ ಬದಲು 19ನೇ ಓವರ್ ನಲ್ಲಿ ಬೌಲಿಂಗ್ ನೀಡಿದ್ದು, ಅಂತಿಮ ಓವರ್ ನಲ್ಲಿ ಪಾಂಡ್ಯಾ ಬಳಸಿದ್ದು.
- ಇನ್ನು ಕೊನೆಯ ಮೂರು ಎಸೆತದ ಪೈಕಿ ಮುಶ್ಫಿಕುರ್ ಕ್ಯಾಚ್ ನೀಡಿದಾಗ ಡೀಪ್ ಮಿಡ್ ವಿಕೆಟ್ ನಲ್ಲಿ ಶಿಖರ್ ಧವನ್ ಹಿಡಿದರು. ನಂತರದ ಎಸೆತದಲ್ಲಿ ಮೊಹಮದ್ದುಲ್ಲಾ ಅದೇ ಜಾಗಕ್ಕೆ ಕ್ಯಾಚ್ ನೀಡಿದರು. ಈ ವೇಳೆ ಅಲ್ಲಿಕ್ಯಾಚ್ ಪಡೆದಿದ್ದು ಚುರುಕಿನ ಫೀಲ್ಡರ್ ಖ್ಯಾತಿಯ ರವೀಂದ್ರ ಜಡೇಜಾ. ಈ ಫೀಲ್ಡಿಂಗ್ ಬದಲಾವಣೆಯೂ ಗಮನ ಸೆಳೆಯಿತು.
- ಇನ್ನು ಅಂತಿಮ ಎಸೆತದಲ್ಲಿ ರನೌಟ್ ಗೆ ಖೆಡ್ಡಾ ರೆಡಿ ಮಾಡಿದ್ದ ಧೋನಿ ತಮ್ಮ ಬಲಗೈ ಗ್ಲೌಸ್ ತೆಗೆದು ರನೌಟ್ ಮಾಡಲು ಹಣಿಯಾಗಿದ್ದು.
ಈ ಎಲ್ಲಾ ನಿರ್ಧಾರಗಳು ಉತ್ತಮ ನಾಯಕತ್ವಕ್ಕೆ ಸಾಕ್ಷಿ. ಈ ಎಲ್ಲಾ ತಿರುವು ನಾಯಕತ್ವದಿಂದ ಸಾಧ್ಯವೇ ಹೊರತು ಕೇವಲ ಲಕ್ ನಿಂದಲ್ಲ.
2007ರಲ್ಲಿ ಗೊಂದಲದ ಗೂಡಾಗಿದ್ದ ಗ್ರೇಗ್ ಚಾಪೆಲ್ ಗರಡಿಯಲ್ಲಿ ಟೀಂ ಇಂಡಿಯಾ ಸೊರಗಿತ್ತು. ಪರಿಣಾಮ ವೆಸ್ಟ್ ಇಂಡೀಸ್ ನೆಲದಲ್ಲಿ ನಡೆದ ಏಕದಿನ ವಿಶ್ವಕಪ್ ನಲ್ಲಿ ಭಾರತ ಬಾಂಗ್ಲಾ ವಿರುದ್ಧ ಆಘಾತಕಾರಿ ಸೋಲುಂಡು ಮೊದಲ ಸುತ್ತಿನಲ್ಲೇ ಹೊರ ಬಿದ್ದ ಕರಾಳ ಘಟನೆ ಈಗಲೂ ಅಭಿಮಾನಿಗಳ ಮನದಲ್ಲಿ ಉಳಿದಿದೆ. ನಂತರ ರಾಹುಲ್ ದ್ರಾವಿಡ್ ನಾಯಕತ್ವಕ್ಕೆ ರಾಜಿನಾಮೆ ನೀಡಿದರು. ಈ ಸಂದರ್ಭದಲ್ಲಿ ಯಾವೊಬ್ಬ ಹಿರಿಯ ಆಟಗಾರನೂ ತಂಡದ ಜವಾಬ್ದಾರಿ ಹೊರಲು ಮುಂದೆ ಬರಲಿಲ್ಲ. ಸ್ವತಃ ಸಚಿನ್ ತನಗೆ ನಾಯಕತ್ವ ಬೇಡ ಎಂದು, ಆ ಸ್ಥಾನಕ್ಕೆ ಧೋನಿ ಹೆಸರನ್ನು ಸೂಚಿಸಿದರು. ಕಾರಣ, ಧೋನಿಯಲ್ಲಿನ ನಾಯಕತ್ವದ ಗುಣ ಸಚಿನ್ ಅರಿವಿಗೆ ಬಂದಿತ್ತು.
ಇಷ್ಟೆಲ್ಲಾ ಆದ್ರೂ ಧೋನಿಯನ್ನು ಒಪ್ಪಿಕೊಳ್ಳೋಕೆ ಕೆಲವರಿಂದ ಸಾಧ್ಯವೇ ಆಗ್ತಿಲ್ಲ ಎಂಬುದಂತು ನಿಜ.
ಧೋನಿಯನ್ನು ದ್ವೇಷಿಸುವ ಅಭಿಮಾನಿಗಳು ಭಾರತದಲ್ಲೇ ಹೆಚ್ಚಿದ್ದಾರೆ ಎಂಬುದು ಕಹಿ ಸತ್ಯ. ನಾಯಕತ್ವದ ಬಗ್ಗೆ ಪ್ರತಿ ಬಾರಿ ಎಲ್ಲೆ ಚರ್ಚೆಯಾದರೂ ಗಂಗೂಲಿ ಮತ್ತು ಧೋನಿ ನಡುವೆ ಪೈಪೋಟಿ ಏರ್ಪಡೋದು ಸಹಜ. ಗಂಗೂಲಿ ಹಾಗೂ ಧೋನಿಯ ನಡುವೆ ಹೋಲಿಕೆ ಮಾಡೋದೇ ತಪ್ಪು. ಈ ಇಬ್ಬರು ತಂಡದ ಜವಾಬ್ದಾರಿ ಹೊತ್ತ ಕಾಲಘಟ್ಟ ಬೇರೆ ಬೇರೆಯೇ ಆಗಿದೆ.
ಯಾರು ಏನೇ ಚರ್ಚೆ ಮಾಡಿದರೂ ಧೋನಿ, ಗಂಗೂಲಿ ಇಬ್ಬರು ಅತ್ಯುತ್ತಮ ನಾಯಕರೆ. ಧೋನಿ ಕೇವಲ ನಾಯಕನಷ್ಟೇ ಆಗಿಲ್ಲ. ಸುದೀರ್ಘ ಅವಧಿಯವರೆಗೂ ದ್ರಾವಿಡ್ ರನ್ನೇ ಕೀಪರ್ ಆಗಿ ಬಳಸೋ ಮಟ್ಟಿಗೆ ಪ್ರಮುಖ ವಿಕೆಟ್ ಕೀಪರ್ ಅನುಪಸ್ಥಿತಿಯಿಂದ ಸೊರಗಿದ್ದ ಭಾರತಕ್ಕೆ ಸಿಕ್ಕ ಒಬ್ಬ ಅಮೂಲ್ಯ ಪ್ರತಿಭೆ. ಧೋನಿ ಮಾಡೋ ರನೌಟ್ ಶೈಲಿ, ಸ್ಟಂಪ್ ಮಾಡೋ ವೇಗ ಕಂಡು ಇಡೀ ಕ್ರಿಕೆಟ್ ಲೋಕವೇ ಹುಬ್ಬೇರಿಸಿದೆ. ಕೆಳ ಕ್ರಮಾಂಕದಲ್ಲಿ ಮ್ಯಾಚ್ ಸ್ಫೋಟಕ ಬ್ಯಾಟಿಂಗ್ ನಿಂದ ಪಂದ್ಯ ಫಿನಿಶ್ ಮಾಡಬಹುದಾದ ಒಂದು ಬ್ರಹ್ಮಾಸ್ತ್ರ.