ಪತ್ರಿಕಾಗೋಷ್ಠಿಯಲ್ಲಿ ಮುಲಾಜಿಲ್ಲದ ಮಾತು, ಧೋನಿಯ ಸೂಪರ್ ಶಾಟ್ ಇದೇ ಮೊದಲಲ್ಲ!

ಡಿಜಿಟಲ್ ಕನ್ನಡ ಟೀಮ್

ಬಾಂಗ್ಲಾ ವಿರುದ್ಧ ಥ್ರಿಲ್ಲಿಂಗ್ ಜಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರ ಮೇಲೆಯೂ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಭರ್ಜರಿ ಬ್ಯಾಟಿಂಗ್ ಮಾಡಿರೋದು ಈಗ ವೈರಲ್ ಸುದ್ದಿ. ಧೋನಿಯ ಈ ಮಾಧ್ಯಮ ನಿರ್ವಹಣೆ ಸ್ಟೈಲ್ ಇದೇ ಮೊದಲ ಬಾರಿಗೆ ಕಾಣ್ತಿರೋದಲ್ಲ, ಅಲ್ಲೂ ಧೋನಿಗೊಂದು ಹೊಸತನ ಇದೆ ಅನ್ನೋದು ನಾವೀಗ ನಿಮ್ಮ ಗಮನಕ್ಕೆ ತರಲು ಹೊರಟಿರೋದು.

ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಟೀಂ ಇಂಡಿಯಾ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಪತ್ರಕರ್ತರೊಬ್ಬರನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ. ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು, ‘ನೀವು ಪಂದ್ಯವನ್ನು ಸುಲಭವಾಗಿ ಗೆಲ್ಬೋದಿತ್ತು. ಪರದಾಟ ನಡೆಸಿದ್ದು ಯಾಕೆ?’ ಎಂಬಂತೆ ಪ್ರಶ್ನೆ ಹಾಕಿದರು. ಇದರಿಂದ ಕೋಪಗೊಂಡ ಧೋನಿ, ‘ಭಾರತ ಗೆದ್ದಿರೋದಕ್ಕೆ ನಿಮಗೆ ಸಂತೋಷವಾಗಿಲ್ಲ ಅನ್ನೋದು ನೀವು ಪ್ರಶ್ನೆ ಕೇಳಿದ ರೀತಿಯಲ್ಲೇ ಗೊತ್ತಾಗುತ್ತದೆ. ಕ್ರಿಕೆಟ್ ಪಂದ್ಯ ಆಡುವಾಗ ಸ್ಕ್ರಿಪ್ಟ್ ಹಾಕಿಕೊಂಡು ಆಡಲು ಸಾಧ್ಯವಾಗುವುದಿಲ್ಲ. ಇಲ್ಲಿ ಮುಂಚಿತವಾಗಿ ಯಾವುದೇ ಸ್ಕ್ರಿಪ್ಟ್ ರೆಡಿಯಾಗಿರೋದಿಲ್ಲ. ನಾವು ಟಾಸ್ ಸೋತ ನಂತರ ಬ್ಯಾಟಿಂಗ್ ಮಾಡಿದ್ದು, ಪಿಚ್ ವರ್ತಿಸಿದ ರೀತಿ, ಯಾಕೆ ನಾವು ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ ಎಂಬುದನ್ನು ಅವಲೋಕಿಸಬೇಕಾಗುತ್ತದೆ. ಅಂಥ ವಿಶ್ಲೇಷಣೆ ಶಕ್ತಿ ನಿಮಗಿದ್ದರೆ ಈ ಪ್ರಶ್ನೆ ಕೇಳುತ್ತಿರಲಿಲ್ಲ.’ ಎಂದು ಖಾರವಾಗಿ ಉತ್ತರಿಸಿದ್ದಾರೆ.

ಏನಾದರೂ ಮಾತು ಸುತ್ತಬೇಕು ಅಂತ ಎಡಬಿಡಂಗಿ ಪ್ರಶ್ನೆಗಳನ್ನು ಕೇಳಿಕೊಂಡಿರುವ ಒಂದು ವರ್ಗದ ಪತ್ರಕರ್ತರಿಗೆ ಹೀಗೊಂದು ಬಿಸಿ ಮುಟ್ಟಿಸಬೇಕಿತ್ತು ಅಂತಲೇ ಸಾಮಾಜಿಕ ತಾಣಗಳಲ್ಲಿ ಜನ ಇದನ್ನು ಎಂಜಾಯ್ ಮಾಡ್ತಿದಾರೆ.

ಆದ್ರೆ ನಿಮಗೆ ಗೊತ್ತಾ? ಮಾಧ್ಯಮ ಮಂದಿಗೆ ಧೋನಿ ಟಾಂಗ್ ಕೊಡೋದು, ಖಾರ ಉತ್ತರ ನೀಡಿರೋದು ಇದೇ ಮೊದಲೇನಲ್ಲ.ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಲ್ಲಿಹಾಸ್ಯ ಹಾಗೂ ಮಾರ್ಮಿಕತೆ ಸೇರಿಸೋದ್ರಲ್ಲಿ ಧೋನಿ ಎತ್ತಿದ ಕೈ. ಹೀಗೆ ಧೋನಿ, ಪತ್ರಕರ್ತರಿಗೆ ವಿಭಿನ್ನ ಉತ್ತರ ನೀಡಿದ ಪ್ರಸಂಗಗಳು ಹೀಗಿವೆ.

 

ನಿವೃತ್ತಿ ಬಗ್ಗೆ ಕೇಳಿದ ಪ್ರಶ್ನೆಗೆ ಧೋನಿ ಉತ್ತರಿಸಿದ್ದರು…

‘ಇದು ನಿಮಗೆ ಬಿಟ್ಟ ವಿಚಾರ. ಈ ಬಗ್ಗೆ ಮಾಧ್ಯಮಗಳು ಒಂದು ಉತ್ತಮ ಸಂಶೋಧನೆ ನಡೆಸಬೇಕು. ಇದಕ್ಕಾಗಿ ಸಮಯವನ್ನೂ ತೆಗೆದುಕೊಳ್ಳಿ. ಆದರೆ, ನೀವು ಏನು ಬರಿತೀರೊ ಅದಕ್ಕೆ ವಿರುದ್ಧವಾಗಿರುತ್ತೆ ನನ್ನ ನಿರ್ಧಾರ’

2015ರಲ್ಲಿ ಸುದೀರ್ಘ ಆಸ್ಟ್ರೇಲಿಯಾ ಪ್ರವಾಸದ ಬಗ್ಗೆ

‘ಇದು ಸುದೀರ್ಘ ಪ್ರವಾಸ. ಒಂದೇ ದೇಶದಲ್ಲಿ ನಾಲ್ಕು ತಿಂಗಳಿನಿಂದ ಇದೀವಿ. ಇನ್ನು 20 ದಿನ ಇದ್ದರೆ, ಆಸ್ಟ್ರೇಲಿಯಾ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು.’

ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದ ವೇಳೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಧೋನಿ ಮಾಡಿದ ಹ್ಯಾಸಕ್ಕೆ ಪತ್ರಕರ್ತರು ನಗೆಗಡಲಿನಲ್ಲಿ ತೇಲಿದ್ದನ್ನು ನೀವೇ ನೋಡಿ..

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್ ಸರಣಿ ಸೋಲಿನ ಬಗ್ಗೆ ಅಭಿಪ್ರಾಯ ಕೇಳಿದಾಗ

‘ಅಲ್ಲಿಯೂ ಸತ್ತಿದ್ದೀರಿ.. ಇಲ್ಲಿಯೂ ಸತ್ತಿದ್ದೀರಿ.. ಈ ಎರಡು ಸಾವಿನಲ್ಲಿ ಯಾವುದು ಉತ್ತಮ ಸಾವು ಎಂದು ಕೇಳಿದಂತಿದೆ ನಿಮ್ಮ ಪ್ರಶ್ನೆ’

ನಾಯಕತ್ವದಲ್ಲಿ ಮುಂದುವರಿಯುವ ಪ್ರಶ್ನೆಗೆ

ನನ್ನ ಪ್ರದರ್ಶನದ ಬಗ್ಗೆ ನಾನೇ ವಿಮರ್ಶೆ ಮಾಡಿದರೆ, ಸ್ವಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುತ್ತೆ. ಹಾಗಾಗಿ ನೀವು ನನ್ನ ಪ್ರದರ್ಶನದ ಬಗ್ಗೆ ತೀರ್ಪು ತಿಳಿಯಲು ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಸಲ್ಲಿಸಿ.

ಅಧಿಕ ಒತ್ತಡ ನಿಭಾಯಿಸುವ ಬಗ್ಗೆ..

‘ಒಬ್ಬ ವ್ಯಕ್ತಿಯ ಮೇಲೆ 100 ಕೆ.ಜಿ ಭಾರ ಹಾಕಿದ ನಂತರ, ಒಂದು ಪರ್ವತವನ್ನೇ ಆತನ ಮೇಲೆ ಇಟ್ಟರೆ ಏನೂ ವ್ಯತ್ಯಾಸವಾಗುವುದಿಲ್ಲ’

ಆಸ್ಟ್ರೇಲಿಯಾದಲ್ಲಿ ಭಾರತದ ಬ್ಯಾಟಿಂಗ್ ಸಮಸ್ಯೆ ಪ್ರಸ್ತಾಪಿಸಿದಾಗ

‘ಆಸ್ಟ್ರೇಲಿಯಾದಲ್ಲಿ ಶ್ರೀಶಾಂತ್, ಡಾನ್ ಬ್ರಾಡ್ ಮನ್ ರೀತಿ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ಅವರವರ ಬ್ಯಾಟಿಂಗ್ ಮಾತ್ರ ಮಾಡಲು ಸಾಧ್ಯ’

 

ಹೆಲಿಕಾಪ್ಟರ್ ಶಾಟ್ ಹೆಚ್ಚಾಗಿ ಹೊಡೆಯುತ್ತಿಲ್ಲವೇಕೆ?

ಹೆಲಿಕಾಪ್ಟರ್ ಗಳು ಎಲ್ಲ ಸ್ಥಳದಿಂದಲೂ ಹಾರಲು ಸಾಧ್ಯವಿಲ್ಲ. ಅದು ಕೇವಲ ನಿರ್ದಿಷ್ಟ ಸ್ಥಳದಿಂದ ಮಾತ್ರ ಹಾರುತ್ತದೆ. ನಾನು ಹೆಲಿಕಾಪ್ಟರ್ ಅನ್ನು ಸಮುದ್ರದೊಳಗಿಂದ ಹಾರಿಸಬೇಕು ಎಂದು ನಿರೀಕ್ಷಿಸಿದರೆ ಕಷ್ಟವಾಗುತ್ತದೆ. ಹೆಲಿಕಾಪ್ಟರ್ ಶಾಟ್ ಹೊಡೆಯಲು ನಿರ್ದಿಷ್ಟ ಎಸೆತವಿರುತ್ತದೆ. ಆ ಎಸೆತ ಬಾರದೇ ಇದ್ದರೆ ನಾನು ಹೊಡೆಯಲು ಹೇಗೆ ಸಾಧ್ಯ? ಬೌನ್ಸರ್ ಎಸೆತಕ್ಕೆ ಹೆಲಿಕಾಪ್ಟರ್ ಶಾಟ್ ಹೊಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ನಾನು ಸ್ಟೂಲ್ ಹಾಕಿಕೊಳ್ಳಬೇಕಾಗುತ್ತದೆ.

Leave a Reply