ಮಕ್ಕಳ ಮನವೊಲಿಸಲು ಹೇಳುವ ಸಿಹಿ ಸುಳ್ಳುಗಳು, ಸಿಗೋದು ಮಾತ್ರ ಕಹಿ ಪರಿಣಾಮಗಳು!

author-shamaಆಗಿನ್ನೂ ಅಪ್ಪ ಮನೆಗೆ ಬಂದು ಹತ್ತು ನಿಮಿಷವಾಗಿತ್ತೇನೋ. ಮತ್ತೆ ಕರೆಗಂಟೆ ಸದ್ದು. ಯಾರಿರಬಹುದು ಈ ಇಳಿ ಸಂಜೆಯಲ್ಲಿ ಎಂದು ಕಿಟಕಿಯಿಂದ ನೋಡಲು ಹೋದರೆ ಮಗ ಆದಿತ್ಯನ ಗೆಳೆಯ ಪಕ್ಕದ ಮನೆಯ ವಿನಯ. ಅವನು ಅಂತ ಗೊತ್ತಾಗಿದ್ದೇ ತಡ ಊರಿಂದ ಮನೆಗೆ ಬಂದ ಅಣ್ಣನ ಜತೆ ಆಟವಾಡುತ್ತಿದ್ದ ಮಗ “ಅಮ್ಮಾ ಅವನಿಲ್ಲ; ಹೊರಗೆ ಹೋಗಿದಾನೆ ಅನ್ನು. ನಾ ಅವನ ಜತೆ ಹೋಗಲ್ಲ; ಅಣ್ಣನ ಜತೆ ಆಡ್ಬೇಕು” ಪಿಸುಗುಟ್ಟಿದ್ದ. ತಕ್ಷಣಕ್ಕೆ ಏನೋ ಒಂದು ಹೇಳಿ ವಿನಯನನ್ನು ಸಾಗ ಹಾಕಿದ ಅಮ್ಮ ಒಳಗೆ ಬಂದು ಮಗನನ್ನು “ಯಾಕೆ ಹಾಗನ್ನಬೇಕು ? ಸುಳ್ಳು ಹೇಳಬಾರದು ಅಲ್ವಾ?” ಗದರಿದರೆ ಮಗರಾಯ ಥಟ್ಟನೇ ಮರು ಪ್ರಶ್ನೆ ಕೇಳಿದ್ದ  “ಮತ್ತೆ ಮೊನ್ನೆ ಕೇಶವ ಅಂಕಲ್ ಬಂದಾಗ ಅಪ್ಪ ರೂಮಲ್ಲೇ ಇದ್ರೂನೂ ಅವರಿಲ್ಲ ಹೊರಗಡೆ ಹೋಗಿದಾರೆ ಅನ್ನಲಿಲ್ವಾ? ಅದು ಸುಳ್ಳಲ್ವಾ?” ಅಮ್ಮನ ಬಳಿ ಉತ್ತರವಿಲ್ಲ.

ಹುಟ್ಟುತ್ತ ಬರಿ ಬಿಳಿ ಹಾಳೆಯಂತಿರುವ ಮಗು ತನ್ನ ಸುತ್ತಲಿನ ಜಗತ್ತಿನಿಂದ ಒಂದೊಂದನ್ನೇ ಕಲಿಯುವುದು ಸಹಜ. ಈ ಪ್ರಕ್ರಿಯೆಗೆ ಮೊದಲು ಮಗುವಿಗೆ ಸಿಗುವುದು ತನ್ನ ತಂದೆ ತಾಯಿಯರು. ಇತ್ತೀಚೆಗೆ ಪೇರೆಂಟಿಂಗ್ ಕ್ಲಾಸ್ ಮಾಡುತ್ತಿದ್ದವರೊಬ್ಬರು ಮಾತಿಗೆ ಸಿಕ್ಕಿದಾಗ ಮಾತಾಡಿಕೊಂಡೆವು “ಮಕ್ಕಳು ದೊಡ್ಡವರು ಹೇಳಿದ್ದನ್ನ ಮಾಡೋಲ್ಲ; ಆದರೆ ದೊಡ್ಡವರು ಮಾಡಿದ್ದನ್ನ ಮಾತ್ರ ಅಚ್ಚುಕಟ್ಟಾಗಿ ಮಾಡ್ತಾರೆ”. ಸತ್ಯ, ಮಾತು ಕಲಿವ ಮೊದಲು, ಭಾಷೆಯಿನ್ನೂ ಬೆಳೆಯುವ ಮೊದಲು ಮಕ್ಕಳಿಗೆ ಕಲಿಕೆಗಿರುವ ಒಂದೇ ಒಂದು ದಾರಿಯೆಂದರೆ ಅನುಕರಣೆ. ಪೂರ್ವ ಬಾಲ್ಯಾವಧಿಯಲ್ಲಿ ಇದಕ್ಕೆ ಬಹಳ ಪ್ರಾಮುಖ್ಯತೆಯೂ ಇದೆ.

ನಿತ್ಯ ಬದುಕಲ್ಲಿ ಇವೆಲ್ಲ ನಮ್ಮ ಅನಿವಾರ್ಯತೆಗಳಿಂದ ಹುಟ್ಟಿಕೊಂಡಂಥವು. ದೊಡ್ಡವರ ಮಟ್ಟಿಗೆ ತೀರ ತೀರಾ ಮಾಮೂಲಿ ಎನಿಸುವಂಥವು. ಆದರೆ ಮಕ್ಕಳು ಇದನ್ನೆಲ್ಲ ಅರ್ಥ ಮಾಡಿಕೊಳ್ಳುವಷ್ಟು ಪ್ರಬುದ್ಧರಾಗಿರುವುದಿಲ್ಲ. ಒಂದಷ್ಟನ್ನು ಹಾಗೇ ಗಮನಿಸುತ್ತ ಹೊದರೆ…

  • ಸುಳ್ಳುಗಳು: ಮಕ್ಕಳ ಯಾವುದೋ ಒಂದು ವರ್ತನೆಯನ್ನು ನಿರ್ದಿಷ್ಟ ರೀತಿಯಲ್ಲಿರುವಂತೆ ನೋಡಿಕೊಳ್ಳಲು ಹೇಳುವ ಸುಳ್ಳುಗಳಿವು. “ಬೇಗ ಬೇಗ ತಿನ್ನು; ಇಲ್ಲಾಂದ್ರೆ ಪೋಲೀಸ್ ಬಂದುಕರ್ಕೊಂಡು ಹೋಗ್ತಾರೆ” ಅನ್ನೋ ಸುಳ್ಳು ಕೆಲ ಕಾಲವಷ್ಟೇ ಉಪಯೋಗಕ್ಕೆ ಬರಬಹುದು. ಸ್ವಲ್ಪೇ ದಿನಗಳಲ್ಲಿ ಹಾಗಾಗೋಲ್ಲ ಅರ್ಥವಾದಾಗ ಸುಳ್ಳು ಹೇಳಿದವರ ಮೇಲಿರುವ ನಂಬಿಕೆ ಕೂಡ ಕಡಿಮೆಯಾದೀತು. ಅದರ ಬದಲು “ನೀ ಸರಿಯಾಗಿ ತಿಂದಿಲ್ಲ ಅಂದ್ರೆ ಅಮ್ಮಂಗೆ ಬೇಜಾರಾಗತ್ತೆ” ಅಂದು ಮುಖ ಸಪ್ಪೆ ಮಾಡಿಕೊಂಡರೆ ಅದು ಹೆಚ್ಚು ಪರಿಣಾಮಕಾರಿ. ಅಥವಾ “ತಿನ್ನದೇ ಇದ್ರೆ ನಿನ್ನಿಷ್ಟದ ಹಾಡು ಹಾಡೋಕೆ, ಜಾರು ಬಂಡೀಲಿ ಜಾರೋಕೆ ಶಕ್ತಿನೇ ಇರಲ್ಲ” ಅನ್ನೋದು ನಿಜವೂ ಹೌದು ಒಳ್ಳೆಯ ಪ್ರೇರೇಪಣೆಯೂ ಹೌದು.
  • ಹುಸಿ ಬೆದರಿಕೆ: ಮನೆಯಾಚೆ ಹೋದಾಗ ಏನೋ ಬೇಕೆಂದು ಹಠ ಮಾಡುವ ಮಕ್ಕಳನ್ನು “ಹೀಗ್ಮಾಡಿದ್ರೆ ಇಲ್ಲೇ ಬಿಟ್ಟು ಹೋಗ್ತೀನಿ” ಅಂತಲೋ “ಸುಮ್ಮನೇ ಕೂರದಿದ್ರೆ ಗಾಡಿಯಿಂದ ಇಳಿಸ್ತೀನಿ” ಅಂತಲೋ ಹೇಳಿದರೆ ಒಂದೆರಡು ಸಲ ಮಾತ್ರ ಕೆಲಸ ಮಾಡೀತು. ತನ್ನನ್ನು ಬಿಟ್ಟು ಹೋಗಲಾರರು ಎಂಬ ಸತ್ಯ ಗೊತ್ತಾದ ನಂತರ ಮತ್ತೆ ಮಗು ಹಳೇ ದಾರಿಗೇ. “ಏನೇ ಗಲಾಟೆ ಮಾಡಿದರೂ ಹಠ ಮಾಡಿದ್ದು ಸಿಗುವುದಿಲ್ಲ; ಬದಲಾಗಿ ಒಳ್ಳೆಯ ರೀತಿಯಲ್ಲಿ ಕೇಳಿದರೆ ತಕ್ಷಣ ಸಾಧ್ಯವಾಗದಿದ್ದರೂ ಬಯಸಿದ್ದು ಸಿಗುತ್ತದೆ” ಎಂದು ವಿವರಿಸಿ ಹೇಳುವುದು ಚಿಕ್ಕಂದಿಂದಲೇ ರೂಢಿಯಾದರೆ ಮಕ್ಕಳು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಅದನ್ನು ನೆನಪಿಟ್ಟುಕೊಂಡು ಈಡೇರಿಸುವುದು ಕೂಡ ಮುಖ್ಯ.
  • ಶಾರೀರಿಕ ಶಿಕ್ಷೆ : ಚೂರೂ ಶಿಕ್ಷೆ ಕೊಡದೆ ಮಕ್ಕಳನ್ನು ಬೆಳೆಸುವುದು ಅಸಾಧ್ಯವೇ ಆದರೂ ಇದರ ಇತಿ ಮಿತಿಗಳನ್ನು ಸ್ಪಷ್ಟವಾಗಿ ಹಾಕಿರಲೇಬೇಕು. ಮೊದಲೆರಡು ಮೂರು ಸಲ ಮಕ್ಕಳು ಪೆಟ್ಟಿನ ಭಯಕ್ಕೆ ದೊಡ್ಡವರಿಗೆ ಬೇಕಾದ ಹಾಗೆ ವರ್ತಿಸಿದರೂ ಕ್ರಮೇಣ ಮೊಂಡುತನವೇ ರೂಢಿಯಾಗುವ ಅಪಾಯವೂ ಇದೆ. ಈ ಹಂತಕ್ಕೆ ತಲುಪಿದರೆ ಪೆಟ್ಟಿನ ಹೆದರಿಕೆ ಪೂರ್ಣವಾಗಿ ಹೋಗುವುದು ಮಾತ್ರವಲ್ಲ; ಯಾವುದಕ್ಕೂ ಬಗ್ಗದೇ ತನ್ನದೇ ದಾರಿಯಲ್ಲಿ ಮಗು ನಡೆದು ಬಿಡಬಹುದು. ದೊಡ್ಡವರಿಗೆ ತಿರುಗಿ ಹೊಡೆಯಲಾಗದ ಅಸಹಾಯಕತೆಗೆ ತಮ್ಮನನ್ನೋ, ತಂಗಿಯನ್ನೋ, ಸಹಪಾಠಿಗಳನ್ನೋ ಹೊಡೆಯುವುದು ಕೂಡ ಅಭ್ಯಾಸವಾದೀತು. ಅತೀ ಶಿಕ್ಷೆಯಲ್ಲಿ ಬೆಳೆದ ಮಗು ತನ್ನ ಭಾವನಾತ್ಮಕ ಅವಶ್ಯಕತೆಗಳನ್ನು ತೀರಿಸಲು ಬೇರೆ ಅನಪೇಕ್ಷಣೀಯ ಮಾರ್ಗ ಕಂಡುಕೊಂಡರೂ ಅಚ್ಚರಿಯಿಲ್ಲ.
  • ಕಾರ್ಯರೂಪಕ್ಕೆ ತರಲಾಗದ ಬೆದರಿಕೆಗಳು: ರಸ್ತೆಯಲ್ಲಿ ಅಥವಾ ಇನ್ನೆಲ್ಲೋ ಕಂಡ ಭಿಕ್ಷುಕರನ್ನೋ ಅಥವಾ ಅದೇ ಥರ ಇನ್ನಾರನ್ನೋ ಭಯ ಹುಟ್ಟಿಸುವ ವ್ಯಕ್ತಿತ್ವವಾಗಿ ಚಿತ್ರಿಸುವುದು ಬಹಳ ಸಾಮಾನ್ಯವಾದವು ಮತ್ತು ನಿತ್ಯ ನಡೆವಂಥವು. ಮಗು ನಿದ್ದೆ, ಊಟ, ಹೋಮ್ ವರ್ಕ್ ಮಾಡದೇ ಇದ್ದಾಗ “ಅವರನ್ನ ಕರೀತೀನಿ ನೋಡು; ಬಂದು ಎತ್ಕೊಂಡು ಹೋಗ್ತಾರೆ” ಅನ್ನುವುದು ಅಪ್ಪಟ ಸುಳ್ಳು ಅನ್ನೋದು ಮೂರನೇ ದಿನದ ಹೊತ್ತಿಗೆ ಮಗುವಿಗೆ ಅರಿವಾಗುತ್ತದೆ. ಅದರ ಬದಲಿಗೆ ಸಾಧ್ಯವಾಗುವಂಥ ಪರಿಣಾಮಗಳ ಬಗ್ಗೆ ಯೋಚನೆ ಅಗತ್ಯ. “ಹೀಗೆ ಮಾಡಿದ್ರೆ ನಿನ್ ಹತ್ರ ಅಮ್ಮ ಮಾತಾಡಲ್ಲ; ಅಪ್ಪ ಆಟ ಆಡಲ್ಲ” ಎಂಬುದು ಸುಲಭವೂ, ಸಾಧ್ಯವೂ ಮತ್ತು ಪರಿಣಾಮಕಾರಿಯೂ. ನೆನಪಿರಲಿ ಆಡಿದ ಮಾತನ್ನು ಹಾಗೇ ಕಾಪಾಡಿಕೊಳ್ಳಬೇಕು. ಮಗುವಿನ ಸಪ್ಪೆ ಮುಖ, ಅಳು ಕಂಡು ‘ಅಯ್ಯೋ’ ಅನ್ನಿಸಿ ಮಾತು ಮರೆತು ಮುದ್ದಾಡಿದರೆ ಮಾತಿಗೂ ಬೆಲೆಯಿಲ್ಲ, ಅಮ್ಮ ಅಪ್ಪನಿಗೂ ಬೆಲೆಯಿಲ್ಲ ಆದೀತು.
  • ಪುನರಾವರ್ತನೆ/ಪುನರುಕ್ತಿ: ಮತ್ತೆ ಮತ್ತೆ ಶಿಸ್ತಿನ, ಶಿಷ್ಟಾಚಾರಗಳ ಬಗ್ಗೆ ಹೇಳುತ್ತಲೇ ಇರುವುದು ಮಕ್ಕಳಿಗೆ ತುಂಬ ಪರಿಣಾಮಕಾರಿಯಲ್ಲ. ತಪ್ಪು ಮಾಡಿದಾಗ ಕೂಡಿಸಿಕೊಂಡು ಸಾಧ್ಯವಾದಷ್ಟೂ ಸಂಕ್ಷಿಪ್ತವಾಗಿ ಮಗುವಿಗೆ ತಿಳಿ ಹೇಳುವುದು ಒಳಿತು. ಪದೇ ಪದೇ ಕೇಳಿದ್ದನ್ನೇ ಕೇಳಿ ಮಗುವಿಗೆ ಅದು ‘ಬೋರಿಂಗ್’ ಅನಿಸುವ ಬದಲು ತಕ್ಕ ಸಮಯದಲ್ಲಿ ಸಿಕ್ಕ ಮಾತು ಹೆಚ್ಚು ಅರ್ಥಪೂರ್ಣ ಆಗುತ್ತದೆ.

ಯಾವ ಅಪ್ಪ ಅಮ್ಮಂದಿರು ಕೂಡ ಮಕ್ಕಳು ಸುಳ್ಳುಗಾರರಾಗಲಿ, ಕೆಟ್ಟವರಾಗಲಿ ಅಂತ ಬಯಸೋಲ್ಲ. ಮಕ್ಕಳಿಗೆ ಕಲಿಸಲೋಸುಗ ಇಂಥವನ್ನೆಲ್ಲ ಮಾಡುವುದಲ್ಲ; ದೈನಂದಿನ ಬದುಕಲ್ಲಿ ಕೆಲವೊಂದು ಇಂಥ ಹಾನಿಯಿಲ್ಲದ ಸುಳ್ಳುಗಳು, ವರ್ತನೆಗಳು ಅನಿವಾರ್ಯವಾಗುವುದುಂಟು. ಪೇರೆಂಟಿಂಗ್ ಎಂಬುದು ಜಗತ್ತಿನ ಅತಿ ಕಷ್ಟದ ಕೆಲಸ ಮತ್ತು ಯಾವತ್ತಿಗೂ ಪೂರ ಯಶಸ್ವೀ ಅನ್ನಲಾಗದ ಕೆಲಸ ಕೂಡ. ಬೆಳೆಯುತ್ತ ಹೋದಂತೆ ಮಕ್ಕಳು ಕೂಡ ಇವನ್ನೆಲ್ಲ ಅರ್ಥ ಮಾಡಿಕೊಳ್ಳುತ್ತ ಹೋಗುತ್ತಾರೆ. ಅದುವರೆಗೂ ಮಕ್ಕಳೆದುರಿನ ಮಾತಿನ ಬಗ್ಗೆ, ವರ್ತನೆಯ ಬಗ್ಗೆ ಸ್ವಲ್ಪ ಹೆಚ್ಚಿನ ಕಾಳಜಿ ತೊಗೊಂಡರೆ ಈ ಸುಳಿಯಿಂದ ಪಾರಾಗುವುದು ಕಷ್ಟವೇನಲ್ಲ.

2 COMMENTS

  1. ನಿಜ. ನಮ್ಮ ಒಣ ಮಾತುಗಳಿಂದ ನಾವೇನನ್ನೂ ಮಾಡಲಾಗದು. ನಮ್ಮ ನಡೆ ಅಥವಾ ಮಾತೇ ಕೃತಿಯಾದಾಗ ಮಾತ್ರಾ ಅದಕ್ಕೊಂದು ಅರ್ಥ. ಇಲ್ಲದಿದ್ದರೆ ಎಲ್ಲವೂ ಅನರ್ಥ

  2. ಅದಕ್ಕೇ ಅಲ್ಲವೇ ಹಿಂದಿನಿಂದಲೂ ನುಡಿದಂತೆ ನಡೆ ನಡೆವಂತೆ ನುಡಿ ಎನ್ನುತ್ತಾ ಇದ್ದದ್ದು !! ನಿಮ್ಮ ಪ್ರೋತ್ಸಾಹಕ್ಕೆ ವಂದೇ

Leave a Reply