ಯುರೋಪ್ ಜಿಹಾದಿ ಕಾರ್ಖಾನೆಯಾಗಿರುವ ಚಿತ್ರಣ, ಈಗನಿಸುವುದು ಮೇರಾ ಭಾರತ್ ಮಹಾನ್!

ಚೈತನ್ಯ ಹೆಗಡೆ

ಉಗ್ರವಾದದ ವಿಷಯದಲ್ಲಿ ಭಾರತೀಯರು ಆಗಾಗ ನಮ್ಮನ್ನೇ ಟೀಕಿಸಿಕೊಂಡಿರುತ್ತೇವೆ. ಭಯೋತ್ಪಾದಕರನ್ನು ಮಟ್ಟ ಹಾಕುವ ವಿಷಯದಲ್ಲಿ ನಮ್ಮ ಧೋರಣೆ ಮೃದುವಾಗಿದೆ, ಪಾಶ್ಚಾತ್ಯ ರಾಷ್ಟ್ರಗಳಿಂದ ಪಾಠ ಕಲಿಯಬೇಕು ಎಂದೆಲ್ಲಅಭಿಪ್ರಾಯಗಳು ಸಾಮಾನ್ಯ.

ಆದರೆ ಬ್ರುಸೆಲ್ಸ್ ಮೇಲಾದ ಉಗ್ರದಾಳಿಯ ಬೆನ್ನಲ್ಲೇ ಹರಿದುಬರುತ್ತಿರುವ ಮಾಹಿತಿಗಳನ್ನು ನೋಡಿದರೆ, ನಮ್ಮ ಸ್ಥಾನ ಎಷ್ಟೋ ಎತ್ತರದಲ್ಲಿದೆ ಅಂತ ಒಂದುಕ್ಷಣಕ್ಕೆ ಅನಿಸುವುದು ಸುಳ್ಳಲ್ಲ. ಅಲ್ಲಿನ ಮಾಧ್ಯಮ ಉಗ್ರದಾಳಿಯನ್ನುವರದಿ ಮಾಡುವಲ್ಲಿ ತೋರಿದ ಸಂಯಮದಂಥ ಅಂಶಗಳನ್ನು ಆದರ್ಶವಾಗಿರಿಸಿಕೊಳ್ಳಬಹುದೇ ಹೊರತು, ಜಿಹಾದಿಗಳನ್ನು ಹತ್ತಿಕ್ಕುವಲ್ಲಿ ಹಾಗೂ ಜಿಹಾದಿಗಳ ಸೃಷ್ಟಿ ಆಗದಂತೆ ತಡೆಯುವುದರಲ್ಲಿ ಯುರೋಪಿನ ರಾಷ್ಟ್ರಗಳು ನಮಗಿಂತ ತುಂಬ ಹಿಂದಿರುವಂತೆ ಭಾಸವಾಗುತ್ತದೆ. ಈವರೆಗೆ ಅವರಿಗೆ ಉಗ್ರವಾದದ ಪ್ರಖರ ಬಿಸಿ ತಟ್ಟಿರಲಿಲ್ಲ ಅನ್ನೋದು ಬಿಟ್ಟರೆ, ಭಯೋತ್ಪಾದನೆ ಎದುರು ಅವರು ನಮಗಿಂತ ಹತ್ತೆಂಟು ಪಟ್ಟು ತತ್ತರಗೊಂಡುಬಿಡುತ್ತಾರೆ ಅನ್ನೋದು ಜಗತ್ತಿಗೆ ಅರಿವಾಗುತ್ತಿದೆ.

ಪ್ಯಾರಿಸ್ ದಾಳಿಯ ಮುಖ್ಯ ಸಂಚುಗಾರ ಸಲಾಹ್ ನನ್ನು ಇದೇ ಬ್ರುಸೆಲ್ಸ್ ನಗರಿಯೊಳಗಿನ ಪಟ್ಟಣ ಮೊಲೆನ್ಬೀಕ್ ನಲ್ಲಿ ಬಂಧಿಸಲಾಗಿತ್ತು ಎಂಬ ವಿವರಗಳನ್ನು ಓದಿದ್ದೇವೆ. ಯುರೋಪಿನಲ್ಲಿ ವಿಧ್ವಂಸ ಸೃಷ್ಟಿಸುತ್ತಿರೋರೆಲ್ಲ ಅದೇ ನೆಲದವರು ಎಂಬ ವಿವರಣೆಯನ್ನೂ ಈ ಹಿಂದಿನ ಲೇಖನದಲ್ಲಿ ನೀಡಲಾಗಿದೆ.

ಈಗ ಚರ್ಚೆಯಾಗಬೇಕಿರೋದು, ಅದೇಕೆ ವಿಧ್ವಂಸಕ ಮನಸ್ಸುಗಳು ರೂಪುಗೊಳ್ಳುತ್ತಿರೋದನ್ನು ಯುರೋಪಿಯನ್ ಸಂಸ್ಕೃತಿಗೆ ತಡೆಯಲಿಕ್ಕಾಗುತ್ತಿಲ್ಲ ಎಂಬ ಬಗ್ಗೆ. ಏಕೆಂದರೆ ಸಲಾಹ್ ಕೇವಲ ಉದಾಹರಣೆ ಮಾತ್ರ. ಯುರೋಪಿನ ದೇಶಗಳಿಂದ ಸಿರಿಯಾದ ಐಎಸ್ ಐಎಸ್ ಸೇರುವವರ ಸಂಖ್ಯೆ ದೊಡ್ಡದಿದೆ. ಬೆಲ್ಜಿಯಂ ಒಂದರಿಂದಲೇ ಸಿರಿಯಾ ಮತ್ತು ಇರಾಕ್ ಗಳಲ್ಲಿ ಹೊಡೆದಾಡುವುದಕ್ಕೆ ಹೋದವರ ಸಂಖ್ಯೆ 250. ಒಂದು ಕೋಟಿ ಜನಸಂಖ್ಯೆಯ ಬೆಲ್ಜಿಯಂಗೆ ಈ ಸಂಖ್ಯೆ ಬಹಳ ದೊಡ್ಡದೇ. ನಿಜ, ಭಾರತದಿಂದಲೂ ಐಎಸ್ ಐಎಸ್ ಗೆ ಹೋಗಿರುವ ಮುಸ್ಲಿಮರ ಬಗ್ಗೆ ವರದಿಗಳಾಗಿವೆ. ಆದರೆ ಆ ಸಂಖ್ಯೆ ಇಪ್ಪತ್ತು ದಾಟುವುದಿಲ್ಲ. ಕೇಂದ್ರದ ಭದ್ರತಾ ಸಲಹೆಗಾರ ಅಜಿತ್ ದೊವಲ್ ಅವರೇ ಈ ಹಿಂದೆ ವಿಶ್ಲೇಷಿಸಿದಂತೆ, ಬಹಳಷ್ಟು ಪ್ರಕರಣಗಳಲ್ಲಿ ಇಂಥ ಹುಡುಗರ ತಂದೆ-ತಾಯಿಯರೇ ಭದ್ರತಾ ಏಜೆನ್ಸಿಗಳನ್ನು ಎಚ್ಚರಿಸಿದ್ದಿದೆ.

ಆದರೆ ಯುರೋಪ್ ಗೆ ಮಾತ್ರ ಇಂಥ ಪ್ರತಿರೋಧ ಸಾಧ್ಯವಾಗುತ್ತಿಲ್ಲ. ಐಎಸ್ ಐಎಸ್ ಸೇರಿಕೊಳ್ಳುವುದು ಅಲ್ಲಿನ ಮುಸ್ಲಿಂ ಯುವಕರಿಗೆ ಥ್ರಿಲ್ಲಿಂಗ್ ಆಗಿ ಕಾಣಿಸುತ್ತಿರೋದು ಆತಂಕದ ಸಂಗತಿ. 2014ರಲ್ಲಿ ಸಿರಿಯಾಕ್ಕೆ ಹೋಗಿದ್ದ ಜಿಹಾದಿ ನಿಕೊಲಾಸ್ ಮೊರಿಯಾ 2015ರಲ್ಲಿ ಬಂಧನವಾದ. ಅವನ ಜಾತಕ ಬಿಚ್ಚಿದರೆ ಯುರೋಪಿನ ಜಿಹಾದ್ ವ್ಯಾಮೋಹಕ್ಕೆ ಕಾರಣವಾಗಿರುವ ಅಂಶದ ಸುಳಿವು ಸಿಗುತ್ತದೆ.

ಆತ ಫ್ರಾನ್ಸ್ ನಲ್ಲಿ ಸಣ್ಣ ಪುಟ್ಟ ಅಪರಾಧ ಕಾರ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದವ. ಐಎಸ್ ಐಎಸ್ ಸಂಪರ್ಕಕ್ಕೆ ಬಂದಿದ್ದು ಜೈಲಿನಲ್ಲಿದ್ದಾಗ. ಅಲ್ಲಿಯೇ ಆತ ಇಸ್ಲಾಮಿಗೆ ಮತಾಂತರವಾಗಿ, ಹೊರಬರುತ್ತಲೇ ಉಗ್ರ ಪಾಳೆಯ ಸೇರಿಕೊಂಡ.

ತನಿಖಾಧಿಕಾರಿಗಳು ಇವನನ್ನು ಹಿಂಡತೊಡಗಿದಾಗ, ತನಗೆ ಬದುಕಿನ ಬಗ್ಗೆ- ಈ ದೇಶದ ಬಗ್ಗೆ ಭ್ರಮನಿರಸನವಾಗಿದ್ದಾಗಿ ಹೇಳಿದ. ಅರ್ಥಾತ್ ಬದುಕಿನ ಇಂಥ ನಿಸ್ಸತ್ವದಿಂದ ತಪ್ಪಿಸಿಕೊಳ್ಳೋದಕ್ಕೆ ಉಗ್ರ ಸಂಘಟನೆ ಸೇರುವುದು ಆಕರ್ಷಣೀಯವಾಗಿ ಕಂಡಿದೆ. ಇಂಥವರನ್ನು ಬಳಸಿಕೊಳ್ಳುವ ಐಎಸ್ ಐಎಸ್, ಯುರೋಪಿನ ಜನದಟ್ಟಣೆ ಪ್ರದೇಶಗಳ ಮೇಲೆ ಮಾಡುವ ದಾಳಿಗೆ 50 ಸಾವಿರ ಯೂರೊ ಕೊಡುತ್ತದಂತೆ.

ಈ ವಿಚಾರಣೆ ವೇಳೆಯೇ ಆತ ಹೇಳಿದ್ದು- 2015ರಲ್ಲಿ ಯುರೋಪನ್ನು ಸರಣಿ ದಾಳಿಗಳಿಗೆ ಒಳಪಡಿಸುವುದಕ್ಕೆ ಅಬು ಒಮರ್ ಎಂಬಾತನ ನೇತೃತ್ವದಲ್ಲಿ ಒಂದು ಜಾಲವನ್ನೇ ರಚಿಸಲಾಗಿದೆ ಅಂತ. ಕಳೆದ ವರ್ಷ ಪ್ಯಾರಿಸ್ ಮೇಲಾದ ದಾಳಿಯೂ ಇದೇ ಹಂಚಿಕೆಯ ಒಂದು ಭಾಗ. ಅಂದಹಾಗೆ ಈ ಅಬು ಒಮರ್ ಬ್ರುಸೆಲ್ಸ್ ನಿಂದಲೇ ಎದ್ದುಹೋದವನು! ಈತ ಯುರೋಪಿಗೆ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಯುರೋಪಿನ ಗುಪ್ತಚರ ತಂಡಗಳೆಲ್ಲ ಆತನನ್ನು ಹಿಡಿದೇಬಿಟ್ಟೆವೆಂದುಕೊಂಡವು. ಎಲ್ಲರಿಂದಲೂ ತಪ್ಪಿಸಿಕೊಂಡು ಸಿರಿಯಾಗೆ ಮರಳಿದ ಆತ, ಐಎಸ್ ಐಎಸ್ ಉಗ್ರ ಸಂಘಟನೆಯ ನಿಯತಕಾಲಿಕದಲ್ಲಿ ತನ್ನ ಪರಾರಿ ಪರಾಕ್ರಮ ಬರೆದುಕೊಂಡು ಸುದ್ದಿಯಾದ.

ಬ್ರುಸೆಲ್ಸ್ ದಾಳಿ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ವರದಿಯಾಗುತ್ತಿರುವ ಇಂಥ ಮಾಹಿತಿಗಳ ಎದುರು ನಿಂತಾಗ, ಪರವಾಗಿಲ್ಲಜಿಹಾದಿಗಳನ್ನು ನಿಯಂತ್ರಿಸುವಲ್ಲಿ ಭಾರತವೇ ಲೇಸು ಅಂತ ಅನ್ನಿಸಿದರೆ ಅಚ್ಚರಿಯಿಲ್ಲ.

120 ಕೋಟಿ ಜನಸಂಖ್ಯೆಯಲ್ಲಿ 17 ಚಿಲ್ಲರೆ ಕೋಟಿ ಮುಸ್ಲಿಮರನ್ನೇ ಹೊಂದಿರುವ ಭಾರತವು, ಕಡಿಮೆ ಜನಸಂಖ್ಯೆಯ ಯುರೋಪಿಗೆ ಹೋಲಿಸಿದರೆ ಜಿಹಾದಿಗಳನ್ನು ಉತ್ಪಾದಿಸುತ್ತಿರುವುದು ಬಹಳ ಕಡಿಮೆ ಎಂದು ಸ್ವರಾಜ್ಯ ಅಂತರ್ಜಾಲ ಪತ್ರಿಕೆಯಲ್ಲಿಅನನ್ಯ ಲೇಖನ ಬರೆದಿರುವ ಆರ್. ಜಗನ್ನಾಥನ್, ಇದಕ್ಕೆ ಕಾರಣವನ್ನೂ ಸೊಗಸಾಗಿ ವಿಶ್ಲೇಷಿಸಿದ್ದಾರೆ.

ಅವರು ಬರೆಯುತ್ತಾರೆ- ‘ಅಬ್ರಹಾಮಿಕ್ ಮತಗಳಿಗೂ ಭಾರತೀಯವಾದುದಕ್ಕೂ, ಅದರಲ್ಲೂ ಹಿಂದುಯಿಸಂನ ಸಾಂಸ್ಕೃತಿಕ ವ್ಯತ್ಯಾಸದಲ್ಲೇ ಉತ್ತರವಿದೆ. ಹಿಂದುಯಿಸಂ ಅನ್ನು ಯಾವುದೇ ಒಳ್ಳೆಯ ಅಂಶಗಳಿಗೆ ಉದಾಹರಿಸುವುದನ್ನು ಸೆಕ್ಯುಲರಿಸ್ಟರು ಇಷ್ಟಪಡುವುದಿಲ್ಲ. ಆದರೂ ಯುರೋಪು ಅಷ್ಟೊಂದು ಜಿಹಾದಿಗಳನ್ನು ಉತ್ಪಾದಿಸುತ್ತಿರುವಾಗ ಭಾರತದ್ದೇಕೆ ವಿರಳ ಸೃಷ್ಟಿ ಎಂಬುದಕ್ಕೆ ವಿವರಣೆ ಇರೋದು ಇಲ್ಲಿಯೇ..’

‘ಹಿಂದುಗಳ ಸಹಜ ಧೋರಣೆ ಬದುಕು ಮತ್ತು ಬದುಕಲು ಬಿಡು ಎಂಬ ಬಹುತ್ವದ್ದು. ಇಲ್ಲಿ ಸಂಘರ್ಷಕ್ಕಲ್ಲ ಸಹಕಾರಕ್ಕೆ ಆದ್ಯತೆ. ಇದಕ್ಕೆ ವ್ಯತಿರಿಕ್ತವಾಗಿ ಅಬ್ರಹಾಮಿಕ್ ಮತಗಳದ್ದು ಮಧ್ಯಮ ಮಾರ್ಗಕ್ಕೆ ಎಡೆ ಇಲ್ಲದ ಎರಡೇ ನೆಲೆಯ ಧೋರಣೆ. ಇಸ್ಲಾಂ ಮತ್ತು ಕ್ರೈಸ್ತ ಮತಗಳೆರಡೂ ಒಂದೇ ದೇವರು, ಒಂದೇ ಸತ್ಯ ಎಂಬುದನ್ನೇ ಪ್ರತಿಪಾದಿಸುತ್ತವಾದ್ದರಿಂದ ಸಿದ್ಧಾಂತ ಗೆಲುವಿಗೆ ಸಂಘರ್ಷ ಅನಿವಾರ್ಯ. ಹಿಂದುವಿಗಿಂತ ಹೆಚ್ಚಿನ ತೀವ್ರತೆಯಲ್ಲಿ ಅವರು ಧರ್ಮಕ್ಕಾಗಿ ಸಾಯಲು ಸಿದ್ಧ. ಹಾಗೆಂದೇ ಯುರೋಪಿನಲ್ಲಿ ಕ್ರೈಸ್ತಮತವು ಇಸ್ಲಾಮಿನೊಂದಿಗೆ ನಿರಂತರ ಸಂಘರ್ಷದಲ್ಲಿದೆ.’

ಇವನ್ನೆಲ್ಲ ಓದಿಕೊಂಡಾಗ ಅನಿಸುತ್ತದೆ. ನಮ್ಮಲ್ಲಿ ಎಷ್ಟೇ ತಿಕ್ಕಾಟ- ಗೊಂದಲಗಳಿದ್ದಿರಬಹುದು. ಆದರೆ ಮೇಲ್ನೋಟಕ್ಕೆ ತುಂಬ ಶುಭ್ರವಾಗಿ ಹೊಳೆಯುತ್ತಿರುವ ಪಶ್ಚಿಮದ ದೇಶಗಳ ಅಂತಃಸತ್ವಕ್ಕಿಂತ ನಮ್ಮದೇ ಗಟ್ಟಿ. ಶತಮಾನಗಳಿಂದ ಕಾಡುತ್ತಿರುವ ಉಗ್ರವಾದದ ಹೊರತಾಗಿಯೂ ಭಾರತ ಇಷ್ಟರಮಟ್ಟಿಗೆ ಅಸ್ತಿತ್ವ ಉಳಿಸಿಕೊಂಡಿರುವುದನ್ನು, ಕೆಲದಾಳಿಗಳಾಗುತ್ತಲೇ ಯುರೋಪ್ ತತ್ತರಿಸಿರುವುದನ್ನು ಗಮನಿಸಿದರೆ ಮೇರಾ ಭಾರತ್ ಮಹಾನ್ ಅಂತ ವಿಶ್ವಾಸ ಮೂಡುತ್ತಿದೆ.

Leave a Reply