ನಾಶ ಮಾಡೋಕೆ ಕಾಂಗ್ರೆಸ್ನಲ್ಲಿ ಉಳಿದಿರೋದೇನು- ಆರೋಪಗಳಿಗೆ ಉತ್ತರ, ಇದು ಬಾಬಾ ರಾಮ್ದೇವ್ ಸ್ಟೈಲ್

ಡಿಜಿಟಲ್ ಕನ್ನಡ ಟೀಮ್

‘ಉತ್ತರಾಖಂಡದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವುದರಲ್ಲಿ ಬಾಬಾ ರಾಮದೇವರ ಕೈವಾಡವಿದೆ. ಅವರು ಕಾಂಗ್ರೆಸ್ ನ ಶಾಸಕರೊಂದಿಗೆ ಮಾತನಾಡಿದ್ದರೆಂಬ ಬಗ್ಗೆ ಸಾಕ್ಷಿಯಿದೆ. ಉತ್ತರಾಖಂಡದಲ್ಲಿ ಅವರ ವ್ಯಾಪಾರ ಹಿತಾಸಕ್ತಿಗಳು ಪ್ರಶ್ನೆಗೆ ಒಳಗಾಗಿರೋದರಿಂದ ಹೀಗೆ ಮಾಡ್ತಿದಾರೆ’ ಇದು ಕಾಂಗ್ರೆಸ್ ಆರೋಪ.

ಇಂಥ ಯಾವುದೇ ಆರೋಪವನ್ನು ಸಂಬಂಧಪಟ್ಟವರ ಸಮಕ್ಷಮದಲ್ಲಿ ಅರುಹಿ, ಇದಕ್ಕೆ ನೀವೇನಂತೀರಿ ಅಂತ ಕೇಳಬೇಕಾದದ್ದು ಹೆಚ್ಚಿನ ಟಿವಿ ಪತ್ರಕರ್ತರ ‘ಪ್ರಖರ ಪತ್ರಿಕಾಧರ್ಮ’. ಇಲ್ಲ ಇವೆಲ್ಲ ನಿರಾಧಾರ ಅಂತ ಹೇಳಿ ಮುಂದೆ ಹೋಗುವಂತಿಲ್ಲ. ಅವ್ರು ಹಂಗೆ ಆರೋಪಿಸಿದಾರಲ್ಲ… ನೀವು ಈಗೇನಾರ ಹೇಳ್ಲೇಬೇಕು ಎಂಬ ವರಸೆ ಇದ್ದಿದ್ದೇ. ಕಾಂಗ್ರೆಸ್ ಆರೋಪದ ಹಿನ್ನೆಲೆಯಲ್ಲಿ ರಾಮದೇವರಿಗೂ ಕೆಮರಾ ಮತ್ತು ಮೈಕುಗಳು ಹೀಗೆಯೇ ಎದುರಾದವು.

ನೀವು ಕಾಂಗ್ರೆಸ್ ಅನ್ನು ನಾಶಪಡಿಸುವುದಕ್ಕೋಸ್ಕರ ಉತ್ತರಾಖಂಡದಲ್ಲಿ ಕಾಂಗ್ರೆಸ್ ನಲ್ಲಿ ಒಡಕು ತರುತ್ತಿದ್ದೀರಿ..

ಉತ್ತರ- ಕಾಂಗ್ರೆಸ್ ನಾಶ ಮಾಡುವುದು ಎಂದಾದರೆ ಅದನ್ನು ಎಲ್ಲರೆದುರು ಹೇಳಿಕೊಂಡೇ ಮುಲಾಜಿಲ್ಲದೇ ಮಾಡುತ್ತೇನೆ. ರಾಜ್ಯದ ಕಾಂಗ್ರೆಸ್ ಹಿಡಿದುಕೊಂಡು ಏನು ಮಾಡಲಿ? ಮೇಲ್ಮಟ್ಟದಲ್ಲೇ ಮಾಡುತ್ತಿದ್ದೆ. ಆದರೆ ನೀವೇ ಹೇಳಿ… ಕಾಂಗ್ರೆಸ್ ನಲ್ಲಿ ನಾಶ ಮಾಡುವುದಕ್ಕೆ ಉಳಿದುಕೊಂಡಿರೋದೇನು?

ಆದರೂ ನೀವು ರಾಜಕೀಯ ಹಿತಾಸಕ್ತಿಗಳಿಂದ ಇಂಥವುಗಳಲ್ಲಿ ತೊಡಗಿಸಿಕೊಂಡಿದ್ದೀರಿ, ತಮ್ಮ ಶಾಸಕರ ಬಳಿ ಮಾತನಾಡಿರೋದಕ್ಕೆ ಸಾಕ್ಷಿ ಇದೆ ಅಂತಿದೆ ಕಾಂಗ್ರೆಸ್…

ಸಾಬೀತಿದ್ದರೆ ಹೀಗೆ ಆರೋಪಿಸುವುದುಬಿಟ್ಟು ಎಲ್ಲರೆದುರು ಇಟ್ಟರಾಯಿತಲ್ಲ? ಈ ಹಿಂದೆ ನಾನು ರಾಜಕೀಯದಲ್ಲಿ ಆಸಕ್ತನಾಗಿದ್ದು ಖರೆ. ಏಕೆಂದರೆ ದೇಶಕ್ಕೆ ಒಳ್ಳೆಯ ಶಾಸನ ನೀಡುವ ನಾಯಕ ಆಯ್ಕೆಯಾಗಲಿ ಎಂಬ ಕಾರಣಕ್ಕೆ. ಈಗೇನಿದ್ದರೂ ನಾನು ಆಯುರ್ವೇದ, ಯೋಗ, ವೈದಿಕ ಸಂಸ್ಕೃತಿ ಪ್ರಸಾರ ಇವುಗಳ ಕಾರ್ಯದಲ್ಲೇ ತೊಡಗಿಸಿಕೊಂಡಿದ್ದೇನೆ. ಕಾಂಗ್ರೆಸ್ಸಿಗೆ ಶೀರ್ಷಾಸನ ಹಾಕಿಸುವ ಕಾರ್ಯ ಆಗಿಹೋಗಿದೆ. ಈಗ ನನ್ನ ಗುರಿ ಏನಿದ್ದರೂ ಬಹುರಾಷ್ಟ್ರೀಯ ಕಂಪನಿಗಳಿಗೆ ಶೀರ್ಷಾಸನ ಹಾಕಿಸುವುದು!

ಆದರೆ ಕಾಂಗ್ರೆಸ್ ಮಾತ್ರ ಉತ್ತರಾಖಂಡದಲ್ಲಿನ ಬಿಕ್ಕಟ್ಟಿಗೆ ನೀವೇ ಕಾರಣ ಅಂತ ಹೇಳ್ತಿದೆಯಲ್ಲ..

ಉತ್ತರ- ಅದು ಹುರುಳಿಲ್ಲದ ಆರೋಪ ಅಂತ ಎಷ್ಟು ಸಾರಿ ಹೇಳಬೇಕು? ನನಗೆ ಮಾಡಬೇಕಿರುವ ಕೆಲಸಗಳು ಸಾಕಷ್ಟಿವೆ. ಇವರ ಎಲ್ಲ ಆರೋಪಗಳನ್ನೂ ಅಲ್ಲಗೆಳೆಯುತ್ತ ಕುಳಿತುಕೊಳ್ಳಲೇ? ಅವರಿಗೆ ಬೇರೆ ಕೆಲಸ ಇಲ್ಲ. ದಿನಕ್ಕೊಂದು ಹೇಳುತ್ತಿರುತ್ತಾರೆ. ವಿಜಯ್ ಮಲ್ಯ ದೇಶ ಬಿಡಿಸಿದವರೇ ರಾಮದೇವ್, ಯಾಕಂದ್ರೆ ತಮ್ಮ ಬ್ರಾಂಡಿನ ಬಿಯರ್ ತರೋ ಯೋಜನೆ ಅವರಿಗಿದೆ ಅಂತಾನೂ ಹೇಳಿದ್ರು. ಇಂಥ ತಲೆಬುಡವಿಲ್ಲದ ಮಾತುಗಳಿಗೆಲ್ಲ ಪ್ರತಿಕ್ರಿಯಿಸುತ್ತ ಕಾಲ ಕಳೆಯಬೇಕಾ?

Leave a Reply