ನೊಂದವರಿಗೆ ಮಿಡಿದ ಆ ಭೈರೇಗೌಡರೆಲ್ಲಿ..? ನೊಂದವರನ್ನು ಮತ್ತಷ್ಟು ನೋಯಿಸುವ ಈ ಕೃಷ್ಣಭೈರೇಗೌಡರೆಲ್ಲಿ..?!

ಡಿಜಿಟಲ್ ಕನ್ನಡ ಟೀಮ್

ಪುಣ್ಯಕ್ಕೆ ಮಾಜಿ ಕೃಷಿ ಸಚಿವ ಸಿ. ಭೈರೇಗೌಡರು ಬದುಕಿಲ್ಲ. ಒಂದೊಮ್ಮೆ ಬದುಕಿದ್ದಿದ್ದರೆ ತಮ್ಮ ಪುತ್ರನ ಅವತಾರ ಕಂಡು ಒದ್ದಾಡಿಬಿಡುತ್ತಿದ್ದರೇನೋ, ಇಲ್ಲವೇ ತಮ್ಮ ಕೈಯಲ್ಲಿರುತ್ತಿದ್ದ ವಾಕಿಂಗ್ ಸ್ಟಿಕ್ಕನ್ನು ಮಗನ ಬಾಯಿಗೆ ತುರುಕಿ ಇನ್ನೆಂದೂ ಈ ರೀತಿ ಮಾತಾಡದಂತೆ ಮಾಡುತ್ತಿದ್ದರೇನೋ…!

ಯಾಕೀಗ ಈ ಮಾತು? ಅಂಥಾದೇನಾಯ್ತು ಅಂತ ಕೇಳಿದ್ರಾ? ನೋಡಿ.., ಭೈರೇಗೌಡರ ಪುತ್ರ ಹಾಲಿ ಕೃಷಿ ಸಚಿವ ಕೃಷ್ಣಭೈರೇಗೌಡರು ಎಂಥಾ ಕೆಲಸ ಮಾಡಿದ್ದಾರೆ ಅಂತ. ಏಳೆಂಟು ವರ್ಷದಿಂದ ಕೃಷಿ ಇಲಾಖೆಗೆ ಕೃಷಿ ಪದವೀಧರರ ನೇಮಕ ಆಗಿಲ್ಲ. ದಯವಿಟ್ಟು ಈಗಲಾದರೂ ಮಾಡಿ ಅಂತ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹೋಗಿ ಕೇಳಿದರೆ ಈ ಕೃಷ್ಣಭೈರೇಗೌಡರು ಏನು ಹೇಳಿದ್ದಾರೆ ಗೊತ್ತೇ..? ನಿಮ್ಮನ್ನ ಕಾಲೇಜಿಗೆ ಆಡ್ಮಿಷನ್ ಮಾಡಿಕೊಳ್ಳೋವಾಗ ನಿಮಗೇನು ಕೆಲಸ ಕೊಡ್ತೀವಿ ಅಂತ ಭರವಸೆ ನೀಡಿದ್ವಾ..? ನಿಮ್ಮನ್ನು ಈ ವಿವಿಗೆ ಬಂದು ಸೇರ್ಕೊಳ್ಳಿ ಅಂತಾ ಫೋರ್ಸ್ ಮಾಡಿದ್ವಾ..? ನಿಮಗೆ ಉದ್ಯೋಗ ಕೊಡಬೇಕೆಂದು ಎಲ್ಲಾದ್ರೂ ರೂಲ್ಸ್ ಇದೆಯಾ ಅಂತಾ ಅವಾಜ್ ಹಾಕಿದ್ದಾರೆ.

ಅಷ್ಟೇ ಅಲ್ಲ, ‘ಅಲ್ಲ ಸಾರ್, ಈಗಾಗಲೇ ಕೆಲಸ ಇಲ್ಲದೇ ನಮ್ಮಂತೋರು ನೂರಾರು ಜನ ಸಾಯ್ತಾ ಇದ್ದಾರೆ. ಅವರಿಗೆ ಕೆಲಸ ಕೊಡದೇ ಈಗ ಖಾಸಗಿ ಸೀಟುಗಳನ್ನೂ ಮತ್ತಷ್ಟು ಹೆಚ್ಚಳ ಮಾಡಿದ್ರೆ ನಾವೆಲ್ಲಿಗೆ ಹೋಗಬೇಕು, ಅವರೆಲ್ಲಿಗೆ ಹೋಗಬೇಕು’ ಅಂತ ವಿದ್ಯಾರ್ಥಿಗಳು ಸಮಸ್ಯೆ ಬಗ್ಗೆ ನಿವೇದನೆ ಮಾಡಿಕೊಂಡರೆ, ‘ಕೃಷಿ ವಿವಿ ಸೀಟುಗಳನ್ನು ಬರೀ ವಿದ್ಯಾರ್ಥಿಗಳು ಮಾತ್ರ ಕೇಳಲ್ಲ, ಮಾರ್ಕೆಟ್ ನಲ್ಲಿ ಬೇಕಾದಷ್ಟು ಜನ ಕೇಳ್ತಾರೆ. ಹೀಗಾಗಿ ಅಗತ್ಯಕ್ಕೆ ತಕ್ಕಂತೆ ಖಾಸಗಿ ಸೀಟುಗಳನ್ನು ಹೆಚ್ಚಳ ಮಾಡ್ತೇವೆ. ನಿಮ್ನನ್ನ ಕೇಳಿ ಸೀಟು ಹೆಚ್ಚಳ ಮಾಡೋಕಾಗಲ್ಲ’ ಅಂತಾನೂ ಧಿಮಾಕಿನ ಉತ್ತರ ನೀಡಿದ್ದಾರೆ.

ಎಂಟತ್ತು ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಮತ್ತು ಹೊಸದಾಗಿ ಸೃಷ್ಠಿಯಾಗುತ್ತಿರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ತೀರ್ಮಾನಿಸಿದ್ದು, ಹಣಕಾಸು ಇಲಾಖೆಯ ಅನುಮೋದನೆ ಕಾಯುತ್ತಿದೆ. ಇದನ್ನರಿತ ಕೃಷಿ ವಿವಿ ಪದವೀಧರರು ಈ ಹುದ್ದೆಗಳಿಗೆ ತಮ್ಮನ್ನು ಪರಿಗಣಿಸುವಂತೆ ದುಂಬಾಲು ಬಿದ್ದಾಗ ಸಚಿವರು ಕೊಟ್ಟ ಉತ್ತರ ಇದಾಗಿದೆ.

ನಿರುದ್ಯೋಗಿ ಪದವೀಧರರು ತಮ್ಮ ಅಳಲು ತೋಡಿಕೊಂಡಾಗ ಮಂತ್ರಿ ಆದವರು ಆಡುವ ಮಾತುಗಳು ಇವಲ್ಲ. ಸರಕಾರಕ್ಕೆ ಏನಾದರೂ ಸಮಸ್ಯೆ ಇದ್ದರೆ ಅದನ್ನು ಹೇಳಲು ರೀತಿ-ನೀತಿ ಇರುತ್ತದೆ. ಅದನ್ನು ಬಿಟ್ಟು ಪದವಿಯ ಆಹಮಿಕೆಯಿಂದ ಉತ್ತರ ಕೊಡುವುದು ಸಲ್ಲ. ಹಾಗೆ ಇವರಿಗೆ ಸಮಸ್ಯೆ ಕೇಳಲು ತಾಳ್ಮೆ ಇಲ್ಲ ಎನ್ನುವುದಾದರೆ, ಅವರದೇ ಧಾಟಿಯ ಪ್ರಶ್ನೆಗಳು ಅವರಿಗೂ ಅನ್ವಯ ಆಗುತ್ತದೆ. ಇವರನ್ನು ಚುನಾವಣೆಯಲ್ಲಿ ಆರಿಸಿ, ಮಂತ್ರಿ ಆಗುವಂತೆ ನೋಡಿಕೊಂಡ ಜನಕ್ಕೆ ತಮ್ಮ ಸಮಸ್ಯೆ ಹೇಳಿಕೊಳ್ಳುವ ಹಕ್ಕಿಲ್ಲವೇ? ಕೃಷಿ ವಿವಿ ಪದವೀಧರ ವಿದ್ಯಾರ್ಥಿಗಳು ಕೃಷಿ ಸಚಿವರ ಬಳಿ ನೋವು ತೋಡಿಕೊಳ್ಳದೇ ಮುಜರಾಯಿ ಸಚಿವರ ಬಳಿ ಹೇಳಿಕೊಳ್ಳಲಾಗುತ್ತದೆಯೇ..?

ಕೃಷ್ಣ ಭೈರೇಗೌಡರು ಬೇರೆಯವರನ್ನು ನೋಡಿ ಕಲಿತುಕೊಳ್ಳುವುದು ಬೇಕಿಲ್ಲ. ರಾಮಕೃಷ್ಣ ಹೆಗಡೆ, ದೇವೇಗೌಡ, ಜೆ.ಎಚ್. ಪಟೇಲ್ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ ತಮ್ಮ ತಂದೆ ಭೈರೇಗೌಡರ ಆದರ್ಶವನ್ನಾದರೂ ಅನುಸರಿಸಬಹುದಲ್ಲವೇ? ಕೃಷಿ ಸಚಿವರಾಗಿ ರೈತರ ಏಳ್ಗೆಗಾಗಿ ದುಡಿದ, ಅವರ ಸಮಸ್ಯೆಗಳಿಗೆ ಮಿಡಿದ ಆ ಭೈರೇಗೌಡರೆಲ್ಲಿ? ಅವರ ನಾಮಬಲದಿಂದಲೇ ಮಂತ್ರಿಯಾಗಿ ಮೆರೆಯುತ್ತಿರುವ ಈ ಕೃಷ್ಣಭೈರೇಗೌಡರೆಲ್ಲಿ?. ಸಂಸ್ಕಾರ ಬರೀ ರಕ್ತದಿಂದ ಮಾತ್ರ ಬರುವುದಿಲ್ಲ ಎಂಬುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕಿಲ್ಲ ಅನ್ನಿಸುತ್ತದೆ.

Leave a Reply