ಬಡತನದ ಎದಿರು ಎಲ್ಲರೂ ಒಂದೇ ಎಂದು ಸಾರುವ ‘ಪ್ಲೇ ಗ್ರೌಂಡ್ಸ್’

ಎನ್.ಎಸ್.ಶ್ರೀಧರ ಮೂರ್ತಿsridharamurthy

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಜನ ಹೊಸಬರು ಬರುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಸುಮಾರು ಐವತ್ತು ಮಂದಿ ಯುವಪ್ರತಿಭೆಗಳು ಡೈರಕ್ಟರ್ ಕ್ಯಾಪ್ ತೊಟ್ಟಿದ್ದಾರೆ ಎನ್ನುವುದು ಸಣ್ಣ  ಸಂಗತಿಯಲ್ಲ. ಅದರಂತೆ ಕಿರುಚಿತ್ರಗಳ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಪ್ರಯೋಗಗಳು ನಡೆಯುತ್ತಿವೆ. ಯುವ ಪೀಳಿಗೆಯ ಸೃಜನಶೀಲ ಅಭಿವ್ಯಕ್ತಿಗೆ ಇದೊಂದು ಸಮರ್ಥವಾದ ಮಾಧ್ಯಮ ಎನ್ನಿಸಿದೆ. ಇವುಗಳಲ್ಲಿ ಬಹುಮುಖ ಪ್ರತಿಭಾವಂತೆ ಎಂ.ಡಿ.ಪಲ್ಲವಿ ಇನ್ನೊಬ್ಬ ಪ್ರತಿಭಾವಂತ ಶಮಿಕ್ ಸೇನ್‍ ಗುಪ್ತಾ ಅವರೊಡನೆ ನಿರ್ದೇಶಿಸಿರುವ ‘ಪ್ಲೇ ಗ್ರೌಂಡ್ಸ್’ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಗಮನ ಸೆಳೆದ ಕಿರುಚಿತ್ರ ಎನ್ನಿಸಿಕೊಂಡಿದೆ. ಅವಧಿಯ ದೃಷ್ಟಿಯಿಂದ  ಇದು ಹದಿನೆಂಟು ನಿಮಿಷಗಳ ವ್ಯಾಪ್ತಿಯ ಕಿರುಚಿತ್ರವಾದರೂ ಸಂಪೂರ್ಣ ಕಥಾಚಿತ್ರಕ್ಕೆ ಇರುವ ಎಲ್ಲಾ ಅಯಾಮಗಳನ್ನು ಒಳನೋಟಗಳನ್ನು ಪಡೆದಿರುವುದು ವಿಶೇಷ. ಹಾಂಕಾಂಗ್‍ನ ಐಎಫ್‍ವಿಎ ಚಿತ್ರೋತ್ಸವದಲ್ಲಿ ಚಿನ್ನದ ಪದಕ ಪಡೆದಿರುವ  ಈ ಚಿತ್ರ ಮುಂಬೈ, ಪುಣೆ, ಬೆಂಗಳೂರು, ಲಾಸ್ ಎಂಜಲೀಸ್‍ ಚಿತ್ರೋತ್ಸವಗಳಲ್ಲಿಯೂ ಪ್ರದರ್ಶಿತವಾಗಿ ಎಲ್ಲರ ಗಮನ ಸೆಳೆದಿದೆ. 3,20 ಲಕ್ಷ ರುಪಾಯಿ ಬಜೆಟ್‍ನಲ್ಲಿ ನಿರ್ಮಿತವಾದ ಚಿತ್ರ ಬೆಂಗಳೂರಿನ ನೈಜ ಪರಿಸರದಲ್ಲೇ ಚಿತ್ರಿತವಾಗಿದೆ. ಪಲ್ಲವಿ ಇಲ್ಲಿ ಕಥೆಯಿಂದ ಹಿಡಿದು ನಿರ್ದೇಶನ, ಅಭಿನಯ ಸೇರಿದಂತೆ ಎಲ್ಲಾ ರಂಗದಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ ಚಿತ್ರದ ಬೆನ್ನೆಲಬು ಎನ್ನಿಸಿದ್ದಾರೆ.

ಚಿತ್ರದ ಹೆಸರು ‘ಪ್ಲೇ ಗ್ರೌಂಡ್ಸ್’ ಆದರೂ ಇದೇನು ಸಾಕ್ಷ್ಯ ಚಿತ್ರದಂತೆ ಸಾಗುವುದಿಲ್ಲ. ಕಥಾತ್ಮಕ ನೆಲೆಯಲ್ಲಿಯೇ ಬೆಳೆಯುತ್ತದೆ. ಆಟದ ಮೈದಾನವೆಂಬ ರೂಪಕದ ಮೂಲಕ ಮಹಾನಗರಗಳು ಅಭಿವೃದ್ಧಿಯ ಹೆಸರಿನಲ್ಲಿ ಕಳೆದು ಕೊಳ್ಳುತ್ತಿರುವ ಮಾನವೀಯ ತಲ್ಲಣಗಳನ್ನು ಬೇರೆ ಬೇರೆ ನೆಲೆಗಳಲ್ಲಿ ಹಿಡಿದಿಡುವುದು ಚಿತ್ರದ ಉದ್ದೇಶ. ಕಟ್ಟಡ ನಿರ್ಮಾಣದ ಕಾರ್ಮಿಕರೊಬ್ಬರ ಮೂರು ವರ್ಷದ ಮಗ ಮುರುಳಿ ಗೆಳೆಯರೊಡನೆ ಆಟವಾಡುತ್ತಾ ನಮಾಜ್‍ಗೆ ಎಂದು ನಿಲ್ಲಿಸಿದ್ದ ಆಟೋದಲ್ಲಿ ಆಡಗಿ ಕುಳಿತು ಹಾಗೇ ನಿದ್ದೆ ಮಾಡುತ್ತಾನೆ. ಅವಸರದಲ್ಲಿದ್ದ ಆಟೋ ಚಾಲಕ ಇದನ್ನು ಗಮನಿಸದೆ ತೆರಳುತ್ತಾನೆ. ಅಂದು ರಾತ್ರಿಯೇ ಈ ಮಗುವಿನ ಹೆತ್ತವರನ್ನು ಉಳಿದ ಕಾರ್ಮಿಕರ ಜೊತೆ  ಬೇರೆ ಕಟ್ಟಡದ ಕೆಲಸಕ್ಕೆ ಕರೆದು ಕೊಂಡು ಹೋಗಲು ಕಂಟ್ರಾಕ್ಟರ್ ನಿರ್ಧರಿಸುತ್ತಾನೆ. ಅವನಿಗೆ ಮಗು ಕಳೆದು ಹೋಗಿದೆ ಎನ್ನುವುದು ಮುಖ್ಯವಾದ ವಿಷಯವೇ ಆಗುವುದಿಲ್ಲ. ಇತ್ತ  ಮಗು ಆಟೋದಲ್ಲಿರುವುದು ತಿಳಿದ ನಂತರ ಆಟೋ ಚಾಲಕನ ಹೆಂಡತಿ ನೂರ್‍ ಗಂಡನಿಗೆ  ಮಗುವನ್ನು ಹೆತ್ತವರಿಗೆ ತಲುಪಿಸುವಂತೆ ಕೇಳುತ್ತಾಳೆ,  ಅಷ್ಟೇ ಅಲ್ಲ ‘ಒಂದಿಬ್ಬರ ಬಳಿ ಕೇಳಿ ಅದು ಯಾರ ಮಗು ಎಂದು ತಿಳಿದುಕೊಂಡು ಬಿಟ್ಟು ಬನ್ನಿ’ ಎನ್ನುತ್ತಾಳೆ. ಈ ಎಲ್ಲಾ ಮಾನವೀಯತೆಯನ್ನು ತೋರಿಸಿದ ನಂತರ ಮಗುವನ್ನು ಕರೆ ತರುವ ಆಟೋ ಚಾಲಕ ಬಯಸುವುದು ಬಾಡಿಗೆ ಹಣವಾದ ಆರು ನೂರು ರೂಪಾಯಿಗಳನ್ನು.ಅವನ ಮಟ್ಟಿಗೆ ಅದು ಜೀವನೋಪಾಯ ಆದರೆ  ಶ್ರಮಿಕ ವರ್ಗಕ್ಕೆ ಅದು ದೊಡ್ಡ ಮೊತ್ತವೇ!  ಈ ವಿಷಯವೇ ಸಂಘರ್ಷಕ್ಕೆ ಕಾರಣವಾಗುತ್ತದೆ. ಇದಕ್ಕೆ ಒತ್ತಾಯಿಸಿದಾಗ ಮಗುವನ್ನು ಕರೆದುಕೊಂಡು ಹೀಗಿ ಈಗ ಮರಳಿಸುವ ನಾಟಕ ಆಡುತ್ತಿಯಾ ಎಂದು ಮಗುವಿನ ತಾಯಿಯೇ ಅಪಾದಿಸುತ್ತಾಳೆ. ದಂಧೆ ಮಾಡುವುದೇ ನನ್ನ ಉದ್ದೇಶವಾಗಿದ್ದರೆ ಮಗುವನ್ನು ಮಾರುತ್ತಿದ್ದ ಎನ್ನುವಲ್ಲಿ ಆಟೋ ಚಾಲಕನ ಮಾತು ಹತಾಶೆಗೆ ತಿರುಗುತ್ತದೆ. ಚಿತ್ರದ ಸ್ಥೂಲ ಕಥೆ ಇಷ್ಟೇ.  ಆದರೂ ಅದು ಬಿಚ್ಚಿಡುವ ಅರ್ಥ ಪರಂಪರೆ ಬಹಳ ವಿಶಾಲವಾದದ್ದು. ಗಮನ ಸೆಳೆಯುವ ಸಂಗತಿ ಎಂದರೆ ಹಿಂದೂ ಮುಸ್ಲಿಂ ಕುಟುಂಬಗಳನ್ನು ಬಳಸಿದರೂ ಕೋಮ ಸಂಘರ್ಷವನ್ನು ಹೇಳುವುದು ಚಿತ್ರದ ಉದ್ದೇಶವಲ್ಲ. ಬಡತನದ ಎದುರು ಎಲ್ಲರೂ ಒಂದೇ ಎನ್ನುವ ವಿಶಾಲ ಮಾನವೀಯತೆಗೆ ಇಲ್ಲಿ ಮಹತ್ವ ಸಿಕ್ಕಿದೆ.

ಇನ್ನೂ ವಿಸ್ತರಿಸಿ ನೋಡಿದರೆ ಬೆಳಯುವ ಧಾವಂತದಲ್ಲಿರುವ ಮಹಾನಗರವೇ ಒಂದು ಆಟದ ಮೈದಾನ. ಇಲ್ಲಿ ಹಲವು ರೀತಿಯ ಆಟಗಳು ನಡೆಯುತ್ತಿರುತ್ತವೆ.  ಕೆಳ ವರ್ಗದ ಶ್ರಮಿಕ ಜೀವಿಗಳು ಈ ಆಟದಲ್ಲಿ   ಕಾಯಿಗಳಂತೆ ಬಳಕೆಯಾಗುತ್ತಾರೆ. ಇಲ್ಲಿ ಯಾವ ಆಟದ ನಿಯಮಗಳೂ ಪಾಲನೆಯಾಗುವುದಿಲ್ಲ ಎನ್ನುವ ಅಂಶಕ್ಕೆ ಕಿರುಚಿತ್ರ ಒತ್ತು ನೀಡಿದೆ. ನೈಜ ಪರಿಸರದಲ್ಲೇ ಚಿತ್ರಿತವಾಗಿರುವುದರ ಜೊತೆಗೆ ಕನ್ನಡ ಹಿಂದಿ ಮಿಶ್ರಿತವಾದ ಉರ್ದು ಮತ್ತು ತಮಿಳು ಭಾಷೆಗಳು ಕನ್ನಡದ ಜೊತೆಗೆ ಚಿತ್ರದಲ್ಲಿ ಬಳಕೆಯಾಗಿರುವುದು ಸಹಜತೆಗೆ ಇಂಬು ನೀಡಿದೆ. ಜಿಂಗ್ಮೆಂಟ್ ವಾಂಗ್‍ಚಿಕ್ ಮೂಡಿಸಿರುವ ಬೆಳಕಿನ ವಿನ್ಯಾಸ ಚಿತ್ರದ ಗಾಢತೆಯನ್ನು ಹೆಚ್ಚಿಸಿದೆ. ಮಕ್ಕಳಿಂದ ಸಹಜವಾದ ಬಾಲ್ಯವನ್ನು ಮಹಾನಗರ ಹೇಗೆ ಕಿತ್ತು ಕೊಳ್ಳುತ್ತಿದೆ ಎನ್ನುವ ಅಂಶವೂ ಇಲ್ಲಿ ಬಿಂಬಿತವಾಗಿದೆ. ಸ್ವತ: ಗಾಯಕಿಯಾಗಿದ್ದರೂ ಪಲ್ಲವಿ ಇಲ್ಲಿ ಸಂಗೀತದ ವೈಭವೀಕರಣಕ್ಕೆ ಅವಕಾಶ ನೀಡಿಲ್ಲ. ಚಿತ್ರಕ್ಕೆ ಅಗತ್ಯವಾದ ನೈಜ ಹಿನ್ನೆಲೆಯಾಗಿಯಷ್ಟೇ ಸಂಗೀತ ಹರಿದು ಬಂದಿದೆ. ಬಹಳ ಮುಖ್ಯವಾಗಿ ಈ ಕಿರುಚಿತ್ರ ಒಂದು ಗಾಢವಾದ ಅನುಭವವನ್ನು ನೀಡುವುದರ ಜೊತೆಗೆ ಹಲವು ಕಾಡುವ ಚಿಂತನೆಗಳನ್ನು ಮನದಲ್ಲಿ ಉಳಿಸುತ್ತದೆ. ಸರಳ ನಿರೂಪಣೆಯಂತೆ ಅಮೂರ್ತತೆ ಚಿತ್ರದ ಶಕ್ತಿ ಎನ್ನಿಸಿದೆ. ಎಲ್ಲೂ ಮೆಲೋಡ್ರಾಮ ಕಡೆ ವಾಲದೆ, ಸಿದ್ದಾಂತಗಳ ಗೋಚಿಗೆ ಸಿಕ್ಕಿಕೊಳ್ಳದೆ ಬದುಕಿಗೆ ಕನ್ನಡಿ ಹಿಡಿದು ಆ ಮೂಲಕವೇ ವಿಶ್ಲೇಷಣೆ ನಡೆಸುವ ಪರಿ ಕನ್ನಡ ಸಿನಿಮಾ ಕಂಡು ಕೊಳ್ಳ ಬೇಕಾದ ನೆಲೆಯಂತೆ ಕೂಡ ಅನ್ನಿಸಿ ಗಮನ ಸೆಳೆಯುತ್ತದೆ.

ಇತ್ತೀಚಿನ ದಿನಗಳಲ್ಲಿ ಪ್ರತಿಭಾವಂತರಿಂದ ಗಮನ ಸೆಳೆಯುವ ಕಿರುಚಿತ್ರಗಳು ಮೂಡಿ ಬರುತ್ತಿರುವುದೇನೋ ನಿಜ, ಆದರೆ ಅವುಗಳು ಎಲ್ಲಿ ಪ್ರದರ್ಶಿತವಾಗ ಬೇಕು ಎನ್ನುವುದು ಪ್ರಶ್ನೆಯಾಗಿಯೇ ಕಾಡುತ್ತಿದೆ. ಚಲನಚಿತ್ರಗಳು ಪ್ರದರ್ಶಿತವಾಗುವ ಥಿಯೇಟರ್‍ಗಳು ಇವು ಬೇಡ, ಚಾನಲ್‍ಗಳಂತೂ ಈ ಕಡೆ ಗಮನ ಹರಿಸುವುದಿಲ್ಲ.  ಒಂದು ಕಾಲದಲ್ಲಿ ರಾಜ್ಯದೆಲ್ಲೆಡೆ ಹರಡಿದ್ದ ಫಿಲಂ ಸೊಸೈಟಿಗಳು ಈಗ ಬೆರಳೆಣಿಕೆಯಷ್ಟಿವೆ. ಹೀಗಾಗಿ ಈ  ಹೊಸ ಮಾಧ್ಯಮ ಎಲ್ಲಿ ಪ್ರದರ್ಶನ ಕಾಣ ಬೇಕು ಎನ್ನುವ ಬಗ್ಗೆ ಚಿಂತಿಸುವ ಅಗತ್ಯವಿದೆ. ಇಂತಹ ಕಿರುಚಿತ್ರಗಳೇ ನಾಳಿನ ಆಶಾ ಕಿರಣಗಳಾದ್ದರಿಂದ ಇದನ್ನು ಒಂದು ಚಳುವಳಿಯ ರೂಪದಲ್ಲಿ ಬೆಳಸ ಬೇಕಾದ ಅಗತ್ಯವಿದೆ. ಇನ್ನೂ ವಿಸ್ತರಿಸಿ ಹೇಳುವುದಾದರೆ ಸಿನಿಮಾ ವ್ಯಾಖ್ಯಾನವೇ ಜಾಗತಿಕವಾಗಿ ಬದಲಾಗುತ್ತಿರುವಾಗ ಹೊಸ ಸಾಧ್ಯತೆಗೆ ನಾವು ತೆರೆದು ಕೊಳ್ಳುವುದು ಅತ್ಯಗತ್ಯವಾಗಿದೆ.

Leave a Reply