ಮೆಹಬೂಬಾ ಮುಫ್ತಿಯೇ ಕಣಿವೆಯ ಮುಂದಿನ ಮುಖ್ಯಮಂತ್ರಿ, ಖಾತ್ರಿಪಡಿಸೋಕೆ ಇಷ್ಟ್ ಸಮಯ ಯಾಕೆ ಹಿಡೀತ್ರೀ?

ಪ್ರವೀಣ್ ಕುಮಾರ್

ಜಮ್ಮು- ಕಾಶ್ಮೀರದಲ್ಲಿ ಕೊನೆಗೂ ಸರ್ಕಾರ ರಚನೆ ಸ್ಪಷ್ಟವಾಯ್ತು ಎಂದು ಮಾಧ್ಯಮಗಳು ಹೆಡ್ ಲೈನ್ ಬರೆಯುವುದಕ್ಕೆ ಅವಕಾಶ ಒದಗಿದೆ.

ಪಿಡಿಪಿಯ ಶಾಸಕಾಂಗ ಸಭೆ ಮೆಹಬೂಬ ಮುಫ್ತಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆರಿಸಿರುವುದು ಹಾಗೂ ಇತ್ತ ರಾಮ್ ಮಾಧವ್ ಅವರ ನೇತೃತ್ವದಲ್ಲಿ ಬಿಜೆಪಿಯ ಸಭೆ ಸಹ ನಡೆದಿರುವುದು ಶುಕ್ರವಾರದ ವಿದ್ಯಮಾನ. ಅಧಿಕೃತವಾಗಿ ಈ ಎರಡೂ ಪಕ್ಷಗಳು ರಾಜ್ಯಪಾಲರ ಬಳಿ ತೆರಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವುದು ಬಾಕಿ ಉಳಿದಿದೆ. ಅಲ್ಲಿಗೆ ಮೆಹಬೂಬಾ ಮುಫ್ತಿ ಜಮ್ಮು-ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿ ಆಗೋದು ಬಹುತೇಕ ನಿಶ್ಚಿತ.

ಮುಖ್ಯಮಂತ್ರಿ ಹುದ್ದೆಯಲ್ಲಿದ್ದ ಮೆಹಬೂಬಾ ತಂದೆ ಮುಫ್ತಿ ಮೊಹಮದ್ ಸಯೀದ್ ಮರಣ ಹೊಂದಿದ ಕಾರಣ ಕಳೆದ ಎರಡು ತಿಂಗಳಲ್ಲಿ ಉಂಟಾಗಿದ್ದ ಅಧಿಕಾರ ನಿರ್ವಾತ ಇದು. ಮಗಳು ಮೆಹಬೂಬಾ ಮುಫ್ತಿಯೇ ಉತ್ತರಾಧಿಕಾರಿ ಎಂಬುದು ಯಾವತ್ತೋ ಸಿದ್ಧವಾಗಿತ್ತು. ಆದರೂ ತಿಂಗಳೆರಡರವರೆಗೆ ಎಳೆದಿದ್ದೇಕೆ?

ಮುಖ್ಯವಾಹಿನಿಯ ವಿಶ್ಲೇಷಣೆಗಳನ್ನೇ ನಂಬೋದಾದರೆ ಬಿಜೆಪಿ ಜತೆ ಮೈತ್ರಿ ಮುಂದುವರಿಸುವುದಕ್ಕೆ ಕೆಲವು ಷರತ್ತುಗಳಿಗಾಗಿ ಮೆಹಬೂಬಾ ಪಟ್ಟು ಹಿಡಿದಿದ್ದರು. ಅದು ಹೌದಾಗಿದ್ದಲ್ಲಿ ಈಗ ಇನ್ಯಾವುದೇ ಹೆಚ್ಚುವರಿ ಸಾಮಾನ್ಯ ಅಂಶಗಳನ್ನೂ ಸೇರಿಸಿಕೊಳ್ಳದೇ ಮರುಮೈತ್ರಿ ಆಗಿದ್ದಾದರೂ ಹೇಗೆ?

ಬಿಜೆಪಿಯ ರಾಮ್ ಮಾಧವ್, ಪಿಡಿಪಿಯ ಯಾವುದೇ ನಿಯಮಗಳನ್ನು ಬಿಜೆಪಿ ಒಪ್ಪಿಲ್ಲ ಎಂದರೆ, ಮುಫ್ತಿ ಅವರು ಸರ್ಕಾರ ರಚನೆಗೆ ನಾವು ಯಾವುದೇ ನಿಯಮಗಳನ್ನು ಹಾಕಿಲ್ಲ ಎಂದಿದ್ದಾರೆ.

ಹಾಗಾದರೆ, ಮುಫ್ತಿಯವರು ಸಶಸ್ತ್ರ ಪಡೆಯ ವಿಶೇಷಾಧಿಕಾರ ತೆಗೆಯುವಂತೆ ಒತ್ತಡ ಹೇರಲಿದ್ದಾರೆ ಇತ್ಯಾದಿಯಾಗಿ ಮೂಲಗಳನ್ನು ಉಲ್ಲೇಖಿಸಿ ಮಾಡಿದ ವರದಿಗಳ ಕತೆ ಏನು?

ವಾಸ್ತವ ಇಷ್ಟೆ. ಜಮ್ಮು-ಕಾಶ್ಮೀರದಲ್ಲಿ ಯಾವುದಾದರೊಂದು ರಾಷ್ಟ್ರೀಯ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವುದು ಪಿಡಿಪಿಗಾಗಲೀ, ನ್ಯಾಷನಲ್ ಕಾನ್ಫರೆನ್ಸ್ ಗೇ ಆಗಲಿ ಅನಿವಾರ್ಯ. ಇಲ್ಲಿಯವರೆಗೆ ಕಾಂಗ್ರೆಸ್ ಮಾತ್ರವೇ ಕಣಿವೆ ರಾಜಕಾರಣದಲ್ಲಿ ಭಾಗವಹಿಸಬಹುದಾದ ಮಟ್ಟಕ್ಕಿತ್ತು. ಹೀಗಾಗಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಚೌಕಾಶಿ ಮಾಡುವುದೇನಿದ್ದರೂ ಕಾಂಗ್ರೆಸ್ ಜತೆಗೇ ಆಗಿತ್ತು. ಈಗ ರಾಜಕೀಯ ಆಟದ ಅಂಗಳದಲ್ಲಿ ಬಿಜೆಪಿ ನಿಂತಿದೆ ಎಂಬುದನ್ನು ಬಿಟ್ಟರೆ ಬೇರೆ ಬದಲಾವಣೆಗಳೇನೂ ಇಲ್ಲ.

ಜಮ್ಮು-ಕಾಶ್ಮೀರದ ರಾಜಕಾರಣದಲ್ಲಿ ಅಧಿಕಾರವಿಲ್ಲದಿದ್ದರೆ ಉಳಿದ ಯಾವುದೇ ರಾಜ್ಯಗಳಿಗಿಂತ ಅಲ್ಲಿನ ರಾಜಕಾರಣಿಗಳಿಗೆ ತತ್ವಾರ. ಏಕೆಂದರೆ ಬೇರೆ ರಾಜ್ಯಗಳ ರಾಜಕೀಯ ನೇತಾರರಿಗೆ ರಿಯಲ್ ಎಸ್ಟೇಟ್, ಉದ್ಯಮ ಇನ್ನಿತರ ಮೂಲಗಳು ಸಾಮಾನ್ಯವಾಗಿ ಬೆನ್ನಿಗಿರುತ್ತವೆ. ಆದರೆ ಕಣಿವೆ ರಾಜ್ಯ ನಿಂತಿರುವುದೇ ಹೆಚ್ಚು-ಕಡಿಮೆ ಕೇಂದ್ರ ಸರ್ಕಾರ ನೀಡುವ ಅನುದಾನದಲ್ಲಿ. ಪಿಡಿಪಿಯಾಗಲೀ, ನ್ಯಾಷನಲ್ ಕಾನ್ಫರೆನ್ಸ್ ಆಗಲೀ ಅಲ್ಲಿ ತಮ್ಮ ಸಿದ್ಧಾಂತ ಈಡೇರುವವರೆಗೆ ಅಧಿಕಾರ ನಡೆಸುವುದಿಲ್ಲ ಅಂತ ಕುಳಿತರೆ ನಷ್ಟ ಅವರಿಗೇನೆ. ಕಚೇರಿ ನಿರ್ವಹಣೆ, ಹುದ್ದೆಯಲ್ಲಿದ್ದಾರೆ ಎಂಬ ಕಾರಣಕ್ಕೆ ಸಿಗುವ ಎಲ್ಲ ಅನುಕೂಲಗಳೂ ನಿಂತು ಹೋಗುತ್ತವೆ. ಕಣಿವೆ ರಾಜ್ಯ ಬಿಟ್ಟರೆ ಇವರಿಗೆ ಬೇರೆಡೆ ಅಸ್ತಿತ್ವವೂ ಇಲ್ಲ. ಹೀಗಾಗಿ ಉಳಿದ ಸಮಯದಲ್ಲಿ ಕೇಂದ್ರದ ತಾರತಮ್ಯ, ರಾಷ್ಟ್ರೀಯ ಪಕ್ಷಗಳಿಂದ ಶೋಷಣೆ ಅಂತೇನೇ ಹಾರಾಡಿಕೊಂಡರೂ ಆಯಾ ಕಾಲಕ್ಕೆ ತಕ್ಕಂತೆ ಕಾಂಗ್ರೆಸ್ ಇಲ್ಲವೇ ಬಿಜೆಪಿ ಜತೆ ಅಧಿಕಾರ ಹಂಚಿಕೊಳ್ಳಲೇಬೇಕು.

ಸೇನೆಯ ವಿಶೇಷಾಧಿಕಾರ ತೆಗೆದರೆ ಈವರೆಗೆ ಬೆಚ್ಚಗಿರುವ ತಮಗೇ ಉಗ್ರರ ಗುಂಡು ಬೀಳುವುದು ಸುಲಭವಾಗುತ್ತದೆ ಎಂಬ ಅರಿವೂ ಅವರಿಗೆ ಇಲ್ಲವೆಂದಲ್ಲ. ಆದರೆ ಭಾವನೆಗಳೇ ಬಂಡವಾಳವಾಗಿರುವ ರಾಜಕಾರಣದಲ್ಲಿ ಕೆಲ ವೃಥಾ ವಿರೋಧಗಳನ್ನೆಲ್ಲ ಮಾಡಬೇಕಾಗುತ್ತದೆ. ಪಿಡಿಪಿ- ಎನ್ ಸಿಗಳು ಅಷ್ಟನ್ನೇ ಮಾಡಬೇಕು.

ಬಿಜೆಪಿ ತನ್ನ ಹೆಚ್ಚುವರಿ ಯಾವ ಬೇಡಿಕೆಗಳಿಗೂ ಒಪ್ಪುವುದಿಲ್ಲ ಅಂತ ಮುಫ್ತಿಗೂ ಗೊತ್ತಿತ್ತು, ಮುಫ್ತಿಗೆ ತಾವು ಮಣಿಯಬೇಕಿಲ್ಲ ಅಂತ ಬಿಜೆಪಿಗೂ ಗೊತ್ತಿತ್ತು. ಹಾಗಾದರೆ ತಂದೆ ತೀರಿಕೊಂಡ ಹದಿನೈದಿಪ್ಪತ್ತು ದಿನಗಳ ನಂತರವೇ ಈ ತೀರ್ಮಾನಕ್ಕೆ ಬಂದುಬಿಡಬಹುದಿತ್ತಲ್ಲ? ಇಲ್ಲೂ ಭಾವನೆಗಳ ಆಟ ನಡೆದಿದೆ ಅಷ್ಟೆ. ಅಧಿಕಾರಕ್ಕೆ ಹಪಹಪಿಸಿ ಏಕಾಏಕಿ ಬಿಜೆಪಿ ಜತೆ ಹೋಗಲಿಲ್ಲ, ಬಹಳ ಯೋಚಿಸಿ ರಾಜ್ಯದ ಹಿತಾಸಕ್ತಿಗೋಸ್ಕರ ಬಿಜೆಪಿ ಕೈ ಹಿಡಿದೆ ಅಂತ ಹೇಳುವ ಅವಕಾಶವನ್ನು ಮೆಹಬೂಬಾ ಉಳಿಸಿಕೊಂಡಿದ್ದಾರೆ. ಮೈತ್ರಿ ಮುಂದುವರಿಯಬೇಕು ಅಂತ ನಾವು ಇನ್ಯಾವುದೇ ಹೆಚ್ಚುವರಿ ನಿಯಮಕ್ಕೆ ಒಪ್ಪಲಿಲ್ಲ ನೋಡಿ ಅಂತ ಹೇಳುವುದಕ್ಕೆ ಬಿಜೆಪಿಗೂ ಅವಕಾಶವಾಗಿದೆ. ಇಂಥದೊಂದು ಶುಭಂ ತಲುಪುವುದಕ್ಕೆ ಮುಂಚೆ ಕೆಲವು ಸುಳ್ಳೇ ಫೈಟ್ ಗಳನ್ನುಮಾಡಬೇಕಾಯಿತಷ್ಟೆ. ಪತ್ರಿಕೆ – ಟಿವಿ- ವೆಬ್ ಗಳಿಗೆಲ್ಲ ಒಂದಿಷ್ಟು ವಿಷಯ ಸಿಕ್ಕಿತಷ್ಟೆ.

ಇನ್ನೂ ಒಂದು ಸಂಗತಿ ಎಂದರೆ, ತಂದೆಗಿರುವಷ್ಟೇ ಪೂರಕ ವಾತಾವರಣಗಳೆಲ್ಲ ಮಗಳು ಮುಫ್ತಿಗೂ ಒಲಿದಿರಲಿಲ್ಲ. ಮುಫ್ತಿ ಮೊಹಮದ್ ಸಯೀದ್ ಜತೆ ನಿಷ್ಠೆಯಿಂದ ಕೆಲಸ ಮಾಡಿದವರೆಲ್ಲಮರುದಿನದಿಂದ ಏಕಾಏಕಿ ಮಗಳು ಮೆಹಬೂಬಾ ಜತೆ ಅದೇ ಹೊಂದಾಣಿಕೆ ತೋರಬೇಕೆಂಬುದು ಅಪೇಕ್ಷಣೀಯವೂ ಅಲ್ಲ. ಹಾಗೆಂದೇ ಕೆಲವು ಶಾಸಕರ ವಿರೋಧವೂ ಇವರಿಗೆ ಎದುರಾಗಿತ್ತು. ಈ ಎರಡು ತಿಂಗಳ ಅಧಿಕಾರರಹಿತ ಅವಧಿಯಲ್ಲಿ ಅವರೆಲ್ಲ ವಾಸ್ತವ ಒಪ್ಪಿಕೊಂಡು ತುಸು ಮಟ್ಟಿಗೆ ತಣ್ಣಗಾದರು. ಪೀಳಿಗೆಯ ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಇಂಥದೊಂದು ಕೂಲಿಂಗ್ ಅವಧಿ ಪಿಡಿಪಿ- ಬಿಜೆಪಿಗಳಿಗೆರಡಕ್ಕೂ ಬೇಕಿತ್ತು.

ಇನ್ನೀಗ ಮತ್ತೆ ಅಧಿಕಾರ ಹಿಡಿದ ನಂತರವೂ ಬಿಜೆಪಿ- ಪಿಡಿಪಿಗಳ ಸೈದ್ಧಾಂತಿಕ ಸಂಘರ್ಷ ನಡೆದೇ ತೀರುತ್ತದೆ. ಪಿಡಿಪಿಯವರು ಪ್ರತ್ಯೇಕತಾವಾದಿಗಳ ಬಗ್ಗೆ ಮೃದುತ್ವ ತೋರುವುದು, ಅದಕ್ಕೆ ಬಿಜೆಪಿಯವರು ಗರಂ ಆಗೋದು ಎಲ್ಲ ಆಗುವಂಥದ್ದೇ. ಅದು ಉಭಯರಿಗೂ ಗೊತ್ತು.

ಇಷ್ಟಾಗಿಯೂ ಬಿಜೆಪಿ- ಪಿಡಿಪಿ ಅಧಿಕಾರ ಹಿಡಿದೇ ಸಿದ್ಧ ಅಂತ ಯಾಕೆ ಪ್ರಯತ್ನಿಸಬೇಕು ಎಂಬ ಪ್ರಶ್ನೆ ಹಾಕಿಕೊಂಡರೆ ಇನ್ನೊಂದು ಪ್ರಶ್ನೆಗೆ ನಾವೇ ಉತ್ತರಿಸಬೇಕಾಗುತ್ತದೆ. ಅದೆಂದರೆ- ಇದು ಬಿಟ್ಟು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಜಮ್ಮು-ಕಾಶ್ಮೀರಕ್ಕಿರುವ ಆಯ್ಕೆ ಇನ್ಯಾವುದು?

Leave a Reply