ರಸ್ತೆ ಜಗಳಕ್ಕೆ ಪ್ರತಿಯಾಗಿ ವೈದ್ಯನನ್ನು ಹೊಡೆದೇ ಕೊಂದರು! ಈ ಸ್ಥಿತಿ ನಾಳೆ ನಮ್ಮಲ್ಲೇ ಯಾರಿಗಾದರೂ ಬರಬಹುದಲ್ವೇ?

ಡಿಜಿಟಲ್ ಕನ್ನಡ ಟೀಮ್

ರಸ್ತೆ ಆಕ್ರೋಶದ ಘಟನೆ ದೆಹಲಿಯ ದಂತವೈದ್ಯರ ಪ್ರಾಣವನ್ನೇ ಬಲಿಪಡೆದುಕೊಂಡಿರೋದು ನಾಗರಿಕ ಸಮಾಜದ ಅಂತಃಸತ್ವವನ್ನೇ ಕಲಕುವ ಘಟನೆ.

ಪಶ್ಚಿಮ ದೆಹಲಿಯ ವಿಕಾಸಪುರಿಯಲ್ಲಿ ಗುರುವಾರ ತಡರಾತ್ರಿ ನಡೆದ ಘಟನೆ ಇದು. ದಂತವೈದ್ಯ ಪಂಕಜ್ ನಾರಂಗ್ ತಮ್ಮ ಮನೆಯೆದುರಿನ ರಸ್ತೆಯಲ್ಲಿದ್ದಾಗ ಮೋಟಾರ್ ಬೈಕ್ ನಲ್ಲಿ ಬಂದ ಇಬ್ಬರು ಆವೇಶದ ಚಾಲನೆ ಮಾಡುತ್ತ ಮೈಮೇಲೇರಿಬಂದರು. ಇದನ್ನು ವೈದ್ಯರು ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದಿದೆ. ಅಲ್ಲಿಂದ ತೆರಳಿದ ಆ ಇಬ್ಬರು ಯುವಕರು ಕೆಲವೇ ಕ್ಷಣಗಳಲ್ಲಿ ತಮ್ಮೊಂದಿಗೆ 13 ಮಂದಿ ಗುಂಪನ್ನು ಕಟ್ಟಿಕೊಂಡುಬಂದು ಪಂಕಜ್ ಮೇಲೆ ಹಾಕಿಸ್ಟಿಕ್ ಹಾಗೂ ಕಬ್ಬಿಣದ ಸಲಾಕೆಗಳಿಂದ ಮಾರಣಾಂತಿಕ ದಾಳಿ ನಡೆಸಿದ್ದಾರೆ. ಇದನ್ನು ತಪ್ಪಿಸಲು ಹೋದ ಸ್ಥಳೀಯರಿಗೂ ಏಟುಗಳು ಬಿದ್ದಿವೆ.

ಕೊನೆಗೂ ಸ್ಥಳೀಯರು ಪೋಲೀಸರಿಗೆ ಕರೆ ಮಾಡಿ, ಪಂಕಜ್ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗಲೇ ಅವರ ಪ್ರಾಣ ಹೋಗಿದೆ.

ಒಮ್ಮೆ ಯೋಚಿಸಿ… ನಾವೇನು ಭಾರತದಲ್ಲಿದ್ದೇವೋ ಅಥವಾ ಕಾನೂನುರಹಿತ ಯಾವುದೇ ಆಫ್ರಿಕಾ ದೇಶದಲ್ಲೋ?

ಇಬ್ಬರು ಬೈಕ್ ಸವಾರರು ಸೇರಿದಂತೆ ಒಂಬತ್ತು ಮಂದಿಯನ್ನು ಪೋಲೀಸರು ಬಂಧಿಸಿದ್ದಾರೆ. ಅವರಲ್ಲಿ ನಾಲ್ವರು ಬಾಲಾರೋಪಿಗಳು ಎಂಬುದು ಎದೆನಡುಗಿಸುವ ಅಂಶ. ಅಷ್ಟರಮಟ್ಟಿಗೆ ಕಾನೂನುಪಾಲನೆ ಆಗಿದೆ.

ಈ ಬಗ್ಗೆ ಸಮಾಜ ಧ್ವನಿ ಮೊಳಗಿಸಲೇಬೇಕು. ನಿರ್ಭಯ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳ ಮೇಲೆ ತ್ವರಿತ ಮತ್ತು ಕಠಿಣ ಕ್ರಮಕ್ಕೆ ಹೇಗೆ ದೊಡ್ಡಧ್ವನಿಯಲ್ಲಿ ಆಕ್ರೋಶದ ಹಕ್ಕೊತ್ತಾಯಗಳು ಮೊಳಗಿದವೋ ಅಂಥದೂ ಇಲ್ಲೂ ಆಗಬೇಕಿದೆ. ಕೇವಲ ಕೋಮು ಸಂಬಂಧಿ, ಜಾತಿ ಸಂಬಂಧಿ ಹತ್ಯೆಗಳು ನಡೆದಾಗಲಷ್ಟೇ ಆಯಾ ಬಣದಲ್ಲಿ ಸೇರಿಕೊಂಡು ಪ್ರತಿಭಟಿಸೋದಲ್ಲ. ನಾಗರಿಕ ಸಮಾಜದ ಎಲ್ಲರನ್ನೂ ಅಧೀರರನ್ನಾಗಿಸುವ ಇಂಥ ಘಟನೆಗಳಲ್ಲೂ ದೊಡ್ಡ ಪ್ರಮಾಣದಲ್ಲಿ ಸಂತ್ರಸ್ತರ ಪರ ನಿಲ್ಲಬೇಕು.

ಈ ರೋಡ್ ರೇಜ್ ಅನ್ನೋದು ದೆಹಲಿಯಷ್ಟೇ ಅಲ್ಲದೇ ಬೆಂಗಳೂರಿನಂಥ ಎಲ್ಲ ನಗರಗಳಲ್ಲಿ ಪಿಡುಗಾಗಿ ಕಾಡುತ್ತಿದೆ. ಇದನ್ನು ಚಿಲ್ಲರೆ ಅಪರಾಧವೆಂದು ಪರಿಗಣಿಸುವಂತೆಯೇ ಇಲ್ಲ. ಹೀಗೆ ಗುಂಪು ಕಟ್ಟಿಕೊಂಡುಬಂದು ಕೊಲೆ ಮಾಡುವವರಿಗೆ ಕಾನೂನಿನಲ್ಲೂ ಗಂಭೀರ ಶಿಕ್ಷೆ ಆಗುವುದಷ್ಟೇ ಅಲ್ಲ, ಸಮಾಜವೂ ಅವರನ್ನುಅತ್ಯುಗ್ರವಾಗಿ ಕಾಣುವುದೆಂಬ ಸಂದೇಶ ರವಾನೆಯಾಗಬೇಕು. ಅಲ್ಲದಿದ್ದರೆ ಇವತ್ತು ಪಂಕಜ್ ನಾರಂಗ್ ವಿಷಯದಲ್ಲಿ ಆಗಿದ್ದು ನಮ್ಮಲ್ಲಿ ಯಾರಿಗಾದರೂ ಆದೀತು. ಅವರ ಹೆಂಡತಿ ಮತ್ತು ಎಂಟು ವರ್ಷದ ಮಗನಿಗೆ ಒದಗಿರುವ ದುಃಖ ಯಾರನ್ನಾದರೂ ಕಾಡೀತು.

Leave a Reply