ನಮ್ಮೊಳಗಿನ ಮಾನವ ಸಂವೇದನೆ ಚುರುಕಾಗಿಸುವುದಕ್ಕೆ ಹೀಗೊಂದು ಸಾಕ್ಷ್ಯಚಿತ್ರದ ಮಾರ್ಗ

ಸೋಮಶೇಖರ ಪಿ, ಭದ್ರಾವತಿ

ಮಾನವೀಯತೆ.. ಪ್ರತಿಯೊಬ್ಬ ಮಾನವನಲ್ಲೂ ಇರಬೇಕಾದ ಮೌಲ್ಯ. ಪ್ರಸ್ತುತ ದಿನಗಳಲ್ಲಿ ನಮ್ಮ ಸಮಾಜದಲ್ಲಿ ಮಾನವಿಯತೆ ಇದೆಯೇ ಎಂಬ ಪ್ರಶ್ನೆ ಹಾಕಿಕೊಂಡರೆ, ಇದೆ.. ಎಂದು ಗಟ್ಟಿಯಾಗಿ ಹೇಳಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ನಿಜ.. ಇತ್ತೀಚಿಗೆ ನಡೆದ ಹರೀಶ್ ಪ್ರಕರಣ ಹಾಗೂ ಇದರ ಬೆನ್ನಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಪ್ರಕರಣ ನೋಡಿದರೆ, ನಮ್ಮಲ್ಲಿ ಮಾನವೀಯತೆ ಸತ್ತು ಹೋಗಿದೆಯೇ ಎಂಬ ಅನುಮಾನ ಕಾಡುತ್ತದೆ. ಈ ಸಂದರ್ಭದಲ್ಲಿ ಮಾನವೀಯತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಿದ್ಧವಾಗ್ತಿದೆ ‘ಮಾನವ’ ಎಂಬ ಸಾಕ್ಷ್ಯ ಚಿತ್ರ.

ಹೌದು.. ಸ್ವಲ್ಪ ದಿನಗಳ ಹಿಂದೆ ಹರೀಶ್ ಅಪಘಾತ ಪ್ರಕರಣ ಎರಡು ಪ್ರಮುಖ ವಿಷಯಗಳಿಗಾಗಿ ವ್ಯಾಪಕ ಚರ್ಚೆಯಾಯ್ತು. ಒಂದು ತನ್ನ ಕೊನೆಯ ಕ್ಷಣದಲ್ಲಿ ಹರೀಶ್ ಅಂಗಾಗ ದಾನ ಮಾಡಿ ಔದಾರ್ಯ ಮೆರೆದಿದ್ದು. ಇನ್ನೊಂದೆಡೆ, ದೇಹ ತುಂಡರಿಸಿ ಹರೀಶ್ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದರೂ ಯಾರೊಬ್ಬರೂ ಆತನ ನೆರವಿಗೆ ಮುಂದಾಗದಿರುವುದು. ಈ ಘಟನೆ ನಂತರ ಅಪಘಾತದಲ್ಲಿ ಸಿಲುಕಿದವರ ರಕ್ಷಣೆಗೆ ಧಾವಿಸಬೇಕು ಎಂಬ ವ್ಯಾಪಕ ಕೂಗು ಕೇಳಿಬರುತ್ತಿದೆ. ಹಾಗೆಯೇ ಅಂಗದಾನ- ನೇತ್ರದಾನಗಳ ಬಗ್ಗೆಯೂ ಅರಿವು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರವೂ ಯೋಜನೆ, ಹಾಗೂ ಕಾರ್ಯಕ್ರಮಗಳನ್ನು ತರಲು ಸಜ್ಜಾಗಿದೆ.

ನಮ್ಮ ಸಮಾಜದಲ್ಲಿ ಯಾವುದೇ ಯೋಜನೆ ಇರಲಿ ಅಥವಾ ಕಾರ್ಯಕ್ರಮವಿರಲಿ, ಜನರಿಗೆ ಈ ಅಂಶಗಳ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಚಿತ್ರಕರ್ಮಿ ಮಾಯಾ ಚಂದ್ರ ಅವರು ಹರೀಶ್ ಪ್ರಕರಣವನ್ನು ಮೂಲವಾಗಿಟ್ಟುಕೊಂಡು ಈ ಪ್ರಮುಖ ಅಂಶಗಳ ಬಗ್ಗೆ ಜನರಲ್ಲಿ ಬೆಳಕು ಚೆಲ್ಲಲು ಸಾಕ್ಷ್ಯಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಸಾಕ್ಷ್ಯ ಚಿತ್ರ ನಿರ್ಮಿಸಿ ಅದನ್ನು ಯೂಟ್ಯೂಬ್ ನಲ್ಲಿ ಪ್ರಸಾರಿಸುವುದಕ್ಕಷ್ಟೇ ಇವರ ಪ್ರಯತ್ನ ಸೀಮಿತವಾಗಿಲ್ಲ. ಈ ಚಿತ್ರವನ್ನು ಕಾಲೇಜುಗಳಲ್ಲಿ ಪ್ರದರ್ಶಿಸಿ ಯುವಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡುವ ಉದ್ದೇಶ ಹೊಂದಿದೆ. ಹರೀಶ್ ಸಾವಿನ ನಂತರ ಆತನ ಹುಟ್ಟೂರು ಕೆರೆಗೌಡನಹಳ್ಳಿಯಲ್ಲಿ 183 ಜನರು ನೇತ್ರದಾನ ಮಾಡಿದ್ದು, ನೀವೆಲ್ಲಾ ಓದಿದ್ದೀರಿ. ಮಾಯಾ ಫಿಲ್ಮ್ಸ್ ತಂಡ ಈ ಸಾಕ್ಷ್ಯಚಿತ್ರದ ಟ್ರೇಲರ್ ಅನ್ನು ಇತ್ತೀಚೆಗೆ ಆರ್ ಎನ್ಎಸ್ಐಟಿ ಕಾಲೇಜಿನ ಕಾರ್ಯಕ್ರಮದಲ್ಲಿ ಪ್ರದರ್ಶಿಸಿತು. ಇದನ್ನು ನೋಡಿದ ಮ್ಯಾನೆಜ್ ಮೆಂಟ್ ವಿಭಾಗದ 103 ವಿದ್ಯಾರ್ಥಿಗಳು ನೇತ್ರದಾನ ಮಾಡಲು ಮುಂದೆ ಬಂದಿದ್ದಾರೆ. ಕೇವಲ ಕಾಲೇಜು ಅಷ್ಟೇ ಅಲ್ಲದೆ, ಚಿತ್ರೋತ್ಸವ ಹಾಗೂ ಇತರ ಕಡೆಗಳಲ್ಲೂ ಇದನ್ನು ಪ್ರದರ್ಶಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ಈ ಚಿತ್ರ ಸದ್ಯದಲ್ಲೇ ಪೂರ್ಣಗೊಳ್ಳಲಿದ್ದು, ಟ್ರೇಲರ್ ಗಳು ಈ ರೀತಿ ಇದೆ ನೋಡಿ.

 ‘ಸಮಾಜದಲ್ಲಿ ಈಗ ಮಾನವೀಯತೆ ಕಡಿಮೆಯಾಗ್ತಿದೆ. ಜನರು ಮಾನವೀಯತೆಯನ್ನು ಹೇಗೆಲ್ಲಾ ಬೆಳೆಸಿಕೊಳ್ಳಬಹುದು ಎಂಬುದು ಈ ಸಾಕ್ಷ್ಯಚಿತ್ರದ ಉದ್ದೇಶ. ಹರೀಶ್ ಪ್ರಕರಣ ನಮ್ಮನ್ನು ಕಾಡಿತು. ಹಾಗಾಗಿ ಈ ಅಂಶಗಳ ಮೇಲೆ ಸಾಕ್ಷ್ಯಚಿತ್ರ ಮಾಡಬೇಕೆಂದು ನಿರ್ಧರಿಸಿದೆವು. ಇಲ್ಲಿ ಅಂಗಾಂಗ ದಾನದ ಜತೆಗೆ ಅಪಘಾತದಲ್ಲಿರುವವರಿಗೆ ನೆರವಾಗುವುದಷ್ಟೇ ಅಲ್ಲ. ಯುವಕರು ವೇಗವಾಗಿ ಬೈಕ್ ಓಡಿಸುವುದರಲ್ಲಿರುವ ಅಪಾಯ, ಹೆಲ್ಮೆಟ್ ಬಳಕೆ ಹೀಗೆ ಹಲವು ಅಂಶಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ’ ಅಂತಿದ್ದಾರೆ ಮಾಯಾ ಫಿಲ್ಮ್ಸ್ ಮುಖ್ಯಸ್ಥೆ ಮಾಯಾ ಚಂದ್ರ.

ಒಟ್ಟಿನಲ್ಲಿ ನೇತ್ರದಾನ, ರಸ್ತೆಯಲ್ಲಿ ನರಳುತ್ತಿರುವವರಿಗೆ ಮನ ಮಿಡಿಯುವುದಕ್ಕೆ ಜಾಗೃತಿ ಮೂಡಿಸುವ ಕ್ರಮ ಅಗತ್ಯ. ಅದನ್ನು ಮಾಯಾ ಚಂದ್ರ ಅವರು ಸಾಕ್ಷ್ಯಚಿತ್ರದ ಮೂಲಕ ಮಾಡುವ ಪ್ರಯತ್ನದಲ್ಲಿದ್ದಾರೆ. ಅವರ ಈ ಪ್ರಯತ್ನಕ್ಕೆ ಶುಭ ಕೋರೋಣ.

Leave a Reply