ಬರ್ಮುಡ ಟ್ರೈಯಾಂಗಲ್ ಮತ್ತೆ ಸುದ್ದಿಯಲ್ಲಿ- ಏನಾಗುತ್ತಿದೆ ಇಲ್ಲಿ? ತೇಲುತ್ತಿರುವುದೇನು-ಮುಳುಗುತ್ತಿರುವುದೇನು?

author-ananthramuಬರ್ಮುಡಾ ಟ್ರೈಯಾಂಗಲ್ ಎಂದೊಡನೆ ಕಣ್ಣಮುಂದೆ ನಿಲ್ಲುವುದು ಅಲ್ಲಿ ಮುಳುಗಿವೆ ಎನ್ನಲಾದ ಹಡಗುಗಳು, ಕಣ್ಮರೆಯಾಗಿವೆ ಎನ್ನಲಾದ ವಿಮಾನಗಳು, ಜೀವ ಕಳೆದುಕೊಂಡ ಸಹಸ್ರಾರು ಯಾತ್ರಿಗಳ ಚಿತ್ರಣ. ಬರ್ಮುಡ ಟ್ರೈಯಾಂಗಲ್ ಅನ್ನು ಈಗಲೂ ‘ಡೇವಿಲ್ಸ್ ಟ್ರೈಯಾಂಗಲ್’ ಎಂದು ಕರೆಯುವುದುಂಟು. ಅಟ್ಲಾಂಟಿಕ್ ಸಾಗರದ ‘ನಟೋರಿಯಸ್ ಪ್ಲೇಸ್’ ಎಂಬ ಕುಖ್ಯಾತಿ ಇದಕ್ಕಿದೆ. ಅಲ್ಲಿಗೆ ಹೋಗದೆ, ಎಲ್ಲಿದೆ ಎಂದು ತಿಳಿಯದೆ, ಕಣ್ಣಾರೆ ನೋಡದೆ ಇದ್ದರೂ ಆ ಹೆಸರು ಕಿವಿಯ ಮೇಲೆ ಬಿದ್ದರೂ ಸಾಕು ಕೋಟ್ಯಂತರ ಜನ ಪ್ರತಿಕ್ರಿಯಿಸುತ್ತಾರೆ. ಕುತೂಹಲದಿಂದ, ಉದ್ವೇಗದಿಂದ, ಭಯದಿಂದ.

ಈಗ ಬರ್ಮುಡಾ ಟ್ರೈಯಾಂಗಲ್ ಸುದ್ದಿಯಲ್ಲಿದೆ. ಮಾರ್ಚ್ ತಿಂಗಳ ಎರಡನೇ ವಾರದಲ್ಲಿ ಜಗತ್ತಿನ ಎಲ್ಲ ಲೀಡಿಂಗ್ ಪತ್ರಿಕೆಗಳು ಬರ್ಮುಡಾ ಟ್ರೈಯಾಂಗಲ್‍ಗೆ ಭರ್ಜರಿ ಜಾಗಕೊಟ್ಟಿವೆ. 1995ರಲ್ಲಿ ‘ದಿ ಬರ್ಮುಡಾ ಟ್ರೈಯಾಂಗಲ್ ಮಿಸ್ಟರಿ ಸಾಲ್ವಡ್’ ಎಂದು ಲ್ಯಾರಿ ಕ್ಯುಷ ಪೇಪರ್ ಬ್ಯಾಕ್ ಎಡಿಷನ್ ತಂದ. ಜಗತ್ತಿನಾದ್ಯಂತ ಅದನ್ನು ಥ್ರಿಲ್ಲರ್ ಎನ್ನುವಂತೆ ಜನ ಓದಿದರು. ಪುಸ್ತಕಕ್ಕೆ ರಿವ್ಯೂ ಬರೆದದ್ದೂ ಬರೆದದ್ದೇ. ಇದಕ್ಕೂ ಮುಂಚೆ ಚಾಲ್ರ್ಸ್ ಬರ್ಲಿಸ್ ಬರೆದ ‘ದಿ ಬರ್ಮುಡಾ ಟ್ರೈಯಾಂಗಲ್’ ಬೆಸ್ಟ್ ಸೆಲ್ಲಿಂಗ್ ಬುಕ್ ಎಂದು ಪಟ್ಟ ಪಡೆಯಿತು. ಮೂವತ್ತು ಭಾಷೆಯಲ್ಲಿ ಪ್ರಕಟವಾಯಿತು. ಎರಡು ಕೋಟಿ ಪ್ರತಿಗಳು ಖರ್ಚಾದವು. ಬರ್ಮುಡಾ ಟ್ರೈಯಾಂಗಲ್ ಬಗ್ಗೆ ಬರೆದ ಲೇಖಕರಾಗಲಿ, ಪ್ರಕಾಶಕರಾಗಲಿ ಕೋಟಿಗಟ್ಟಲೆ ಮಾಡಿಕೊಂಡದ್ದೇ ಹೆಚ್ಚು. ಇದನ್ನಾಧರಿಸಿ ‘ಟ್ರೈಯಾಂಗಲ್’ ಇಂಗ್ಲಿಷ್ ಫಿಲಂ 2009ರಲ್ಲೇ ಬಂದು  ಬಾಕ್ಸ್ ಆಫೀಸ್‍ನಲ್ಲಿ ಹಿಟ್ ಆಯ್ತು.

ಏನಿದು ಬರ್ಮುಡಾ ಟ್ರೈಯಾಂಗಲ್? ಇದರ ನೆಲೆ ಎಲ್ಲಿ ಎನ್ನುವುದನ್ನು ನೇರವಾಗಿ ಹೇಳಿಬಿಡುವುದೇ ವಾಸಿ.

triangle

ಮೇಲಿನ ಚಿತ್ರ ನೋಡಿದರೆ ನಿಮಗೆ ಗೊತ್ತಾಗುತ್ತದೆ. ಉತ್ತರ ಅಟ್ಲಾಂಟಿಕ್ ಸಾಗರದ ಪಶ್ಚಿಮ ಭಾಗದಲ್ಲಿ-ಫ್ಲೋರಿಡಾ ಪರ್ಯಾಯ ದ್ವೀಪದ ಮಿಯಾಮಿ, ಪೋರ್ಟೊರಿಕೋದ ಸ್ಯಾನ್‍ಝವಾನ, ಅಟ್ಲಾಂಟಿಕ್‍ನ ಮಧ್ಯದಲ್ಲಿರುವ ಬರ್ಮುಡಾ ಇವು ಮೂರಕ್ಕೂ ಗೆರೆ ಎಳೆದರೆ, ಅದು ಟ್ರೈಯಾಂಗಲ್ ಆಗುತ್ತದೆ. ಬೇಕಾದರೆ ಮಾಡಿ ನೋಡಿ. ಬೆಂಗಳೂರು, ಮಂಗಳೂರು, ದಾವಣಗೆರೆಯನ್ನು ಕೂಡಿಸಿದರೂ ಅದು ತ್ರಿಭುಜವಾಗುತ್ತದೆ. ಹಾಗೆಂದೊಡನೆ ನೆಲದ ಮೇಲಾಗಲಿ, ಸಾಗರದ ಮೇಲಾಗಲಿ ಯಾರೂ ಗೆರೆ ಎಳೆಯುವುದಿಲ್ಲ. ಊಹಿಸಿಕೊಳ್ಳಬೇಕು ಅಷ್ಟೇ. ಇದನ್ನು ಮೊದಲ ಬಾರಿ ಕಲ್ಪನೆ ಮಾಡಿದ ಭೂಪ ವಿನ್ಸೆಂಟ್ ಗಡ್ಡೀಸ್. ಅಮೆರಿಕದ ಲೇಖಕ. 1964ರಲ್ಲಿ ಅಗೋಸಿ ಎನ್ನುವ ಪಲ್ಪ್ ಮ್ಯಾಗ್‍ಜೈನ್‍ನಲ್ಲಿ ಇದರ ಬಗ್ಗೆ ಪ್ರಸ್ತಾಪಿಸಿ ಮೊದಲ ಬಾರಿಗೆ ಆತಂಕ ಹುಟ್ಟಿಸಿದ. ಶುರುವಾಯಿತು… ಬರ್ಮುಡಾ ಟ್ರೈಯಾಂಗಲ್ ವೈರಲ್ ಆಯಿತು. ನೂರಾರು ಕಥೆಗಳು ಅದರ ಸುತ್ತ ಬೆಳೆಯುತ್ತಲೇ ಹೋದವು. ಇದಕ್ಕೂ ಮುನ್ನ ಚಾರ್ಲ್ಸ್ ಪೋರ್ಟ್ ಎಂಬ ಲೇಖಕ ಜಗತ್ತಿನ ಅಸಾಮಾನ್ಯ ವಿದ್ಯಮಾನಗಳನ್ನು ಕುರಿತಂತೆ ಒಂದಷ್ಟು ಲೇಖನಗಳನ್ನೇ ಸೃಷ್ಟಿಸಿದ್ದ. ಇದು ಗಡ್ಡೀಸ್‍ಗೆ ಕುಮ್ಮಕ್ಕು ಕೊಟ್ಟಿತು.

ಸರಿ, ಸಾಗರದಲ್ಲಿ ಈ ಟ್ರೈಯಾಂಗಲ್ ಎಷ್ಟು ಜಾಗ ಆಕ್ರಮಿಸುತ್ತದೆ? ಅಂದಾಜು 13,00,000 ಚದರ ಕಿಲೋ ಮೀಟರ್ ನಿಂದ 39,00,000 ಚದರ ಕಿಲೋ ಮೀಟರ್-ಯಾರೂ ಅಳೆದಿಲ್ಲ! ಕನಿಷ್ಠವೆಂದರೂ ನಮ್ಮ ಕರ್ನಾಟಕದ ವಿಸ್ತೀರ್ಣದ ಆರರಷ್ಟು. ಸಾಗರದ ಈ ಭಾಗದಲ್ಲಿ ಹಡಗುಗಳು ಮುಳುಗುತ್ತವೆ, ವಿಮಾನಗಳು ಬೀಳುತ್ತವೆ, ಸಹಸ್ರಾರು ಜನ ಸತ್ತಿದ್ದಾರೆ, ‘ಡೇಂಜರಸ್ ಝೋನ್’ ಇದು ಗಡ್ಡೀಸ್ ಕೊಟ್ಟ ಚಿತ್ರಣ. ಇದರ ಹಿಂದೆಯೇ ಶುರುವಾಯಿತು. ಯಾವು, ಯಾವುದು ಅಲ್ಲಿ ನಾಪತ್ತೆಯಾಗಿದೆ ಎಂಬುದು. ಒಂದಲ್ಲ, ಹತ್ತಾರು ಹಡಗುಗಳು ಅಲ್ಲಿ ಕಣ್ಮರೆಯಾಗಿರುವುದರ ಬಗ್ಗೆ ದಿನಾಂಕ ಸಮೇತ, ಕಂಪನಿಯ ಸಮೇತ ವರದಿಗಳು ಪ್ರಕಟವಾಗುತ್ತಿದ್ದ ಹಾಗೆ ಈ ನಿಗೂಢಕ್ಕೆ ರೆಕ್ಕೆ ಪುಕ್ಕ ಬಂತು. ಗುಡ್ಲೋಪ್‍ನಿಂದ ಡೆಲವಾರ್ ಗೆ ಪ್ರಯಾಣ ಮಾಡುತ್ತಿದ್ದ ಯುಎಸ್‍ಎಸ್ ಪಿಕೆರಿಂಗ್ ನೌಕೆ 1800ರಲ್ಲಿ ಕಣ್ಮರೆಯಾಯಿತೆಂದು (ಸುಂಟರಗಾಳಿಯಿಂದ ಎಂದು ಈಗ ಊಹೆ), 1945ರಲ್ಲಿ ಫೈಟ್19 ಎಂಬ ಹೆಸರಿನ ಐದು ಯುದ್ಧವಿಮಾನಗಳು (ಇವುಗಳಲ್ಲಿ ಬೇಕಾದಷ್ಟು ಇಂಧನವಿರಲಿಲ್ಲವೆಂದು ಈಗಿನ ವಿಶ್ಲೇಷಣೆ), ಅವನ್ನು ಹುಡುಕಲು ಹೋದ ಮೇರಿನರ್ ವಿಮಾನ ಪತ್ತೆಯಾಗಲೇ ಇಲ್ಲ. ಈ ಘಟನೆಗಳನ್ನು ಲಿಂಕ್ ಮಾಡುತ್ತ ಎಂಥೆಂಥವೋ ವರದಿಗಳು ಬಂದವು. ನೂರಾರು ಹಡಗುಗಳು, ಹತ್ತಾರು ವಿಮಾನಗಳು, ಸಾವಿರಾರು ಜನ ಅಲ್ಲಿ ಮುಳುಗಿದರೆಂಬುದಕ್ಕೆ ಇನ್ನಷ್ಟು ರೆಕ್ಕೆಪುಕ್ಕ ಬಂತು.

ಅಲ್ಲಿ ಏಕೆ ಕಣ್ಮರೆಯಾಗಬೇಕು? ಸಿಕ್ಕಾಪಟ್ಟೆ ಊಹೆಗಳು ವಿಧವಿಧದ ರೂಪ ಪಡೆದವು. ಬರ್ಮುಡಾ ಟ್ರೈಯಾಂಗಲ್ ಸಾಗರದಲ್ಲಿ ಬೃಹತ್ ಕ್ರಿಸ್ಟಲ್ ಇದೆ. ಅದರ ಪ್ರಭಾವಕ್ಕೆ ಬಂದದ್ದನ್ನು ಸೆಳೆದುಬಿಡುತ್ತದೆ, ಅನ್ಯಗ್ರಹ ಜೀವಿಗಳು ನಮ್ಮ ನಾಗರಿಕತೆಯನ್ನು ಅಳಿಸಲು ಈ ಕೆಲಸವನ್ನು ಮಾಡುತ್ತಿದ್ದಾರೆ. ಹಿಂದೆ ಅಟ್ಲಾಂಟಿಸ್ ಎಂಬ ಬೃಹತ್ ಖಂಡ ಮುಳುಗಿದ ಜಾಗವದು, ಅದರ ಪ್ರಭಾವವೇ ಈಗಲೂ ಟ್ರೈಯಾಂಗಲ್ ಮೇಲೆ ಇದೆ ಎಂದು ಕೊಂಡಿಗಳು ಬೆಳೆಯುತ್ತಲೇ ಹೋದವು. ಅದು ಯುಎಫ್‍ಓ ಕೆಲಸ (ಅನ್ನೋನ್ ಫ್ಲೈಯಿಂಗ್ ಆಬ್ಜೆಕ್ಟ್)-ಹೀಗೆ ಹೇಳುತ್ತಲೇ ವಿಶ್ವವಿಖ್ಯಾತ ಚಿತ್ರ ನಿರ್ಮಾಪದ ಸ್ಟೀವನ್ ಸ್ಟಿಲ್‍ಬರ್ಗ್, ‘ಕ್ಲೋಸ್ ಎನ್‍ಕೌಂಟರ್ಸ್ ಆಫ್ ದಿ ಥರ್ಡ್ ಕೈಂಡ್’ ಎಂಬ ಹೆಸರಿನ ಸೈನ್ಸ್ ಫಿಕ್ಷನ್ ಸಿನಿಮಾ ಮಾಡಿದ. ಅದರಲ್ಲಿ ಫ್ಲೈಟ್19, ವಿಮಾನಗಳನ್ನು ಅನ್ಯಜೀವಿಗಳು ಅಪಹರಿಸುವ ಪ್ರಸಂಗವನ್ನು ತಂದ. ಚಿತ್ರಕ್ಕೆ ಹಾಕಿದ್ದು 18 ಮಿಲಿಯನ್ ಡಾಲರ್. ಬಾಚಿದ್ದು 303 ಮಿಲಿಯನ್ ಡಾಲರ್.

ನಿಜ. ಅಲ್ಲಿ ವಿಮಾನಗಳು ಬಿದ್ದಿವೆ, ನೌಕೆಗಳು ಮುಳುಗಿವೆ. ಆದರೆ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸಾಗರದ ಬೇರೆ ಬೇರೆ ಭಾಗಗಳಲ್ಲಿ ಇಂಥದೇ ಘಟನೆಗಳು ನಡೆದಿವೆಯಲ್ಲ? ಸಾಮಾನ್ಯ ಜ್ಞಾನ ಇರುವವರು ವಿಶ್ಲೇಷಿಸಿದ್ದಾರೆ: ಈ ಮಾರ್ಗದಲ್ಲಿ ವಾಣಿಜ್ಯ ನೌಕೆಗಳ ಟ್ರಾಫಿಕ್ ಹೆಚ್ಚು. ಅಂತಾರಾಷ್ಟ್ರೀಯ ಹೆದ್ದಾರಿಯಲ್ಲಿ ಐದು ವಾಹನಗಳು ಪಲ್ಟಿ ಹೊಡೆದಿವೆ ಎಂದರೆ ಎಷ್ಟು ಕಿಮ್ಮತ್ತು ಕೊಡಬೇಕೋ, ಇದಕ್ಕೂ ಅಷ್ಟೇ ಎನ್ನುತ್ತಾರೆ. ಜೊತೆಗೆ ಗಲ್ಫ್ ಸ್ಟ್ರೀಂ ಎಂಬ ಉಷ್ಣೋದಕ ಪ್ರವಾಹದ ಒಳಹರಿವು ಇದೆ. ಅಂದರೆ ಸಮುದ್ರದೊಳಗೊಂದು ನದಿ. ಈ ಭಾಗದಲ್ಲಿ ಸುಂಟರಗಾಳಿ ಏಳುತ್ತದೆ. ಪ್ರಬಲ ಚಂಡಮಾರುತಗಳು ಬೀಸುತ್ತವೆ. ಭೌಗೋಳಿಕವಾಗಿ ಇದು ಇರುವ ನೆಲೆಯೇ ಹೀಗೆ. ಈ ವಾಸ್ತವತೆಯನ್ನು ಒಪ್ಪಲು ಯಾರೂ ತಯಾರಾಗಿಲ್ಲ. ವಾಸ್ತವತೆಗಿಂತ ಊಹೆಗೆ, ನಿಗೂಢತೆಗೆ ಎಂದೂ ಪ್ರಾಧಾನ್ಯ. ಥ್ರಿಲ್ ಬೇಕಲ್ಲ ಅದಕ್ಕಾಗಿ.

ಅಮೆರಿಕ ಭೌಗೋಳಿಕ ಹೆಸರುಗಳನ್ನು ಪಟ್ಟಿಮಾಡಲು ಒಂದು ಮಂಡಳಿಯನ್ನೇ ರಚಿಸಿದೆ. ಅದರಲ್ಲಿ ಎಲ್ಲೂ ಬರ್ಮುಡಾ ಟ್ರೈಯಾಂಗಲ್ ಹೆಸರೇ ಇಲ್ಲ. ಅಷ್ಟೇ ಅಲ್ಲ, ಅದು ತಯಾರಿಸಿರುವ ಸಾಗರ ನಕ್ಷೆಯಲ್ಲಿ ಇದಕ್ಕೆ ಜಾಗವೇ ಇಲ್ಲ. ಒಂದರಘಳಿಗೆ ಏಲಿಯನ್, ಕ್ರಿಸ್ಟಲ್, ಅಟ್ಲಾಂಟಿಸ್ ಇವೆಲ್ಲವನ್ನೂ ಆಚೆ ಇಟ್ಟು, ನಿಜಕ್ಕೂ ಇಲ್ಲಿ ಏನಾಗುತ್ತಿದೆ ಎಂದು ನೋಡಿದರೆ ಈ ನಿಗೂಢಕ್ಕೆ ಒಂದು ಪರದೆ ಹಾಕಬಹುದು. ಇತ್ತೀಚೆಗೆ ನಾರ್ವೆ ತೀರದಿಂದಾಚೆ ಸಮುದ್ರ ತಳವನ್ನು ಶೋಧಿಸುತ್ತಿದ್ದಾಗ, ಒಂದಲ್ಲ ಹತ್ತಾರು ತೆರೆದ ಬಾಯಿಗಳನ್ನು ಸಂಶೋಧಕರು ಕಂಡಿದ್ದಾರೆ. 800 ಮೀಟರ್ ಅಗಲ, 45 ಮೀಟರ್ ಎತ್ತರ. ನೀವು ಯಾವುದಾದರೂ ಉಷ್ಣಸ್ಥಾವರಗಳನ್ನು ನೆನಪಿಸಿಕೊಳ್ಳಬಹುದು. ಅವುಗಳ ಬೃಹತ್ ರೂಪ ಎನ್ನಿ. ಅವರು ಕೊಡುವ ವಿವರಣೆ ಎಂದರೆ ಸಾಗರ ತಳದಲ್ಲಿ ಶೇಖರವಾಗಿರುವ ಮೀಥೇನ್ ಭರ್ ಎಂದು ನುಗ್ಗಿ ಇಂಥ ರಚನೆಗಳನ್ನು ಮಾಡಿದೆ. ಮೀಥೇನ್ ಹೊರಬರುವಾಗ ನೀರು ಕೊತಕೊತ ಕುದಿಯುತ್ತದೇನೋ ಎಂದು ಭಾಸವಾಗುವಂತೆ ಗುಳ್ಳೆಗಳು ಹೊರಬರುತ್ತವೆ. ನೀರನಲ್ಲಿ ಅದು ಬೆರೆತಾಗ ತೈಲದಂತಾಗುತ್ತದೆ. ಘನಸ್ಥಿತಿಯಿಂದ (ಕೇಕ್ ರೂಪದಲ್ಲಿ) ಅನಿಲ ಸ್ಥಿತಿಗೆ ಬರುವಾಗ ಮಹಾಸ್ಫೋಟವಾಗುತ್ತದೆ. ಒಂದೊಂದೂ ಜ್ವಾಲಾಮುಖಿಯಂತೆ ವರ್ತಿಸುತ್ತದೆ. ಈ ಎಲ್ಲ ಕ್ರಿಯೆಗಳಲ್ಲಿ ನೀರಿನ ಸಾಂದ್ರತೆ ಏರುಪೇರಾಗುತ್ತದೆ. ಹಡಗುಗಳು ಸಮತೋಲ ಕಳೆದುಕೊಳ್ಳುತ್ತವೆ. ಅದು ಜೆಟ್ ರೂಪದಲ್ಲಿ ವಾಯುಗೋಳಕ್ಕೂ ಸಾಗುತ್ತದೆ. ವಿಮಾನಗಳ ಎಂಜಿನ್ ಬಂದಾಗಬಹುದು. ಹಿಂದೆ ಈ ಊಹೆಯನ್ನು ಬರ್ಮುಡಾ ಟ್ರೈಯಾಂಗಲ್‍ಗೂ ಅನ್ವಯಿಸಿ ಹೇಳಲಾಗಿತ್ತು. ಅದಕ್ಕೆ ಪುರಾವೆಗಳಿರಲಿಲ್ಲ.  ಈಗ ಪುರಾವೆ ದೊರೆತಿದೆ. ಆದರೆ ಅದು ನಾರ್ವೆ ಸಾಗರದಲ್ಲಿ. ಇದನ್ನೇ ಬರ್ಮುಡಾಗೂ ವಿಸ್ತರಿಸಬಹುದಲ್ಲ…? ಆದರೆ ವಿಜ್ಞಾನಿಗಳು ಆತುರಪಡುತ್ತಿಲ್ಲ. ಸ್ವಲ್ಪ ಕಾಯಿರಿ ಎನ್ನುತ್ತಿದ್ದಾರೆ. ಜಗತ್ತಿನ ಹಡಗುಗಳ ವಿವರಗಳನ್ನು ಇಡುವ ಇಂಗ್ಲೆಂಡಿನ ದೊಡ್ಡ ಸಂಸ್ಥೆ ‘ಲಾಯಿಡ್ ರಿಜಿಸ್ಟರ್ ಫೌಂಡೇಶನ್’ ಬರ್ಮುಡಾ ಟ್ರೈಯಾಂಗಲ್ ಬಗ್ಗೆ ತಲೆ ಕೆಡೆಸಿಕೊಂಡಿಲ್ಲ. ಅಲ್ಲಿ ಹಾಯುವ ಹಡಗುಗಳಿಗೆ ಯಾವುದೇ ವಿಶೇಷ ಇನ್‍ಷ್ಯೂರೆನ್ಸ್ ಕೂಡ ಇಲ್ಲ ಎನ್ನುತ್ತಿದೆ ಈ ಸಂಸ್ಥೆ.

ಇತ್ತ ಬರ್ಮುಡಾ ದ್ವೀಪಗಳು  ಬ್ರಿಟಿಷರ ಆಡಳಿತದಲ್ಲಿವೆ. 1503ರಲ್ಲಿ ಸ್ಪೇನಿನ ಕ್ಯಾಪ್ಟನ್ ಹ್ವಾನ್ ದೆ ಬೆರ್ಮುದೆಸ್ ಇಲ್ಲಿಗೆ ಮೊದಲು ಕಾಲಿಟ್ಟು 180 ಸಣ್ಣಪುಟ್ಟ ಅಗ್ನಿಪರ್ವತಗಳಿಂದ ಈ ದ್ವೀಪಗಳನ್ನು ಸ್ಪೇನಿನ ಚಕ್ರಾಧಿಪತ್ಯಕ್ಕೆ ಸೇರಿಸಿದ. ಅನಂತರ ಆಡಳಿತ ಬದಲಾಯಿತು, ಬ್ರಿಟಿಷರ ಸ್ವತ್ತಾಯಿತು. ಸುಂದರ ದ್ವೀಪಗಳಿವೆ, ಮನಮೋಹಕ ಹವಳಗಳು ಹೂವಿನ ದಂಡೆಯಂತೆ ಸುತ್ತಿವೆ. ಬಹುಶಃ ಇದರ ಸೌಂದರ್ಯ ಕಂಡೋ ಏನೋ ಮಾರ್ಕ್ ಟ್ವೇನ್ ಒಮ್ಮೆ ಹೇಳಿದ್ದ ‘ನೀವು ಬೇಕಾದರೆ ಸ್ವರ್ಗಕ್ಕೆ ಹೋಗಿ, ನಾನು ಮಾತ್ರ ಬರ್ಮುಡದಲ್ಲೇ ಇರಲು ಬಯಸುತ್ತೇನೆ’ ಎಂದು. ಕೆನಡ, ಅಮೆರಿಕ, ಬ್ರಿಟಿಷ್ ಏರ್ವೇಸ್‍ಗಳು ಸದಾ ಬ್ಯುಸಿ. ವರ್ಷಕ್ಕೆ 260ಕ್ಕೂ ಹೆಚ್ಚು ವಿಮಾನಗಳ ಹಾರಾಟ ಇಲ್ಲಾಗುತ್ತದೆ. ರಾಜಧಾನಿ ಹ್ಯಾಮೆಲ್‍ಟನ್ ಕಡಲ ಸುಂದರನಗರ. ‘ಅಟ್ಲಾಂಟಿಕ್‍ನ ಆಭರಣ’ ಎಂದು ಪ್ರವಾಸಿಗರು ಪ್ರೀತಿಯಿಂದ ಕರೆಯುತ್ತಾರೆ. ಮತ್ತೆ ಮತ್ತೆ ಅಲ್ಲಿಗೇ ಹೋಗುತ್ತಾರೆ.  ಬರ್ಮುಡಾ ಟ್ರೈಯಾಂಗಲ್‍ನಲ್ಲಿ ವಿಮಾನಗಳು ಮುಳುಗುವುದೇ ಸತ್ಯವಾಗಿದ್ದರೆ, ಇವರು ಏಕೆ ಇಷ್ಟೊಂದು ರಿಸ್ಕ್ ತೆಗೆದುಕೊಳ್ಳುತ್ತಿದ್ದರು? ನಿಗೂಢಗಳ ಕಥೆಯೇ ಇಷ್ಟು. ಅವಕ್ಕೆ ಸಾವಿಲ್ಲ. ಬರ್ಮುಡಾ ಟ್ರೈಯಾಂಗಲ್ ಕುರಿತು ಒಬ್ಬ ಉದ್ಯಮಿ ಹೇಳಿದ ಮಾತಿದು: ‘ಇಲ್ಲಿ ಊಹೆಗಳು ತೇಲುತ್ತವೆ, ವಾಸ್ತವತೆ ಮುಳುಗುತ್ತದೆ’.

1 COMMENT

  1. very informative. ನಿಜ, ಇಲ್ಲಿರುವ ಅಖ೦ಡ ಸೌ೦ದರ್ಯಭರಿತ ದ್ವೀಪಗಳನ್ನು ಕಾಣುವಾಗ, ಅದಕ್ಕಾಗಿ ಅಟ್ಲಾ೦ಟಿಕ್ ನ ಅಗಾಧ ಜಲರಾಶಿಯ ಮೂಲಕ ಹಾದು ಹೋಗುವಾಗ ಈ ಊಹಾಪೋಹಗಳ ಜಗತ್ತನ್ನು ಹಿ೦ದೆಯೇ ಬಿಟ್ಟು ಹೋಗಿ ಅಲ್ಲಿನ ವಿಭಿನ್ನ ಚೆಲುವನ್ನು ಅನುಭವಿಸಿ ಖುಷಿ ಪಡುವುದೇ ಸಮoಜಸ ಎ೦ದು ನನ್ನ ಇಲ್ಲಿನ ಭೆಟ್ಟಿ ತಿಳಿಸಿ ಕೊಟ್ಟಿತು.

Leave a Reply