ಶ್ವೇತಭವನದ ಜನಪ್ರಿಯ ಹಬ್ಬದಲ್ಲಿ ಮಿಂಚಲಿದೆ ಭಾರತದ ಯೋಗಾಭ್ಯಾಸ!

ಡಿಜಿಟಲ್ ಕನ್ನಡ ಟೀಮ್

ಈಸ್ಟರ್ ಎಗ್ ರೋಲ್… ಶ್ವೇತಭವನದಲ್ಲಿ ಪ್ರತಿವರ್ಷವೂ ನಿಗದಿತವಾಗಿ ನಡೆಯುವ ಹಬ್ಬವಿದು. ಪ್ರತಿಭಾ ಪ್ರದರ್ಶನಗಳು ಸೇರಿದಂತೆ ಹಲವು ಚಟುವಟಿಕೆಗಳು ಶ್ವೇತಭವನದ ಅಂಗಳದಲ್ಲಿ ನಡೆಯುತ್ತವೆ. ವಿಶೇಷವಾಗಿ ಮಕ್ಕಳು ಪಾಲ್ಗೊಂಡು ಆನಂದಿಸುವ ಕಾರ್ಯಕ್ರಮ.

ಈ ಬಾರಿಯ ವಿಶೇಷ ಏನಪ್ಪಾ ಅಂದ್ರೆ ಭಾರತದ ಯೋಗವೂ ಇದರಲ್ಲಿ ಸ್ಥಾನ ಪಡೆದಿದೆ. ಇದೇ ಮೊದಲ ಬಾರಿಗೆ ಅನುಭವಿ ಯೋಗ ಬೋಧಕರ ತಂಡ ಈಸ್ಟರ್ ಎಗ್ ಫೆಸ್ಟಿವಲ್ ನಲ್ಲಿ ಭಾಗವಹಿಸುತ್ತಿದೆ. ಬೇರೆ ಬೇರೆ ಚಟುವಟಿಕೆಗಳು ನಡೆಯುವುದಕ್ಕೆ 10 ವಲಯಗಳನ್ನು ಗುರುತಿಸಲಾಗಿದೆ. ಈ ಪೈಕಿ ಯೋಗ ಗಾರ್ಡನ್ ಎಂದೇ ಒಂದು ವಲಯವಿದ್ದು ಇಲ್ಲಿ ಯೋಗದ ಪಾಠ- ಅಭ್ಯಾಸಗಳೆಲ್ಲ ನಡೆಯಲಿವೆ. ಈ ಬಾರಿಯ ಹಬ್ಬದಲ್ಲಿ ಸುಮಾರು 35 ಸಾವಿರ ಸಾರ್ವಜನಿಕರು ಭಾಗವಹಿಸಲಿದ್ದಾರೆ.

ಈಸ್ಟರ್ ಎಗ್ ರೋಲ್ ಗೆ ಭರ್ತಿ 138 ವರ್ಷಗಳ ಇತಿಹಾಸವಿದೆ. ಈ ಬಾರಿಯ ಹಬ್ಬ ಬರಾಕ್- ಮಿಶೆಲ್ ದಂಪತಿಗೆ ಕೊನೆಯದು. ಈ ಬಾರಿಯ ಹಬ್ಬವನ್ನು ಮಕ್ಕಳಲ್ಲಿ ಪೌಷ್ಟಿಕ ಆಹಾರ ಸೇವನೆ ಮತ್ತು ಆರೋಗ್ಯ ಪಾಲನೆ ಬಗ್ಗೆ ಅರಿವು ಮೂಡಿಸುವಂತ ಚಟುವಟಿಕೆಗಳತ್ತಲೇ ಕೇಂದ್ರೀಕರಿಸುವುದಕ್ಕೆ ಮಿಶೆಲ್ ಉದ್ದೇಶಿಸಿದ್ದಾರೆ. ಬಹುಶಃ ಈ ಆರೋಗ್ಯಪಾಲನೆ ಆಶಯಕ್ಕೆ ಯೋಗಾಭ್ಯಾಸವು ಸೂಕ್ತವಾಗಿ ಹೊಂದಿಕೊಳ್ಳುವುದರಿಂದ ಶ್ವೇತಭವನದ ಹುಲ್ಲುಹಾಸಿನಂಗಳದಲ್ಲಿ ಅದಕ್ಕೆ ಜಾಗ ಸಿಕ್ಕಿದ್ದಿರಬಹುದು.

ಅಂದಹಾಗೆ ಈ ಉಲ್ಲಾಸದ ಕೂಟಕ್ಕೆ ಎಗ್ ಫೆಸ್ಟಿವಲ್ ಅನ್ನೋ ಹೆಸರೇಕೆ? 1981ರಲ್ಲಿ ರೋನಾಲ್ಡ್ ರೇಗನ್ ಈ ಹಬ್ಬ ಆಯೋಜಿಸಿದ್ದಾಗ ನಟರು, ರಾಜಕಾರಣಿಗಳು, ಖ್ಯಾತನಾಮರ ಸಹಿ ಇರುವ ಕಟ್ಟಿಗೆಯ ಮೊಟ್ಟೆಯಾಕೃತಿಗಳನ್ನು ಹುಡುಕುವ ಆಟವನ್ನು ಮಕ್ಕಳ ಆಕರ್ಷಣೆಗಾಗಿ ಶುರುಮಾಡಿದ್ದರು.

ಇದೀಗ ಸೋಮವಾರದ ಈಸ್ಟರ್ ಎಗ್ ರೋಲ್ ಫೆಸ್ಟಿವಲ್ ಯೋಗದ ಆಚರಣೆವರೆಗೂ ಬಂದುನಿಂತಿರೋದು ಕೌತುಕದ ಸಂಗತಿ.

2015ರ ಈಸ್ಟರ್ ಎಗ್ ರೋಲ್ ಆಚರಣೆಯ ಕೆಲ ತುಣುಕುಗಳು ಇಲ್ಲಿವೆ.

Leave a Reply