ಸುದ್ದಿಸಂತೆ: ಅಸ್ಸಾಮಿನಲ್ಲಿ ಮೋದಿ ಚಾಯ್ವಾಲಾ ಬ್ರಾಂಡ್, ಬೇಸಿಗೆ ರಜೆಯಲ್ಲೂ ಬಿಸಿಯೂಟ… ನೀವ್ ತಿಳಿಬೇಕಾದ ಸುದ್ದಿಗಳು

Students of Maharani College Protesting against the Principal, dispersed By Police Personnel in Bengaluru on Saturday.

ಕಾಲೇಜು- ವಿಶ್ವವಿದ್ಯಾಲಯಗಳ ಶಿಕ್ಷಣ ವ್ಯವಸ್ಥೆ ಇತ್ತೀಚೆಗೆ ಕಲಿಕೆ ಬಿಟ್ಟು ಬೇರೆಲ್ಲ ರಾಜಕೀಯಗಳಲ್ಲೂ ಸುದ್ದಿ ಮಾಡ್ತಿದೆ. ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಕೆಲದಿನಗಳಿಂದ ಪ್ರಾಂಶುಪಾಲರ ವಿರುದ್ಧ ಪ್ರತಿಭಟನೆ. ಉಪನ್ಯಾಸಕರ ವರ್ಗಾವಣೆ ಸಂಬಂಧ ಪ್ರತಿಭಟಿಸುತ್ತಿದ್ದೇವೆ ಅಂತಿದಾರೆ ವಿದ್ಯಾರ್ಥಿನಿಯರು.

ಬಾಲ್ಯದಲ್ಲಿ ಅಸ್ಸಾಂ ಚಹಾ ಮಾರುತ್ತಿದ್ದೆ: ಮೋದಿ

ಚಹಾ ನಾಡು ಎಂದೇ ಖ್ಯಾತಿ ಪಡೆದಿರುವ ಅಸ್ಸಾಂ ರಾಜ್ಯದ ವಿಧಾನ ಸಭೆ ಚುನಾವಣೆ ಪ್ರಚಾರ ಕಾರ್ಯದಲ್ಲಿರುವ ಪ್ರಧಾನಿ ಮೋದಿ ಅಲ್ಲಿ ತಮ್ಮ ಚಾಯ್ ವಾಲಾ ಇಮೇಜನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ.

ಶನಿವಾರ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಮೋದಿ, ‘ಈ ಹಿಂದೆ ಅಸ್ಸಾಂ ಚಹಾವನ್ನೇ ಮಾರುತ್ತಾ ನನ್ನ ಬಾಲ್ಯ ಕಳೆದಿದ್ದೇನೆ’ ಎಂದು ಹೇಳುವ ಮೂಲಕ ಅಸ್ಸಾಮಿಗರ ಮನ ಒಲೈಸುವ ಪ್ರಯತ್ನ ನಡೆಸಿದ್ದಾರೆ. ಇದೇ ವೇಳೆ ‘ನನ್ನ ಹೋರಾಟ ಮಾಜಿ ಮುಖ್ಯಮಂತ್ರಿ ಗೊಗೋಯ್ ವಿರುದ್ಧ ಅಲ್ಲ. ಕೇವಲ ಬಡತನ ವಿರುದ್ಧ’ ಎಂಬ ಹೊಸ ಚುನಾವಣ ಮಂತ್ರ ಘೋಷಿಸಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ಸರ್ಬಾನಂದ ಸೊನೊವಾಲ್ ಅವರನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಈಗಾಗಲೇ ಘೋಷಿಸಿಸಲಾಗಿದೆ.

ರಾಷ್ಟ್ರವಾದ ವಿವಾದದಲ್ಲಿ ಗೆದ್ದಿದ್ದು ನಾವೇ: ಜೇಟ್ಲಿ

ಕಳೆದ ಕೆಲ ವಾರಗಳಿಂದ ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ರಾಷ್ಟ್ರೀಯತೆಯ ಸೈದ್ಧಾಂತಿಕ ಕಾದಾಟದಲ್ಲಿ ಗೆದ್ದಿದ್ದು ನಾವೇ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.  ‘ಈ ಹಿಂದೆ ದೇಶ ವಿಭಜನೆ ಹಾಗೂ ರಾಷ್ಟ್ರವಿರೋಧಿ ಕೂಗು ಎತ್ತಿದವರೂ ಸಹ ಈಗ ಜೈಹಿಂದ್ ಎನ್ನುತ್ತಿದ್ದಾರೆ. ನಮಗೆ ಇದೊಂದು ದೊಡ್ಡ ಸೈದ್ಧಾಂತಿಕ ಸವಾಲಾಗಿತ್ತು. ಅವರು ಭಾರತ್ ಮಾತಾಕೀ ಜೈ ಎಂದು ಕೂಗದಿದ್ದರೂ ಜೈ ಹಿಂದ್ ಎಂದಿದ್ದಾರೆ. ಈ ಹೋರಾಟದ ಮೊದಲ ಸುತ್ತಿನಲ್ಲಿ ನಮಗೆ ಜಯ ಸಿಕ್ಕಿರುವುದಕ್ಕೆ ಇದು ಉತ್ತಮ ಸಾಕ್ಷಿ’ ಎಂದಿದ್ದಾರೆ ಜೇಟ್ಲಿ.

ಬಿಜೆಪಿ ಪರ ಶ್ರೀಶಾಂತ್ ಕಣಕ್ಕೆ

ವಿವಾದಿತ ಮಾಜಿ ಕ್ರಿಕೆಟರ್ ಶಾಂತಕುಮಾರನ್ ಶ್ರೀಶಾಂತ್ ಈಗ ಬಿಜೆಪಿ ತೆಕ್ಕೆಗೆ ಸೇರ್ಪಡೆಯಾಗಿದ್ದಾರೆ. ಮುಂಬರುವ ಕೇರಳ ವಿಧಾನ ಸಭೆ ಚುನಾವಣೆಯಲ್ಲಿ ಶ್ರೀಶಾಂತ್ ತಿರುವನಂತಪುರಂ ಕ್ಷೇತ್ರದಿಂದ ಬಿಜೆಪಿ ಪರ ಕಣಕ್ಕಿಳಿಯಲಿದ್ದಾರೆ. ಶ್ರೀಶಾಂತ್ ಜತೆ ಇತರೆ 50 ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸಿದೆ. ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಆರೋಪಿಯಾಗಿದ್ದ ಶ್ರೀಶಾಂತ್ ರನ್ನು ದೆಹಲಿ ಟ್ರಯಲ್ ಕೋರ್ಟ್ ಪ್ರಕರಣದಿಂದ ಮುಕ್ತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಶ್ರೀಶಾಂತ್ ಯಾವುದೇ ತೊಂದರೆ ಇಲ್ಲದೆ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ.

ವಾಲಿಬಾಲ್ ಆಟಗಾರ್ತಿ ಕೊಂದವ ಪೊಲೀಸರಿಗೆ ಶರಣು

ರಸ್ತೆ ಗಲಾಟೆಯಲ್ಲಿ ಗುರುವಾರ ರಾತ್ರಿ ವೈದ್ಯನನ್ನು ಹೊಡೆದು ಕೊಂದ ಘಟನೆ ಬೆನ್ನಲ್ಲಿ, ಶುಕ್ರವಾರ ಪಶ್ಚಿಮ ಬಂಗಾಳದಲ್ಲಿ 14 ವರ್ಷದ ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿಯನ್ನು ಹತ್ಯೆ ಮಾಡಲಾಗಿದೆ. 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸಂಗೀತಾ ಐಚ್ ಎಂಬಾಕೆ ಮೇಲೆ ದಾಳಿ ಮಾಡಿದ್ದ ಸುಬ್ರತಾ ಸಿನ್ಹಾ ಎಂಬಾತ ಶನಿವಾರ ಬರಾಸಾತ್ ನಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರ ಪ್ರಕಾರ, ಸುಬ್ರತಾ 20 ವರ್ಷದವನಾಗಿದ್ದು, ಹಲವು ಬಾರಿ ಸಂಗೀತಾಳಿಗೆ ಪ್ರೇಮದ ಪ್ರಸ್ತಾಪ ನೀಡಿದ್ದ. ಇದನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಸುಬ್ರತಾ ಚಾಕುವಿನಿಂದ ಸಂಗೀತಾಳನ್ನು ಹಿರಿದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಒಟ್ಟಿನಲ್ಲಿ ಕಳೆದ ಎರಡು ದಿನಗಳಲ್ಲಿ ನಡೆದಿರುವ ವಿಭಿನ್ನ ಪ್ರಕರಣಗಳು ನಮ್ಮಲ್ಲಿರುವ ಕಾನೂನು ವ್ಯವಸ್ಥೆ ಮತ್ತು ಭದ್ರತೆ ಬಗ್ಗೆ ಆತಂಕ ಪಡುವಂತೆ ಮಾಡಿದೆ.

ಶನಿವಾರದ ರಾಜ್ಯ ಸುದ್ದಿಗಳನ್ನು ಗಮನಿಸುವುದಾದರೆ….

  • ಸರ್ಕಾರಿ ಶಾಲೆಗಳಲ್ಲಿ ಬೇಸಿಗೆ ರಜೆ ಸಂದರ್ಭದಲ್ಲೂ ಬಿಸಿಯೂಟದ ಯೋಜನೆ ಜಾರಿಯಲ್ಲಿರಿಸುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೆ. ರಾಜ್ಯದ 136 ತಾಲೂಕುಗಳು ಬರಪೀಡಿತವಾಗಿರುವ ಹಿನ್ನೆಲೆಯಲ್ಲಿ ರಜೆಯಲ್ಲೂ ಮಕ್ಕಳಿಗೆ ಊಟ ದೊರಕಿಸುವ ಅಗತ್ಯವಿದ್ದು ಇದಕ್ಕಾಗಿ 9 ಕೋಟಿ ರುಪಾಯಿಗಳ ಬಿಡುಗಡೆಗೆ ಸಮ್ಮತಿಸಲಾಗಿದೆ. ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ರಜೆಯಲ್ಲೂಈ ಯೋಜನೆ ಮುನ್ನಡೆಸಬೇಕಾದ ಹೊಣೆ ಹೊತ್ತಿದ್ದಾರೆ.
  • ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರು ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಒಮದು ತಾಸಿನ ಕಾಲ ಮಾತುಕತೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಯಿತು. ‘ಆಯವ್ಯಯದಲ್ಲಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಇನ್ನಷ್ಟು ಅಂಶಗಳನ್ನು ಸೇರಿಸಬೇಕಿತ್ತು. ಆ ಸಲಹೆಗಷ್ಟೇ ಭೇಟಿ’ ಅಂದ್ರು ಖರ್ಗೆ.

Leave a Reply