ಮೊರಾಕೊದಲ್ಲಿ ಕುರಿ ಕಾಯುತ್ತಿದ್ದೋಳು ಫ್ರಾನ್ಸ್ ಶಿಕ್ಷಣ ಸಚಿವೆಯಾದ ಕತೆ!

ಡಿಜಿಟಲ್ ಕನ್ನಡ ಟೀಮ್

ಅಮೆರಿಕ ಅಧ್ಯಕ್ಷೀಯ ಚುನಾವಣೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರೋ ವಿಷಯ. ಅಭ್ಯರ್ಥಿಗಳ ಭಾಷಣ ಒಂದಕ್ಕಿಂತ ಒಂದು ಭಿನ್ನ. ಆದರೆ ಕೆಲವರದು ಕಾಮನ್ ಆಜೆಂಡಾ ಕೂಡ ಇದೆ. ಅದರಲ್ಲಿ ಮುಖ್ಯವಾದದ್ದು ಮುಸ್ಲಿಮರ ನಿಷೇಧ, ಮೆಕ್ಸಿಕೊ ಮತ್ತಿತರ ದೇಶಗಳ ವಲಸಿಗರಿಗೆ ಅಮೆರಿಕದಲ್ಲಿ ಜಾಗ ನೀಡಬಾರು ಎಂಬುದು. ಆದರೆ ಯಾವ ಅಮೆರಿಕ ನಿಷೇಧ ಮಾಡಬೇಕು ಎಂದು ಆಶಿಸಿರುವ ಮುಸ್ಲಿಮ್ ಸಮುದಾಯದ ಹೆಣ್ಣು ಮಗಳೊಬ್ಬಳು ಫ್ರಾನ್ಸ್ ನಲ್ಲಿ ಉನ್ನತ ಶಿಕ್ಷಣ ಸಚಿವೆಯಾಗಿ ಬೆಳೆದ ನಿದರ್ಶನವೊಂದು ಇಲ್ಲಿದೆ.

ಈಕೆಯ ಹೆಸರು ನಜತ್ ವಲ್ಲೌಡ್ ಬೆಲ್ಕಮ್. ಫ್ರಾನ್ಸ್ ನಲ್ಲಿ ಮಂತ್ರಿ ಪದವಿ ಅಲಂಕರಿಸಿರುವ ಮೊದಲ ಮಹಿಳಾ ರಾಜಕಾರಣಿ. ಅದರಲ್ಲೂ ಮುಸ್ಲಿಮ್ ಸಮುದಾಯದವರು. ಈಕೆ ಅತ್ಯಂತ ಕಿರಿಯ ರಾಜಕಾರಣಿ ಅಷ್ಟೇ ಅಲ್ಲ, ಅಮೆರಿಕ ಜಾಗ ನೀಡಬಾರದು ಎಂದು ಅಭ್ಯರ್ಥಿಗಳು ಪ್ರತಿಪಾದಿಸುತ್ತಿರುವ ಮೊರಾಕೊ ಮೂಲದವರಾಗಿದ್ದು, ಫ್ರಾನ್ಸ್ ಗೆ ವಲಸೆ ಬಂದವರು. ಈಕೆಯ ಬೆಳವಣಿಗೆ, ಪ್ರಸ್ತುತತೆ ಅಮೆರಿಕ ಅಭ್ಯರ್ಥಿಗಳ ಗಂಟಲು ಉಬ್ಬಿಸುವಂತಿದೆ.

ನಿಜ, 1977ರ ಅಕ್ಟೋಬರ್ 4ರಂದು ಉತ್ತರ ಮೊರಾಕೊದ ಗುಡ್ಡಗಾಡು ಪ್ರದೇಶದಲ್ಲಿ ಜನಿಸಿ, ಬಾಲ್ಯದಲ್ಲಿ ತಮ್ಮ ತಾತನಿಗೆ ಫಾರ್ಮ್ ಹೌಸ್ ಕೆಲಸ ಹಾಗೂ ಕುರಿ ಕಾಯುವುದರಲ್ಲಿ ಸಹಾಯ ಮಾಡುತ್ತಿದ್ದ ನಜತ್ ಈ ಮಟ್ಟಕ್ಕೆ ಬೆಳೆಯುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆಕೆ ಚಿಕ್ಕವಳಿದ್ದಾಗಲೇ ನಜತ್ ತಂದೆ ಉದ್ಯೋಗ ಅರಸಿ ಫ್ರಾನ್ಸ್ ಕಡೆ ಪ್ರಯಾಣ ಬೆಳೆಸಿದರು. ಅಲ್ಲಿವ ರೆನಾಲ್ಟ್ ಕಾರ್ ತಯಾರಿಕ ಘಟಕದಲ್ಲಿ ಕೆಲಸಕ್ಕೆ ಸೇರಿದರು. ಇದರಿಂದಾಗಿ ಅವರ ಕುಟುಂಬ ಫ್ರಾನ್ಸ್ ಸೇರುವಂತಾಯಿತು.

ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಲಸೆ ಹೋದಾಗ ಅಲ್ಲಿನ ಭಾಷೆ, ಸಂಸ್ಕೃತಿ, ಜೀವನ ಶೈಲಿಗೆ ಒಗ್ಗಿಕೊಳ್ಳಲು ಎದುರಾಗುವ ಎಲ್ಲ ಸಮಸ್ಯೆಗಳು ಇವರಿಗೂ ಬಂದಿತ್ತು. ಗುಡ್ಡಗಾಡು ಪ್ರದೇಶದಿಂದ ಬಂದ ನಜತ್ ರಸ್ತೆಯಲ್ಲಿ ಪಾದರಸದಂತೆ ಓಡಾಡುವ ಕಾರುಗಳನ್ನು ಕಂಡು ಅಚ್ಚರಿಪಟ್ಟಿದ್ದಳು. ಆರಂಭದಲ್ಲಿ ಫ್ರೆಂಚ್ ಮಾತನಾಡಲು ಸಾಧ್ಯವಾಗದೇ ಪರದಾಡಿದ್ದಳು. ಕಠಿಣ ಪರಿಶ್ರಮದ ಪರಿಣಾಮ ವರ್ಷ ಕಳೆಯುವುರೊಳಗೆ ಜನತ್ ನಿರರ್ಗಳವಾಗಿ ಫ್ರೆಂಚ್ ಮಾತಾಡುವಂತಾದಳು.

ಭಾಷೆ ಕಲಿತ ನಂತರ ವ್ಸಾಸಂಗ. ಕಾನೂನು ಪದವಿ ಪಡೆವಷ್ಟರಲ್ಲಿ ಜನತ್ ಗೆ ರಾಜಕೀಯ ಕೈ ಬೀಸಿ ಕರೆದದ್ದು 2002 ರಲ್ಲಿ. ಆಗಿನ ನ್ಯಾಷನಲ್ ಫ್ರಂಟ್ ಅಭ್ಯರ್ಥಿ ಜೀನ್ ಮ್ಯಾರಿ ಲೆ ಪೆನ್ ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ. ಅಸಹಿಷ್ಣು ವಾತಾವರಣ ವಿರುದ್ಧ ನಡೆಸಿದ್ದ ಹೋರಾಟ ಅವರಿಗೆ ಅತ್ಯುತ್ತಮ ಜಯ ತಂದುಕೊಟ್ಟಿತ್ತು. ಇದರಿಂದ ಸ್ಫೂರ್ತಿಗೊಂಡ ನಜತ್ ಕೂಡ ರಾಜಕೀಯದತ್ತ ಆಸಕ್ತಿ ಬೆಳೆಸಿಕೊಂಡಳು. ಆರಂಭದಲ್ಲಿ ಜನತ್ ರಾಜಕೀಯ ಪ್ರವೇಶಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದರು. ಜತೆಗೆ ಅವರಿಗೆ  ಲೆ ಪೆನ್ ಅವರನ್ನು ಕಂಡರೆ ಆಗುತ್ತಿರಲಿಲ್ಲ. ಇಂಥ ಸನ್ನಿವೇಶದಲ್ಲಿ ಜನತ್ ಸೋಷಿಯಲಿಸ್ಟ್ ಪಾರ್ಟಿ ಸೇರಿದರು. ಅಲ್ಲಿಂದಾಚೆಗೆ ನಜತ್ ರಾಜಕೀಯದಲ್ಲಿ ಮುಟ್ಟಿದ್ದೆಲ್ಲ ಚಿನ್ನ. ಹಂತ ಹಂತವಾಗಿ ಬೆಳೆದ ಜನತ್, 2014 ರಲ್ಲಿ ಶಿಕ್ಷಣ ಸಚಿವೆಯಾದರು. ಜತೆಗೆ ಮಹಿಳೆಯರ ಹಕ್ಕು ರಕ್ಷಣೆ, ನಗರ ವ್ಯವಹಾರ, ಯುವಜನ ಮತ್ತು ಕ್ರೀಡಾ ಖಾತೆಯನ್ನೂ ನಿರ್ವಹಿಸಿದರು. ಈಗವರು ಶಿಕ್ಷಣ ಸಚಿವೆಯಾಗಿ ಮುಂದುವರಿದಿದ್ದಾರೆ.

ಒಂದು ದೇಶದಿಂದ ವಲಸಿಗರಿಗೆ ಹಾಗೂ ವಲಸಿಗರಿಂದ ಆ ದೇಶಕ್ಕೂ ಉತ್ತಮ ಕಾಣಿಕೆ ಸಿಗಬಲ್ಲದು ಎಂಬುದಕ್ಕೆ ನಜತ್ ಪ್ರಸಂಗ ಪ್ರತ್ಯಕ್ಷ ಸಾಕ್ಷಿ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಗಳು ಮನವರಿಕೆ ಮಾಡಿಕೊಳ್ಳಬಹುದಾದ ವಿಚಾರ ಇದು.

Leave a Reply