ಸುದ್ದಿಸಂತೆ; ಉತ್ತರಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ, ಸಾಲ ಸುಸ್ಥಿದಾರರಿಗೆ ಮೋದಿ ಎಚ್ಚರಿಕೆ, ವಿಶ್ವಕಪ್ ನಿಂದ ಭಾರತ ವನಿತೆಯರು ಹೊರಕ್ಕೆ

Dehradun: Uttrakhand Chief Minister Harish Rawat addressing a press conference in Dehradun on Monday. PTI Photo (PTI3_21_2016_000247B) *** Local Caption ***

ಡಿಜಿಟಲ್ ಕನ್ನಡ ಟೀಮ್

ಕೆಲ ದಿನಗಳಿಂದ ಉತ್ತರಖಂಡದಲ್ಲಿ ನಿರ್ಮಾಣವಾಗಿದ್ದ ರಾಜಕೀಯ ಗೊಂದಲ ರಾಷ್ಟ್ರಪತಿ ಆಳ್ವಿಕೆ ಜಾರಿಯೊಂದಿಗೆ ಅಂತ್ಯಗೊಂಡಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಆಳ್ವಿಕೆ ಸಂಬಂಧ ಕೇಂದ್ರ ಸರ್ಕಾರದ ಶಿಫಾರಸ್ಸಿಗೆ ಭಾನುವಾರ ಒಪ್ಪಿಗೆ ನೀಡಿದ್ದಾರೆ.

ಮುಖ್ಯಮಂತ್ರಿ ಹರೀಶ್ ರಾವತ್ ಸೋಮವಾರ ವಿಶ್ವಾಸಮತ ಯಾಚಿಸಬೇಕಿತ್ತು. ಆದರೆ ಅದಕ್ಕೆ ಮೊದಲೇ ಈ ನಿರ್ಧಾರವಾಗಿದೆ. ವಿಧಾನಸಭೆ ಸ್ಪೀಕರ್ ಗೋವಿಂದ್ ಸಿಂಗ್ ಕುಂಜ್ವಾಲ್ ಬಂಡಾಯದ ಬಾವುಟ ಹಾರಿಸಿದ್ದ ಒಂಬತ್ತು ಶಾಸಕರ ಸದಸ್ಯತ್ವವನ್ನು ಶನಿವಾರ ಅನರ್ಹ ಮಾಡಿದ್ದರು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ಯಪಾಲ ಕೆ.ಕೆ ಪಾಲ್ ಕೇಂದ್ರಕ್ಕೆ ವರದಿ ಸಲ್ಲಿಸಿದ್ದರು. ತುರ್ತು ಸಭೆ ನಡೆಸಿದ್ದ ಕೇಂದ್ರ ಸಚಿವ ಸಂಪುಟ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿತ್ತು.

ಈ ನಿರ್ಧಾರ ಪ್ರಜಾಪ್ರಭುತ್ವದ ಕೊಲೆ ಎಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಟೀಕೆ ಮಾಡಿವೆ. ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಆರಂಭದಿಂದಲೂ ನಮ್ಮ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿತ್ತು’ ಎಂದು ಉತ್ತರಖಂಡ ಮುಖ್ಯಮಂತ್ರಿ ಹರೀಶ್ ರಾವತ್ ಆರೋಪಿಸಿದ್ದಾರೆ.

‘ಇದು ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ತೆಗೆದುಕೊಂಡಿರುವ ನಿರ್ಧಾರ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸಮರ್ಥಿಸಿಕೊಂಡಿದ್ದಾರೆ.

ಬ್ಯಾಂಕ್ ಸುಸ್ಥಿದಾರರಿಗೆ ಕ್ಷಮೆ ಇಲ್ಲ: ಮೋದಿ ಎಚ್ಚರಿಕೆ

ಬ್ಯಾಂಕ್ ನಿಂದ ಸಾಲ ಪಡೆದು ಮರುಪಾವತಿ ಮಾಡದೇ ಇರುವ ಯಾವುದೇ ಸುಸ್ಥಿದಾರರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ. ಅಸ್ಸಾಂ ವಿಧಾನ ಸಭೆ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಮೋದಿ, ‘ಈವರೆಗೂ ಕಾಂಗ್ರೆಸ್ ಸರ್ಕಾರ ಶ್ರೀಮಂತರ ಹಣ ಕಾಪಾಡುವ ಪ್ರಯತ್ನ ನಡೆಸಿತ್ತು. ಆದರೆ, ಈಗ ಕಾನೂನನ್ನು ಬಿಗಿಗೊಳಿಸಲಾಗಿದ್ದು, ಯಾರೊಬ್ಬರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬಂಧನದ ಭೀತಿಯಿಂದ ಕೆಲ ಸುಸ್ಥಿದಾರರು ದೇಶಬಿಟ್ಟಿದ್ದಾರೆ. ಆದರೂ ಅವರನ್ನು ಬಿಡುವುದಿಲ್ಲ’ ಎಂದು ವಿಜಯ ಮಲ್ಯ ಹೆಸರೇಳದೇ ಪರೋಕ್ಷ ಎಚ್ಚರಿಕೆ ನೀಡಿದರು.

ಭಾರತಕ್ಕೆ ಆಗಮಿಸಿದ ಪಾಕಿಸ್ತಾನ ತನಿಖಾ ತಂಡ

ಇದೇ ವರ್ಷ ಜನವರಿಯಲ್ಲಿ ಪಠಾಣ್ ಕೋಟ್ ನ ಭಾರತೀಯ ವಾಯುನೆಲೆ ಮೇಲಿನ ಉಗ್ರರ ದಾಳಿಗೆ ಸಂಬಂಧಿಸಿದಂತೆ ಖುದ್ದು ಸ್ಥಳಪರಿಶೀಲನೆ ಹಾಗೂ ತನಿಖೆಗೆ ಪಾಕಿಸ್ತಾನ ತನಿಖಾ ತಂಡ ಭಾನುವಾರ ಭಾರತಕ್ಕೆ ಆಗಮಿಸಿದೆ. ಮಂಗಳವಾರ ಈ ತಂಡ ಪಠಾಣ್ ಕೋಟ್ ವಾಯು ನೆಲೆಗೆ ಭೇಟಿ ನೀಡಲಿದೆ.

ವಿಂಡೀಸ್ ಗೆ ಮಣಿದ ಮಿಥಾಲಿ ಪಡೆ, ವಿಶ್ವಕಪ್ ನಿಂದ ಭಾರತ ಹೊರಕ್ಕೆ

ಮಾಡು ಇಲ್ಲವೆ ಮಡಿ ಎಂಬ ಒತ್ತಡದಲ್ಲಿ ಕಣಕ್ಕಿಳಿದಿದ್ದ ಭಾರತ ವನಿತೆಯರ ತಂಡ ಟಿ20 ವಿಶ್ವಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 3 ರನ್ ಗಳ ಸೋಲನುಭವಿಸಿತು. ಆ ಮೂಲಕ ಟೂರ್ನಿಯಲ್ಲಿ ತನ್ನ ಹೋರಾಟ ಅಂತ್ಯಗೊಳಿಸಿದೆ. ವೆಸ್ಟ್ ಇಂಡೀಸ್ ತಂಡ ಈ ಜಯದೊಂದಿಗೆ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದೆ.

ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಗೆ 114 ರನ್ ದಾಖಲಿಸಿತು. ವಿಂಡೀಸ್ ಪರ ಸ್ಟೆಫಾನಿ ಟೇಲರ್ 47 (45) ಹಾಗೂ ಡೊಟಿನ್ 45 (40) ಉತ್ತಮ ಬ್ಯಾಟಿಂಗ್ ಮಾಡಿದರು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಗೆ 111 ರನ್ ದಾಖಲಿಸಲಷ್ಟೇ ಶಕ್ತವಾಯಿತು. ಭಾರತ ಪರ ಅನುಜಾ ಪಾಟೀಲ್ 26 (27), ಜುಲನ್ ಗೋಸ್ವಾಮಿ 25 (19) ಮತ್ತು ಸ್ಮೃತಿ 22 (27) ರನ್ ಗಳಿಸಿದರು.

Leave a Reply