ಅನಿಷ್ಟಕ್ಕೆಲ್ಲಾ ಅನುಷ್ಕಾನೇ ಕಾರಣ ಎಂದವರಿಗೆ ಕೊಹ್ಲಿ ಬಿರುಸಿನ ಉತ್ತರ, ಆಟದಲ್ಲಷ್ಟೇ ಅಲ್ಲ ವರ್ತನೆಯಲ್ಲೂ ವಿರಾಟ್ ಹೀರೋ!

ಡಿಜಿಟಲ್ ಕನ್ನಡ ಟೀಮ್

ಮೈದಾನದಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತ ಕ್ರಿಕೆಟ್ ತಂಡ ಸಿಲುಕಿದ್ದಾಗ ಆಪದ್ಭಾಂದವನಂತೆ ಕಾಪಾಡಿ ಪ್ರಶಂಸೆ ಗಿಟ್ಟಿಸಿಕೊಳ್ಳುತ್ತಿದ್ದ ವಿರಾಟ್ ಕೊಹ್ಲಿ, ಈಗ ಮೈದಾನದ ಹೊರಗೆ ನಿಂತು ಮಾಡಿದ ಬ್ಯಾಟಿಂಗೂ ಅದೇ ಪ್ರಶಂಸೆ ಪಾತ್ರರಾಗಿದ್ದಾರೆ. ಇಲ್ಲಿ ಕೊಹ್ಲಿ ಬ್ಯಾಟಿಂಗ್ ಮಾಡಿದ್ದು, ಟೀಂ ಇಂಡಿಯಾ ಪರವಲ್ಲ.. ಬದಲಿಗೆ ತನ್ನ ಮಾಜಿ ಪ್ರೇಯಸಿ ಅನುಷ್ಕಾ ಶರ್ಮಾ ಪರವಾಗಿ. ತನ್ನ ಆಟಕ್ಕೆ ಸಂಬಂಧಿಸಿದಂತೆ ಏನೇ ಆದರೂ ಅನುಷ್ಕಾ ಮೇಲೆ ಗೂಬೆ ಕೂರಿಸುತ್ತಿದ್ದೊರಿಗೆ ಕೊಹ್ಲಿ ಚೆನ್ನಾಗಿಯೇ ಚುರುಕು ಮುಟ್ಟಿಸಿದ್ದಾರೆ.

ಹೌದು.. ಕೊಹ್ಲಿ ಚೆನ್ನಾಗಿ ಆಡಿದಾಗ ಅಥವಾ ಆಡದಿದ್ದಾಗ ಗೇಲಿಗೆ ಗುರಿಯಾಗುತ್ತಿದ್ದ ಅನುಷ್ಕಾ ಶರ್ಮಾ ನೆರವಿಗೆ ವಿರಾಟ್ ಮುಂದಾಗಿದ್ದಾರೆ. ಅನುಷ್ಕಾ ಶರ್ಮಾರನ್ನು ಅಣಕಿಸಿದವರಿಗೆ ಕೊಹ್ಲಿ ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ ಮೂಲಕ ತೀಕ್ಷ್ಣ ರೀತಿಯಲ್ಲಿ ಉತ್ತರಿಸಿದ್ದಾನೆ.

‘ಸುದೀರ್ಘ ಅವಧಿಯಿಂದ ಎಲ್ಲಾ ನಕಾರಾತ್ಮಕ ಅಂಶಗಳಿಗೆ ಅನುಷ್ಕಾಳನ್ನು ಗುರಿ ಮಾಡುತ್ತಿರುವವರು ತಲೆತಗ್ಗಿಸಬೇಕು. ಎಲ್ಲ ಕೆಟ್ಟ ಸಂಗತಿಗಳಿಗೆ ಆಕೆಯೇ ಕಾರಣ ಎನ್ನುವ ಮನಸ್ಥಿತಿಯವರು ನಿಜವಾಗಿಯೂ ತಮ್ಮನ್ನು ಶಿಕ್ಷಿತರು ಎಂದು ಕರೆದುಕೊಳ್ಳುವುದಕ್ಕೆ ನಾಚಿಕೆಯಾಗಬೇಕು. ನನ್ನ ಆಟಕ್ಕೂ ಆಕೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ನಾನು ಸಂಕಷ್ಟದಲ್ಲಿದ್ದಾಗ ಆಕೆ ಉತ್ಸಾಹ ತುಂಬಿದ್ದಾಳೆ. ಈ ರೀತಿಯಾದ ಕೀಳು ಮನೋಭಾವ ಸಾಕಷ್ಟು ಹಿಂದಿನಿಂದಲೂ ಕಾಣುತ್ತಿರುವುದು ಬೇಸರದ ಸಂಗತಿ. ನನ್ನ ಈ ಮಾತಿಗೆ ಯಾರೂ ಪ್ರಶಂಶಿಸದಿದ್ದರೂ ತಲೆಕೆಡಿಸಿಕೊಳ್ಳುವುದಿಲ್ಲ. ಆಕೆಯನ್ನು ಗೌರವಿಸುವುದನ್ನು ಕಲಿಯಿರಿ. ಅದೇ ಜಾಗದಲ್ಲಿ ನಿಮ್ಮ ಸಹೋದರಿಯೋ, ಸ್ನೇಹಿತೆಯೋ ಅಥವಾ ಹೆಂಡತಿಯೋ ಇದ್ದಿದ್ದರೆ, ಸಾರ್ವಜನಿಕವಾಗಿ ಆಕೆಯ ಬಗ್ಗೆ ಹೀಗೆ ಮಾತನಾಡುತ್ತಿದ್ದಿರಾ’ ಎಂದು ವಿರಾಟ್ ಕೊಹ್ಲಿ ಜಾಡಿಸಿದ್ದಾರೆ.

2013ರ ಆಗಸ್ಟ್ ತಿಂಗಳ ಸಂದರ್ಭ ಶಾಂಪೂ ಕಂಪನಿಯೊಂದರ ಜಾಹೀರಾತಿಗಾಗಿ ಭಾರತ ಕ್ರಿಕೆಟ್ ನ ಖ್ಯಾತ ತಾರೆ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮೊದಲ ಬಾರಿಗೆ ಭೇಟಿಯಾದ ಸಂದರ್ಭ. ಇದಾದ ಕೆಲ ದಿನಗಳಲ್ಲಿ ಈ ಜೋಡಿ ವಿದೇಶಿ ಪ್ರವಾಸದ ವೇಳೆಯೂ ಒಟ್ಟಿಗೆ ಕಾಣಿಸಿಕೊಂಡಿದ್ದು ಇವರಿಬ್ಬರ ನಡುವಣ ಪ್ರೇಮ ಸಂಬಂಧದ ವರದಿಗಳಿಗೆ ರೆಕ್ಕೆಪುಕ್ಕ ಬಂದಿತು.

ಇವರಿಬ್ಬರ ಪ್ರೇಮ ವಿಚಾರದ ಜತೆಜತೆಗೆ ಹುಟ್ಟಿದ್ದು, ಅನುಷ್ಕಾ ಶರ್ಮಾ ನಿಜವಾಗಲೂ ಲೇಡಿ ಲಕ್ ಆಗುವರೇ ಎಂಬ ಮಾತು. ಇದೇ ವಾದ ಬೆಳೆದು ಕೊಹ್ಲಿ ವೈಫಲ್ಯ ಅನುಭವಿಸಿದಾಗಲೆಲ್ಲ ಟೀಕೆಗೆ ಗುರಿಯಾದಳು ಅನುಷ್ಕಾ. ಈಗ ಈ ಜೋಡಿಗಳು ಬೇರೆಯಾಗಿವೆ. ‘ಕೊಹ್ಲಿ ಸತತವಾಗಿ ಒಳ್ಳೆಯ ಪ್ರದರ್ಶನ ನೀಡುತ್ತಿರೋದಕ್ಕೆ ಅನುಷ್ಕಾ ದೂರವಾಗಿರೋದೇ ಕಾರಣ’ ಎಂಬ ಕುಹಕ ಸಾಮಾಜಿಕ ತಾಣಗಳಲ್ಲಿ ಜೋರು ಚಲಾವಣೆಗೆ ಬಂತು. ಇದಕ್ಕೆ ಪ್ರಬುದ್ಧವಾಗಿ ಪ್ರತಿಕ್ರಿಯಿಸಿರುವ ವಿರಾಟ್ ಕೋಹ್ಲಿ ಡೀಸೆಂಟ್ ಹೀರೋ ಆಗಿದ್ದಾರೆ.

Leave a Reply