ಗೂಗಲ್ ನ ಲೂನ್ ಬಲೂನ್ ಗಳ ಬಗ್ಗೆ ಕೇಳಿದ್ರಲ್ಲ, ಶ್ರೀಲಂಕಾವೇ ಈಗದರ ಪ್ರಯೋಗಭೂಮಿ

ಡಿಜಿಟಲ್ ಕನ್ನಡ ಟೀಮ್

ದೇಶದ ಮೂಲೆ ಮೂಲೆಗಳಲ್ಲಿ ಅಂತರಜಾಲ ಸಂಪರ್ಕ ಕಲ್ಪಿಸುವುದು ಪ್ರತಿ ದೇಶದ ಕನಸು. ಈ ನಿಟ್ಟಿನಲ್ಲಿ ಗೂಗಲ್ ಮತ್ತು ಮೈಕ್ರೊಸಾಫ್ಟ್ ನಂಥ ಕಂಪನಿಗಳು ದೊಡ್ಡಮಟ್ಟದಲ್ಲಿ ಪ್ರಯೋಗಕ್ಕೆ ಒಡ್ಡಿಕೊಂಡಿವೆ. ತರಂಗಗುಚ್ಛ ಹೊತ್ತ ಬಲೂನುಗಳನ್ನು ಆಕಾಶಕ್ಕೆ ಹಾರಿಸಿ, ಇಂಟರ್ನೆಟ್ ಕಲ್ಪಿಸುವ ವ್ಯವಸ್ಥೆ ಗೂಗಲ್ ಪ್ರಯತ್ನವಾದರೆ, ಟಿವಿ ತರಂಗಗಳಲ್ಲಿ ಬಳಕೆಯಾಗದ ತರಂಗಗಳನ್ನೇ ಬಳಸಿಕೊಂಡು ಹಳ್ಳಿಗಳಿಗೂ ಅಂತರ್ಜಾಲ ಬೆಸೆಯುವುದು ಮೈಕ್ರೊಸಾಫ್ಟ್ ಕಲ್ಪನೆ.

ಈ ಪೈಕಿ ಗೂಗಲ್ ನ ಲೂನ್ ಬಲೂನ್ ಪರಿಕಲ್ಪನೆಗೆ ನಮ್ಮ ನೆರೆಯ ಶ್ರೀಲಂಕಾ ವ್ಯಾಪಕ ಮಟ್ಟದಲ್ಲಿ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಿದೆ. ಕಳೆದ ಒಂದು ವರ್ಷದಿಂದ ಲೂನ್ ಬಲೂನ್ ಗಳ ಅಭಿವೃದ್ಧಿ ಪ್ರಯೋಗದಲ್ಲಿ ಗೂಗಲ್ ತೊಡಗಿಸಿಕೊಂಡಿದೆ. ಗೂಗಲ್ ಬೇರೆಡೆಗಳಲ್ಲೂ ಇಂಥ ಪ್ರಯೋಗ ಮಾಡಿತ್ತಾದರೂ ಇಷ್ಟು ದೊಡ್ಡ ವ್ಯಾಪ್ತಿಯಲ್ಲಲ್ಲ. ಈಗ ಶ್ರೀಲಂಕಾದಲ್ಲಿ ಲಭಿಸುವ ಯಶಸ್ಸನ್ನು ಆಧರಿಸಿಯೇ ಲೂನ್ ಬಲೂನ್ ಯೋಜನೆಯ ವಿಸ್ತಾರವನ್ನು ಗೂಗಲ್ ನಿರ್ಧರಿಸುತ್ತದೆ.

ಈ ಗೂಗಲ್ ಲೂನ್ ಬಲೂನ್ ನ ಪ್ರಮುಖ ಲಕ್ಷಣಗಳು ಹೀಗಿವೆ:

  • ಈ ಲೂನ್ ಬಲೂನ್ ಗಳನ್ನು ಗಾಳಿಯ ಮೂಲಕ ಸುಮಾರು 14 ಮೈಲುಗಳ ಎತ್ತರಕ್ಕೆ ಹಾರಿಸಲಾಗುವುದು.
  • ಈ ಬಲೂನ್ ಗಳ ನಿರ್ದಿಷ್ಟ ದಿನಗಳವರೆಗೆ ಗಾಳಿಯಲ್ಲಿ ಹಾರಾಡುತ್ತವೆ. ನಂತರ ಬಲೂನ್ ತನ್ನ ಶಕ್ತಿ ಕಳೆದುಕೊಂಡು ಮತ್ತೆ ಕೆಳಗೆ ಬೀಳುತ್ತದೆ.
  • ಕೆಳಗೆ ಬಿದ್ದ ಬಲೂನ್ ಅನ್ನು ಮತ್ತೊಂದು ಬಲೂನ್ ಮೂಲಕ ಬದಲಿಸಲಾಗುವುದು.
  • ಈ ಬಲೂನ್ ಗಳು ಗಾಳಿಗೆ ಚಲಿಸಲಿದ್ದು, ಈ ಬಲೂನ್ ಗಳ ಮೇಲೆ ನಿಗಾವಹಿಸಲಾಗುವುದು. ಅಲ್ಲದೆ ನಿರ್ದಿಷ್ಟ ಪ್ರದೇಶದಲ್ಲಿ ಇದು ಸಂಚರಿಸುವಂತೆ ನಿಯಂತ್ರಿಸುವ ಪ್ರಯೋಗಗಳು ನಡೆಯುತ್ತಿವೆ.
  • ಕೇವಲ ಶ್ರೀಲಂಕಾ ಮಾತ್ರವಲ್ಲದೇ ನ್ಯೂಜಿಲೆಂಡ್ ಹಾಗೂ ಇತರೆ ರಾಷ್ಟ್ರಗಳಲ್ಲಿ ಈ ತಂತ್ರಜ್ಞಾನಗ ಪ್ರಯೋಗಗಳು ನಡೆಯುತ್ತವೆ.

ಈ ಯೋಜನೆಯ ಪ್ರಯೋಗ ಹೇಗೆ ನಡೆಯುತ್ತಿದೆ ಎಂಬುದನ್ನು ನೀವೇ ನೋಡಿ.

ಕಳೆದ ಒಂದು ವರ್ಷದಲ್ಲಿ ಶ್ರೀಲಂಕಾದಲ್ಲಿ ಅಂತರಜಾಲ ಬಳಕೆ ಪ್ರಮಾಣದಲ್ಲಿ ಶೇ.45ರಷ್ಟು ಏರಿಕೆ ಕಂಡಿದೆ. ಹಾಗಾಗಿ ಮುಂದಿನನ ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದ ಅಂತರಜಾಲ ವ್ಯವಸ್ಥೆ ಅಗತ್ಯವಿದ್ದು ಈ ನಿಟ್ಟಿನಲ್ಲಿ ಶ್ರೀಲಂಕಾ ಸಂಪೂರ್ಣವಾಗಿ ಕಾರ್ಯಪ್ರವೃತ್ತವಾಗಿದೆ. ಲಂಕಾದಲ್ಲಿ ಬ್ರಾಡ್ ಬ್ಯಾಂಡ್ ಮೂಲಕ ಪ್ರತಿ ಸೆಕೆಂಡ್ ಗೆ 5.1 ಮೆಗಾಬಿಟ್ಸ್ ನಷ್ಟು ವೇಗವಾಗಿ ಅಂತರಜಾಲ ಸಂಪರ್ಕ ಲಭಿಸುತ್ತಿದೆ. ಇದು ಭಾರತ (2.5 ಎಂಬಿಪಿಎಸ್), ಚೀನಾ (3.7 ಎಂಬಿಪಿಎಸ್) ಗಿಂತ ಉತ್ತಮವಾಗಿದೆ.

ಇಷ್ಟೇ ಅಲ್ಲದೇ ಲಂಕಾ ಸರ್ಕಾರ ದ್ವೀಪ ರಾಷ್ಟ್ರವನ್ನು ತಂತ್ರಜ್ಞಾನದ ಕೇಂದ್ರವನ್ನಾಗಿ ಪರಿವರ್ತಿಸುವತ್ತ ಸಕಲ ಪ್ರಯತ್ನ ನಡೆಸುತ್ತಿದೆ. ಸಮುದ್ರದ ಒಡಲಲ್ಲಿ ಅಂತರ್ಜಾಲ ಕೇಬಲ್ ಗೆ ಬಂಡವಾಳ, ಸ್ಟಾರ್ಟ್ ಅಪ್ ಗಳಿಗೆ ಪ್ರೋತ್ಸಾಹ, ಕ್ಲೌಡ್ ಕಂಪ್ಯೂಟಿಂಗ್  ಅಭಿವೃದ್ಧಿಗೆ ಮೈಕ್ರೋಸಾಫ್ಟ್ ಜತೆ ಒಪ್ಪಂದ… ಹೀಗೆ ಹಲವು ಪ್ರಯತ್ನಗಳ ಮೂಲಕ ತಂತ್ರಜ್ಞಾನ ಅಪ್ಪಿಕೊಳ್ಳುವ ಧಾವಂತದಲ್ಲಿದೆ ಶ್ರೀಲಂಕಾ.

Leave a Reply