ಬುದ್ಧಿಜೀವಿಗಳ ಅಸಹಿಷ್ಣುತೆ ಚರ್ಚೆ ಇದಲ್ಲ, ಆದರೆ ಅಸಹನೀಯ ಮಹಾನಗರಕ್ಕೆ ಮದ್ದು ಕೊಡೋರು ಯಾರಿಲ್ಲ!

ಡಿಜಿಟಲ್ ಕನ್ನಡ ವಿಶೇಷ

ಬೆಂಗಳೂರಿನಲ್ಲಿ ವೈದ್ಯರೊಬ್ಬರ ಮರ್ಸಿಡೆಸ್ ಕಾರು ಅಡ್ಡಾದಿಡ್ಡಿ ಚಲಿಸಿ, ಆರು ವಾಹನಗಳಿಗೆ ಗುದ್ದಿ, ಒಬ್ಬ ಬೈಕ್ ಸವಾರನ ಪ್ರಾಣ ಬಲಿತೆಗೆದುಕೊಂಡಿದೆ. ನಾಯಿ ಬೊಗಳಿದ್ದಕ್ಕೆ ಆಕ್ಷೇಪಿಸಿದ್ದಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದು, ಒಬ್ಬನಿಗೆ ಚೂರಿ ಹಾಕಿ ಕೊಲ್ಲುವಲ್ಲಿ ಪ್ರಕರಣ ಕ್ರೂರ ತಿರುವು ಪಡೆದಿರುವ ವರದಿಯೂ ಆಗಿದೆ.

ಇದೆಂಥ ಕ್ರೂರ ವ್ಯಂಗ್ಯ? ಬದುಕು ಕಟ್ಟಿಕೊಳ್ಳಲು ಬರುವ ಮಹಾನಗರಗಳಲ್ಲಿ ಜೀವ ಇಷ್ಟೊಂದು ಅಗ್ಗವಾಗಿ ಹೋಯಿತಲ್ಲಾ..? ಆರ್ಥಿಕ ಸ್ಥಿತಿ ಉತ್ತಮಗೊಂಡು ಸುಧಾರಿತ ಬದುಕು ಸಾಧ್ಯವಾಗಲೆಂಬ ಆಶಯದಲ್ಲಿ ಮೇಲೆದ್ದಂಥವು ಬೆಂಗಳೂರಿನಂಥ ಮಹಾನಗರಗಳು. ಇಲ್ಲಿನ ದೊಡ್ಡದೊಂದು ಜನಸಂಖ್ಯೆ ಈ ಆಶಯದಲ್ಲೇ ಹಳ್ಳಿಗಳನ್ನು ತೊರೆದು ಬಂದಿರುವಂಥದ್ದು. ಆದರೆ… ಆಗಿದ್ದ ಜೀವ ಈಗಿಲ್ಲ ಎಂಬಂತೆ ವರದಿಯಾಗುತ್ತಿರುವ ಹಲವು ಘಟನೆಗಳು ಮಹಾನಗರಗಳೇಕೆ ಅಸಹನೀಯ ಕುದಿತಾಣಗಳಾಗುತ್ತಿವೆ ಎಂಬ ಆತಂಕವೊಂದನ್ನು ಉತ್ತರವೇ ಇಲ್ಲದ ಪ್ರಶ್ನೆಯಾಗಿಸಿದೆ.

ದೆಹಲಿ ವೈದ್ಯನ ಜತೆ ಆತ ವಾಗ್ವಾದಕ್ಕೆ ಪ್ರತಿಯಾಗಿ ಕೊಳೆಗೇರಿಯ ಒಂದಿಷ್ಟು ಮಂದಿ ಗುಂಪು ಕಟ್ಟಿಕೊಂಡು ಬಂದು ಬಡಿದೇ ಸಾಯಿಸಿಹೋದ ಘಟನೆ ಎಲ್ಲರನ್ನೂ ಅಲ್ಲಾಡಿಸುತ್ತಿದೆ.

ತಿಂಗಳುಗಳ ಹಿಂದೆ ಭೀಕರ ರಸ್ತೆ ಅಪಘಾತದಲ್ಲಿ ಮೃತರಾದ ಹರೀಶರನ್ನು ಮರೆಯಲಾಗದು. ಮೂಲತಃ ತುಮಕೂರಿನ ಗುಬ್ಬಿ ತಾಲೂಕು ಕೆರೆಗೋಡನಹಳ್ಳಿಯಿಂದ ಬಂದು ಖಾಸಗಿ ಉದ್ಯೋಗದಲ್ಲಿ ಜೀವನ ಕಟ್ಟಿಕೊಂಡಿದ್ದ ಹರೀಶರ ಬದುಕು ರಸ್ತೆಮಧ್ಯದಲ್ಲಿಕೊನೆಗೊಂಡ ಪರಿ ನೋಡಿದರೆ ಜೀವ ಭದ್ರತೆಯ ಪರಿಕಲ್ಪನೆಯೇ ಅಲ್ಲಾಡುವಂತಿದೆ. ಹರೀಶ್ ಜಾಗದಲ್ಲಿ ಯಾರೂ ಇರೂ ಇದ್ದುಬಿಡಬಹು ಅಲ್ಲವೇ? ಇಲ್ಲಿ ಸರಿ- ತಪ್ಪು, ಎಚ್ಚರಿಕೆಗಳೆಲ್ಲ ನಗಣ್ಯ. ನೀವೆಷ್ಟೇ ಎಚ್ಚರದಿಂದ, ನಿಯಮಕ್ಕೆ ಅನುಗುಣವಾಗಿಯೇ ವಾಹನ ಚಲಾಯಿಸುತ್ತಿದ್ದರೂ ಯಾವುದೋ ಲಾರಿ, ಇನ್ಯಾವುದೋ ಬಸ್ಸು ನಿಮ್ಮ ಜೀವ ಉಜ್ಜಿಕೊಂಡು ಹೋಗಬಹುದು ಅಲ್ಲವೇ? ಆ್ಯಂಡ್ ಸಿಂಪ್ಲಿ ಯು ಕಾಂಟ್ ಡು ಎನಿಥಿಂಗ್ ಎಬೌಟ್ ಇಟ್!

ನಿಮ್ಮ ಮಕ್ಕಳನ್ನು ಲಕ್ಷಾಂತರ ಫೀಸು ತುಂಬಿ ಶಾಲೆಗೇನೋ ಕಳುಹಿಸ್ತಿದೀರಿ. ಆದರೆ ಶಾಲೆಗೆ ಚಿರತೆ ಬರುವ ಭಯ! ಅದೆಂಥ ಸಂದಿಗ್ಧಕ್ಕೆ ಸಿಲುಕಿದೆ ನೋಡಿ ಸಿಟಿ ಲೈಫ್!

ಬದುಕಿನ ಭದ್ರತೆ, ಜೀವನಮಟ್ಟ ಹೆಚ್ಚಿಸಿಕೊಳ್ಳುವ ಕಾರಣಕ್ಕಾಗಿ ನಾವು ಆತುಕೊಳ್ಳುತ್ತಿರುವ ಬೆಂಗಳೂರು ಎಂಥ ಅನಿಶ್ಚಿತ ಅಂತ ಈ ಘಟನೆಗಳು ಸಾರುತ್ತಿವೆ ನೋಡಿ.

– ಕಳೆದ ಸೆಪ್ಟೆಂಬರ್ ನಲ್ಲಿ ಮಧ್ಯಪ್ರದೇಶದ ದಂಪತಿಗಳು ರಸ್ತೆಯಲ್ಲಿ ಸಾಗುವಾಗ ಅಪಘಾತವಾಯಿತು. ಪತ್ನಿ ದ್ವಿಚಕ್ರವಾಹನ ಚಾಲನೆ ಮಾಡುತ್ತಿದ್ದಳು. ರಸ್ತೆ ಗುಂಡಿಯಿಂದ ಅಪಘಾತ ಸಂಭವಿಸಿ ಪತ್ನಿ ಸಾವನ್ನಪ್ಪಿದರೆ, ಪತಿ ಭುಜಕ್ಕೆ ಗಾಯವಾಯಿತು. ನಂತರ ಬೇಜವಾಬ್ದಾರಿತನ ಆಧಾರದ ಮೇಲೆ ಪತಿಯ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

– ಕೆಲ ತಿಂಗಳ ಹಿಂದೆ ಎಚ್ ಎಸ್ ಆರ್ ಲೇಔಟ್ ನಿವಾಸಿ ಹಾಗೂ ಐಟಿ ಉದ್ಯೋಗಿ ಸುಬ್ರಮಣ್ಯ ಎಂಬುವವರು ಮಾರತಹಳ್ಳಿಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪ್ರಾಣ ಬಿಟ್ಟಿದ್ದರು.

– ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ರಸ್ತೆ ದಾಟುತ್ತಿದ್ದ ಪಾದಚಾರಿಗಳ ಮೇಲೆ ನೀರಿನ ಟ್ಯಾಂಕರ್ ಹರಿದು ಅರ್ಪಿತಾ ಮತ್ತು ಆನಂದ್ ಕುಮಾರ್ ಮೃತಪಟ್ಟಿದ್ದರು.

– ರಸ್ತೆ ಗುಂಡಿ, ಅವೈಜ್ಞಾನಿಕ ಉಬ್ಬುಗಳನ್ನು ತಪ್ಪಿಸುವ ಪ್ರಯತ್ನದಲ್ಲಿ ಸಾಕಷ್ಟು ಜನ ಪ್ರಾಣಬಿಟ್ಟಿದ್ದಾರೆ. ರಸ್ತೆ ಅಪಘಾತ ಮಾತ್ರವಲ್ಲದೇ, ಮಳೆಗಾಲದಲ್ಲಿ ಚರಂಡಿಯಲ್ಲಿ ಮಕ್ಕಳು ಕೊಚ್ಚಿ ಹೋಗುವುದು, ಮೂರ್ನಾಲ್ಕು ದಿನ ಮಾಧ್ಯಮಗಳು ಮೃತ ದೇಹ ಹುಡುಕುವ ಕಸರತ್ತಿನ ನೇರ ಪ್ರಸಾರ ಮಾಡುವುದನ್ನು ಸಾಕಷ್ಟು ನೋಡಿದ್ದೇವೆ.

ಕೇವಲ ಬೆಂಗಳೂರು ಅಂತಲ್ಲ.. ದೇಶದ ಪ್ರಮುಖ ನಗರಗಳಲ್ಲಿನ ಅಪಘಾತಗಳ ಅಂಕಿಅಂಶಗಳೇ ದಿಗಿಲು ಹುಟ್ಟಿಸುವಂತಿವೆ. ಸಿಟಿಗೆ ಹೋಗಿ ಜೀವನ ಕಂಡುಕೊಂಡಿದ್ದೇನೆಂದು ಸಂಭ್ರಮಿಸುತ್ತಿರವ ನಮಗೆಲ್ಲ, ಸರಿಯಪ್ಪ… ರಸ್ತೆ ಮೇಲಿರುವಾಗ ಜೀವಕ್ಕೇನು ಗ್ಯಾರಂಟಿ ಅಂತ ಕೇಳಿದರೆ- ಏನಿಲ್ಲ ತಿರುಗಿ ಮನೆಗೆ ಬಂದಮೇಲಷ್ಟೇ ಗ್ಯಾರಂಟಿ ಎನ್ನುವಂಥ ಸ್ಥಿತಿ ಇದೆ.

– ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ 2013ರಲ್ಲಿ ದೇಶದಲ್ಲಿ ರಸ್ತೆ ಅಪಘಾತದಿಂದ 1.37 ಲಕ್ಷ ಜನ ಮೃತಪಟ್ಟಿದ್ದಾರೆ. ನಿತ್ಯ ಸಾಯುವ ಮಕ್ಕಳ ಸರಾಸರಿ ಸಂಖ್ಯೆ 16. ದೆಹಲಿ ಒಂದರಲ್ಲೇ ನಿತ್ಯ ಐವರು ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ.

– 2014 ರಲ್ಲಿ ಬೆಂಗಳೂರಿನಲ್ಲಿ ನಿತ್ಯ ಅಪಘಾತಕ್ಕೆ ಸರಾಸರಿ ಇಬ್ಬರು ಬಲಿಯಾಗುತ್ತಿದ್ದು, ವರ್ಷದಲ್ಲಿ ಒಟ್ಟು 729 ಮಂದಿ ಮೃತಪಟ್ಟಿದ್ದಾರೆ.

– ಬೆಂಗಳೂರಿನ ಹೊಸೂರು ಮುಖ್ಯ ರಸ್ತೆ ಅಪಘಾತಗಳ ಅಂಕಿಅಂಶವನ್ನೇ ಗಮನಿಸಿ. 2014 ರಲ್ಲಿ ಬೆಂಗಳೂರಲ್ಲಿ 778 ಅಪಘಾತಗಳು ಸಂಭವಿಸಿದ್ದು, ಅದರಲ್ಲಿ ಬರೋಬ್ಬರಿ 148 ಹೊಸೂರು ರಸ್ತೆಯಲ್ಲಿ ಆಗಿವೆ.

– ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ನೀಡಿರುವ ವರದಿ ಪ್ರಕಾರ 2011 ರಲ್ಲಿ 1843 ಮಂದಿ ಮ್ಯಾನ್ ಹೋಲ್ ಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. 2010 ರಲ್ಲಿ 1743 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಮ್ಯಾನ್ ಹೋಲ್ ಹೆಚ್ಚಿನದಾಗಿ ನಗರ ವ್ಯವಸ್ಥೆಯಲ್ಲಿ ಇರುವಂಥವು.

ಈಗ ಹೇಳಿ, ಸಿಟಿ ಲೈಫು ಎಷ್ಟು ಸುರಕ್ಷಿತ, ಎಷ್ಟರಮಟ್ಟಿಗೆ ನಿಶ್ಚಿತ?

1 COMMENT

  1. ಸರ್, ಮಹಾ ನಗರಗಳು ಮಾತ್ರವಲ್ಲ, ಇಡೀ ರಾಜ್ಯವೇ ಹೀಗಾಗಿದೆ. ಶಾಂತಿ, ಸೌಹಾರ್ದತೆಗೆ ಹೆಸರಾಗಿದ್ದ ಭರತ ದೇಶ ಇಂದು ಅಸಹಿಷ್ಣುತೆಯ ಗೂಡಾಗಿದೆ. ಇದು ನಿಜಕ್ಕೊ ತುಂಬಾ ಬೇಸರ ತರುವ ಸಂಗತಿ.

Leave a Reply