ಬೆಂಕಿಚೆಂಡು ಸ್ಪೀಕರ್ ತಿಮ್ಮಪ್ಪನವರನ್ನು ಶಾಸಕರು ಬದುಕಿದ್ದಾರೋ, ಸತ್ತೋಗಿದ್ದಾರೋ ಅನ್ನುವ ಪ್ರಶ್ನೆ ಕಾಡಿದಾಗ..!

 

ಡಿಜಿಟಲ್ ಕನ್ನಡ ಟೀಮ್

ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸೋಮವಾರ ಅಕ್ಷರಶಃ ಬೆಂಕಿಚೆಂಡಾಗಿದ್ದರು. ಕೇಂದ್ರ ಸರಕಾರದ ಅನುದಾನ ಬಳಕೆ ಮಾಡಿಕೊಳ್ಳದ ರಾಜ್ಯ ಸರಕಾರದ ಸೋಮಾರಿತನ ಪ್ರಶ್ನಿಸುವಲ್ಲಿ ಶತಸೋಮಾರಿತನ ಮೆರೆದಿರುವ ಶಾಸಕರನ್ನು ಹಿಗ್ಗಾಮುಗ್ಗಾ ಬೆಂಡೆತ್ತಿದರು.

ಅವರ ತರಾಟೆ ಯಾವ ಮಟ್ಟದಲ್ಲಿ ತಾರಕ ಮುಟ್ಟಿತ್ತೆಂದರೆ, ‘ಶಾಸಕರು ಬದುಕಿದ್ದಾರೋ ಇಲ್ಲವೋ ಅನ್ನುವಷ್ಟು ಅನುಮಾನ ಬರುತ್ತಿದೆ. ತಮ್ಮ ಕ್ಷೇತ್ರಾಭಿವೃದ್ಧಿಗೆ ಅನಾಯಾಸವಾಗಿ ಸಿಗುವ ಅನುದಾನವನ್ನು ಕೇಳಿ ಪಡೆದು, ಬಳಕೆ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ ಅಂದಮೇಲೆ ಇವರು ಜನಪ್ರತಿನಿಧಿಗಳು ಹೇಗಾದಾರೂ’ ಅಂತ ತಿಮ್ಮಪ್ಪನವರು ಪ್ರಶ್ನಿಸುತ್ತಿದ್ದರೆ ಕುವೆಂಪು ಅವರ, ‘ಬಾರಿಸು ಕನ್ನಡ ಡಿಂಡಿಮವ..’ ಕವಿತೆಯಲ್ಲಿನ ‘ಸತ್ತಂತಿಹರನು ಬಡಿದೆಚ್ಚರಿಸು..’ ಎನ್ನುವ ಸಾಲು ನೆನಪಿಗೆ ಬರುತ್ತಿತ್ತು.

ಕಾಗೋಡು ತಿಮ್ಮಪ್ಪ ಅವರು ಒಮ್ಮೊಮ್ಮೆ ಅಧಿಕೃತ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಅನ್ನು ಮೀರಿಸುವಂತೆ ಸಿದ್ದರಾಮಯ್ಯನವರ ಸರಕಾರದ ಕಿವಿ ಹಿಂಡುತ್ತಾರೆ. ಕೃಷಿಕರು, ಬಡವರು, ಶೋಷಿತರು ಮತ್ತು ಅಭಿವೃದ್ಧಿ ವಿಚಾರ ಬಂದಾಗ ಯಾವುದೇ ಎಗ್ಗು-ಸಿಗ್ಗಿಲ್ಲದೆ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಾರೆ. ಅಂಥ ತಿಮ್ಮಪ್ಪನವರ ಕೋಪ ನಖಶಿಖಾಂತ ಏರಲು ಸೋಮವಾರ ಪ್ರೇರಣೆ ನೀಡಿದ್ದು ಜೆಡಿಎಸ್ ನ ಎಂ.ಟಿ. ಕೃಷ್ಣಪ್ಪ ಬಜೆಟ್ ಮೇಲಿನ ಚರ್ಚೆಯಲ್ಲಿ ನರೆಗಾ ವೈಫಲ್ಯಗಳ ಬಗ್ಗೆ ಮಾಡಿದ ಪ್ರಸ್ತಾಪ. ‘ರಾಜ್ಯದಲ್ಲಿ ಬರ ಬಂದಿದೆ. ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಬೆಳೆ ಕಳೆದುಕೊಂಡ ರೈತರಿಗೆ ಕೇಂದ್ರ ಸರಕಾರದ ಪರಿಹಾರ ತಲುಪದೆ ವಾಪಾಸಾಗಲು ರಾಜ್ಯ ಸರಕಾರದ ವೈಫಲ್ಯವೇ ಕಾರಣ. ಜನರ ಸಮಸ್ಯೆ ಸಚಿವರಿಗೆ ಕಾಣಿಸುತ್ತಿಲ್ಲ. ಅವರ ಕಣ್ಣಿಗೇನಾದರೂ ಪೊರೆ ಬಂದಿದೆಯೇ? ಸರಕಾರ ಏನಾದರೂ ಸತ್ತು ಹೋಗಿದೆಯೇ’ ಎಂದು ಪ್ರಶ್ನಿಸಿದ್ದು ಸ್ಪೀಕರ್ ಅವರ ಮನಸ್ಸನ್ನು ಕಲಕಿತು. ವ್ಯವಸ್ಥೆ ಬಗ್ಗೆ ಕೋಪವನ್ನೂ ತರಿಸಿತು. ತರುವಾಯ ಅದು ಶಾಸಕರತ್ತ ತಿರುಗಿತು.

ಸಿದ್ದರಾಮಯ್ಯನವರ ಸಮ್ಮುಖದಲ್ಲೇ ಶಾಸಕರತ್ತ ಕೈ ತೋರಿದ ತಿಮ್ಮಪ್ಪನವರು, ‘ಅಧಿಕಾರಿಗಳು ಚಟ್ಟಿ (ಅಪ್ಪಚ್ಚಿ ಅದವರಂತೆ) ಕುಳಿತಿದ್ದಾರೆ. ಮಂತ್ರಿಗಳು ಅವರಿಂದ ಸರಿಯಾಗಿ ಕೆಲಸ ಮಾಡಿಸುತ್ತಿಲ್ಲ. ಈ ಸರಕಾರಕ್ಕಂತೂ ಜನರ ಹಕ್ಕಿನ ಬಗ್ಗೆ ಪ್ರಜ್ಞೆಯೇ ಇಲ್ಲ. ಅದನ್ನ ಕೇಳಬೇಕಾದ ನಾವು ಶಾಸಕರೋ ಸತ್ತು ಹೋಗಿದ್ದೇವೆ. ದನಿ ಎತ್ತುತ್ತಿಲ್ಲ. ಕೆಲಸ ಆಗಬೇಕು ಎಂದರೆ ಎಲ್ಲಿಂದ ಆಗುತ್ತದೆ? ಕೇಂದ್ರ ಸರಕಾರದ ಅನುದಾನ ಸರಿಯಾಗಿ ಸದ್ಬಬಳಕೆ ಆದರೆ ಪ್ರತಿ ಗ್ರಾಮ ಪಂಚಾಯಿತಿಗೂ 70 ರಿಂದ 80 ಲಕ್ಷ ರುಪಾಯಿವರೆಗೆ ಹಣ ಸಿಗುತ್ತದೆ. ಆದರೆ ಯಾರಿಗೂ ಇಚ್ಛಾಶಕ್ತಿಯೇ ಇಲ್ಲವಲ್ಲ’ ಎಂದು ತರಾಟೆಗೆ ತೆಗೆದುಕೊಂಡಾಗ ಶಾಸಕರು ಪಿಳಿಪಿಳಿ ಕಣ್ಣು ಬಿಡುತ್ತಿದ್ದರು.

ಇದೇ ಸಂದರ್ಭದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕೃಷ್ಣಾ ರೆಡ್ಡಿ ಕೂಡ ನರೇಗಾ ಸಮಸ್ಯೆಗಳ ಬಗ್ಗೆ ದನಿಗೂಡಿಸಿದಾಗ ಪ್ರತಿಕ್ರಿಯಿಸಿದ ತಿಮ್ಮಪ್ಪನವರು, ‘ಸಮಸ್ಯೆ ಇರುವ ಕಡೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಮಂಡಿಸಿ, ಅದೇನಾಗುತ್ತದೋ ನೋಡಿಯೇ ಬಿಡೋಣ. ಹದಿನೈದು ದಿನದೊಳಗೆ ನರೇಗಾ ಕೆಲಸದ ಕೂಲಿ ಪಾವತಿಸದಿದ್ದರೆ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ. ಕೂಲಿ ಸಿಗದ ಒಂದತ್ತು ಮಂದಿ ಕಾರ್ಮಿಕರಿಂದ ಮಂತ್ರಿಗಳ ವಿರುದ್ಧ ದೂರು ಕೊಡಿಸಿ, ಬುದ್ಧಿ ಬರುತ್ತದೆ’ ಎಂದು ಕಾರಿದಾಗ ಸದನದಲ್ಲಿ ಇದ್ದಪದ್ದ ಮಂತ್ರಿಗಳು ಸ್ಪೀಕರ್ ಕುರ್ಚಿಗೆ ಎದುರಾಡಲಾರದೆ ಸೊಟ್ಟುಮೂತಿ ಹಾಕಿಕೊಂಡು ಕುಳಿತಿದ್ದರು.

Leave a Reply