
ಸೋಮಶೇಖರ ಪಿ. ಭದ್ರಾವತಿ
ವಾವ್… ಮತ್ತೊಮ್ಮೆ ಭಾರತದ ಅಭಿಮಾನಿಗಳನ್ನು ರೋಚಕತೆಯ ಕಡಲಲ್ಲಿ ತೇಲಿಸಿದ್ದು ಮತ್ತದೇ ಬ್ಯಾಟಿಂಗ್ ದೈತ್ಯ ವಿರಾಟ್ ಕೊಹ್ಲಿ. ಪಂದ್ಯದ ಕೊನೇವರೆಗೂ ಭಾರತೀಯ ಅಭಿಮಾನಿಗಳ ಎದೆಯುಸಿರು ಬಿಗಿಹಿಡಿಸಿದ್ದ ಪಂದ್ಯವನ್ನು ಅಮೋಘ ಗೆಲುನಿನ ದಡ ಮುಟ್ಟಿಸಿದ ಈ ಮಹಾನುಭಾವ ತನಗೇ ತಾನೇ ಸಾಟಿ ಎಂಬಂಥ ಪ್ರದರ್ಶನ ಮೆರೆದ. ಆತನ ಅಪ್ರತಿಮ ಸಾಧನೆ ನೆರವಾಗಿದ್ದು ಅತಿಥೇಯ ಭಾರತ ಟಿ20 ವಿಶ್ವಕಪ್ ನ ಅಂತಿಮ ಲೀಗ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 6 ವಿಕೆಟ್ ಅಂತರದಲ್ಲಿ ಮಣಿಸುವುದಕ್ಕೆ.
ಇಲ್ಲೊಂದು ವಿಶೇಷವಿದೆ. ಕೆಲ ದಿನಗಳಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಒಂದೇ ಚಿತ್ರಕಥೆಯನ್ನು ಪದೇ ಪದೇ ನೋಡುತ್ತಿದ್ದಾರೆ. ಅದೇನಪ್ಪಾ ಅಂದರೆ ಆರಂಭಿಕ ಬ್ಯಾಟ್ಸ್ ಮನ್ ಗಳಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ವಿಫಲರಾಗುತ್ತಾರೆ, ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾವನ್ನು ವಿರಾಟ್ ಕೊಹ್ಲಿ, ನಾಯಕ ಮಹೇಂದ್ರ ಸಿಂಗ್ ಧೋನಿ ಬಚಾವು ಮಾಡುತ್ತಾರೆ, ಗೆಲುವು ತಂದುಕೊಡುತ್ತಾರೆ. ಕೊಹ್ಲಿಯ ಆಕರ್ಷಕ ಆಟ, ದೋನಿಯಾ ಮ್ಯಾಚ್ ವಿನ್ನಿಂಗ್ ಹೊಡೆತ. ಇದು ಮಾಮೂಲಿ. ಈ ಕಥೆಯಲ್ಲಿ ಬರುವ ಒಂದೇ ಒಂದು ವ್ಯತ್ಯಾಸ ಎಂದರೆ ಆಡುವ ಮೈದಾನ ಮತ್ತು ಎದುರಾಳಿ ತಂಡ ಮಾತ್ರ. ಇವಿಷ್ಟನ್ನು ಹೊರತು ಪಡಿಸಿ ಮಿಕ್ಕಿದ್ದೆಲ್ಲವೂ ರೀಪ್ಲೇ. ಇವತ್ತಿನ ಪಂದ್ಯ ಉಭಯ ತಂಡಗಳ ಪಾಲಿಗೆ ಕೇವಲ ಲೀಗ್ ಮಟ್ಟದ್ದಾಗಿರಲಿಲ್ಲ. ಬದಲಿಗೆ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸುವ ಹಿನ್ನೆಲೆಯಲ್ಲಿ ಅಂತಿಮ ಪಂದ್ಯವೇ ಆಗಿತ್ತು.
ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿರೀಕ್ಷೆಗೂ ಮೀರಿದ ಅತ್ಯುತ್ತಮ ಆರಂಭ ಪಡೆಯಿತು (ಆರಂಭಿಕ 4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 53 ರನ್). ಅದರ ಆರ್ಭಟ ಮೆರೆದಿರುವ ಸಂದರ್ಭದಲ್ಲೇ ಭಾರತೀಯ ಬೌಲರ್ ಗಳ ಹೋರಾಟ ಆಸ್ಟ್ರೇಲಿಯಾ ಎಗರಾಟಕ್ಕೆ ಮೂಗುದಾರ ಹಾಕಿತು. ಪರಿಣಾಮ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 6 ವಿಕೆಟ್ ಗೆ 160 ರನ್ ಸಂಪಾದಿಸಿತು. ಈ ಮೊತ್ತ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲಿ ಮತ್ತದೇ ನಿರಾಸೆ. ಎಂದಿನಂತೆ ಶಿಖರ್ ಧವನ್, ರೋಹಿತ್ ಶರ್ಮಾ ಬಂದಷ್ಟೇ ವೇಗವಾಗಿ ಪೆವಿಲಿಯನ್ ಕಡೆ ನಡೆದರೆ, ಮಿಸ್ಟರ್ ಡಿಪೆಂಡಬಲ್ ಎಂದೆನಿಸಿಕೊಂಡಿರುವ ಕೊಹ್ಲಿ ಭಾರತವನ್ನು ಗೆಲುವಿನ ಕಡೆ ನಡೆಸಿದರು. ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯನ್ನು ಹೆಗಲ ಮೇಲೆ ಹೊತ್ತು ಸಾಗಿದ ವಿರಾಟ್ ಕೊಹ್ಲಿ ಎದುರಾಳಿ ತಂಡ ಯಾವುದೇ ಇರಲಿ, ತನ್ನ ತಂಡ ಎಂತಹುದೇ ಕಷ್ಪದಲ್ಲಿರಲಿ, ಅದನ್ನು ದಡ ಮುಟ್ಟಿಸುವುದು ತನ್ನ ಕರ್ತವ್ಯ ಎಂಬಂತೆ ಆಡಿದರು. ಅದು ಬರೀ ಆಟವಲ್ಲ, ಸೊಗಸಾಟ ಆಟ, ಜವಾಬ್ದಾರಿಯುತ ಆಟ. ನೋಡುವವರ ಕಣ್ಣಿಗೆ ದೃಷ್ಟಿ ಆಗಬೇಕು ಅನ್ನುವ ರೀತಿಯಲ್ಲಿ.
ಆರಂಭದಲ್ಲಿ ಮೂವರು ಬ್ಯಾಟ್ಸ್ ಮನ್ ಗಳೂ ಗೂಡು ಸೇರಿದ ನಂತರ ಯುವರಾಜ್ ಜತೆ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತ ಕೊಹ್ಲಿ, ಕಾಲು ಉಳುಕಿಸಿಕೊಂಡ ಯುವರಾಜ್ ಜತೆ ಸಂದರ್ಭಕ್ಕೆ ತಕ್ಕಂತೆ ಆಡಿದರು. ಯುವರಾಜ್ ಆಟದ ಕ್ರಮ ಅನುಸರಿಸುತ್ತಾ, ಯುವಿ ನಿರ್ಗಮನದ ನಂತರ ಧೋನಿಯೊಂದಿಗೆ ರನ್ ಕದಿಯುತ್ತಾ, ನಂತರ ಒತ್ತಡಕ್ಕೆ ಅನುಗುಣವಾಗಿ ಆರ್ಭಟ ಮೆರೆದದ್ದು ಅದ್ಭುತ. ಅಂತಿಮ ಮೂರು ಓವರ್ ಗಳಲ್ಲಿ 39 ರನ್ ಬೇಕಿದ್ದಾಗ ಕಣ್ಮುಚ್ಚಿ ಬಿಡುವುದರೊಳಗೆ ಬೌಂಡರಿಗಳ ಮಳೆ ಸುರಿಸಿ ತಂಡವನ್ನು ಗೆಲವಿನ ಹೊಸ್ತಿಲಿಗೆ ತಂದು ನಿಲ್ಲಿಸಿದ ಕೊಹ್ಲಿಗೆ ಕೊಹ್ಲಿಯೇ ಸಾಟಿ.
ಈ ಪಂದ್ಯದಲ್ಲಿ ಕೊಹ್ಲಿಯ ಬ್ಯಾಟಿಂಗ್ ಅವರೊಬ್ಬ ಪ್ರಸಕ್ತ ತಲೆ ಮಾರಿನ ವಿಶ್ವದ ಶ್ರೇಷ್ಠ ಕ್ರಿಕೆಟಿಗ ಎಂಬುದನ್ನು ಮತ್ತೇ ಸಾಬೀತು ಮಾಡಿದೆ. ಹಿಂದೆ ಒಂದು ಕಾಲವಿತ್ತು. ಚೇಸಿಂಗ್ ಅಂದ್ರೆ ಭಾರತಕ್ಕೆ ನುಂಗಲಾರದ ತುತ್ತು ಅಂತ. ಈಗದು ಸಂಪೂರ್ಣ ಬದಲಾಗಿದೆ. ಏಕದಿನವಿರಲಿ, ಟಿ20 ಆಗಿರಲಿ ಚೇಸಿಂಗ್ ಅಂದ್ರೆ ಭಾರತಕ್ಕೆ ನೀರು ಕುಡಿದಷ್ಟು ಸುಲಭ ಎಂಬುದನ್ನು ಶೃತಪಡಿಸುವಲ್ಲಿ ಕೊಹ್ಲಿ ಕೊಡುಗೆ ಅಪಾರ.
ಆದರೆ ಇಲ್ಲೊಂದು ವಿಚಾರ. ಭಾರತ ಗೆಲ್ತು ಎಂಬುದೇನೊ ಸರಿ. ಆದ್ರೆ ಈ ಗೆಲವಿನ ಸಂಭ್ರಮದಲ್ಲಿ ಟೀಂ ಇಂಡಿಯಾ ತನ್ನು ದೌರ್ಬಲ್ಯಗಳನ್ನು ಮರೆಯುವಂತಿಲ್ಲ. ಆರಂಭಿಕ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಸತತ ವೈಫಲ್ಯ ಟೀಂ ಇಂಡಿಯಾಗೆ ಅವರ ಅವಶ್ಯಕತೆ ಇದೆಯೇ ಎಂಬಷ್ಟರ ಮಟ್ಟಿಗೆ ಪ್ರಶ್ನೆಗಳನ್ನು ಮುಂದಿಟ್ಟಿದೆ. ಎಲ್ಲಾ ದಿನ ಒಂದೇ ಆಗಿರೋದಿಲ್ಲ. ಯಾವಾಗಲೂ ವಿರಾಟ್ ಕೊಹ್ಲಿನೇ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡಲು ಸಾಧ್ಯವಿಲ್ಲ. ಪ್ರತಿ ಪಂದ್ಯವನ್ನು ಕೊಹ್ಲಿ, ಯುವರಾಜ್, ಧೋನಿ ಗೆಲ್ಲಿಸಬೇಕು ಅಂತ ನಿರೀಕ್ಷೆ ಮಾಡುವುದು ತರವಲ್ಲ.
ಇರಲಿ, ಭಾರತ ಅಂತಿಮ ನಾಲ್ಕರ ಘಟ್ಟ ತಲುಪಿದ್ದಾಗಿದೆ. ಪ್ರಶಸ್ತಿಗೆ ಮುತ್ತಿಕ್ಕಲು ಬಾಕಿ ಇರುವುದು ಎರಡೇ ಹೆಜ್ಜೆ. ಮಾರ್ಚ್ 31 ರಂದು ಮುಂಬೈನಲ್ಲಿ ನಡೆಯಲಿರುವ ಸೆಮಿಫೈನಲ್ ಕಾದಾಟದಲ್ಲಿ ಭಾರತಕ್ಕೆ ದೈತ್ಯರ ಪಡೆ ಎಂದೇ ಖ್ಯಾತಿ ಹೊಂದಿರುವ ವೆಸ್ಟ್ ಇಂಡೀಸ್ ಸವಾಲು ಎದುರಾಗಿದೆ. ಈ ಪಂದ್ಯ ಗೆಲ್ಲಬೇಕು ಎಂದರೆ ಟೀಂ ಇಂಡಿಯಾ ತನ್ನ ನ್ಯೂನತೆಗಳನ್ನು ಮೀರಬೇಕು. ನೋಡೋಣ…