ಸುದ್ದಿಸಂತೆ: ಪಠಾಣ್ ಕೋಟ್ ನಲ್ಲಿ ಪಾಕ್ ಪ್ರವೇಶ- ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಸರಿಯೇನು, ದೇಶಘೋಷದ ಬಗ್ಗೆ ಭಾಗವತರು ಹೇಳಿದ್ದೇನು?

8994 ಕೋಟಿ ರುಪಾಯಿಗಳ ಬಿಬಿಎಂಪಿ ಬಜೆಟ್ ಸೋಮವಾರ ಮಂಡನೆಯಾಯಿತು. ನಗರದ ಮುಖ್ಯ ಸಮಸ್ಯೆ ಕಸ ವಿಲೇವಾರಿಗೆ 636 ಕೋಟಿ ನಿಗದಿ. ಉಳಿದಂತೆ ಗಿಡ ನೆಡುವುದು, ಪಾರ್ಕ್, ರಸ್ತೆ ಕಾಮಗಾರಿ ಇತ್ಯಾದಿಗಳ ಪ್ರಸ್ತಾಪವಿದೆ.

ಪಾಕ್ ತನಿಖಾ ತಂಡ ವಾಯು ನೆಲೆ ಭೇಟಿಗೆ ವಿರೋಧ, ಸರ್ಕಾರ ಸಮರ್ಥನೆ

ಕಳೆದ ಜನವರಿಯಲ್ಲಿ ಪಠಾಣ್ ಕೋಟ್ ನಲ್ಲಿನ ಭಾರತೀಯ ವಾಯು ನೆಲೆ ಮೇಲಿನ ಉಗ್ರರ ದಾಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಪಾಕಿಸ್ತಾನ ಜಂಟಿ ತನಿಖಾ ತಂಡಕ್ಕೆ ಅವಕಾಶ ನೀಡಿದ್ದು ಸರಿಯೇ ಎಂಬ ಪ್ರಶ್ನೆ ಕೇಂದ್ರ ಸರ್ಕಾರವನ್ನು ಚುಚ್ಚಿತು.

ಮುಂಬೈ ದಾಳಿಗೆ ಸಂಬಂಧಿಸಿದಂತೆ ಕಂತೆ ಕಂತೆ ಆಧಾರಗಳನ್ನು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದವರು ಈಗ ಪಠಾಣ್ ಕೋಠ್ ದಾಳಿಯ ತನಿಖೆ ನಡೆಸುವರೇ? ಭಾರತೀಯ ವಾಯು ನೆಲೆಗೆ ಪಾಕಿಸ್ತಾನ ತಂಡವನ್ನು ಬಿಟ್ಟುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಇಂಥ ಪ್ರಶ್ನೆಗಳೆಲ್ಲ ಪ್ರತಿಪಕ್ಷದಿಂದ ವ್ಯಕ್ತವಾದವು.

ಇದಕ್ಕೆ ಸ್ಪಷ್ಟನೆ ನೀಡಿರುವ ಸರ್ಕಾರ, ಪಾಕಿಸ್ತಾನ ತನಿಖಾ ತಂಡ ಸಂಪೂರ್ಣವಾಗಿ ವಾಯು ನೆಲೆ ಪ್ರವೇಶಿಸಲು ಅವಕಾಶ ನೀಡಿಲ್ಲ. ಕೇವಲ ದಾಳಿಯಾದ ಪ್ರದೇಶಕ್ಕೆ ಮಾತ್ರ ಈ ತಂಡ ಭೇಟಿ ನೀಡಿದೆ. ಉಳಿದ ಪ್ರದೇಶಗಳಲ್ಲಿ ನಿರ್ಬಂಧ ಹೇರಲಾಗಿದೆ. ತನಿಖೆಗೆ ಸಹಕಾರ ನೀಡದಿದ್ದರೆ, ತನಿಖೆಯ ವೈಫಲ್ಯವನ್ನು ರಕ್ಷಣಾ ಇಲಾಖೆ ತಲೆಗೆ ಕಟ್ಟಲಾಗುತ್ತದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕರ್ ಸಮರ್ಥಿಸಿಕೊಂಡಿದ್ದಾರೆ.

ಉತ್ತರಖಾಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ: ಜೇಟ್ಲಿ, ವೆಂಕಯ್ಯ ಸಮರ್ಥನೆ

ರಾಜಕೀಯ ಅಸ್ಥಿರತೆಯ ಹಿನ್ನೆಲೆಯಲ್ಲಿ ಕೇಂದ್ರ ಶಿಫಾರಸಿನ ಮೇರೆಗೆ ಉತ್ತರಖಾಂಡದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಅಂಕಿತ ಬಿದ್ದಿರುವುದನ್ನು ಕಾಂಗ್ರೆಸ್ ವಿರೋಧಿಸಿದೆ. ಈ ನಿರ್ಧಾರವನ್ನು ಪ್ರಜಾಪ್ರಭುತ್ವದ ಕೊಲೆ ಎಂದಿರುವ ಕಾಂಗ್ರೆಸ್ ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುವುದಾಗಿಯೂ ಪ್ರಕಟಿಸಿದೆ.

ಆದರೆ ಈ ನಿರ್ಧಾರ ಸಮರ್ಥಿಸಿಕೊಂಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ‘ಶಾಸಕರ ತೀವ್ರ ವಿರೋಧದ ನಡುವೆಯೂ ಬಜೆಟ್ ಗೆ ಮನ್ನಣೆ ನೀಡಿ, ಬಂಡಾಯವೆದ್ದ ಕಾಂಗ್ರೆಸ್ ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸುವ ಮೂಲಕ, ಉತ್ತರಖಾಂಡದ ವಿಧಾನಸಭೆ ಸ್ಪೀಕರ್ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.

‘ಈವರೆಗೂ 91 ಬಾರಿ ಕಾಂಗ್ರೆಸೇತರ ಸರ್ಕಾರಗಳನ್ನು ಉರುಳಿಸಿರುವ ಕಾಂಗ್ರೆಸ್ ಹಾಗೂ ಅದರ ಹಿಂಬಾಲಕರು, ರಾಷ್ಟ್ರಪತಿ ಆಳ್ವಿಕೆಯ ಸಂವಿಧಾನಿಕ ನಿರ್ಧಾರವನ್ನು ಪ್ರಶ್ನಿಸುತ್ತಿದ್ದಾರೆ. ಇದೇ ಕೆಲಸವನ್ನು ಕಾಂಗ್ರೆಸ್ ಮಾಡಿದಾಗ ಪ್ರಜಾಪ್ರಭುತ್ವ ರಕ್ಷಣೆ ಎಂದು ಹೇಳಿಕೊಳ್ಳುತ್ತಿತ್ತು. ಈಗ ನಾವು ಮಾಡಿದಾಗ ಅದು ಪ್ರಜಾಪ್ರಭುತ್ವದ ಕೊಲೆಯಾಗಿಬಿಟ್ಟಿದೆ. ಇದು ಪ್ರೇತಗಳು ಪವಿತ್ರ ಧರ್ಮ ಗ್ರಂಥಗಳನ್ನು ಪಠಿಸಿದಂತಿದೆ’ ಎಂದು ಕಾಂಗ್ರೆಸ್ ವಿರುದ್ಧ ವೆಂಕಯ್ಯ ನಾಯ್ಡು ಹರಿಹಾಯ್ದಿದ್ದಾರೆ.

ಭಾರತ್ ಮಾತಾ ಕೀ ಜೈ ಎನ್ನಲು ಒತ್ತಡ ಹೇರುವ ಅವಶ್ಯಕತೆ ಇಲ್ಲ: ಮೋಹನ್ ಭಾಗವತ್

“ಭಾರತ್ ಮಾತಾ ಕೀ ಜೈ”  ಎಂದು ಹಾಡುವಂತೆ ಯಾರ ಮೇಲೂ ಒತ್ತಡ ಹೇರುವ ಅವಶ್ಯಕತೆ ಇಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನುಡಿದಿದ್ದಾರೆ. ಈ ಮೂಲಕ, ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಮೂಲಕವಷ್ಟೇ ದೇಶಪ್ರೇಮ ಸಾಬೀತುಮಾಡುವಂತೆ ಆರೆಸ್ಸೆಸ್ ಒತ್ತಡ ಹೇರುತ್ತಿದೆ ಎಂದು ವ್ಯಕ್ತವಾಗಿದ್ದ ಆಕ್ಷೇಪಗಳನ್ನು ತಣ್ಣಗಾಗಿಸಿದಂತಾಗಿದೆ.

‘ದೇಶವಷ್ಟೇ ಅಲ್ಲ, ಜಗತ್ತೇ ಭಾರತ್ ಮಾತಾ ಕೀ ಜೈ ಎನ್ನುವಂತಾಗಬೇಕು. ಆದರೆ ಅದು ಸ್ವಯಂ ಪ್ರೇರಣೆಯಿಂದ ಆಗಬೇಕು. ನಮ್ಮ ಕಾರ್ಯ ಮತ್ತು ಜೀವನ ವಿಧಾನದ ಮೂಲಕ ಜಗತ್ತಿಗೇ ಮಾದರಿಯಾಗಬೇಕಿದೆ. ಅದಕ್ಕಾಗಿ ಯಾರ ಜತೆ ಯುದ್ಧ ಮಾಡಬೇಕಿಲ್ಲ, ಇನ್ಯಾರನ್ನೂ ಸೋಲಿಸಬೇಕಿಲ್ಲ’ ಎಂದು ಸೌಮ್ಯರಾಗ ಹಾಡಿದ್ದಾರೆ ಭಾಗವತ್.

ಅಮಿತಾಬ್ ಗೆ ರಾಷ್ಟ್ರ ಪ್ರಶಸ್ತಿ, ಕನ್ನಡದ ಅತ್ಯುತ್ತಮ ಚಿತ್ರವಾಗಿ ತಿಥಿ ಆಯ್ಕೆ

ದೇಶದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ಪಟ್ಟಿ ಸೋಮವಾರ ಬಿಡುಗಡೆಯಾಗಿದೆ. ಬಾಲಿವುಡ್ ದಂತಕತೆ ಅಮಿತಾಬ್ ಬಚ್ಚನ್ ಪೀಕು ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕೆ ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇನ್ನು ಕನ್ನಡದ ಅತ್ಯುತ್ತಮ ಚಿತ್ರವಾಗಿ ತಿಥಿಗೆ ಪುರಸ್ಕಾರ ಲಭಿಸಿದೆ.

ಕಳೆದ ವರ್ಷದ ಬಹು ಯಶಸ್ವಿ ಚಿತ್ರ ಬಾಹುಬಲಿಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಬಂದಿದೆ. ತನು ವೆಡ್ಸ್ ಮನು ಚಿತ್ರದಲ್ಲಿನ ಅಭಿನಯಕ್ಕೆ ಕಂಗನಾ ರಾನಾವತ್ ಗೆ ಅತ್ಯುತ್ತಮ ನಟಿ, ಬಾಜಿರಾವ್ ಮಸ್ತಾನಿ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ.

ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪ್ರಮುಖ ವಿಜೇತರ ಪಟ್ಟಿ ಹೀಗಿದೆ:

ಅತ್ಯುತ್ತಮ ಹೊಸಮುಖ ನಿರ್ದೇಶಕ ಪ್ರಶಸ್ತಿ: ನೀರಜ್ ಘ್ಯಾವನ್ (ಮಸಾನ್)

ಅತ್ಯುತ್ತಮ ಮನರಂಜನೆಯ ಚಿತ್ರ: ಬಜರಂಗಿ ಭಾಯಿಜಾನ್

ಅತ್ಯುತ್ತಮ ಸಾಮಾಜಿಕ ವಿಷಯದ ಚಿತ್ರ: ನಿರ್ಣಾಯಕಮ್

ಅತ್ಯುತ್ತಮ ಪೋಷಕ ನಟ: ಸಮುತಿರಕಣಿ (ವಿಸರಣೈ)

ಅತ್ಯುತ್ತಮ ಪೋಷಕ ನಟಿ: ತನ್ವಿ ಅಜ್ಮಿ (ಬಾಜಿರಾವ್ ಮಸ್ತಾನಿ)

ಅತ್ಯುತ್ತಮ ಬಾಲ ಪ್ರತಿಭೆ: ಗೌರವ್ ಮೆನನ್ (ಬೆನ್)

ಅತ್ಯುತ್ತಮ ಹಿನ್ನಲೆ ಗಾಯಕಿ: ಮೊನಾಲಿ ಠಾಕೂರ್ (ದಮ್ ಲಗಾಕೇ ಐಸಾ)

ಅತ್ಯುತ್ತಮ ಸಿನಿಮಾಟೋಗ್ರಫಿ: ಸುದೀಪ್ ಚಟರ್ಜಿ (ಬಾಯಿರಾವ್ ಮಸ್ತಾನಿ)

ಅತ್ಯುತ್ತಮ ಚಿತ್ರಕಥೆ: ವಿಶಾಲ್ ಭಾರದ್ವಾಜ್ (ತಲ್ವಾರ್)

ಅತ್ಯುತ್ತಮ ಸಂಪಾದನೆ: ದಿವಂಗತ ಕಿಶೋರ್ ಟಿ.ಇ (ವಿಸರಣೈ)

ಅತ್ಯುತ್ತಮ ಸಂಗೀತ: ಎಂ.ಜಯಚಂದ್ರನ್ (ಎನ್ನು ನಿಂಟೆ ಮೊಯ್ದೀನ್)

ಅತ್ಯುತ್ತಮ ಸಂಗೀತ ನಿರ್ದೇಶಕ: ಇಳಯರಾಜ (ಥಾರೈ ಥಪ್ಪಟ್ಟೈ)

ಅತ್ಯುತ್ತಮ ಸಾಹಿತ್ಯ: ವರುಣ್ ಗ್ರೋವರ್ (ಮೊಹ್ ಮೊಹ್ ಕೆ ದಾಗೆ- ದಮ್ ಲಗಾ ಕೆ ಹೈಸಾ)

ಅತ್ಯುತ್ತಮ ನೃತ್ಯ ಸಂಯೋಜನೆ: ರೆಮೊ ಡಿಸೋಜಾ (ಬಾಜಿರಾವ್ ಮಸ್ತಾನಿ)

Leave a Reply