ತಲೆಗೆ ಹತ್ತಿದ ತಿಕ್ಕಲು ವೈಯಕ್ತಿಕದ್ದಾದರೂ, ಜಿಹಾದಿನದ್ದಾದರೂ ಜಗತ್ತಿಗೆ ದೊರಕುತ್ತಿರೋದು ಮಾತ್ರ ಆತಂಕದ ಉಡುಗೊರೆಯೇ!

ಡಿಜಿಟಲ್ ಕನ್ನಡ ಟೀಮ್

ಬ್ರುಸೆಲ್ಸ್ ದಾಳಿ ನೆನಪಲ್ಲಿ ಜಗತ್ತು ಆತಂಕಿತವಾಗಿರುವಾಗಲೇ ಮಂಗಳವಾರ ಇನ್ನೊಂದು ಆತಂಕ ತೆರೆದುಕೊಂಡಿತು.

ಈಜಿಪ್ತ್ ನ ಕೈರೋದಿಂದ ಅಲೆಕ್ಸಾಂಡ್ರಿಯಾಕ್ಕೆ ಪ್ರಯಾಣಿಸುತ್ತಿದ್ದ ವಿಮಾನ ಅಪಹರಣವಾಗಿದ್ದು, ಸೈಪ್ರಸ್ ನಲ್ಲಿ ಇಳಿಸಲಾಗಿದೆ. ಈಗ ದೊರೆತಿರುವ ಚಿತ್ರಣದ ಪ್ರಕಾರ ಅಪಹರಣಕಾರ ತನ್ನ ಮಾಜಿ ಹೆಂಡತಿ ಜತೆ ಎಂಥದೋ ವ್ಯವಹಾರ ಪೂರೈಸಿಕೊಳ್ಳೋದಕ್ಕೆ ಈ ಕ್ರಮಕ್ಕೆ ಮುಂದಾಗಿದ್ದಾನೆ. ಹೀಗಾಗಿ ಇಲ್ಲಿ ಉಗ್ರ ಸಂಘಟನೆಯ ಆಯಾಮಗಳೇನಿಲ್ಲ.

tw1

ಹಾಗೆಂದೇ ಆತ, ವಿಮಾನದ ಸಿಬ್ಬಂದಿ ಹಾಗೂ ಕೆಲವು ವಿದೇಶಿಯರನ್ನು ಹೊರತುಪಡಿಸಿ ಆತ ಉಳಿದೆಲ್ಲರನ್ನೂ ಕೆಲವೇ ಕ್ಷಣದಲ್ಲಿ ಬಿಡುಗಡೆಗೊಳಿಸಿದ್ದಿರಬಹುದು.

ಆದರೆ…

ಬೆಲ್ಜಿಯಂ ಸ್ಫೋಟ, ಪ್ಯಾರಿಸ್ ದಾಳಿ ಹೀಗೆಲ್ಲ ಉಗ್ರ ವಿಧ್ವಂಸಗಳು ದಟ್ಟವಾಗುತ್ತಿರುವಾಗ ಈ ವಿಮಾನಾಪಹರಣವೂ ಭೀತಿ ಬಿತ್ತುವ ಒಂದು ಭಾಗವಾಗಿ ಅದಾಗಲೇ ಯಶಸ್ಸು ಸಾಧಿಸಿಯಾಯಿತು.

ಇದಕ್ಕೂ ಒಂದು ದಿನ ಮೊದಲಷ್ಟೇ ಉಗ್ರವಾದದ ನಿಖರ ಕಂಪನ ನಮ್ಮನ್ನು ತಾಗಿತ್ತು. ಬ್ರುಸೆಲ್ಸ್ ದಾಳಿಯಲ್ಲಿ ಮೃತರಾದವರ ಪೈಕಿ ಇನ್ಫೊಸಿಸ್ ಉದ್ಯೋಗಿ ರಾಘವೇಂದ್ರನ್ ಗಣೇಶನ್ ಸಹ ಒಬ್ಬರು ಅಂತ ದೃಢಪಡುವ ಮೂಲಕ, ‘ಇಸ್ಲಾಂ ಉಗ್ರರು ಜಗತ್ತಿನ ವಿರುದ್ಧ ಯುದ್ಧ ಸಾರಿದ್ದಾರೆ’ ಎಂಬುದರ ನಿಜವಾದ ಅರ್ಥ ಎಲ್ಲರಿಗೂ ಆಗುತ್ತಿದೆ.

raghavendra
ರಾಘವೇಂದ್ರ ಗಣೇಶನ್

ಇವೆಲ್ಲದರಿಂದ ಪಕ್ಕಾ ಆಗುತ್ತಿರುವ ಸಂಗತಿ ಎಂದರೆ ಜಗತ್ತು ಶಾಂತಿಕಾಲದಲ್ಲಿದೆ ಅಂತ ನಂಬಿಕೊಂಡರೆ ಅದು ಮೂರ್ಖತನ. ವಿಶ್ವಯುದ್ಧದ ರೀತಿಯಲ್ಲಿ ಟ್ಯಾಂಕರುಗಳು ಉರುಳಿಕೊಂಡು, ಯುದ್ಧ ವಿಮಾನಗಳು ಹಾರಾಡಿಕೊಂಡು ರಣರಂಗ ಸೃಷ್ಟಿಯಾಗದೇ ಇದ್ದಿರಬಹುದು. ಆದರೆ ನಿಜಕ್ಕೂ ವಿಶ್ವಯುದ್ಧದ ಮತ್ತೊಂದು ಅಧ್ಯಾಯ ಶುರುವಾಗಿಹೋಗಿದೆ. ನಾವದಕ್ಕೆ ಸಾಕ್ಷಿಯಾಗುತ್ತಿದ್ದೇವೆ.

ಈಗ ಯುದ್ಧವೆಂದರೆ ಜಮ್ಮು-ಕಾಶ್ಮೀರದಲ್ಲಿ ಮುಗ್ಧರ ಹತ್ಯೆ, ಅಸ್ಸಾಮಿನಲ್ಲಿ ಬಾಂಬ್ ಸ್ಫೋಟ, ಹೈದರಾಬಾದ್ ನಲ್ಲಿ ಬಾಂಬ್… ಇಂಥ ಶೀರ್ಷಿಕೆಗಳಿಗೆ ಸೀಮಿತವಲ್ಲ. ಅದು ಎಲ್ಲರ ಮನೆ ಬಾಗಿಲಿಗೆ ಬಂದಿದೆ. ಅದರರ್ಥ ವೈರಿ ನಿಮ್ಮ ಬಾಗಿಲಲ್ಲೇ ಬಾಂಬ್ ಇಟ್ಟಿದ್ದಾನೆ ಎಂದಲ್ಲ… ಬದಲಿಗೆ ಹೊಸ್ತಿಲಲ್ಲಿ ಬಾಂಬ್ ಕಂಡಷ್ಟೇ ಆತಂಕವನ್ನು ಅನುದಿನ ಎದೆಯಲ್ಲಿರಿಸುವುದಕ್ಕೆ ಸಫಲನಾಗುತ್ತಿದ್ದಾನೆ. ಇಲ್ಲಿ ಜೀವನಷ್ಟ ಮಾತ್ರವೇ ಲೆಕ್ಕಕ್ಕೆ ಬರುವಂಥದ್ದಾಗಬೇಕಿಲ್ಲ. ಪ್ರತಿ ಜೀವದೊಳಗೆ ಉಗ್ರವಾದ ಹುಟ್ಟಿಸಿರುವ ಕಂಪನ ಜಗತ್ತಿನ ಬದುಕನ್ನು ಬೇರೆಯದೇ ಬಗೆಯಲ್ಲಿ ಪ್ರಭಾವಿಸಲಿದೆ.

ದಶಕಗಳ ಹಿಂದೆ ಅಮೆರಿಕಕ್ಕೋ, ಯುರೋಪಿಗೋ ಹೋಗಿ ಸೆಟ್ಲ್ ಆಗ್ತೀನಿ ಎಂಬ ಮಾತು ತುಂಬ ಆಕರ್ಷಣೀಯವಾಗಿತ್ತು. ಈಗ ನಿಧಾನಕ್ಕೆ ಎಲ್ಲರೂ ಅರಿತುಕೊಳ್ಳುತ್ತಿರುವುದು ಯಾವ ದೇಶವೂ ಸುರಕ್ಷಿತ ಅಂತಲ್ಲ. ಅದೊಂದು ಮಿಥ್.

ಇನ್ನೊಂದೆಡೆ ಪಶ್ಚಿಮದ ರಾಷ್ಟ್ರಗಳಿಗೂ ಲೇಬರ್ ಫೋರ್ಸ್ ಅನ್ನು ಈ ಮೊದಲಿನಂತೆ ಒಳಬಿಟ್ಟುಕೊಳ್ಳುವುದರ ಬಗ್ಗೆ ಆತಂಕಗಳು ಹುಟ್ಟಿವೆ. ಈವರೆಗೆ ಬಂಡವಾಳ ಕೇಂದ್ರಿತ ಅರ್ಥ ವ್ಯವಸ್ಥೆ ಅಂದರೆ ಬಂಡವಾಳದ ಹರಿವಿಗೆ ಗಡಿಗಳಿಲ್ಲ, ಹಾಗೆಯೇ ಸಂಪತ್ತು ಸೃಷ್ಟಿಗೆ ಕಾರಣವಾಗುವ ಉದ್ಯೋಗಿ (ಕಾರ್ಮಿಕ) ಹರಿವಿಗೆ ಸಹ ತಡೆ ಇರಬಾರದು ಎನ್ನುವುದಾಗಿತ್ತು. ಆದರೆ ಮುಂಬರುವ ದಿನಗಳಲ್ಲಿ ಬಂಡವಾಳವಷ್ಟೇ ಮುಕ್ತ ಹರಿವನ್ನು ಕಾಣುವ, ಲೇಬರ್ ಆಯಾ ದೇಶದಲ್ಲೇ ಇದ್ದು ಕೆಲಸ ಮಾಡಿಕೊಡಬೇಕಾದ ಅರ್ಥವ್ಯವಸ್ಥೆ ರೂಪುಗೊಳ್ಳುತ್ತದೆ. ಹೀಗಾದಾಗ ತಂತ್ರಜ್ಞಾನ ಕುಶಲ ವರ್ಗಕ್ಕೆ ಮಾತ್ರವೇ ಈ ಅರ್ಥವ್ಯವಸ್ಥೆಯಲ್ಲಿ ಭಾಗಿಯಾಗುವ ಅವಕಾಶವಿರುತ್ತದೆ.

ಅದು ಉಗ್ರನೇ ಆಗಿರಲಿ, ಇನ್ಯಾವುದೋ ತಲೆಕೆಟ್ಟವನು ಮಾಡಿದ್ದ ಅಪಹರಣವಾಗಿರಲಿ ಇದು ಹಲವು ಉಗ್ರ ಸ್ಫೋಟಗಳ ನಂತರ ಜಗತ್ತಿನ ಮೇಲೆ ಕವಿದಿರುವ ಆತಂಕವನ್ನು ಗಟ್ಟಿಗೊಳಿಸುವಂಥ ವಿದ್ಯಮಾನವೇ. ಇವೆಲ್ಲವೂ ಪ್ರವಾಸೋದ್ಯಮ, ಜನರ ಓಡಾಟ ಎಲ್ಲವಕ್ಕೂ ತಡೆ ನಿರ್ಮಿಸಿಬಿಡುತ್ತವೆ. ಜಗತ್ತಿನ ಮುಕ್ ಆರ್ಥಿಕ ವ್ಯವಸ್ಥೆ ತೀರ ಮುಚ್ಚಿಕೊಳ್ಳಲೂ ಆಗದೇ, ಮೊದಲಿನಂತೆ ಮುಕ್ತತೆ- ಚಲನಶೀಲತೆ ಇಟ್ಟುಕೊಳ್ಳಲೂ ಆಗದಂತಹ ಪರಿಸ್ಥಿತಿಯೊಂದು ಆಗಲೇ ನಿರ್ಮಾಣವಾಗುತ್ತಿದೆ. ಜಾಗತೀಕರಣದ ಹಲವು ಲಾಭಗಳನ್ನು ಪಡೆದುಕೊಂಡಿರುವ ನಾವೆಲ್ಲ ಎದುರಿಸಲೇಬೇಕಿರುವ ಸವಾಲು ಇದು.

ಇಂದಿನ ಈಜಿಪ್ತ್ ಅಪಹರಣ ವಿದ್ಯಮಾನವನ್ನೇ ಗಮನಿಸಿ. ಈ ಪ್ರಚಾರಯುಗದಲ್ಲಿ ಅದು ಇಲ್ಲೇ ಪಕ್ಕದ ಗಲ್ಲಿಯಲ್ಲಾದ ವಿದ್ಯಮಾನದಂತೆಯೇ ನಮ್ಮನ್ನು ತಾಕುತ್ತದೆ. ಮಾಧ್ಯಮ, ಸಾಮಾಜಿಕ ಮಾಧ್ಯಮದ ಟ್ವೀಟಿಗ ಎಲ್ಲರೂ ಇವತ್ತಿನ ದಿನವನ್ನು ಈ ಆತಂಕದ ಚರ್ಚೆಯಲ್ಲೇ ಕಳೆಯುವಂಥ ಗ್ಲೋಬಲಿ ಕನೆಕ್ಟೆಡ್ ‘ಜಗದೂರಿ’ನಲ್ಲಿ ನಾವಿದ್ದೇವೆ. ನಮ್ಮ ನಾಲಗೆಗೆ ಹೆಸರು ಉಚ್ಚರಿಸಲು ಕಷ್ಟವಾಗುವ ನೆಲದಲ್ಲಿ ನಡೆದ ಯಾವ ಆತಂಕದ ವಿದ್ಯಮಾನವಾದರೂ ಇಲ್ಲಿನ ಉಳಿದೆಲ್ಲ ಸಂಭ್ರಮಗಳ ಮೇಲೆ ಅದು ಕರಿಮೋಡ ಬಿತ್ತುತ್ತದೆ. ಐಪಿಎಲ್, ರಾಜತಾಂತ್ರಿಕರ ಭೇಟಿ, ಸಾಮಾನ್ಯನೊಬ್ಬನ ವಿಮಾನ ಪ್ರಯಾಣ ಎಲ್ಲವೂ ಭದ್ರತೆಯ ಆ್ಯಂಗಲ್ಲಿನಲ್ಲಿಯೇ ಚರ್ಚೆ ಮೆತ್ತಿಸಿಕೊಂಡು ಉದ್ವೇಗಕ್ಕೆ ಕಾರಣವಾಗುತ್ತವೆ. ಅವೆಷ್ಟೋ ವಿಮಾನಗಳು ಪಥ ಬದಲಿಸಬೇಕಾಗುತ್ತದೆ.

ವೆಲ್ ಕಮ್ ಟು ಅ ನ್ಯೂ ವರ್ಲ್ಡ್ ಆರ್ಡರ್…. ಜಗತ್ತಿನ ಯಾವುದೋ ಮೂಲೆಯಲ್ಲಿ ಹೆಂಡತಿ ಮೇಲೆ ಸಿಟ್ಟು ಮಾಡಿಕೊಂಡ ಹುಚ್ಚ, ತನ್ನ ಧರ್ಮ ಉಳಿಸುತ್ತೇನೆಂದು ಬಂದೂಕು ಹಿಡಿದಿರುವ ಕ್ರೂರಹುಚ್ಚ ಎಲ್ಲರ ಭೂಮಿಕೆಗಳೂ ಇನ್ನೆಲ್ಲಿಯೇ ಆದರೂ ಅವು ಅದೇ ಸಮಯಕ್ಕೆ ನಿಮ್ಮ ಮನಸ್ಸಿನ ರಣರಂಗದಲ್ಲೂ ತೆರೆದುಕೊಳ್ಳುತ್ತವೆ.

ಇದು ವರ್ಚುವಲ್ ವಾರ್.

Leave a Reply