ಫ್ಲಿಪ್ ಕಾರ್ಟ್- ಸ್ನ್ಯಾಪ್ ಡೀಲ್ ವಾಕ್ಸಮರ, ಇಲ್ಲಿದೆ ಇ ಕಾಮರ್ಸ್ ಬಣ್ಣದ ಪುಗ್ಗಿ ಒಡೆಯಲು ಹೊರಟಿರುವುದರ ವಿವರ!

ಚೈತನ್ಯ ಹೆಗಡೆ

ಭಾರತದ ಇ ಕಾಮರ್ಸ್ ನ ಎರಡು ದೈತ್ಯ ಕಂಪನಿಗಳಾದ ಫ್ಲಿಪ್ ಕಾರ್ಟ್ ಮತ್ತು ಸ್ನ್ಯಾಪ್ ಡೀಲ್ ನಡುವೆ ಟ್ವಿಟರ್ ಕುರುಕ್ಷೇತ್ರದಲ್ಲಿ ವಾಕ್ಸಮರ ಕ್ಷಿಪಣಿಗಳು ಸಿಡಿದಿವೆ. ಫ್ಲಿಪ್ ಕಾರ್ಟ್ ನ ಸಚಿನ್ ಬನ್ಸಾಲ್ ಸ್ನ್ಯಾಪ್ ಡೀಲ್ ಗುರಿಯಾಗಿರಿಸಿಕೊಂಡು ಮೊದಲ ಏಟು ಹೊಡೆದರು. ಅದಕ್ಕೆ ಸ್ನ್ಯಾಪ್ ಡೀಲ್ ಕಡೆಯಿಂದ ಸಿಇಒ ಕುನಾಲ್ ಬಹ್ಲ್ ಅಷ್ಟೇ ಖಾರವಾಗಿ ಪ್ರತಿಕ್ರಿಯಿಸಿದರು.

ಅದೇಕೆ ಇವರ ಬಿರುನುಡಿಗಳನ್ನು ಸುದ್ದಿಯಾಗಿಸಬೇಕು ಎಂದಿರಾ? ಖಂಡಿತ ಕಾರಣವಿದೆ. ಇದು ಇಬ್ಬರು ಮುಖ್ಯಸ್ಥರ ಮಾಮೂಲಿ ಬಯ್ದಾಟವಲ್ಲ. ಬದಲಿಗೆ ಅದ್ಯಾವ ಇ ಕಾಮರ್ಸ್ ವಲಯವನ್ನು ನಾವೆಲ್ಲ ಹೊರಗೆ ನಿಂತು ಅಷ್ಟು ಬೆರಗಿನಿಂದ ನೋಡಿಕೊಂಡು ಬರುತ್ತಿದ್ದೆವೋ ಅದರ ‘ಅಸುರಕ್ಷತಾ ಭಾವ’ ಈ ರೀತಿ ಪ್ರಕಟಗೊಳ್ಳುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಇ ಕಾಮರ್ಸ್ ಕಂಪನಿಗಳು ಅಷ್ಟು ಬಿಲಿಯನ್ ಡಾಲರ್ ಹಣ ಎತ್ತಿದವಂತೆ, ಇನ್ನೊಂದಕ್ಕೆ ಇಷ್ಟು ಮಿಲಿಯನ್ ಡಾಲರ್ ಹೂಡಿಕೆ ಹರಿದುಬಂದಿದೆಯಂತೆ ಎಂಬೆಲ್ಲ ಮಾತುಗಳನ್ನು ಕೇಳುತ್ತ ಅದುವೇ ಸಕ್ಸಸ್ ಅಂತ ಬೆರಗುಗೊಳ್ಳುವ ಕಾಲ ಮುಗಿಯುತ್ತ ಬಂದಿದೆ. ಇದೀಗ ಹಣ ಹಿಂತಿರುಗುವ ಕಷ್ಟದ ವಾಸ್ತವ ಎದುರಾಗಿ ಅವು ಬಾಯ್ ಬಾಯ್ ಬಿಡುತ್ತಿವೆ. ಉತ್ಸಾಹದಿಂದ ಹಣ ಹಾಕಿದವರೆಲ್ಲ ವಾಪಸು ಮೊತ್ತ ಎಲ್ಲಪ್ಪಾ ಅಂತ ಕೇಳುತ್ತಿದ್ದಾರೆ. ಇ ಕಾಮರ್ಸ್ ಉತ್ತರಕ್ಕಾಗಿ ನಿಜಕ್ಕೂ ತಡಕಾಡುತ್ತಿದೆ. ಅಲ್ಲಿಗೆ ಈ ವರ್ಷದಾರಂಭದಲ್ಲಿ ಡಿಜಿಟಲ್ ಕನ್ನಡದಲ್ಲಿ ವಿತ್ತ ಭವಿಷ್ಯವನ್ನು ಹರವಿಡುತ್ತ, ಇ ಕಾಮರ್ಸ್ ಗುಳ್ಳೆ ಒಡೆಯುವುದಕ್ಕೆ ಈ ವರ್ಷ ಸಾಕ್ಷಿಯಾದೀತು ಅಂತ ಬರೆದಿದ್ದು ನಿಜವಾಗುವ ಹಂತದಲ್ಲಿದೆ.

ಇ ಕಾಮರ್ಸ್ ನ ಈ ಅಸಹನೆಯೇ ಸಚಿನ್ ಬನ್ಸಾಲ್ ಮತ್ತು ಕುನಾಲ್ ಬಹ್ಲ್ ಟ್ವೀಟ್ ಸಮರದಲ್ಲಿ ಪ್ರತಿಬಿಂಬಿಸುತ್ತಿದೆ. ಫ್ಲಿಪ್ ಕಾರ್ಟ್ ನ ಸಚಿನ್ ಬನ್ಸಾಲ್ ಹೀಗೆ ಟ್ವೀಟ್ ಮಾಡಿದರು- ‘ಅಲಿಬಾಬಾ ಕಂಪನಿ ಭಾರತದ ಇ ಕಾಮರ್ಸ್ ನಲ್ಲಿ ನೇರ ಪ್ರವೇಶ ಮಾಡ್ತಿದೆ ಅಂತಂದ್ರೆ ಈವರೆಗಿನ ಅವರ ಭಾರತೀಯ ಹೂಡಿಕೆ ಎಷ್ಟು ಕೆಟ್ಟ ಪ್ರತಿಫಲ ಪಡೆದಿದೆ ಅಂತ ಅರ್ಥವಾಗುತ್ತದೆ.’ ಹೀಗೆನ್ನುವ ಮೂಲಕ  ಚೀನಾದ ಅಲಿಬಾಬಾದಿಂದ ಫಂಡ್ ಎತ್ತಿದ್ದ ಸ್ನ್ಯಾಪ್ ಡೀಲ್ ಅದಕ್ಕೆ ತಕ್ಕ ಕ್ಷಮತೆ ತೋರಲಿಲ್ಲ ಅಂತ ಬನ್ಸಾಲ್ ಆರೋಪಿಸಿದಂತಾಯಿತು. ಇದಕ್ಕೆ ಪ್ರತಿಯಾಗಿ ಸ್ನ್ಯಾಪ್ ಡೀಲ್ ನ ಕುನಾಲ್ ಬಹ್ಲ್ ಟ್ವೀಟಿಸಿದರು- ‘ಮಾರ್ಗನ್ ಸ್ಟ್ಯಾನ್ಲಿ ಫ್ಲಿಪ್ ಕಾರ್ಟ್ ಮೌಲ್ಯವನ್ನು ಟಾಯ್ಲೆಟ್ ನಲ್ಲಿ ಫ್ಲಶ್ ಮಾಡಿಲ್ಲವೇ? ಕಾಮೆಂಟ್ ಹೊಡೆಯೋದು ಬಿಟ್ಟು ನಿಮ್ಮ ವಹಿವಾಟು ನೋಡ್ಕೋಳಿ’ ಅಂತ ಖಾರ ಪ್ರತಿಕ್ರಿಯೆಯೇ ಬಂತು. ನಿಜ, ಫ್ಲಿಫ್ ಕಾರ್ಟ್ ನ ಹೂಡಿಕೆದಾರರ ಪೈಕಿ ಒಂದಾದ ಮಾರ್ಗನ್ ಸ್ಟ್ಯಾನ್ಲಿ ಕಂಪನಿಯ ಮೌಲ್ಯದ ಮಟ್ಟವನ್ನು ಶೇ. 27ರಷ್ಟು ಕಡಿಮೆ ಸೂಚಿಸಿದ್ದರಿಂದ ಫ್ಲಿಪ್ ಕಾರ್ಟ್ ನ ಹಣ ಸಂಗ್ರಹ ಸಾಮರ್ಥ್ಯ ಕುಗ್ಗಿತ್ತು.

tw

ಅದೇನೇ ಇದ್ದರೂ ಅಲಿಬಾಬಾದ ಭಾರತ ಪ್ರವೇಶವನ್ನಿಟ್ಟುಕೊಂಡು ಇವರಿಬ್ಬರೂ ಆಡಿಕೊಂಡಿರುವ ಜಗಳ, ಉಭಯರ ಅಸರುಕ್ಷತೆ ಮತ್ತು ವಾಸ್ತವವನ್ನು ಬಿಂಬಿಸುವಂತಾಯಿತಲ್ಲದೇ ಮತ್ತೇನಿಲ್ಲ. ಫ್ಲಿಪ್ ಕಾರ್ಟ್, ಸ್ನ್ಯಾಪ್ ಡೀಲ್ ಗಳ ಅಗಾಧ ವಹಿವಾಟಿನ ಬಗ್ಗೆ ಸಾಮಾನ್ಯರಿಗೆ ತಪ್ಪು ಕಲ್ಪನೆಯೊಂದು ಇದ್ದುಬಿಡುವುದಕ್ಕೆ ಸಾಧ್ಯ. ಅದೆಂದರೆ ಇಂಥ ಇ ಕಾಮರ್ಸ್ ಕಂಪನಿಗಳೆಲ್ಲ ಭಾರಿ ಲಾಭದಲ್ಲಿವೆ ಅಂತ. ಆದರೆ ಗೊತ್ತಿರಲಿ, 10 ವರ್ಷಗಳ ನಂತರವೂ ಸ್ನ್ಯಾಪ್ ಡೀಲ್ ಮತ್ತು ಫ್ಲಿಪ್ ಕಾರ್ಟ್ ಗಳು ಲಾಭ ಮಾಡುವ ಮಾತು ಹಾಗಿರಲಿ ಬ್ರೇಕಿಂಗ್ ಇವನ್ (ಸಂಪೂರ್ಣ ವೆಚ್ಚ ತೂಗಿಸುವಷ್ಟರ ಆದಾಯ) ಕೂಡ ಸಾಧ್ಯವಾಗಿಲ್ಲ!

ಹಾಗಾದರೆ ಇವನ್ನು ಉದ್ಯಮಪ್ರಪಂಚದ ಯಶೋಗಾಥೆಗಳಾಗಿ ಬಿಂಬಿಸಲಾಗಿದೆಯಲ್ಲ? ಹಾಗೆ ಬಿಂಬಿತವಾಗಿರುವುದು ಅವುಗಳ ಹೂಡಿಕೆ- ಹಣ ಸಂಗ್ರಹಣೆ ಆಧಾರದಲ್ಲಿ. ಸ್ನ್ಯಾಪ್ ಡೀಲ್ 1.3 ಬಿಲಿಯನ್ ಡಾಲರ್ ಹಾಗೂ ಫ್ಲಿಪ್ ಕಾರ್ಟ್ 2.3 ಬಿಲಿಯನ್ ಡಾಲರ್ ಗಳಷ್ಟು ಫಂಡ್ ಸಂಗ್ರಹಿಸಿವೆ. ಇದೇ ಆಧಾರದಲ್ಲಿ ಸಿಕ್ಕ ಪ್ರಚಾರಗಳು ಹಾಗೂ ಈ ಹಣವನ್ನಿಟ್ಟುಕೊಂಡು ಗ್ರಾಹಕರನ್ನು ತಲುಪುವುದಕ್ಕೆ ಅವು ನೀಡುತ್ತಿರುವ ವಿನಾಯ್ತಿಗಳು, ಅದಕ್ಕಾಗಿ ಯಾವ ಮಾಧ್ಯಮಕ್ಕೆ ಎದುರಾದರೂ ಕಣ್ಣಿಗೆ ರಾಚುವ ಇವರದ್ದೇ ಜಾಹೀರಾತುಗಳು… ಇಂಥವುಗಳಿಂದ ಇವು ಗ್ರೇಟ್ ಅನ್ನಿಸಿದವಾಗಲೀ ಇನ್ನೂ ಲಾಭದ ಹಳಿಗೆ ಬಂದಿಲ್ಲ. ಇಷ್ಟುದಿನ ಹೂಡಿಕೆದಾರರೂ ಇದನ್ನೊಂದು ಅದ್ಭುತ ಹೂಡಿಕೆ ಮಾರ್ಗ ಅಂತ ತಿಳಿದು ಹಣ ಹರಿಸುತ್ತಲೇ ಬಂದರಾದ್ದರಿಂದ ಲಾಭ ಗಳಿಕೆ ಒತ್ತಡವೂ ಬಿದ್ದಿರಲಿಲ್ಲ. ಮಾರುಕಟ್ಟೆ ವಶಪಡಿಸಿಕೊಳ್ಳೋಣ, ನಂತರ ಲಾಭದಾಟ ಎಂಬಂತೆ ಮುನ್ನುಗ್ಗುತ್ತಿದ್ದವು. ಆದರೆ ಹನಿಮೂನ್ ಪಿರಿಯಡ್ ಮುಗಿಯಲೇಬೇಕಲ್ಲ? ಮಾರುಕಟ್ಟೆಯಲ್ಲಿ ಇನ್ನು ಹಣ ಎತ್ತೋದು ಕಷ್ಟವಿದೆ. ಇನ್ನೇನಿದ್ದರೂ ರಿಟರ್ನ್ಸ್ ಕೊಡಬೇಕಿದೆ. ಇದಕ್ಕೆ ಸರಿಯಾಗಿ ವಿದೇಶಿ ಕಂಪನಿಗಳು ಇ ಕಾಮರ್ಸ್ ಕ್ಷೇತ್ರದಲ್ಲಿ ತಾವೇ ನೇರವಾಗಿ ಪಾಲ್ಗೊಳ್ಳಲು ಬರುತ್ತಿವೆ. ಅಂತೆಯೇ ಭಾರತದಲ್ಲಿ ಹುಟ್ಟಿಕೊಳ್ಳುತ್ತಿರುವ ಸಣ್ಣ ಸಣ್ಣ ಇ ಕಾಮರ್ಸ್ ವೇದಿಕೆಗಳಿಂದಲೂ ಸ್ಪರ್ಧೆ ಎದುರಾಗಿದೆ.

ಇನ್ಫಿಬೀಮ್ ಎಂಬ ಇ ಕಾಮರ್ಸ್ ಕಂಪನಿ ಇತ್ತೀಚೆಗೆ ಸಾರ್ವಜನಿಕರಿಗೆ ಶೇರು ಖರೀದಿ ಅವಕಾಶಕ್ಕೆ (ಇನಿಶಿಯಲ್ ಪಬ್ಲಿಕ್ ಆಫರಿಂಗ್) ತೆರೆದುಕೊಂಡಿತು. ಯಾವುದೇ ಕಂಪನಿ ಇಂಥ ಕ್ರಮಕ್ಕೆ ಮುಂದಾಗುವಾಗ, ಸಾರ್ವಜನಿಕರ ತಿಳಿವಳಿಕೆಗೆ ಕೆಲವು ‘ಅಪಾಯ ಸೂಚಿ’ಗಳನ್ನೂ(ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್) ಸ್ಪಷ್ಟಪಡಿಸಬೇಕಿರುತ್ತದೆ. ಅಲ್ಲಿ ಇನ್ಫಿಬೀಮ್ ಉಲ್ಲೇಖಿಸಿರುವ ಕೆಲವು ಅಂಶಗಳು ಇ ಕಾಮರ್ಸ್ ಎಂಬ ಮಿರುಗುತ್ತಿರುವ ಲೋಕದ ಕಟು ವಾಸ್ತವ- ಒತ್ತಡಗಳಿಗೆ ಹಿಡಿದ ಕನ್ನಡಿ. ಇನ್ಫಿಬೀಮ್ ತನ್ನ ಅಪಾಯ ಸೂಚಿಯಲ್ಲಿ ಸ್ಪಷ್ಟವಾಗಿ ಹೇಳಿಬಿಟ್ಟಿದೆ-

– ನಾವು ಈ ಹಿಂದೆಯೂ ನಷ್ಟ ಅನುಭವಿಸಿದ್ದೆವು, ಮುಂದೆಯೂ ನಷ್ಟ ಅನುಭವಿಸುವ ಸಾಧ್ಯತೆಗಳಿವೆ.

– ಮಾರುಕಟ್ಟೆ ತೀವ್ರ ಸ್ಪರ್ಧಾತ್ಮಕತೆಯಿಂದ ತುಂಬಿದೆ. ನಮ್ಮ ಪ್ರತಿಸ್ಪರ್ಧಿಗಳು ದರ ಸಮರಕ್ಕೆ ಇಳಿದರೆ ಅವರನ್ನು ಎದುರಿಸುವ ತಂತ್ರಜ್ಞಾನ ಕೌಶಲ, ಸಂಪನ್ಮೂಲಗಳು ನಮ್ಮಲ್ಲಿ ಇಲ್ಲ.

– ಮಾರುಕಟ್ಟೆ ಆಕ್ರಮಣದ ಪೈಪೋಟಿಯಲ್ಲಿ ಜಾಹೀರಾತುಗಳನ್ನು ಹೆಚ್ಚಿಸುವ ಸ್ಪರ್ಧೆಗೆ ನಾವೂ ಇಳಿಯಬೇಕಾಗಬಹುದು. ಆಗ ವೆಚ್ಚ ಹೆಚ್ಚಾಗುತ್ತದೆ. ಇದು ಪ್ರತಿಕೂಲ ಪರಿಸ್ಥಿತಿ ಉಂಟುಮಾಡಬಹುದು.

– ನಕಲಿ ಪದಾರ್ಥಗಳು ಇ ಕಾಮರ್ಸ್ ವೇದಿಕೆಗೆ ಸೇರಿಕೊಳ್ಳುವ ರೂಢಿ ಹೆಚ್ಚಾಗುತ್ತಿರುವುದರಿಂದ, ಈ ನಿಟ್ಟಿನಲ್ಲಿ ನಾವು ಭವಿಷ್ಯದಲ್ಲಿ ಗ್ರಾಹಕರಿಂದ ಕಾನೂನು ಪ್ರಕ್ರಿಯೆಗಳಿಗೆ ಸಿಕ್ಕಿಕೊಳ್ಳುವ ಪ್ರಸಂಗ ಬರಬಹುದು. ಆಗಲೂ ವಹಿವಾಟಿನ ಮೇಲೆ ಪ್ರತಿಕೂಲ ಸಾಧ್ಯತೆಗಳಿರುತ್ತವೆ.

ಇಂಥದೇ ಎಚ್ಚರಿಕೆಗಳೇ ಇ ಕಾಮರ್ಸ್ ತುಂಬ ಹಾಸುಹೊಕ್ಕಾಗಿವೆ.

ಅರ್ಥಾತ್, ಇ ಕಾಮರ್ಸ್ ವಲಯದಲ್ಲಿ ತುಂಬ ಚಟುವಟಿಕೆಗಳು, ಹಣದ ಹರಿವು ಕಾಣುತ್ತಿದೆಯಾದರೂ ಅವಿನ್ನೂ ಯಶೋಗಾಥೆಗಳಾಗಿಲ್ಲ. ಮಾರುಕಟ್ಟೆ ಆಕ್ರಮಿಸಿಕೊಳ್ಳುವ ಪೈಪೋಟಿಯಲ್ಲಿ ಸುದ್ದಿ ಮಾಡುತ್ತ ತಮ್ಮನ್ನು ದೈತ್ಯರಂತೆ ತೋರಿಸಿಕೊಳ್ಳುತ್ತಿವೆ. ಈ ಹುಚ್ಚು ಓಟದಲ್ಲಿ ಇವರ ಜಾಹೀರಾತು ರಾಯಭಾರಿ ಆಗುವ ಸೆಲೆಬ್ರಿಟಿಗಳಿಗೆ ಮಾತ್ರ ಪ್ರಯಾಸವಿಲ್ಲದ ಹಣ.

ಫ್ಲಿಪ್ ಕಾರ್ಟ್- ಸ್ನ್ಯಾಪ್ ಡೀಲ್ ಗಳ ನೀನಾ-ನಾನಾ ಎಂಬ ಕುಹಕದಲ್ಲೂ ಕಾಣುತ್ತಿರುವುದು ಅವರ ಹತಾಶೆ- ಹೆದರಿಕೆಗಳೇ ವಿನಃ ಯಾವ ಹೀರೋಗಿರಿಯೂ ಅಲ್ಲ!

Leave a Reply