ಬೆಂಗಳೂರಿನ ಬೇಸಿಗೆ ಅರಳಿಸುತ್ತಿರುವ ಅರ್ಥ ಪ್ರಪಂಚ

ಡಿಜಿಟಲ್ ಕನ್ನಡ ವಿಶೇಷ

ಸೆಕೆ ತಡಿಲಿಕ್ಕಾಗಲ್ಲ…ಅದ್ರಲ್ಲೂ ಬೆಂಗಳೂರಿನ ಮಧ್ಯಾಹ್ನದ ಬಿಸಿಲಲ್ಲಿ ಟ್ರಾಫಿಕ್ ನಲ್ಲಿ ಸಿಕ್ ಹಾಕಿಕೊಂಡ್ರೆ ಮುಗಿದೇಹೋಯ್ತು…

ನಮ್ಮ ಇಂಥ ಎಲ್ಲ ನರಳಿಕೆಗಳ ನಡುವೆ ಬೀದಿ ಪಕ್ಕದಲ್ಲಿ ಒಂದಿಷ್ಟು ವಹಿವಾಟುಗಳು ಚಿಗಿತುನಿಂತಿವೆ ನೋಡಿ. ತಳ್ಳುಗಾಡಿಗಳಲ್ಲಿ ದಾಹ ತಣಿಸುವ, ಆ ಮೂಲಕ ನಾಲ್ಕು ಕಾಸು ದುಡಿದುಕೊಳ್ಳುವ ಅರ್ಥಲೋಕವದು.

ಆ ತಾತನಿಗೆ ನಾಲ್ಕು ಕಲ್ಲಗಡಿ ಹೋಳು ಮಾರಾಟ ಮಾಡಿ, ಬೆವರು ಸೋಕಿದ ನೋಟುಗಳನ್ನು ಅಂಗಿಜೇಬಲ್ಲಿ ಹಾಕಿಕೊಳ್ಳುವ ಕನಸು. ಅದಕ್ಕಾಗಿ ಕುಳಿತು ಕಾಯಬೇಕು. ಬಿಸಿಲು ಹೆಚ್ಚುರಿದು ಇನ್ನು ಸಾಧ್ಯವಿಲ್ಲ ಎಂಬಂತಾದವರು ಈತನ ಕಲ್ಲಂಗಡಿ ಚೂರುಗಳ ಬಳಿಸಾಗಬೇಕಿದೆ. ಏಕೆಂದರೆ ಬಿಸಿಲಿದ್ದರೂ ತೀರ ಬಾಯಾರಿಲ್ಲ ಎಂಬ ಕೆಟಗರಿಯವರ ಬಳಿ ಚೌಕಾಶಿಗಳಿರುತ್ತವೆ. ‘ಇಲ್ಲಿ ಸ್ವಚ್ಛವಿಲ್ಲ.. ಅದೋ ಮುಂದಿನ ಆ ಹೋಟೇಲಿನಲ್ಲಿ ತಿನ್ನೋಣ’ ಇತ್ಯಾದಿಗಳು.. ಈ ಲೆಕ್ಕಾಚಾರಗಳೆಲ್ಲ ಬಾಡಿಹೋಗುವಂತೆ ಬಿಸಿಲು ಯಾರಿಗೆ ಬಡಿದಿರುತ್ತೋ, ಅಗೋ ಅವರು ಈ ಕಲ್ಲಂಗಡಿ ತಾತನ ಬಳಿ ಬಂದೇ ಬರುವರು…

ಅಗೋ ಇನ್ನೊಬ್ಬ ಸರ್ಜಾಪುರ ರಸ್ತೆಯಲ್ಲೆಲ್ಲೋ ಕರಿ- ಕರಿ ಹಣ್ಣುಗಳನ್ನು ಪೇರಿಸಿ ಇಟ್ಟಿದ್ದಾನೆ. ಅದರ ಒಡಲೆಲ್ಲ ನೀರು ಹಾಗೂ ಮೃದು- ಮೃದು. ಎಳೆನೀರಿನ ಗಂಜಿ ತಿಂದಂತೆ. ತಾಟಿಲಿಂಗ ಎಂಬ ಅದರ ನಾಮಧೇಯ ಗೊತ್ತಿದ್ದವರಿಗಷ್ಟೆ. ಬೇಸಿಗೆಯ ಈ ಬಿಸಿನೆಸ್ ಸೀಸನ್ ನಲ್ಲಿ ಈ ತಳ್ಳುಗಾಡಿಯಾತನೂ ಅದಕ್ಕೆ ನಾಜೂಕು ಹೆಸರನ್ನೇ ಎತ್ತಿಟ್ಟುಕೊಂಡಿದ್ದಾನೆ. ಏನಿದು ಅಂತ ಕೇಳಿದವರಿಗೆ, ‘ತಗಳಿ ಸರ್… ಐಸ್ ಆ್ಯಪಲ್’ ಎಂದು ಆಸೆ ಹುಟ್ಟಿಸುತ್ತಾನೆ.

summer5

ತಳ್ಳುಗಾಡಿಯ ಮೇಲೆ ಬಟ್ಟೆ ಸುತ್ತಿದ ಒಂದಿಷ್ಟು ಮಡಿಕೆಗಳನ್ನು ಇಟ್ಟುಕೊಂಡಿರುವ ಈ ಹುಡುಗನಂತೂ ಕಳೆದುಹೋದ ಹಳೆಯ ಭಾವಸಂಗತಿಯೊಂದನ್ನು ಉಣಬಡಿಸಲು ಬಂದವನಂತಿದ್ದಾನೆ. ಜೊರ್ ಎಂಬ ಮಾದಕ ಸದ್ದು, ಕೆಂಪು ಮೈಮಾಟಗಳಿಂದ ಸೆಳೆಯುವ ಕೋಲಾ- ಪೆಪ್ಸಿ ಲೋಕಗಳಾಚೆ ನಿಂತು ಈತ ಮಡಿಕೆಯಲ್ಲಿ ಮಜ್ಜಿಗೆಯನ್ನೂ, ರಾಗಿ ಅಂಬಲಿಯನ್ನೂ ಇಟ್ಟಿದ್ದಾನೆ. ಇವನ ಬಳಿ ಪ್ರಚಾರವಿಲ್ಲದಿರಬಹುದು ಆದರೆ ಆರೋಗ್ಯಕ್ಕೆ ಪೂರಕ ಸರಕಿದೆ.

summer

ಈ ಬಿಸಿಲ ಕಾವು ಎಷ್ಟು ಬೇಗ ತಣ್ಣಗಾದೀತೋ ಅಂತ ನಾವು ಹಾತೊರೆದುಕೊಂಡು ಬೇಸಿಗೆಯನ್ನು ಆದಷ್ಟು ಬೇಗ ಸಾಗಹಾಕುವ ಪ್ರಾರ್ಥನೆಯಲ್ಲಿರುವಾಗಲೇ….. ಈ ಬೇಸಿಗೆ ಜಾರುವುದರೊಳಗೆ ಒಳ್ಳೆಯ ವ್ಯಾಪಾರವಾಗಿಬಿಡಲಿ ಅಂತ ಸಹಸ್ರ ಬೀದಿಗಳಲ್ಲಿ ಹಂಚಿಹೋಗಿರುವ ಬೆಂಗಳೂರಿನ ಒಂದೊಂದೇ ನಾಡಿಗಳ ಮೇಲೆ ತಳ್ಳುಗಾಡಿ ಬಿಟ್ಟಿದ್ದಾರೆ ಒಂದಿಷ್ಟು ಸಹಜೀವಿಗಳು. ಪ್ಲಾಸ್ಟಿಕ್ ಕ್ಯಾನುಗಳಲ್ಲಿ ಕೆಂಪುದ್ರಾಕ್ಷಿ ರಸವನ್ನು ಹಂಚುವಾತ, ಸೌತೆಕಾಯಿ ಸೀಳುವವ, ಎಂದಿಗಿಂತ ಹೆಚ್ಚು ಪ್ರಮಾಣದಲ್ಲಿ ಎಳೆನೀರ ರಾಶಿ ತರಿಸಿಕೊಂಡು ತುರಿಸಿಂದ ತಯಾರಾದವ, ಈ ಬಿಸಿಲಿನ ಹೊಡೆತದಲ್ಲಿ ಜನ ಇದ್ಯಾವ ನೀರಿಂದ ಮಾಡಿದ ಐಸ್ ಕ್ರೀಮೋ ಅಂತ ತಲೆಕೆಡಿಸಿಕೊಳ್ಳೋ ಸಾಧ್ಯತೆ ಕಡಿಮೆ ಅಂತ ನಿಶ್ಚಯ ಮಾಡಿಕೊಂಡು ಥರಾವರಿ ಐಸ್ ಕ್ರೀಮ್ ಹೆಸರುಗಳ ಹೊತ್ತ ಗಾಡಿಯೊಂದಿಗೆ ರಸ್ತೆಗಿಳಿದವ… ಫೋಟೋ ತೆಗೆಯಲು ಹೋದಾಗ ಗಾಬರಿ ಬಿದ್ದು ಕೇಳುತ್ತಿದ್ದಾರೆ.. ‘ಸಾರ್, ನೀವು ಕಾರ್ಪೋರೇಷನ್ನಿನವರಾ?’

summer3

ಇವರೆಲ್ಲರ ಹೊಟ್ಟೆ ತಣ್ಣಗಿರಲಿ!

Leave a Reply