ಸಂಪುಟ ಪುನಾರಚನೆಯಲ್ಲಿ ಬೆಂಕಿಪುಕ್ಕ ಹಾರಾಟ ತಡೆಯಲು ಸಿಎಂ ಬಿಟ್ಟಿರುವ ಬಾಣವೇ ಸೋಮಶೇಖರ್ ಬಂಡಾಯ ತಂಡ!

ಡಿಜಿಟಲ್ ಕನ್ನಡ ವಿಶೇಷ

ವಿಧಾನ ಮಂಡಲದ ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ರಾಜ್ಯ ಸಚಿವ ಸಂಪುಟ ಪುನಾರಚನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಬಜೆಟ್ ಅಧಿವೇಶನ ಮುಗಿಯುವ ಮೊದಲೇ ಕಾಂಗ್ರೆಸ್ ನಲ್ಲೊಂದು ಬಂಡಾಯ ತಂಡ ಅಸ್ತಿತ್ವಕ್ಕೆ ಬಂದಿದೆ. ಸುಮಾರು ಮೂವತ್ತು ಶಾಸಕರಿದ್ದಾರೆ ಎನ್ನಲಾದ ಈ ತಂಡಕ್ಕೆ ಎಸ್.ಟಿ. ಸೋಮಶೇಖರ್ ನಾಯಕ. ಅಸಮರ್ಥ ಮಂತ್ರಿಗಳನ್ನು ಮನೆಗೆ ಕಳುಹಿಸಿ, ಹೊಸಬರಿಗೆ ಅವಕಾಶ ಕೊಡಿ ಎಂಬುದು ತಂಡದ ಸಾಮಾನ್ಯ ಬೇಡಿಕೆ. ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್ ಸಿಂಗ್ ಅವರನ್ನು ಬದಲಾಯಿಸಬೇಕು ಎನ್ನುವುದು ವಿಶೇಷ ಬೇಡಿಕೆ.

ಒಂದು ಪಕ್ಷ ಅಥವಾ ಸರಕಾರದಲ್ಲಿ ಪೀಕಲಾಟ ಶುರುವಾದಾಗ ಸಂಪುಟ ವಿಸ್ತರಣೆ, ಪುನಾರಚನೆ ಅಸ್ತ್ರ ಬಳಸುವುದು ರಾಜಕೀಯ ತಂತ್ರಗಾರಿಕೆ. ಇದರಲ್ಲಿ ಎರಡು ರೀತಿಯ ಕಣ್ಕಟ್ ಆಟಗಳಿರುತ್ತವೆ. ಒಂದು ಈಗಾಗಲೇ ಮಂತ್ರಿ ಆಗಿರುವವರಿಗೆ ಬದಲಾವಣೆ ಸಾಧ್ಯತೆ ಇದೆ ಎಂಬ ಎಚ್ಚರಿಕೆ ಸಂದೇಶ ರವಾನಿಸುವುದು, ಇನ್ನೊಂದು ಸಚಿವ ಸ್ಥಾನದ ಆಕಾಂಕ್ಷಿಗಳ ಮೂಗಿಗೆ ತುಪ್ಪ ಸವರುವುದು. ಈ ರೀತಿಯ ‘ಚೆಕ್ ಅಂಡ್ ಬ್ಯಾಲೆನ್ಸ್’ ಪ್ರಯೋಗಕ್ಕೆ ಶಸ್ತ್ರ ಸ್ವರೂಪದಲ್ಲಿ ಸೃಷ್ಟಿಯಾಗಿರುವುದೇ ಸೋಮಶೇಖರ್ ನೇತೃತ್ವದ ಬಂಡಾಯ ತಂಡ.

ಪಕ್ಷದಲ್ಲಿ ಸಾಕಷ್ಟು ವರ್ಷ ಮಣ್ಣು ಹೊತ್ತಿರುವ ಸೋಮಶೇಖರ್ ಮತ್ತು ಅವರಂಥವರಿಗೆ ಮಂತ್ರಿಯೋ, ನಿಗಮ-ಮಂಡಳಿ ಅಧ್ಯಕ್ಷರೋ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೋ ಆಗಬೇಕು ಎಂದು ಅನಿಸಿದ್ದರೆ ಅದರಲ್ಲೇನೂ ತಪ್ಪಿಲ್ಲ. ಏಕೆಂದರೆ ಆಟ ಆಡಿಕೊಂಡು ನಿನ್ನೆಮೊನ್ನೆ ಪಕ್ಷಕ್ಕೆ ಬಂದವರೆಲ್ಲ ಈಗಾಗಲೇ ಈ ಸ್ಥಾನಗಳನ್ನು ಅನುಭವಿಸುತ್ತಿದ್ದಾರೆ. ಆ ಮೂಲಕ ಪಕ್ಷಕ್ಕೆ ನಿಷ್ಠರಾಗಿ ದುಡಿದವರನ್ನು ಅಣಕಿಸುತ್ತಿದ್ದಾರೆ. ಇವತ್ತೋ ನಾಳೆಯೋ ನಮಗೂ ಒಂದು ಅವಕಾಶ ಸಿಗುತ್ತದೆ ಎಂದು ಮೂರು ವರ್ಷ ಸವೆಸಿದವರು ಇದೀಗ ಸುಮ್ಮನಿದ್ದರೆ ಆಗುವುದಿಲ್ಲ ಎಂದು ಕಬಡ್ಡಿ ತಂಡ ಕಟ್ಟಿಕೊಂಡಿದ್ದಾರೆ. ಒತ್ತಡ ತಂದಾದರೂ ಸರಿಯೇ ಅಧಿಕಾರ ಗಿಟ್ಟಿಸಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಒಂದು ಹಂತಕ್ಕೆ ಇದು ಸರಿಯೇ. ಆದರೆ ಇವರ ಉದ್ದೇಶ ಇಷ್ಟಕ್ಕೇ ಸೀಮಿತ ಆಗಿಲ್ಲ, ಇದರ ಹಿಂದೆ ಬೇರೆ ಅಜೆಂಡಾ ಇದೆ, ಬೇರೆಯವರ ಕಾರ್ಯತಂತ್ರ ಕೂಡ ಇಲ್ಲಿ ಕೆಲಸ ಮಾಡುತ್ತಿದೆ. ಏಕೆಂದರೆ, ಮೊದಲ ಬಾರಿ ಗೆದ್ದವರಿಗೆ ಮಂತ್ರಿ ಪದವಿ ಸಿಗುವುದಿಲ್ಲ ಎಂಬುದು ಸೋಮಶೇಖರ್ ಅವರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಹೀಗಾಗಿ ಸಂಪುಟ ಪುನಾರಚನೆ ಬೇಡಿಕೆ ಹಿಂದೆ ಅವರ ವೈಯಕ್ತಿಕ ಹಿತಾಸಕ್ತಿ ಏನೂ ಇಲ್ಲ. ಆದರೆ ಪುನಾರಚನೆ ಎಂಬ ಕೆಸರುಗದ್ದೆ ಓಟದಲ್ಲಿ ಸಿದ್ದರಾಮಯ್ಯ ಅವರಿಗೆ ನೆರವಾಗುವ ಇರಾದೆ ಇದೆ. ಆ ಇರಾದೆ ಕೂಡ ಸಿದ್ದರಾಮಯ್ಯನವರದೇ ಆಗಿದೆ.

ಸಂಪುಟ ಪುನಾರಚನೆ ಸಂಬಂಧ ಯುಗಾದಿ ನಂತರ ಸಿದ್ದರಾಮಯ್ಯ ದಿಲ್ಲಿಗೆ ಹೋಗುವವರಿದ್ದಾರೆ. ಹೈಕಮಾಂಡ್ ಒಪ್ಪಿಗೆ ಕೊಟ್ಟರೂ ಅದು ಸುಲಭದ ಕೆಲಸವಲ್ಲ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಈಗಿರುವ ಮಂತ್ರಿಗಳಲ್ಲಿ ಬಹುತೇಕ ಮಂದಿ ಅಸಮರ್ಥರೇ ಆಗಿದ್ದರೂ, ಒಬ್ಬೊಬ್ಬರಿಗೆ ಒಬ್ಬೊಬ್ಬರು ಗಾಢ್ ಪಾಧರ್. ಜತೆಗೆ ಜಾತಿ, ಕೋಮಿನ ರಕ್ಷಣಾ ಕವಚ ಬೇರೆ. ಮುಟ್ಟಿದರೆ ಸಾಕು ಬೆಂಕಿ ಪುಕ್ಕಗಳು ಹಾರಾಡುತ್ತವೆ. ಹೀಗಾಗಿ ಮೂರು ವರ್ಷ ಪೂರೈಸಿದವರನ್ನು ಕೈಬಿಡಬೇಕು ಎಂಬ ಬೇಡಿಕೆ ತೇಲಿಬಿಟ್ಟು, ನಂತರ ಆ ಬೇಡಿಕೆಯನ್ನು ಗಣನೆಗೆ ತೆಗೆದುಕೊಂಡರೆ ಇಪ್ಪತ್ತರಿಂದ ಇಪ್ಪತೈದು ಮಂದಿಯನ್ನಾದರೂ ಸಂಪುಟದಿಂದ ಕೈಬಿಡಬೇಕಾಗುತ್ತದೆ. ಈ ಬೃಹತ್ ಸಂಖ್ಯೆಯನ್ನು ಮುಂದುಮಾಡಿ ಒಂದ್ಹತ್ತರ ಅಸುಪಾಸಿನಲ್ಲಿ ಬದಲಾವಣೆಯ ಪ್ರಕ್ರಿಯೆ ಮುಗಿಸುವುದು ಸಿದ್ದರಾಮಯ್ಯನವರ ಚಾಣಾಕ್ಷ ಯೋಜನೆ. ಹೀಗಾಗಿ ಎಸ್.ಟಿ. ಸೋಮಶೇಖರ್ ಮಾತುಗಳು ಸಿದ್ದರಾಮಯ್ಯನವರದೇ ಅನ್ನಲು ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ ಅಲ್ಲವೇ..?

ಇನ್ನು ದಿಗ್ವಿಜಯ್ ಸಿಂಗ್ ಬದಲಾವಣೆ ಬೇಡಿಕೆ ವಿಚಾರ. ಸಿದ್ದರಾಮಯ್ಯ ಅವರಿಗೆ ದಿಗ್ವಿಜಯ್ ಸಿಂಗ್ ಮೊದಲಿಂದಲೂ ಆಪ್ತರೇ. ಆದರೆ ಈ ಆಪ್ತತೆ ತಮ್ಮನ್ನು ನಂಬಿಕೊಂಡಿದ್ದ ಭೈರತಿ ಸುರೇಶ್ ಗೆ ಹೆಬ್ಬಾಳ ಟಿಕೆಟ್ ಗಿಟ್ಟಿಸಲಿಲ್ಲವಲ್ಲ ಎಂಬ ಮುನಿಸು ಅವರಿಗಿದೆ. ಏಕೆಂದರೆ ಬೆಂಗಳೂರಲ್ಲಿ ಭೈರತಿ ಸುರೇಶ್ ಹೆಸರೇಳಿ ದಿಲ್ಲಿಯಲ್ಲಿ ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಹೆಸರು ಪ್ರಕಟವಾಗುವುದರಲ್ಲಿ ದಿಗ್ವಿಜಯ್ ‘ತಟಸ್ಥ ನೀತಿ’ಯೂ ಕೆಲಸ ಮಾಡಿದೆ. ಇನ್ನೊಂದು ಕಡೆ ಸೋಮಶೇಖರ್ ಅವರಿಗೂ ಭೈರತಿ ಸುರೇಶ್ ಪರಮಾಪ್ತರು. ಗೆಲ್ಲುವ ಕುದುರೆ ಬಿಟ್ಟು ಜಟಕಾ ಗಾಡಿಗೆ ಟಿಕೆಟ್ ಕೊಟ್ಟುಬಿಟ್ಟರಲ್ಲ ಎಂಬ ಸಿಟ್ಟು ಅವರಿಗೂ ಇದೆ. ಜತೆಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ತಮ್ಮಂಥ ನಿಷ್ಠಾವಂತರ ಬದಲು ಒಂದು ದಿನವೂ ಪಕ್ಷದ ಬಾವುಟ ಹಿಡಿಯದವರು ನೇಮಕ ಆಗುವಲ್ಲಿ ದಿಗ್ವಿಜಯ್ ಸಿಂಗ್ ‘ಉಡುಗೊರೆ ದಾಹ’ ಕೆಲಸ ಮಾಡಿದೆ ಎಂಬ ಕೋಪವೂ ಇದೆ. ಇದೆಲ್ಲದರ ಪರಿಣಾಮವೇ ದಿಗ್ವಿಜಯ್ ಸಿಂಗ್ ಬದಲಾವಣೆ ಬೇಡಿಕೆ.

ಇಲ್ಲಿ ಇನ್ನೂ ಒಂದು ವಿಚಾರವಿದೆ. ಹೆಬ್ಬಾಳ ಮರುಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಫಲಿತಾಂಶ, ವಾಚ್ ಉಡುಗೊರೆ, ನೀರು ಕೇಳಿದ ರೈತರ ಮೇಲೆ ಹಲ್ಲೆ, ಮೇಲ್ವರ್ಗದ ಉಪೇಕ್ಷೆ ಮತ್ತಿತರ ಸಂಗತಿಗಳನ್ನು ಇಟ್ಟುಕೊಂಡು ಸಿದ್ದರಾಮಯ್ಯನವರ ಬದಲಾವಣೆಗೂ ತೆರೆಮರೆಯಲ್ಲಿ ಪ್ರಯತ್ನಗಳೂ ನಡೆದಿವೆ. ಎಸ್.ಎಂ. ಕೃಷ್ಣ, ಡಾ. ಜಿ. ಪರಮೇಶ್ವರ, ಬಿ.ಕೆ. ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ ಅವರಂಥ ಹಿರಿಯ, ಮೂಲ ಕಾಂಗ್ರೆಸ್ ನಾಯಕರ ನೆರಳು ಈ ತೆರೆಯಾಟದ ಹಿಂದಿದೆ. ಈಗಿರುವ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಎಂಬುದು ಅನುಷ್ಠಾನ ವಿಚಾರಕ್ಕೆ ಬಂದಾಗ ಕಷ್ಟಾಸಾಧ್ಯವೇ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಬಲ ಪ್ರದರ್ಶನಕ್ಕೊಂದು ತಂಡ ಕಟ್ಟಿಕೊಳ್ಳುವುದು ಅವರ ಆಕಾಂಕ್ಷೆ. ತಮ್ಮ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆ ಸಂದೇಶ ರವಾನಿಸಲು ಅವರಿಗದು ಬೇಕಿದೆ. ಸಿದ್ದರಾಮಯ್ಯನವರ ಈ ಅಗತ್ಯವನ್ನೂ ಸೋಮಶೇಖರ್ ಬಂಡಾಯ ತಂಡ ಪೂರೈಸಬಹುದು ಎಂದು ಹೇಳಲು ಯಾವುದೇ ಅಡ್ಡಿ ಇಲ್ಲ.

Leave a Reply