ಸುದ್ದಿಸಂತೆ: ಈಜಿಪ್ತ್ ಹೈಜಾಕರ್ ಬಂಧನ, ಪಠಾಣ್ ಕೋಟ್, ಉತ್ತರಾಖಂಡ…. ದಿನಾಂತ್ಯದ ಎಲ್ಲ ಸುದ್ದಿಗಳು

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಬುಡ್ಗ ಜಂಗಮ ಮತ್ತು ಸುಡುಗಾಡು ಸಿದ್ಧ ಸಮುದಾಯಗಳ ರಾಜ್ಯಮಟ್ಟದ ವಿಚಾರ ಸಂಕಿರಣ ಮತ್ತು ಕಲಾಮೇಳದಲ್ಲಿ ಧರೆಗಿಳಿದಿದ್ದ ಲೋಕ

ಈಜಿಪ್ತ್ ವಿಮಾನ ಅಪಹರಣಕಾರನ ಬಂಧನ

ಮಂಗಳವಾರವಿಡೀ ಜಗತ್ತನ್ನು ಆತಂಕದಲ್ಲಿ ಹಿಡಿದಿಟ್ಟಿದ್ದ ಈಜಿಪ್ತ್ ವಿಮಾನ ಅಪಹರಣ ಪ್ರಸಂಗ ಸಂಜೆ ವೇಳೆ ಸುಖಾಂತ್ಯ ಕಂಡಿದೆ. ಅಪಹರಣಕಾರನನ್ನು ಸೈಫ್ ಎಲ್ಡಿನ್ ಮುಸ್ತಫಾ ಎಂದು ಗುರುತಿಸಲಾಗಿದ್ದು, ಸಿಬ್ಬಂದಿ ಸಹಿತ ವಿಮಾನದ ಎಲ್ಲ ಒತ್ತೆಯಾಳುಗಳು ಸುರಕ್ಷಿತವಾಗಿ ಹೊರಬಂದಿದ್ದಾರೆ.

ಈತ ತನ್ನ ಮಾಜಿ ಸಂಗಾತಿಗೆ ಪತ್ರ ತಲುಪಿಸುವ ಒತ್ತಾಯ ಹೇರಲು ಈತ ವಿಮಾನ ಅಪಹರಿಸಿದ್ದ ಎಂಬುದರಿಂದ ಹಿಡಿದು, ಈಜಿಪ್ತ್ ನ ಮಹಿಳಾ ಕೈದಿಗಳನ್ನು ಬಿಡುಗಡೆ ಮಾಡಿಸುವುದಕ್ಕೆ ಈ ಕೃತ್ಯ ಎಸಗಿದ ಎಂಬವರೆಗೆ ಹಲವು ಕಾರಣಗಳು ತೇಲಿಬರುತ್ತಿವೆ. ತನಿಖಾಧಿಕಾರಿಗಳ ಅಧಿಕೃತ ಹೇಳಿಕೆಯಿನ್ನೂ ಬರಬೇಕಿದೆ.

 ಪಠಾಣ್ ಕೋಟ್ ನಲ್ಲಿ ಪಾಕ್ ತಂಡದಿಂದ ತನಿಖೆ, ಪ್ರತಿಪಕ್ಷಗಳ ಟೀಕಾಪ್ರಹಾರ

ಉಗ್ರದಾಳಿಗೆ ಒಳಗಾಗಿದ್ದ ಪಠಾಣ್ ಕೋಟ್ ವಾಯುನೆಲೆಗೆ ಮಂಗಳವಾರ ಪಾಕಿಸ್ತಾನದ ತನಿಖಾ ತಂಡ ಭೇಟಿ ಇತ್ತು ಪರಿಶೀಲನೆ ನಡೆಸಿತು.

ಈ ಸಂಬಂಧ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಪ್ ಅಷ್ಟೇ ಅಲ್ಲದೇ ಎನ್ ಡಿಎ ಕೂಟದಲ್ಲಿರುವ ಶಿವಸೇನೆ ಸಹ ತೀವ್ರ ಪ್ರತಿಭಟನೆ ದಾಖಲಿಸಿವೆ. ಮುಂಬಯಿ ದಾಳಿ ಸಂಬಂಧ ಪಾಕಿಸ್ತಾನಿಯರ ಭಾಗವಹಿಸುವಿಕೆ ಬಗ್ಗೆ ಎಷ್ಟೇ ಸಾಕ್ಷ್ಯಗಳನ್ನು ಒದಗಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಪಾಕಿಸ್ತಾನಕ್ಕೆ ನಮ್ಮ ನೆಲದಲ್ಲಿ ತನಿಖೆಯ ಅವಕಾಶ ನೀಡಿರುವುದು ಅವರೆದುರು ಮಂಡಿಯೂರಿದಂತಾಗಿದೆ ಎಂಬುದು ಇವರ ಆಕ್ರೋಶ.

ಪಠಾಣ್ ಕೋಟ್ ವಾಯುನೆಲೆಯಂಥ ಸೂಕ್ಷ್ಮ ಪ್ರದೇಶಕ್ಕೆ ಪಾಕಿಸ್ತಾನಿ ತನಿಖಾಧಿಕಾರಿಗಳನ್ನು ತನಿಖೆ ನೆಪದಲ್ಲಿ ಬಿಟ್ಟುಕೊಂಡಿರುವುದು ರಾಷ್ಟ್ರೀಯ ಭದ್ರತೆಯಲ್ಲಿ ಮಾಡಿಕೊಂಡಿರುವ ರಾಜಿ ಎಂಬುದು ಕಾಂಗ್ರೆಸ್ ಆರೋಪ. ‘ಪಾಕ್ ಅಧಿಕಾರಿಗಳನ್ನು ಇಲ್ಲಿ ಬಿಟ್ಟುಕೊಳ್ಳುವುದಕ್ಕೆ ಮೊದಲು ಭಾರತದ ತನಿಖಾತಂಡ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಆ ಸರ್ಕಾರದ ಆತಿಥ್ಯ ಸ್ವೀಕರಿಸಿಕೊಂಡಿರುವ ಮುಂಬೈ ದಾಳಿ ಸಂಚುಕೋರರ ತನಿಖೆ ನಡೆಸಬೇಕಿತ್ತು’ ಅಂತ ಆಪ್ ಹರಿಹಾಯ್ದಿದೆ.

ಇವೆಲ್ಲವಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ- ‘ಇದೇ ಮೊದಲ ಬಾರಿಗೆ ಭಾರತದ ಆರೋಪವನ್ನು ಗಂಭೀರವಾಗಿ ತೆಗೆದುಕೊಂಡು ಪಾಕಿಸ್ತಾನ ತನಿಖೆ ನಡೆಸುತ್ತಿದೆ. ನಾವೇನೂ ಅವರನ್ನು ವಾಯುನೆಲೆಯ ಒಳಾವರಣಕ್ಕೆ ಬಿಟ್ಟುಕೊಂಡಿಲ್ಲ. ತನಿಖೆಗೆ ಪೂರಕವಾದ ನಿರ್ದಿಷ್ಟ ಪ್ರದೇಶವನ್ನಷ್ಟೇ ಅವರಿಗೆ ತೋರಿಸಿ, ನಮ್ಮ ಅಧಿಕಾರಿಗಳು ಪೂರಕ ದಾಖಲೆಗಳನ್ನು ನೀಡಿದ್ದಾರೆ. ‘ ಎಂದಿದ್ದಾರೆ.

 ಉತ್ತರಾಖಂಡ : ಬಹುಮತ ಸಾಬೀತಿಗೆ ಅವಕಾಶ ನೀಡಿದ ಕೋರ್ಟ್

ಉತ್ತರಾಖಂಡದಲ್ಲಿ ಜಾರಿಯಲ್ಲಿದ್ದ ರಾಷ್ಟಪತಿ ಆಳ್ವಿಕೆಗೆ ಅಲ್ಲಿನ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಮುಖ್ಯಮಂತ್ರಿ ಹರೀಶ್ ರಾವತ್ ಮಾರ್ಚ್ 31 ರಂದು ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಿದೆ.

ರಾಷ್ಟಪತಿ ಆಳ್ವಿಕೆ ವಿರುದ್ಧ ರಾಜ್ಯ ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರಿತ್ತು. ಇವರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿ ಎಸ್ ಠಾಕೂರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ. ಜೊತೆಗೆ ಸ್ಪೀಕರ್ ಅನರ್ಹಗೊಳಿಸಿರುವ 9 ಬಂಡಾಯ ಶಾಸಕರಿಗೂ ಮತದಾನ ಮಾಡುವ ಅವಕಾಶ ನೀಡಿದೆ.

ಜಾಟ್ ಮೀಸಲಾತಿ ಮಸೂದೆ ಪಾಸ್

ಜಾಟ್ ಸಮುದಾಯದ ಮೀಸಲಾತಿ ಮಸೂದೆಗೆ ಹರ್ಯಾಣ ಸರ್ಕಾರ ಮಂಗಳವಾರ ಒಪ್ಪಿಗೆ ಸೂಚಿಸಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಕೋರಿ ಕಳೆದ ತಿಂಗಳು ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದ ಜಾಟ್ ಸಮುದಾಯ ಸರ್ಕಾರಕ್ಕೆ ಏಪ್ರಿಲ್ 3 ರ ಗಡುವು ನೀಡಿತ್ತು. ಹರ್ಯಾಣ ಹಿಂದುಳಿದ ವರ್ಗಗಳ (ಶಿಕ್ಷಣ ಸಂಸ್ಥೆಗಳಲ್ಲಿ ಆಡಳಿತ ಮತ್ತು ಸೇವಾ ವಿಭಾಗದಲ್ಲಿ ಮೀಸಲಾತಿ) ಮಸೂದೆ 2016 ಮತ್ತು ಹರ್ಯಾಣ ಹಿಂದುಳಿದ ವರ್ಗಗಳ ಆಯೋಗ ಮಸೂದೆ 2016, ಈ ಎರಡು ಮಸೂದೆಗಳಿಗೆ  ಮಂಗಳವಾರ ಅಲ್ಲಿನ ವಿಧಾನಸಭೆಯಲ್ಲಿ ಸರ್ವಾನುಮತದ ಬೆಂಬಲ ದೊರೆತಿದೆ. ಇದರಲ್ಲಿ ಜಾಟ್ ಸಮುದಾಯದ ಜೊತೆಗೆ ಜಾಟ್ ಸಿಖ್ಖರು, ರೋರ್ಸ್, ಬಿಷ್ನೋಯ್ಸ್, ತ್ಯಾಗಿಗಳು, ಮತ್ತು ಮುಲ್ಲಾ ಜಾಟ್ ಅಥವಾ ಮುಸ್ಲಿಂ ಜಾಟ್ ಸಮುದಾಯದವರ ಮೀಸಲಾತಿಗೂ ಒಪ್ಪಿಗೆ ದೊರೆತಿದೆ.

ಗಿನ್ನಿಸ್ ಬುಕ್ ನಲ್ಲಿ ಸ್ಥಾನ ಪಡೆದ ಗಾಯಕಿ ಪಿ ಸುಶೀಲ

ಅತಿ ಹೆಚ್ಚು ಹಾಡುಗಳನ್ನು ಹಾಡಿರುವ ಗಾಯಕಿ ಎಂದು ಹೆಸರಾಂತ ಗಾಯಕಿ ಪಿ ಸುಶೀಲ ಅವರು  ಗಿನ್ನಿಸ್ ಬುಕ್ ಆಫ್ ವರ್ಡ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿದ್ದಾರೆ. 6 ಭಾಷೆಗಳಲ್ಲಿ ಸರಿ ಸಮಾರು 17700 ಹಾಡುಗಳನ್ನು ಒಬ್ಬರೇ ಹಾಡಿದ್ದಾರೆ. 80 ವರ್ಷ ವಯಸ್ಸಿನ ಇವರು ಮೂಲತಃ ಆಂಧ್ರ ಪ್ರದೇಶ. ತೆಲುಗು ಸೇರಿದಂತೆ ಕನ್ನಡ, ತಮಿಳು, ಮಳಯಾಳಂ ಹಿಂದಿ, ಬಂಗಾಳಿ, ಒರಿಯಾ, ಸಂಸ್ಕೃತ, ತುಳು ಮತ್ತು ಬಡಗ ಭಾಷೆಗಳಲ್ಲಿ ತಮ್ಮ ಕಂಠದಿಂದಲೇ ಪ್ರಸಿದ್ಧಿಯನ್ನು ಪಡೆದಿರುವವರು. 2008ರಲ್ಲಿ ಭಾರತ ಸರ್ಕಾರದ ಪದ್ಮಭೂಷಣ ಮತ್ತು ಉತ್ತಮ ಹಿನ್ನೆಲೆ ಗಾಯಕಿಯಾಗಿ 5 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.

ಐಸಿಸಿ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದ ಭಾರತ, ಕೊಹ್ಲಿ

ಟಿ20 ವಿಶ್ವಕಪ್ ನ ಎಲ್ಲಾ ಪಂದ್ಯಗಳಲ್ಲಿ ಉತ್ತಮ ಪ್ರರ್ದಶನ ನೀಡುತ್ತಿರುವ ಭಾರತ ತಂಡದ ಆಟಗಾರ ವಿರಾಟ್ ಕೊಹ್ಲಿ ಐಸಿಸಿ ಬಿಡುಗಡೆಗೊಳಿಸಿರುವ ಟಿ20 ಶ್ರೇಯಾಂಕಿತ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಭಾರತ ತಂಡವೂ ಅಗ್ರ ಶ್ರೇಯಾಂಕ ಪಟ್ಟ ಪಡೆಯುವ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಡಬಲ್ ಖುಷಿ ಸಿಕ್ಕಿದೆ.

ಉಳಿದಂತೆ ಸುದ್ದಿಸಾಲು…

ರಾಜ್ಯದಲ್ಲಿ ಈಗಿರುವ ವಾರದಲ್ಲಿ ಮೂರು ದಿನಗಳ ಕ್ಷೀರಭಾಗ್ಯ ಯೋಜನೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ವಾರದಲ್ಲಿ ಐದು ದಿನಕ್ಕೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಶಾಲಾ ಮಕ್ಕಳಿಗೆ ವಾರಕ್ಕೆ ಐದು ದಿನ ಹಾಲು ನೀಡುವುದರಿಂದ ಬೊಕ್ಕಸಕ್ಕೆ 300 ಕೋಟಿ ರುಪಾಯಿಗಳ ಹೆಚ್ಚುವರಿ ಭಾರ ಬಿದ್ದರೂ, ಹಾಲು ಉತ್ಪಾದನೆ ಸದುಪಯೋಗ ಪಡೆದುಕೊಂಡು ಪಶುಸಂಗೋಪನೆಯಲ್ಲಿ ತೊಡಗಿರುವ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿಯೋಜನೆ ಸಹಕರಿಸುತ್ತದೆ ಎನ್ನಲಾಗಿದೆ.

– ಸಹರಾ ಸಮೂಹದ ರಿಯಲ್ ಎಸ್ಟೇಟ್ ಮಾರಿ, ಅದರಿಂದ ಬಂದ ಹಣದಲ್ಲಿ ಹೂಡಿಕೆದಾರರಿಗೆ ಮರುಪಾವತಿ ಮಾಡಬಹುದು ಎಂದು ಸುಪ್ರೀಂಕೋರ್ಟ್ ಮಂಗಳವಾರ ‘ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)’ಗೆ ಸೂಚಿಸಿದೆ. ಸಣ್ಣ ಹೂಡಿಕೆದರರ ಹಣವನ್ನು ಬಳಸಿಕೊಂಡು ಅವರಿಗೆ ಅಕ್ರಮ ಬಾಂಡ್ ಗಳನ್ನು ಕೊಟ್ಟು ಮೋಸ ಎಸಗಿದ್ದ ಹಿನ್ನೆಲೆಯಲ್ಲಿ ಸಹರಾ ಮುಖ್ಯಸ್ಥ ಸುಬ್ರತಾ ರಾಯ್ ಮಾರ್ಚ್ 2014ರಿಂದಲೇ ಜೈಲಿನಲ್ಲಿದ್ದಾರೆ.

Leave a Reply