ಅಪಹರಣಕಾರನ ಜತೆ ಫೋಟೋ ತೆಗೆಸಿಕೊಂಡ ಬ್ರಿಟಿಷ್ ಅಸಾಮಿ, ಟ್ರಾಜಿಡಿಯಲ್ಲೂ ಕಾಮಿಡಿ ಅಂದ್ರೆ ಇದೇ ಸ್ವಾಮಿ!

ಡಿಜಿಟಲ್ ಕನ್ನಡ ಟೀಮ್

ಮಂಗಳವಾರ ಈಜಿಪ್ತ್ ವಿಮಾನವನ್ನು ಅಪಹರಿಸಿ ಜಗತ್ತನ್ನೇ ಆತಂಕಕ್ಕೆ ತಳ್ಳಿದ ಅಸಾಮಿ ಉಗ್ರನೇನೂ ಅಲ್ಲ, ತಿಕ್ಕಲು ಅಷ್ಟೆ ಅಂತ ಸಂಜೆಯ ವೇಳೆಗೆಲ್ಲ ತಿಳಿಯಿತು. ಆತ ಶರಣಾಗುವುದರೊಂದಿಗೆ ವಿಮಾನದಲ್ಲಿದ್ದ ಎಲ್ಲರ ಬಿಡುಗಡೆಯೂ ಆಯಿತು.

ಈ ಪ್ರಕರಣವನ್ನು ಆತಂಕದಲ್ಲೊಂದು ವ್ಯಂಗ್ಯ ಅಂತ ವಿವರಿಸಬಹುದಾದರೆ, ಹುಚ್ಚಾಟ ಮಾಡಿದ್ದು ಆ ಅಪಹರಣಕಾರನಷ್ಟೇ ಅಲ್ಲ, ಆ ವಿಮಾನದಲ್ಲೂ ಹಾಸ್ಯ ಪಾತ್ರಗಳಿದ್ದವು ಅಂತ ಈ ಚಿತ್ರ ನೋಡಿದರೆ ಗೊತ್ತಾಗುತ್ತದೆ. ಸೂಸೈಡ್ ಬಾಂಬರ್ ಅಂತ ಹೊಟ್ಟೆಗೆಲ್ಲ ಪಾಕೆಟ್ ಕಟ್ಟಿಕೊಂಡು ಬಿಂಬಿಸುತ್ತಿದ್ದ ಅಪಹರಣಕಾರನ ಹತ್ತಿರ ನಿಂತು ಹಿಂಗೆ ಫೋಟೋ ತೆಗೆಸಿಕೊಂಡಿರೋದು ಬೆನ್ ಇನ್ಸ್ ಎಂಬ ಬ್ರಿಟಿಷ್ ಅಸಾಮಿ.

ಕೈರೋದಿಂದ ಅಲೆಕ್ಸಾಂಡ್ರಿಯಾಕ್ಕೆ ಹೋಗ್ತಿದ್ದ ವಿಮಾನವನ್ನು ಈ ಅಪಹರಣಕಾರ ಸೈಪ್ರಸ್ ನಲ್ಲಿ ಇಳಿಸುವಂತೆ ಮಾಡಿದನಷ್ಟೆ. ಅದರ ಬೆನ್ನಲ್ಲೇ, ಆ ವಿಮಾನದಲ್ಲಿದ್ದ ಈಜಿಪ್ತ್ ಪ್ರಯಾಣಿಕರಿಗೆಲ್ಲ ಬಿಡುಗಡೆ ಭಾಗ್ಯವನ್ನೂ ಕರುಣಿಸಿದ. ಆದರೆ ವಿಮಾನದ ಸಿಬ್ಬಂದಿ ಮತ್ತು ನಾಲ್ವರು ವಿದೇಶಿಗರನ್ನು ಮಾತ್ರ ಒತ್ತೆಯಾಳಾಗಿ ಇರಿಸಿಕೊಂಡ. ಅವರಲ್ಲೊಬ್ಬ ಈ ಬೆನ್ ಇನ್ಸ್.

ಇಂಗ್ಲೆಂಡ್ ನ ಸನ್ಸ್ ಪತ್ರಿಕೆ ಜತೆ ಮಾತಾಡಿದ ಬೆನ್ಸ್ ಆ ಕ್ಷಣದ ಬಗ್ಗೆ ಹೇಳಿದ್ದು- ‘ಅದೇಕೆ ಅವನ ಜತೆ ಫೋಟೊ ತೆಗಿಸಿಕೊಳ್ಳೋ ಹುಕಿ ಬಂತೋ ನಂಗೂ ಸರಿಯಾಗಿ ಗೊತ್ತಿಲ್ಲ. ಆತಂಕದ ಕ್ಷಣದಲ್ಲೂ ಉಲ್ಲಸಿತನಾಗಿರೋದಕ್ಕೆ ನಾನು ಪ್ರಯತ್ನಿಸಿದೆ. ಆತ ಸುತ್ತಿಕೊಂಡಿರುವ ಬಾಂಬ್ ನಿಜವೇ ಆಗಿದ್ದರೂ ನಾನು ಕಳೆದುಕೊಳ್ಳೋದೇನಿಲ್ಲ ಅಂತ ಯೋಚಿಸಿದೆ. ಏನೇ ಆದರೂ ಹತ್ತಿರದಿಂದ ನೋಡಿದಂತಾಗುತ್ತದೆ, ನಂತರ ನನ್ನ ಸೀಟಿಗೆ ಬಂದು ಮುಂದಿನ ಕ್ರಮದ ಬಗ್ಗೆ ಯೋಚಿಸಬಹುದು ಅಂತಲೂ ಆಸೆಯಾಯಿತು. ವಿಮಾನ ಸಿಬ್ಬಂದಿಯೊಬ್ಬರಿಗೆ ನನ್ನ ಮಾತನ್ನು ಆತನಿಗೆ ಅನುವಾದಿಸುವಂತೆ ಹೇಳಿದೆ. ಫೋಟೋ ತೆಗೆಸಿಕೊಳ್ಳುವ ನನ್ನ ಮನವಿಗೆ ಆತ ಹಸನ್ಮುಖಿಯಾಗಿಯೇ ಸಮ್ಮತಿಸಿದ. ಗಗನಸಖಿ ಕೈಗೆ ಸೆಲ್ ಫೋನ್ ಕೊಟ್ಟು ಫೋಟೋ ತೆಗೆಸಿಕೊಂಡೆ.’

ಟ್ರಾಜಿಡಿ ಮೆ ಕಾಮಿಡಿ ಅಂತಂದ್ರೆ ಇದೇ ನೋಡಿ!

Leave a Reply