ಅಸ್ಸಾಮಿನಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಗೆಲುವು ಎಂದಿದೆ ಸಮೀಕ್ಷೆ, ಈ ಜಯ ಏತಕ್ಕಾಗಿ ಎಂಬುದರ ವಿವರಣೆ ಇಲ್ಲಿದೆ

ಪ್ರವೀಣ ಕುಮಾರ್

ಅಸ್ಸಾಮಿನ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬಿಜೆಪಿ ಮೈತ್ರಿಕೂಟ ಬಹುಮತ ಸಾಧಿಸಲಿದೆ ಎಂದು ಎಬಿಪಿ- ನೆಲ್ಸನ್ ಸಮೀಕ್ಷೆ ಬುಧವಾರ ಸಾರಿದೆ.

ಬಿಜೆಪಿ- ಎಜಿಪಿ- ಬಿಪಿಎಫ್ ಮೈತ್ರಿಕೂಟಕ್ಕೆ 78 ಸ್ಥಾನಗಳು ಲಭಿಸಲಿವೆ, ಕಾಂಗ್ರೆಸ್ ಗೆ ಕೇವಲ 36 ಸ್ಥಾನಗಳು ದೊರೆಯಲಿದ್ದು, ಸ್ಥಳೀಯ ಪ್ರಾಬಲ್ಯದ ಎಯುಡಿಎಫ್ ಗೆ 10 ಸ್ಥಾನಗಳು ಸಿಗಲಿವೆ ಅಂತ ಈ ಸಮೀಕ್ಷೆ ಅಭಿಪ್ರಾಯ ಸಂಗ್ರಹಿಸಿದೆ.

ಇದು ಸುದ್ದಿವಾಹಿನಿಯೊಂದರ ಸಮೀಕ್ಷೆ ಆಧಾರದಲ್ಲಿ ಬುಧವಾರ ಆಗಿರುವ ಸುದ್ದಿಸ್ಫೋಟ. ಬಹುಶಃ ಮುಂಬರುವ ದಿನಗಳಲ್ಲಿಇನ್ನೊಂದಿಷ್ಟು ಮಾಧ್ಯಮ ಸಂಸ್ಥೆಗಳೂ ಚುನಾವಣಾಪೂರ್ವ ಸಮೀಕ್ಷೆ ನಡೆಸಬಹುದು. ಇಂಥ ಸಮೀಕ್ಷೆಗಳು ಸಾಕಷ್ಟು ಬಾರಿ ಬುಡಮೇಲಾಗಿರುವ ಉದಾಹರಣೆಗಳಂತೂ ಇವೆ.

ಆದರೆ…

ಈಗ ಘೋಷಣೆಯಾಗಿರುವ ಐದು ರಾಜ್ಯಗಳ ಚುನಾವಣೆ ಪೈಕಿ ಬಿಜೆಪಿಗೆ ಗೆಲುವಿನ ದಟ್ಟ ಸಾಧ್ಯತೆ ಇರುವುದು ಅಸ್ಸಾಮಿನಲ್ಲೇ ಎಂಬುದನ್ನು ಹಲವು ವಿಶ್ಲೇಷಕರು ಹೇಳಿದ್ದಾರೆ. ಹೀಗಾಗಿ ಈ ಸಮೀಕ್ಷೆ ಅದಕ್ಕೊಂದು ಪೂರಕ ಅಭಿಪ್ರಾಯ.

ಹಾಗಾದರೆ, ಬಿಜೆಪಿ ಪರವಾಗಿರುವ ಅಂಶಗಳು ಯಾವವು?

  • ಬಿಜೆಪಿಗೆ ಆತ್ಮವಿಶ್ವಾಸ ಕೊಟ್ಟಿರುವ ಅಂಶಗಳಲ್ಲಿ ಬಹಳ ಮುಖ್ಯವಾದದ್ದು ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಅದು ತೋರಿಸಿರುವ ಪ್ರಗತಿ. 2014ರ ಲೋಕಸಭೆ ಚುನಾವಣೆಯಲ್ಲಿ ಶೇಕಡ 36 ರಷ್ಟು ಮತ ಪಡೆದ ಬಿಜೆಪಿ, 14 ರಲ್ಲಿ 7 ಸ್ಥಾನ ಪಡೆದಿದ್ದು, 69 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಮೂಲಭೂತವಾಗಿ ಇದು ಅಲ್ಲಿನ ಬಿಜೆಪಿ ಕಾರ್ಯಕರ್ತರಿಗೆ ಬಲ ತಂದುಕೊಟ್ಟಿರುವ ಅಂಶ.
  • ಶೇ. 34ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದಿರುವ ಅಸ್ಸಾಂ, ಜಮ್ಮು-ಕಾಶ್ಮೀರದ ನಂತರ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ಇಷ್ಟು ಕಾಲ ಇಲ್ಲಿನ ಮುಸ್ಲಿಂ ಮತಗಳು ಕಾಂಗ್ರೆಸ್ ಮತ್ತು ಬದ್ರುದ್ದೀನ್ ಅಜ್ಮಲರ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ನಡುವೆ ಹಂಚುತ್ತಿದ್ದವು. ಆದರಿದು ಧ್ರುವೀಕರಣದ ಕಾಲ. 2001ರಲ್ಲಿ 30.9 ಶೇಕಡಾದಷ್ಟು ಮುಸ್ಲಿಂ ಜನಸಂಖ್ಯೆ ಇದ್ದು, ಆರು ಜಿಲ್ಲೆಗಳು ಸಂಪೂರ್ಣ ಮುಸ್ಲಿಂ ಪ್ರಾಬಲ್ಯ ಹೊಂದಿದ್ದವು. ಆಗ ಎಐಯುಡಿಎಫ್ ಗೆ ಕಾಂಗ್ರೆಸ್ ಬೇಕಿತ್ತು. ಮುಸ್ಲಿಮರು ಮತ್ತು ಬುಡಕಟ್ಟು ಜನರು ಎಂಬ ಸೆಕ್ಯುಲರ್ ಸೂತ್ರ ಹೊಸೆಯೋದಕ್ಕೆ ಕಾಂಗ್ರೆಸ್ಸಿಗೂ ಬದ್ರುದ್ದೀನ್ ಅಜ್ಮಲ್ ಬೇಕಿತ್ತು. ಆದರೆ ಈಗ ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ ಶೇ. 34ಕ್ಕೆ ಏರಿ, 9 ಜಿಲ್ಲೆಗಳು ಸಂಪೂರ್ಣ ಮುಸ್ಲಿಂ ಪ್ರಾಬಲ್ಯಕ್ಕೆ ಬಂದಿರುವ ಸಂದರ್ಭದಲ್ಲಿ ಮುಸ್ಲಿಮರಿಗೆ ಕಾಂಗ್ರೆಸ್ ಬೇಕಾಗಿಲ್ಲ. ಅವರಿಗೇನಿದ್ದರೂ ಈಗ ಬದ್ರುದ್ದೀನ್ ಅಜ್ಮಲ್ ದೇವರು. ಹಾಗೆಂದೇ ಈ ಬಾರಿ ಕಾಂಗ್ರೆಸ್ ಜತೆಗೆ ಆಗಬೇಕಿದ್ದ ಎಐಯುಡಿಎಫ್ ಮೈತ್ರಿ ಮುರಿದುಬಿತ್ತು ಹಾಗೂ ಎಐಯುಡಿಎಫ್ ಪ್ರತ್ಯೇಕವಾಗಿ ಸ್ಪರ್ಧಿಸಿ ಕಾಂಗ್ರೆಸ್ಸಿಗೆ ಏಟು ಕೊಟ್ಟಿದೆ. ಈ ‘ಸೆಕ್ಯುಲರ್ ಸಮೀಕರಣ’ ಮುರಿದುಬಿದ್ದಿರುವುದು ಬಿಜೆಪಿಗೆ ಪ್ಲಸ್.
  • ಅತ್ತ ಸೆಕ್ಯುಲರ್ ಸಮೀಕರಣ ಮುರಿದುಬೀಳುತ್ತಲೇ ಬಿಜೆಪಿ ಅಸ್ಸಾಮಿನ ನೆಲದಲ್ಲಿ ತನ್ನ ಪರ್ಯಾಯ ಗುರುತನ್ನು ಗಟ್ಟಿ ಮಾಡಿಕೊಂಡಿದೆ. ಬಾಂಗ್ಲಾ ಅಕ್ರಮ ವಲಸಿಗರ ಸಮಸ್ಯೆ ತೀವ್ರ ಚರ್ಚೆಯಲ್ಲಿರುವ ರಾಜ್ಯದಲ್ಲಿ ಬಿಜೆಪಿ ತಾನು ಅಧಿಕಾರಕ್ಕೆ ಬಂದರೆ ಬಾಂಗ್ಲಾದೇಶದೊಂದಿಗಿನ ಗಡಿಯನ್ನು ಭದ್ರಪಡಿಸೋದಾಗಿ ಹೇಳುತ್ತಿರುವುದು ಹಲವರ ಭಾವನೆಗಳಿಗೆ ಪೂರಕವಾಗಿದೆ. ಮುಖ್ಯವಾಗಿ ಸ್ಥಳೀಯ ಶಕ್ತಿಗಳಾದ ಅಸ್ಸಾಮ್ ಗಣ ಪರಿಷತ್ ಹಾಗೂ ಬೋಡೊಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಜತೆಗಿನ ಮೈತ್ರಿ ಬಿಜೆಪಿಯ ಮತಗಳಿಕೆಯನ್ನು ಹೆಚ್ಚಿಸಲಿದೆ. ಪ್ರಾರಂಭದಲ್ಲಿ ಬಾಂಗ್ಲಾ ಅಕ್ರಮ ವಲಸಿಗರು, ಮುಸ್ಲಿಂ ಜನಸಂಖ್ಯೆ ಹೆಚ್ಚಳ ಇವೆಲ್ಲ ಬಿಜೆಪಿಯವರು ತಮ್ಮ ಲಾಭಕ್ಕಾಗಿ ಪ್ರಸ್ತಾಪಿಸುತ್ತಿರೋ ವಿಷಯಗಳು ಅಂತ ಟೀಕಿಸುವ ಸ್ಥಿತಿ ಇತ್ತು. ಆದರೆ ಅಕ್ರಮ ವಲಸಿಗರ ಹರಿವು- ಮುಸ್ಲಿಂ ಜನಸಂಖ್ಯೆ ಹೆಚ್ಚಳದಿಂದ ನಿಜವಾಗಿ ಆತಂಕ ಅನುಭವಿಸುತ್ತಿರುವವು ಸ್ಥಳೀಯ ಬುಡಕಟ್ಟು ಸಮುದಾಯಗಳೇ ಆಗಿವೆ. ಕೋಕ್ರಜಾರ್, ಬಕ್ಸಾ, ಚಿರಾಂಗ್, ಉದಾಲ್ಗುರಿ ಇವೆಲ್ಲ ಬೋಡೊ ಬುಡಕಟ್ಟು ಜನರ ವಸತಿ ಪ್ರದೇಶ. ಇಲ್ಲೂ ಮುಸ್ಲಿಮರ ಜನಸಂಖ್ಯೆಯಲ್ಲಿ ಆಗಿರುವ ಅಸಹಜ ಏರಿಕೆ ಬೋಡೋಗಳಲ್ಲಿ ಸಹಜವಾಗಿಯೇ ಆತಂಕ ತಂದಿದೆ. ಈ ಹಂತದಲ್ಲಿ ಬಿಪಿಎಫ್ ಜತೆ ಕೈಜೋಡಿಸಿರುವ ಬಿಜೆಪಿ ಅವರಿಗೆ ಆಪ್ಯಾಯಮಾನವಾಗಿಯೇ ಕಾಣಿಸುತ್ತಿದೆ. ಶೇ. 9ರಷ್ಟು ಮತಪ್ರಮಾಣ ಹೊಂದಿರುವ ಚಹಾ ತೋಟಗಳಲ್ಲಿ ದುಡಿಯುವ ವರ್ಗ ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಅನ್ನು ಬೆಂಬಲಿಸಿಕೊಂಡುಬಂದಿತ್ತು. ಆದರೆ ಇವರ ಪ್ರಾಬಲ್ಯದ ಧಿಬ್ರುಗಡ ಮತ್ತು ಜೊರ್ಹಾತ್ ಲೋಕಸಭೆ ಕ್ಷೇತ್ರಗಳಲ್ಲಿ 2014ರಲ್ಲಿಬಿಜೆಪಿ ಅಭ್ಯರ್ಥಿಗಳು ಸಂಸದರಾಗಿ ಆಯ್ಕೆಯಾಗಿರುವುದು ಗಾಳಿ ಎತ್ತ ಬೀಸುತ್ತಿದೆ ಎಂಬುದರ ಸೂಚಕ.
  • 15 ವರ್ಷಗಳಿಂದ ಅಸ್ಸಾಮಿನಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಗೆ ಕೈ ಹಿಡಿದಿದ್ದ ಅಂಶ ಎಂದರೆ ತರುಣ್ ಗೋಗೊಯ್ ಜನಪ್ರಿಯತೆ. ಹಾಗೆ ನೋಡುವುದಾದರೆ, ಈಗಿನ ಎಬಿಪಿ- ನೆಲ್ಸನ್ ಸಮೀಕ್ಷೆಯಲ್ಲೂ ಭಾಗವಹಿಸಿದ ಜನರ ಪೈಕಿ ಶೇ. 39ರಷ್ಟು ಮಂದಿ ತರುಣ್ ಗೋಗೊಯ್ ಅವರೇ ಜನಪ್ರಿಯ ನೇತಾರ ಎಂದಿದ್ದಾರೆ. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಸರ್ಬಾನಂದ ಸೊನೊವಾಲ್ ಅವರ ಜನಪ್ರಿಯತೆಗೆ ಶೇ. 29ರಷ್ಟು ಮಂದಿ ಸೈ ಎಂದಿದ್ದಾರೆ. ಅಷ್ಟಾಗಿಯೂ 15 ವರ್ಷಗಳ ಆಡಳಿತದ ನಂತರ ಜನ ಬದಲಾವಣೆ ಬಯಸೋದು, ಆಡಳಿತ ವಿರೋಧಿ ಅಲೆಗಳು ಹುಟ್ಟಿಕೊಳ್ಳೋದು ಸಹಜವೇ. ಇಂಥ ಸಂದರ್ಭದಲ್ಲಿಬಿಜೆಪಿ ಅಲ್ಲಿನ ಮುಸ್ಲಿಂ ವಿರೋಧಿ ಭಾವನೆ ಮತ್ತು ಅಭಿವೃದ್ಧಿಯ ಆಶಯಗಳಿಗೆ ತನ್ನನ್ನೇ ಪರ್ಯಾಯವಾಗಿ ಬಿಂಬಿಸಿಕೊಂಡಿರೋದು ಹೆಚ್ಚುಗಾರಿಕೆ.

ಏಪ್ರಿಲ್ 4 ಮತ್ತು 11ರಂದು ನಡೆಯಲಿರುವ ಚುನಾವಣೆಗಳಲ್ಲಿ ಇವೆಲ್ಲ ಅಂಶಗಳು ಬಿಜೆಪಿ ಕೈಹಿಡಿದು ಮುನ್ನಡೆಸಿ, ಸಮೀಕ್ಷೆಯ ಸಾರ ನಿಜವಾಗುವ ಸಾಧ್ಯತೆಗಳು ಹೆಚ್ಚಾಗಿಯೇ ಇವೆ.

Leave a Reply