ಕತೆ ನೋಡಿ.., ಮದುವೆಗೆ ಹುಡುಗಿಯ ಅಪ್ಪ, ಡೈವೋರ್ಸ್ ಗೆ ಹುಡುಗ, ಅವನಪ್ಪ ಇಬ್ಬರೂ ಖರ್ಚು ಮಾಡುತ್ತಾರೆ..!

 

author-geetha“ಮದುವೆಗೆ ಹುಡುಗಿಯ ಅಪ್ಪ ಖರ್ಚು ಮಾಡುತ್ತಾರೆ. ಡೈವೋರ್ಸ್ ಆದರೆ ಹುಡುಗ, ಹುಡುಗನ ಅಪ್ಪ ಇಬ್ಬರೂ ಖರ್ಚು ಮಾಡುತ್ತಾರೆ..”

“ಅರ್ಥ ಆಗಲಿಲ್ಲ..”

“ಇಪ್ಪತ್ತು ಕೋಟಿ, ನಲವತ್ತು ಕೋಟಿ ಕೊಡ್ತಿದ್ದಾರೆ ಕಾಂಪನ್ಸೇಷನ್ ಅಂತ.. ಮಾವನ ಹೆಸರಿನಲ್ಲಿ ಆಸ್ತಿ ಇದ್ದರೆ, ಅದು ಭಾಗವಾದಾಗ ಕೂಡ ಪಾಲು ಸಿಗುತ್ತೆ.. ಮಕ್ಕಳಿದ್ದರಂತೂ ಮುಗೀತು. ಒಂದು ಮಗುವಿನ ಮೈನ್ಟೆನೆಸ್ಸ್ ಗೆ ಅಂತ ಹತ್ತು ಲಕ್ಷ.. ತಿಂಗಳಿಗೆ ಹತ್ತು ಲಕ್ಷ ಕೇಳಿದ್ದಾರಂತೆ ಒಬ್ಬರು ಮಾಜಿ ನಟಿ. ಜೊತೆಗೆ ಮಗುವನ್ನು ನೋಡಲೂ ಬಿಡುವುದಿಲ್ಲ.. ಕೋರ್ಟ್ ಹೇಳಿದರೂ ಕೇಳೊಲ್ಲ..”

“ಓ..”

“ಮುಂಬಯಿನಲ್ಲಿ ಡೈವೋರ್ಸ್ ಕೇಸುಗಳಲ್ಲಿಯೇ ಪರಿಣಿತಿ ಹೊಂದಿರುವ ಅತಿ ಹೆಚ್ಚು ಪರಿಹಾರ ಕೊಡಿಸುವ ಲಾಯರ್ ಇದ್ದಾರಂತೆ.. ಸೆಲಬ್ರಿಟೀಸ್ ಎಲ್ಲಾ ಅವರ ಬಳಿಯೇ ಹೋಗುವುದು..”

“ಓಹೋ..”

ಈಗಿನ ಕಾಲ ಹೇಗಿದೆ ಅಂದರೆ ಶ್ರೀಮಂತನನ್ನು ಮದುವೆ ಮಾಡಿಕೊಳ್ಳಬೇಕು.. ಆದರೆ ಮದುವೆಯ ಬಂಧನದಲ್ಲಿಯೇ ಇರಬಾರದು. ಡೈವೋರ್ಸ್ ತೊಗೋಬೇಕು.. ಅದೇ ಹೆಚ್ಚು ಲಾಭದಾಯಕ.”

“ಛೆ.. ಛೇ.. ಅವರ ಕಷ್ಟ ತಾಪತ್ರಯಗಳು ಏನೇನಿರುತ್ತೋ.. ಗೊತ್ತಿಲ್ಲದೆ ಮಾತಾಡಬಾರದು..”

“ನಿಜ. ಆದರೆ ಈ ಕೋಟಿ, ಲಕ್ಷಗಳ ವ್ಯವಹಾರ ಮೊದಲೇ ಹಾಳಾಗಿರುವ ಸಂಬಂಧಗಳನ್ನು ಮತ್ತಷ್ಟು ಹಾಳುಗೆಡುವುತಲಿದೆ. ವರದಕ್ಷಿಣೆ ಸಮಸ್ಯೆ ಭೂತಾಕಾರವಾಗಿ ಇನ್ನೂ ಕಾಡುತಲಿದೆ. ಕೌಟುಂಬಿಕ ದೌರ್ಜನ್ಯಕ್ಕೆ ಪರಿಹಾರ ಹುಡುಕುತ್ತಲೇ ಇದ್ದೇವೆ. ಈಗ ಅದರ ಜೊತೆಗೆ! ಆದರೆ ಅದಕ್ಕೆ ವಿರುದ್ಧವಾದ ಈ ಮೈನ್ಟೇನೆಸ್ಸ್ ಸಮಸ್ಯೆ ಹುಟ್ಟಿಕೊಂಡಿದೆ.”

ಮಾತು ಮುಂದುವರಿಸಲಿಲ್ಲ. ಸ್ಟಾರ್ಗಳಾದರೂ ಅವರೂ ಮನುಷ್ಯರೇ.. ಮಕ್ಕಳಿಂದ ದೂರವಾದರೆ ಅವರಿಗೂ ನೋವು, ಸಂಕಟವಾಗುತ್ತದೆ. ದುಡ್ಡಿನ ವಿಚಾರಕ್ಕೆ ಬಂದರೂ ಆನೆಯ ಭಾರ ಆನೆಗೆ, ಇರುವೆಯ ಭಾರ ಇರುವೆಗೆ.

ನನಗೆ ಪರಿಚಿತರೊಬ್ಬರ ಹೆಂಡತಿ ಕೋರ್ಟಿನಲ್ಲಿ ಕೇಸ್ ಹಾಕಿ, ಒಂದು ಕೋಟಿ ಕೊಟ್ಟರೆ ಕೇಸ್ ಹಿಂದಕ್ಕೆ ತೆಗೆದುಕೊಂಡು, ಮ್ಯುಚ್ಯುಯಲ್ ಕನ್ಸೆಂಟ್ ವಿಚ್ಛೇದನಕ್ಕೆ ಸಹಿ ಹಾಕುವುದಾಗಿ, ಮಗುವನ್ನು (ವರ್ಷದ ಮಗುವಿಗೆ ಈಗ ಆರು ವರ್ಷ ಹಾಗೂ ಅಪ್ಪ ಸಂಪೂರ್ಣ ಅಪರಿಚಿತ!) ನೋಡಲು ಬಿಡುವುದಾಗಿ ಹೇಳಿದ್ದಾಳೆ. ಕೋಟಿ ಕೊಡಬೇಕು ಅಂದರೆ ಇರುವ ಮನೆ ಮಾರಬೇಕು.. ಅದೂ ಅಪ್ಪನ ಮನೆ ಹಕ್ಕುದಾರರು ನಾಲ್ಕು ಮಂದಿ ಇದ್ದಾರೆ. ಈಗ ಮಾರಿದರೂ ಕೋಟಿ ಬರುವುದಿಲ್ಲ. ಹಾಗಾಗಿ ವ್ಯಾಪಾರಕ್ಕೆ ಇಳಿಯಬೇಕು. ಇವರು ಇಪ್ಪತೈದು ಲಕ್ಷದಿಂದ ಶುರು ಮಾಡಬೇಕು. ಅವರು ಕೋಟಿಯಿಂದ ಶುರು ಮಾಡಿದವರೂ ಇಳಿಯಬೇಕು.. ಕುದುರಿದರೆ ವಿಚ್ಛೇದನ.

ವರದಕ್ಷಿಣೆ ಮಾತುಕತೆಯೂ ಹೀಗೇ ಆಗುತ್ತಿತ್ತು, ಈಗಲೂ ಆಗುತ್ತಲಿದೆ. ಗಂಡಿನವರು ಕಾರು ಎಂದು, ಹೆಣ್ಣಿನವರು ಸ್ಕೂಟರ್ ಎಂದು ಶುರು ಮಾಡಿ ಬೈಕಿಗೆ ವ್ಯಾಪಾರ ಕುದುರಿಸುತ್ತಿದ್ದರು. ಕುದುರಿದರೆ ಮದುವೆ.

ಎಲ್ಲವೂ ವ್ಯವಹಾರ, ವ್ಯಾಪಾರ, ಹೆಣ್ಣು, ಗಂಡು ಎಂದಿಲ್ಲ.. ಯಾರದು ಮೇಲುಗೈ ಇರುತ್ತದೋ ಅವರು ಶೋಷಿಸುತ್ತಾರೆ.

ಕೋರ್ಟಿನಾಚೆ ವ್ಯವಹಾರ ಕುದುರಿದರೆ ಸಮಯ ಉಳಿತಾಯವಾಗುತ್ತದೆ. ಅಷ್ಟೇ ಪ್ರೀತಿ, ಪ್ರೇಮ, ವ್ಯಾಮೋಹದ ಬಗ್ಗೆ ಮಾಡನಾಡದಿರುವುದೇ ಕ್ಷೇಮ.

ಹೆಂಡತಿಗೆ ಇಂತಿಷ್ಟು ವರಮಾನವಿದ್ದರೆ ಅವಳಿಗೆ ಪರಿಹಾರ ಕೊಡುವ ಅವಶ್ಯಕತೆಯಿಲ್ಲ ಎಂದಿದೆ. ಅದನ್ನು ತಿಳಿದ ಅವಳು ಕೆಲಸ ಬಿಟ್ಟು ಮನೆಯಲ್ಲಿ ಕೂಡುತ್ತಾಳೆ.

ಇನ್ನೊಂದು ಮದುವೆಯಾದರೆ ತಿಂಗಳ ಮೈನ್ಟೇನೆನ್ಸ್ ಕೊಡಬೇಕಾಗಿಲ್ಲ ಎನ್ನುತ್ತದೆ ಕೋರ್ಟ್.. ಹಾಗಾಗಿ ಅವಳು ಮದುವೆ ಮಾಡಿಕೊಳ್ಳುವುದಿಲ್ಲ.. ಸುಮ್ಮನೆ ಸಂಬಂಧ ಇಟ್ಟುಕೊಳ್ಳುತ್ತಾಳೆ.

ಅವನು ದುಡ್ಡು ಕೊಡಬೇಕಲ್ಲ ಅನ್ನೋ ಸಂಕಟಕ್ಕೆ ತನ್ನ ವರಮಾನದ ಬಗ್ಗೆ ಸುಳ್ಳು ಹೇಳುತ್ತಾನೆ. ತನ್ನ ಆಸ್ತಿಯನ್ನು ಇನ್ಯಾರದೋ ಹೆಸರಿನಲ್ಲಿ ಇಡುತ್ತಾನೆ. ಮಕ್ಕಳು, ದಾಳಗಳು, ಕಾಯಿಗಳು, ಪಗಡೆ ಹಾಸು.. ಕೊನೆಯಲ್ಲಿ ನಿಮಾನ್ಸಿನಲ್ಲಿ ಕೇಸು.

ತಂದೆ ತಾಯಿ ಗೊತ್ತು ಮಾಡಿದ ಮದುವೆಯಿರಲಿ, ಪ್ರೀತಿಸಿ ಮಾಡಿಕೊಂಡ ಮದುವೆಯಿರಲಿ.. ಮುರಿದಾಗ ಬರೀ ಕಹಿಯೇ. ಅವನನ್ನು ಬಿಟ್ಟು ಹಾಯಾಗಿ ಇರುವ ಬಗ್ಗೆ ಅವಳು ಯೋಚಿಸುವುದಿಲ್ಲ.. ಅವಳಿಗೆ ಕೊಡಬೇಕಾದ್ದು ಕೊಟ್ಟು ನೆಮ್ಮದಿಯಿಂದ ಇರಬೇಕು ಎಂದು ಅವನು ಯೋಚಿಸುವುದಿಲ್ಲ. ಇಬ್ಬರೂ ಮತ್ತೊಬ್ಬರಿಗೆ ಪಾಠ ಕಲಿಸಲು, ಬೀದಿಗೆ ಎಳೆದು ನಿಲ್ಲಿಸಲು ಹೊರಡುತ್ತಾರೆ.

ಈ ಸ್ಟಾರ್ಗಳ ಡೈವೋರ್ಸ್, ದುಡ್ಡಿನ ವಹಿವಾಟು ಮೀಡಿಯಾದಿಂದ ಬಟ್ಟಾಬಯಲು. ಅದನ್ನು ನೋಡಿ, ಕೇಳಿ.. ಮಧ್ಯಮ ವರ್ಗದವರೂ ಕೋಟಿಗಳಲ್ಲೇ ಮಾತನಾಡಲಾರಂಭಿಸಿದ್ದಾರೆ. ಲಾಯರ್ಗಳು, ಪ್ರೈವೇಟ್ ಡಿಟೆಕ್ಟೀವ್ಗಳಿಗೆ ಕೈತುಂಬಾ ಕೆಲಸ, ದುಡ್ಡು. ದುಡಿದು, ಮನೆಯಲ್ಲಿ ಇರದ ಮಾಜಿ ಹೆಂಡತಿಗೆ, ಮುಖವೇ ತೋರದ ಮಕ್ಕಳಿಗೆ ಸುರಿಯಬೇಕಲ್ಲ ಹಾಗಾಗಿ ದುಡಿಯುವುದೇ ಇಲ್ಲ.. ಎಂದು ನೆಲಕಚ್ಚಿದ ಗಂಡಸರಿದ್ದಾರೆ. ಮದುವೆಯಲ್ಲಿ ಉಳಿದು, ಬೆಳಗಿನಿಂದ ಸಂಜೆವರೆಗೂ ದುಡಿದು, ಗಂಡನಿಗೆ ಬೇಕೆನ್ನಿಸಿದಾಗ ಹಾಸಿಗೆ ಬೆಚ್ಚಗೆ ಮಾಡುವುದಕ್ಕಿಂತ ಪರಿಹಾರ ತೆಗೆದುಕೊಂಡು ಬಿಟ್ಟು ಬಿಡುವುದೇ ಮೇಲು ಎಂದು ಮೇಲೆದ್ದಿರುವ ಹೆಂಗಸರಿದ್ದಾರೆ.

ಕೋರ್ಟಿನಲ್ಲಿ ಸಹಿ ಹಾಕಿಸಿ ಮದುವೆ ಮಾಡಿಸಬಹುದು, ಸಹಿ ಹಾಕಿಸಿ ವಿಚ್ಛೇದನ ಕೊಡಿಸಬಹುದು. ಆದರೆ ಕೋರ್ಟು ಒಟ್ಟಿಗೆ ಬಾಳಿ ಎಂದು ತೀರ್ಪು ಕೊಟ್ಟು ಸಂಸಾರ ನಡೆಸಲಾಗುವುದಿಲ್ಲ..

ನಾವಿರುವ ಕಾಲಘಟ್ಟ ಎಷ್ಟು ವಿಚಿತ್ರವಾಗಿದೆಯೆಂದರೆ ವರದಕ್ಷಿಣೆ ತರಲಿಲ್ಲ ಎಂದು ಗಂಡನ ಮನೆಯಲ್ಲಿ ಚಿತ್ರಹಿಂಸೆ ಅನುಭವಿಸುತ್ತಿರುವ ಹೆಣ್ಣುಮಕ್ಕಳಿದ್ದಾರೆ. ಬಿಡಿಕಾಸು ಕೊಡದ ಗಂಡನಿಂದ ದೂರವಾಗಿ ಕೂಲಿ ನಾಲಿ ಮಾಡುವ ಸ್ಥಿತಿಯಲ್ಲಿರುವ ಹೆಣ್ಣುಮಕ್ಕಳಿದ್ದಾರೆ. ವಿಚ್ಛೇಧನ ಅಂದರೆ ಕಳಂಕ ಎಂಬಂತೆ ಗಂಡನ ಎರಡನೇ ಸಂಬಂಧ, ಕುಡಿತ, ಹೊಡೆತ ಎಲ್ಲವನ್ನೂ ಸಹಿಸಿಕೊಂಡು ಬಾಳುತ್ತಿರುವ ಹೆಣ್ಣುಮಕ್ಕಳಿದ್ದಾರೆ. ಹಾಗೆಯೇ ಗಂಡನನ್ನು ಬಿಟ್ಟು ಅವನ ಆಸ್ತಿಯಲ್ಲಿ ಪಾಲು ತೆಗೆದುಕೊಂಡು, ಅವನ ಸಂಪಾದನೆಯಲ್ಲಿ ಶೇಕಡಾ 40 ರಷ್ಟನ್ನು ಪಡೆದುಕೊಂಡು, ಅವನ ಮಕ್ಕಳೊಂದಿಗೆ ಅವನು ಒಂದು ಸಂಜೆಯೂ ಕಳೆಯದಂತೆ ಮಾಡಿರುವ ಹೆಣ್ಣುಮಕ್ಕಳೂ ಇದ್ದಾರೆ.

ಶೋಷಣೆಗೆ ಒಳಗಾಗುವ ಹೆಣ್ಣುಮಕ್ಕಳಿಗೆ ಅನುಕೂಲವಾಗಲಿ ಎಂದು ಮಾಡಿರುವ ಕಾನೂನಿನ ದುರುಪಯೋಗ ಮಾಡಿಕೊಂಡು ಪುರುಷರ ಶೋಷಣೆಯು ಆಗುತ್ತಿದೆ. ಯಾವ ಸಮಸ್ಯೆಯತ್ತ ಗಮನ ಹರಿಸಬೇಕು..?

ಮದುವೆಯೇ ಬೇಡ.. ಒಟ್ಟಿಗೆ ಇರುವುದಷ್ಟೇ ಎಂದು ನಿರ್ಧಾರ ತೆಗೆದುಕೊಂಡವರೂ ಇದ್ದಾರೆ. ಅಲ್ಲಿ ಮೋಸ ಆದಾಗ, ದೌರ್ಜನ್ಯವಾದಾಗ, ನೀವು ಮದುವೆಯಾಗಿರುವ ದಂಪತಿಗಳಲ್ಲ ಎಂದು ಕಾನೂನು ಮುಖ ತಿರುಗಿಸಲು ಆಗುವುದಿಲ್ಲ.

ಮುಂಚೆಯೇ ಅಗ್ರೀಮೆಂಟ್ ಮಾಡಿಕೊಂಡು ಬಿಡಬೇಕು. ನನ್ನ ಸಂಪಾದನೆ, ಆಸ್ತಿ, ನನ್ನದು.. ನಿನ್ನ ಸಂಪಾದನೆ, ಆಸ್ತಿ ನಿನ್ನದು. ಸಂಬಂಧ ಹಳಸಿದರೆ ಯಾರು ಯಾರಿಗೂ ಏನೂ ಕೊಡಬೇಕಾಗಿಲ್ಲ ಎಂದು ಸ್ಪಷ್ಟವಾಗಿ ದೃಢೀಕರಿಸಿಬಿಡಬೇಕು.

ಸರಿ. ಆದರೆ,

ಪ್ರೀತಿ, ನಂಬಿಕೆ, ಆತ್ಮೀಯತೆಯಿಂದ ಇರಬೇಕಾದ ಸಂಬಂಧವನ್ನು ಅಪನಂಬಿಕೆಯಿಂದ ಶುರುಮಾಡಬೇಕೇ..?!

Leave a Reply