ಗೂಗಲ್ ಸಿಇಒ ಸುಂದರ್ ಪಿಚೈ ವಾರ್ಷಿಕ ಸಂಬಳ ಎಷ್ಟು ಗೊತ್ತಾ? ₹667 ಕೋಟಿ

ಡಿಜಿಟಲ್ ಕನ್ನಡ ಟೀಮ್

ವಿಶ್ವದ ಖ್ಯಾತ ಕಂಪನಿಗಳಲ್ಲಿ ಪ್ರತಿಷ್ಠಿತ ಸಿಇಒ ಸ್ಥಾನ ಅಲಂಕರಿಸಿರೊ ಭಾರತೀಯರು ಸಾಕಷ್ಟಿದ್ದಾರೆ. ಈಗ ಅವರ ಪೈಕಿ ಪ್ರತಿಷ್ಠಿತ ಗೂಗಲ್ ನ ಸುಂದರ್ ಪಿಚ್ಚೈ ಅತಿ ಹೆಚ್ಚು ಸಂಭಾವನೆ ಪಡೆದ ಸಿಇಒ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರೋದು ಹೊಸ ವಿಷಯ.

ಕಳೆದ ವರ್ಷ ಅಕ್ಟೋಬರ್ ನಲ್ಲಿ ಗೂಗಲ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸ್ಥಾನಕ್ಕೆ ಆಯ್ಕೆಯಾದ ಸುಂದರ್ ಪಿಚ್ಚೈ ದುಬಾರಿ ಸಂಭಾವನೆಯನ್ನೇ ತಮ್ಮ ಖಾತೆಗಿಳಿಸಿಕೊಂಡಿದ್ದಾರೆ. ಹೌದು, ಕಳೆದ ವರ್ಷ ವಾರ್ಷಿಕ ಪರಿಹಾರ ಮೊತ್ತ ಸೇರಿದಂತೆ ಸುಂದರ್ ಪಿಚ್ಚೈ ಪಡೆದಿರುವ ಸಂಭಾವನೆ ಬರೋಬ್ಬರಿ ₹667 ಕೋಟಿ (100.5 ಮಿಲಿಯನ್ ಅಮೆರಿಕನ್ ಡಾಲರ್). ಕೇವಲ ಇಷ್ಟೇ ಅಲ್ಲ, 2016ರಲ್ಲಿ ಇದು ದ್ವಿಗುಣವಾಗುವ ನಿರೀಕ್ಷೆ ಇದ್ದು, ಪಿಚ್ಚೈ ಸುಮಾರು ₹1328 ಕೋಟಿ (200 ಮಿಲಿಯನ್ ಅಮೆರಿಕನ್ ಡಾಲರ್) ಸಂಭಾವನೆ ಪಡೆಯಲಿದ್ದಾರೆ.

ಇಲ್ಲಿ ಪಿಚ್ಚೈಗೆ ನೀಡಲಾಗಿರುವ ವಾರ್ಷಿಕ ಪರಿಹಾರ ಮೊತ್ತವನ್ನು ವರ್ಗೀಕರಣ ಮಾಡಿ ನೋಡಿದಾಗ ಅವರಿಗೆ ನಗದು ರೂಪದಲ್ಲಿ ಸಿಗೋ ಸಂಭಾವನೆ ₹4.3 ಕೋಟಿ. ಉಳಿದಂತೆ ₹662 ಕೋಟಿಯನ್ನು ಷೇರು ಪ್ರಮಾಣದ ಮೂಲಕ ಹಾಗೂ ₹15.22 ಲಕ್ಷ ವನ್ನು ಇತರೆ ಪರಿಹಾರವಾಗಿ ನೀಡಲಾಗಿದೆ.

ಇತರೆ ಭಾರತೀಯ ಸಿಇಒಗಳಾದ ಮೈಕ್ರೊಸಾಫ್ಟ್ ನ ಸತ್ಯ ನಾಡೆಲ್ಲಾ ₹559.5 ಕೋಟಿಯನ್ನು, ಪೆಪ್ಸಿ ಸಿಇಒ ಇಂದ್ರಾ ನೂಯಿ ₹126.5 ಕೋಟಿ ವಾರ್ಷಿಕ ಪರಿಹಾರ ಮೊತ್ತ ಪಡೆದಿದ್ದಾರೆ.

ಈ ವಾರ್ಷಿಕ ಪರಿಹಾರ ಮೊತ್ತ ಅಂದರೇನು?

ಎಲ್ಲರಿಗೂ ವಾರ್ಷಿಕ ಸಂಭಾವನೆ ಅಥವಾ ಸಂಬಳದ ಬಗ್ಗೆ ಗೊತ್ತೇ ಇರುತ್ತದೆ. ಉದಾಹರಣೆಗೆ ನಿಮಗೆ ಎಷ್ಟು ಸಂಬಳ ಎಂದು ಕೇಳಿದರೆ, ವರ್ಷಕ್ಕೆ ಸುಮಾರು 4-5 ಲಕ್ಷ ಪ್ಯಾಕೇಜ್ ಎಂದು ಹೇಳುತ್ತಾರೆ. ಇದು ನೀವು ಮಾಡುವ ಕೆಲಸಕ್ಕೆ ನೀಡೊ ಮೊತ್ತ. ದೊಡ್ಡ ದೊಡ್ಡ ಕಂಪನಿಗಳು ಒಂದೊಂದು ಪ್ರಮಾಣದಲ್ಲಿ ಅಲ್ಲಿನ ಸಿಬ್ಬಂದಿಗೆ ಪರಿಹಾರ ಮೊತ್ತವನ್ನು ನೀಡುತ್ತದೆ. ಈ ಪರಿಹಾರ ಮೊತ್ತದಲ್ಲಿ ಜೀವ ವಿಮೆ, ನಿವೃತ್ತಿ ವಿಮೆ, ಪ್ರತಿ ನಿತ್ಯದ ಖರ್ಚು, ಷೇರು ಪ್ರಮಾಣ ಹಾಗೂ ಇತರೆ ಸೌಕರ್ಯಗಳನ್ನು ನೀಡುವುದಕ್ಕೆ ಪರಿಹಾರ ಮೊತ್ತ ಎಂದು ಕರೆಯಲಾಗುವುದು.

Leave a Reply