ಇಷ್ಟಕ್ಕೂ ಸಿದ್ದರಾಮಯ್ಯ ಅವರ ಮೇಲೆ ಎಸ್.ಎಂ. ಕೃಷ್ಣ ಅಮರಿಕೊಂಡು ಬಿದ್ದಿರುವುದಾದರೂ ಏಕೆ..?

ಡಿಜಿಟಲ್ ಕನ್ನಡ ವಿಶೇಷ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಅಮರಿಕೊಂಡು ಬಿದ್ದಿರುವುದಾದರೂ ಏಕೆ? ಮೇಲಿಂದ ಮೇಲೆ ಅವರ ವಿರುದ್ಧ ಟೀಕೆ ಮಾಡುತ್ತಾ, ಅವಕಾಶವಾದಾಗಲೆಲ್ಲ ಹೈಕಮಾಂಡ್ ಬಳಿ ದೂರುತ್ತಿರುವುದಾದರೂ ಏಕೆ? ಸಿದ್ದರಾಮಯ್ಯ ಅವರ ಮೇಲೆ ಅವರಿಗೇಕೆ ಇಷ್ಟು ಸಿಟ್ಟು? ಅವರಿಂದ ಇವರಿಗೆ ಆಗಿರುವ ಅನ್ಯಾಯವಾದರೂ ಏನು?

ಇಂತಹ ಪ್ರಶ್ನೆಗಳು ಯಾರನ್ನಾದರೂ ಕಾಡುತ್ತಿದ್ದರೆ ಅದು ಸಹಜವೇ. ಏಕೆಂದರೆ ಮೊದಲಿಂದಲೂ ‘ಹೈ ಫ್ರೊಫೈಲ್’ ಸ್ತರದಲ್ಲಿಯೇ ತಮ್ಮನ್ನು ಗುರುತಿಸಿಕೊಂಡು ಬಂದ ಕೃಷ್ಣ ಅವರ ರಾಜಕೀಯ ಕೂಡ ಒಂದು ಚೌಕಟ್ಟಿನೊಳಗೇ ಇದ್ದಂತದ್ದು. ಶಿಸ್ತು, ಸಜ್ಜನಿಕೆ, ಮಿತನುಡಿ, ಮುತ್ಸದ್ದಿತನಕ್ಕೆ ಹೆಸರಾಗಿರುವ ಕೃಷ್ಣ ಅವರದು ದೇವೇಗೌಡರ ರೀತಿ ಇನ್ನಾರು ತಿಂಗಳ ಮುಂದಿನ ಬೆಳವಣಿಗೆಗೆ ಇವತ್ತೇ ಮದ್ದು ಅರೆದಿಡುವ ಜಾಯಮಾನವಲ್ಲ. ಮೇಲಾಗಿ ಮುಖ್ಯಮಂತ್ರಿ ಸ್ಥಾನದಿಂದ ಹಿಡಿದು ಕೇಂದ್ರ ಮಂತ್ರಿ, ರಾಜ್ಯಪಾಲರ ಹುದ್ದೆವರೆಗೂ ನಾನಾ ಸ್ಥಾನಗಳನ್ನು ಅಲಂಕರಿಸಿ, ‘ಹಿರಿಯ ರಾಜಕೀಯ ನಾಗರಿಕ’ರಾಗಿರುವ ಕೃಷ್ಣ ಅವರಿಗೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಮುಖ್ಯಮಂತ್ರಿ ಆಗಬೇಕು ಎಂಬ ವಾಂಛೆಯೇನೂ ಇಲ್ಲ. ಅದೆಲ್ಲ ಮುಗಿದು ಹೋಗಿರುವ ಕತೆ. ಹೋಗಲಿ ಆ ಸ್ಥಾನದಲ್ಲಿ ತಮ್ಮ ಪ್ರೀತಿಪಾತ್ರ ಶಿಷ್ಯರನ್ನೇನಾದರೂ ಪ್ರತಿಷ್ಠಾಪಿಸಬಯಸಿದ್ದಾರೆಯೇ ಎಂದುಕೊಂಡರೆ ಅಂಥ ಶಿಷ್ಯವರ್ಗವೂ ಅವರಿಗಿಲ್ಲ. ಹಾಗಾದರೆ ಇನ್ನಾವ ಗಹನಕಾರಣ ಅವರಿಂದ ಈ ಕೆಲಸ ಮಾಡಿಸುತ್ತಿದೆ?!

ಹಾಗೆ ಕೃಷ್ಣ ಟೀಕಾಪ್ರಹಾರಗಳನ್ನು ನೋಡುವುದಾದರೆ, ವರ್ಷದ ಹಿಂದೆ ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ, ಅದರಿಂದ ದೂರ ಉಳಿದು ಸಿದ್ದರಾಮಯ್ಯ ವಿರುದ್ಧ ಮೊದಲ ಬಾರಿಗೆ ಸುದರ್ಶನ ಚಕ್ರ ಪ್ರಯೋಗಿಸಿದ್ದರು. ‘ನಮ್ಮ ಕೆಲವು ನಾಯಕರಿಗೆ ಎಲ್ಲವನ್ನೂ ಬಲ್ಲೆ ಎಂಬ ಅಹಂಕಾರವಿದೆ. ಆದರೆ ಅನುಭವ ಕಲಿಕೆಯ ದಾರಿಯನ್ನು ವಿಸ್ತಾರ ಮಾಡಬೇಕು ಎಂಬ ಪ್ರಜ್ಞೆ ಅವರಿಗಿಲ್ಲ’ ಎಂದು ಪರೋಕ್ಷ ಚುಚ್ಚಿದ್ದರು. ನಂತರ ದೇವರಾಜ ಅರಸು ಜನ್ಮದಿನ ಸಮಾರಂಭದಲ್ಲಿ, ‘ಅರಸು ಅವರು ಎಲ್ಲ ವರ್ಗದವರನ್ನೂ ಜತೆಯಲ್ಲಿ ತೆಗೆದುಕೊಂಡು ಹೋಗಿದ್ದರು. ಹೀಗಾಗಿ ಜನನಾಯಕ ಎನಿಸಿದ್ದರು. ಆದರೆ ನಮ್ಮ ಈಗಿನ ಕೆಲ ನಾಯಕರು ತಮ್ಮನ್ನು ಆಹಂ ಬ್ರಹ್ಮಾಸ್ಮಿ (ನಾನೇ ದೇವರು) ಅಂದುಕೊಂಡಿದ್ದಾರೆ. ಅವರಿಗೆ ಯಾರೂ ಬೇಕಿಲ್ಲ. ಯಾರ ಮಾರ್ಗದರ್ಶನದ ಅಗತ್ಯವೂ ಇಲ್ಲ’ ಎಂದಿದ್ದರು. ಮತ್ತೊಂದು ಸಂದರ್ಭದಲ್ಲಿ ನನ್ನ ಸಂಪುಟ ಸಮತೋಲಿತವಾಗಿತ್ತು. ಆದರೆ ಈಗಿನ ಸಂಪುಟ ಆ ಕೊರತೆ ಎದುರಿಸುತ್ತಿದೆ ಎಂದಿದ್ದರು. ಅಲ್ಲದೇ ಹೆಬ್ಬಾಳ ಚುನಾವಣೆ, ವಾಚ್ ಉಡುಗೊರೆ ಪ್ರಕರಣ, ಲೋಕಾಯುಕ್ತಕ್ಕೆ ಪರ್ಯಾಯವಾಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ದೂರು ಹೇಳಿದ್ದರು. ಸಿದ್ದರಾಮಯ್ಯ ನಡೆ, ನುಡಿ ಬದಲಿಸಿಕೊಳ್ಳದಿದ್ದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕೃಷ್ಣ ಅವರು ಪಕ್ಷದ ಮೇಲಿನ ನೈಜ ಕಾಳಜಿಯಿಂದ ಇವುಗಳನ್ನು ಮಾಡುತ್ತಿದ್ದಾರೆಯೇ? ಪಕ್ಷ ದಿನೇ ದಿನೇ ಅವನತಿಯತ್ತ ಸಾಗುತ್ತಿದೆ ಎಂಬ ನೋವು ಅವರಿಂದ ಈ ಕೆಲಸ ಮಾಡಿಸಿದೆಯೇ? ಸಿದ್ದರಾಮಯ್ಯ ಅವರು ತಮ್ಮಂಥ ಹಿರಿಯ ನಾಯಕರಿಗೆ ಕವಡೆ ಕಿಮ್ಮತ್ತು ಕೊಡುತ್ತಿಲ್ಲ, ಮೂಲ ನಿವಾಸಿಗಳನ್ನು ಕಡೆಗಣಿಸಿ, ತಮ್ಮೊಂದಿಗೆ ಬಂದ ವಲಸಿಗರಿಗೆ ಮಾತ್ರ ಮಣೆ ಹಾಕಿದ್ದಾರೆ, ಮೇಲ್ವರ್ಗದವರನ್ನು ಉಪೇಕ್ಷೆ ಮಾಡಿದ್ದಾರೆ ಎಂಬ ಸಿಟ್ಟೇನಾದರೂ ಇದೆಯೇ..?

ಯೆಸ್, ಇವೆಲ್ಲವೂ ನಿಜ. ಪಕ್ಷದ ಮೇಲಿನ ಮಮತೆ, ಸಿಎಂ ಅವರಂಥವರಿಂದ ತಮ್ಮ ಹಿರಿಯತನ ಬಯಸುವ ಗೌರವದ ಕೊರತೆ ಎಸ್.ಎಂ. ಕೃಷ್ಣ ಅವರನ್ನು ಕಾಡಿರುವುದು ಸುಳ್ಳಲ್ಲ. ಆದರೆ ಇವೆಲ್ಲಕ್ಕೂ ಮಿಗಿಲಾದ ಮತ್ತೊಂದು ಕಾರಣವಿದೆ. ಆ ಕಾರಣದ ಮೂಲ 2004 ರಷ್ಟು ಹಿಂದಕ್ಕೆ ಓಡಿ, ಅಲ್ಲಿಂದ ಮುಂದೆ 2014 ಕ್ಕೆ ಬಂದು ನಿಲ್ಲುತ್ತದೆ. ಅದೇನೆಂದರೆ..,

2004 ರ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ರಚನೆ ಪರಿಸ್ಥಿತಿ ನಿರ್ಮಾಣವಾದಾಗ ಮುಖ್ಯಮಂತ್ರಿ ಮಾಡುವ ಸಂದೇಶ ರವಾನಿಸಿ ಎಸ್.ಎಂ. ಕೃಷ್ಣ ಅವರನ್ನು ತಮ್ಮ ದಿಲ್ಲಿ ನಿವಾಸಕ್ಕೆ ಬರುವಂತೆ ಮಾಡಿಕೊಂಡ ದೇವೇಗೌಡರು ನಂತರ ಧರ್ಮಸಿಂಗ್ ಅವರನ್ನು ಸಿಎಂ ಮಾಡಿಟ್ಟರು. ಅಷ್ಟಕ್ಕೆ ಸುಮ್ಮನಾಗದೆ ಸಿಎಂ ಮಾಡಿ ಅಂತ ಕೃಷ್ಣ ತಮ್ಮ ಮನೆಗೆ ಬಂದಿದ್ದರು ಅಂತ ಆಡಿಕೊಂಡರು. ಈ ಅಪಮಾನದಿಂದ ಕೊತಕೊತ ಕುದಿಯುತ್ತಿದ್ದ ಕೃಷ್ಣ, ಆ ಕಡೆ ಜೆಡಿಎಸ್ ನಲ್ಲಿ ಗೌಡರಿಂದಾಗಿಯೇ ತಮಗೆ ಸಿಎಂ ಗಾದಿ ತಪ್ಪಿತೆಂದು ಕೆಂಡಮಂಡಲರಾಗಿದ್ದ ಸಿದ್ದರಾಮಯ್ಯ ಅವರನ್ನು ಜತೆ ಮಾಡಿಕೊಂಡರು. ಗೌಡರ ವಿರುದ್ಧ ಅವರನ್ನು ಎತ್ತಿಕಟ್ಟಿದರು. ರಾಜ್ಯಾದ್ಯಂತ ಅಹಿಂದ ಸಮಾವೇಶಗಳನ್ನು ಸಂಘಟಿಸಲು ಪರೋಕ್ಷ ನೆರವು ಒದಗಿಸಿದರು. ಅಷ್ಟೇ ಅಲ್ಲದೇ ಮುಂದೆ ಸಿದ್ದರಾಮಯ್ಯ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಹೈಕಮಾಂಡ್ ಮಟ್ಟದಲ್ಲಿ ವೇದಿಕೆ ಸಜ್ಜುಗೊಳಿಸಿದರು. ಅದಕ್ಕೆ ಪೂರಕವಾಗಿ ಕೆಲಸ ಮಾಡಿದವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವರಾದ ಎಚ್. ವಿಶ್ವನಾಥ್ ಹಾಗೂ ಎಚ್.ಎಂ. ರೇವಣ್ಣ. ವಾಸ್ತವವಾಗಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಗೆ ಕರೆತಂದದ್ದು ಕೃಷ್ಣ ಅವರೇ. ಅದನ್ನವರು ಮಾಡಿದ್ದು ದೇವೇಗೌಡರಿಗೆ ಪಾಠ ಕಲಿಸಲು.

ಕಾಂಗ್ರೆಸ್ ಗೆ ಬಂದ ನಂತರ ಸಿದ್ದರಾಮಯ್ಯ ಹಾದಿ ಸುಗಮವಾಗಿರಲಿಲ್ಲ. ಗತ್ತು, ಗೈರತ್ತು ಅವರ ಮೂಲಗುಣ. ಅದರ ಜತೆ ಹೈಕಮಾಂಡ್ ಜತೆ ನೇರ ಸಂಪರ್ಕ ಸಾಧನೆ ಅವರ ಕುತ್ತಿಗೆಯನ್ನು ಇನ್ನಷ್ಟು ಮೇಲಕ್ಕೆತ್ತಿತ್ತು. ಆದರೆ ಇದನ್ನು ಸಹಿಸದ ಮೂಲನಿವಾಸಿ ನಾಯಕರು ಅವರ ವಿರುದ್ಧ ಹೈಕಮಾಂಡ್ ಗೆ ತರಹೇವಾರಿ ದೂರುಗಳನ್ನು ರವಾನಿಸುತ್ತಿದ್ದರು. ದುರ್ಗಮ ಹಾದಿಯಲ್ಲಿ ಬೇವು-ಬೆಲ್ಲ ಎರಡನ್ನೂ ಉಂಡು ಸಾಗಿದ ಸಿದ್ದರಾಮಯ್ಯ ಮೂಲನಿವಾಸಿಗಳ ಒಳಗುದಿಯ ನಡುವೆಯೂ ವಿಧಾನಸಭೆ ಪ್ರತಿಪಕ್ಷ ನಾಯಕರಾದರು. ಆಗಲೂ ಅವರು ಪಟ್ಟ ಪಾಡು ಕಡಿಮೆಯೇನಲ್ಲ. ಆಗೆಲ್ಲ ಸಿದ್ದರಾಮಯ್ಯ ಜತೆ ಹರಿಪ್ರಸಾದ್ ಬಂಡೆಗಲ್ಲಿನಂತೆ ನಿಂತರು. 2013 ರ ಚುನಾವಣೆ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಆದರು. ಆಗಲೂ, ಚುನಾವಣೆಯಲ್ಲಿ ಸೋತಿದ್ದ ಪರಮೇಶ್ವರ್ ಅವರಿಂದ ಹಿಡಿದು ಸಾಕಷ್ಟು ಮಂದಿ ಸಿಎಂ ಸ್ಥಾನಾಕಾಂಕ್ಷಿಗಳಿದ್ದರು. ಆದರೆ ಅವರ ಆಕಾಂಕ್ಷೆ ಆಕಾಂಕ್ಷೆಗಷ್ಟೇ ಸೀಮಿತವಾಗಿ ಸಿದ್ದರಾಮಯ್ಯ ಸಿಎಂ ಆದರು.

ವರ್ಷದ ನಂತರ 2014 ರ ಜುಲೈನಲ್ಲಿ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾವಣೆ ನಡೆಯಿತು. ಆಗ ಎಸ್.ಎಂ. ಕೃಷ್ಣ ಕೂಡ ರಾಜ್ಯಸಭೆ ಪ್ರವೇಶಾಕಾಂಕ್ಷಿ ಆಗಿದ್ದರು. ಇದಕ್ಕೆ ಸಿದ್ದರಾಮಯ್ಯ ಬೆಂಬಲ ನೀಡಬಹುದು ಎಂಬುದು ಅವರ ನಿರೀಕ್ಷೆ ಆಗಿತ್ತು. ಯಾಕೋ, ಏನೋ ಗೊತ್ತಿಲ್ಲ. ಸಿದ್ದರಾಮಯ್ಯನವರು ಮಾತ್ರ ಒಕ್ಕಲಿಗ ಸಮುದಾಯದವರೇ ಆದ ಪ್ರೊ. ರಾಜೀವಗೌಡ ಅವರ ಉಮೇದುವಾರಿಕೆಯನ್ನು ಬೆಂಬಲಿಸಿದರು. ಹರಿಪ್ರಸಾದ್ ಜತೆ ರಾಜೀವಗೌಡ ರಾಜ್ಯಸಭೆ ಪ್ರವೇಶಿಸಿದರು. ಸಿದ್ದರಾಮಯ್ಯ ಅವರಿಂದ ಇದನ್ನು ನಿರೀಕ್ಷಿಸದಿದ್ದ ಕೃಷ್ಣ ಅಲ್ಲಿಂದಾಚೆಗೆ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ. ಅದರ ಪರಿಣಾಮವೇ ಈ ಹೇಳಿಕೆಗಳು ಹಾಗೂ ಹೈಕಮಾಂಡ್ ಗೆ ದೂರುಗಳು!

Leave a Reply