ಉಗ್ರವಾದದ ವಿಷಯದಲ್ಲಿ ವಿಶ್ವಸಂಸ್ಥೆಗೇ ಟಾಂಗ್ ಕೊಟ್ರು ಮೋದಿ

 

ಡಿಜಿಟಲ್ ಕನ್ನಡ ಟೀಮ್

ಉಗ್ರವಾದ ಪ್ರಸ್ತುತ ವಿಶ್ವದ ಶಾಂತಿಯನ್ನೇ ಕದಡಿರುವ ದೊಡ್ಡ ಸಮಸ್ಯೆ. ಈ ಸಮಸ್ಯೆಯನ್ನು ಬಗೆಹರಿಸಲು ವಿಫಲವಾಗಿರುವ ವಿಶ್ವಸಂಸ್ಥೆಗೆ ಭಾರತ ಪ್ರಧಾನಿ ಮೋದಿ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಕಳೆದ ವಾರ ಬ್ರುಸೆಲ್ಸ್ ನಲ್ಲಿ ನಡೆದ ಉಗ್ರರ ದಾಳಿಯ ಬೆನ್ನಲ್ಲೇ ಬೆಲ್ಜಿಯಂಗೆ ಭೇಟಿ ನೀಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ‘ಉಗ್ರವಾದ ಅಂದರೆ ಏನು ಎಂಬುದರ ಸ್ಪಷ್ಟ ವ್ಯಾಖ್ಯಾನ ವೇ ವಿಶ್ವಸಂಸ್ಥೆ ಬಳಿ ಇಲ್ಲ, ಉಗ್ರವಾದಕ್ಕೆ ಸಹಕರಿಸುತ್ತಿರುವ ದೇಶಗಳನ್ನೂ ಈ ವ್ಯಾಖ್ಯಾನದೊಳಗೆ ತರಬೇಕೆಂಬುದರ ಅರಿವಿಲ್ಲ’ ಎನ್ನುವುದರ ಮೂಲಕ ಪರೋಕ್ಷವಾಗಿ ಪಾಕಿಸ್ತಾನದ ಮೇಲೆ ಒತ್ತಡ ಹಾಕಿದ್ದಾರೆ.

ತಮ್ಮ ಮುಂದಿನ ಪ್ರವಾಸವಾದ ವಾಷಿಂಗ್ಟನ್ ಡಿ. ಸಿ. ಗೆ ತೆರಳುವುದಕ್ಕೂ ಮುಂಚೆ ಅವರು ಬೆಲ್ಜಿಯಂನಲ್ಲಿ ಭಾರತೀಯ ಮೂಲದವರನ್ನು ಉದ್ದೇಶಿಸಿ ಮಾತನಾಡಿದರು.

‘ಯುದ್ಧ ಹೇಗಾಗುತ್ತೆ? ಯುದ್ಧದ ಪರಿಣಾಮವೇನು? ಯುದ್ಧ ತಡೆಗಟ್ಟಲು ಯಾವ ಮಾರ್ಗ ಇವೆ? ಎಂಬ ಪ್ರಶ್ನೆಗೆ ವಿಶ್ವ ಸಂಸ್ಥೆಯಲ್ಲಿ ಲಿಖಿತ ಉತ್ತರ ಸಿಗುತ್ತದೆ. ಅದೂ ಪುಟಗಟ್ಟಲೆ. ಅದೇ ಉಗ್ರವಾದದ ಬಗ್ಗೆ ಕೇಳಿದರೆ, ಸ್ವತಃ ವಿಶ್ವಸಂಸ್ಥೆಗೆ ಈ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲ. ಯಾರು ಉಗ್ರವಾದಿಗಳು? ಯಾವ ರಾಷ್ಟ್ರ ಉಗ್ರವಾದವನ್ನು ಸಮರ್ಥಿಸಿಕೊಳ್ಳುತ್ತವೆ? ಯಾವ ರಾಷ್ಟ್ರ ಉಗ್ರರಿಗೆ ಆಶ್ರಯ ನೀಡಿದೆ? ಎಂಬದರ ಬಗ್ಗೆ ಸ್ಪಷ್ಟ ವ್ಯಾಖ್ಯಾನ ನೀಡಿ ಒಂದು ನಿರ್ಧಾರಕ್ಕೆ ಬನ್ನಿ. ಈ ಅಂಶಗಳ ಮೇಲೆ ಬೆಳಕು ಚೆಲ್ಲಿ ಎಂದು ಹಲವು ವರ್ಷಗಳಿಂದ ಭಾರತ, ವಿಶ್ವ ಸಂಸ್ಥೆಗೆ ಮನವಿ ಮಾಡುತ್ತಾ ಬಂದಿದೆ. ವಿಶ್ವಸಂಸ್ಥೆ ಪರಿಸ್ಥಿತಿ ಕೈ ಮೀರುವ ಮುನ್ನ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆಗ ಕ್ರಮೇಣವಾಗಿ ಸಮಸ್ಯೆ ತಣ್ಣಗಾಗುತ್ತದೆ’ ಅಂದ್ರು ಮೋದಿ.

‘ಕಳೆದ ವರ್ಷ ಉಗ್ರವಾದದಿಂದ ಸುಮಾರು 90ಕ್ಕೂ ಹೆಚ್ಚು ದೇಶಗಳು ನರಳಿವೆ. ಭಾರತಕ್ಕೆ ಇದು 40 ವರ್ಷಗಳಿಂದ ಕಾಡುತ್ತಿರುವ ಸಮಸ್ಯೆ. 2001ರ ಸೆಪ್ಟೆಂಬರ್ 11ರಂದು ಅಮೆರಿಕದ ವಾಣಿಜ್ಯ ಕಟ್ಟಡ ಮೇಲಿನ ದಾಳಿಯಿಂದ ಇಡೀ ವಿಶ್ವವೇ ಬೆಚ್ಚಿಬಿದ್ದಿತು. ಅಲ್ಲಿಯವರೆಗೂ ವಿಶ್ವದ ಪ್ರಮುಖ ರಾಷ್ಟ್ರಗಳು ಭಾರತದ ಪರಿಸ್ಥಿತಿಯನ್ನು ಅರಿತಿರಲಿಲ್ಲ. ಆದರೆ ಭಾರತ ಈವರೆಗೂ ಉಗ್ರವಾದಕ್ಕೆ ತಲೆ ಬಾಗಿಲ್ಲ, ಬಾಗುವುದೂ ಇಲ್ಲ.’ ಅಂತ ಬೆಲ್ಜಿಯಂನಲ್ಲಿ ಭಾರತೀಯ ಮೂಲದವರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಮೋದಿ ಹೇಳಿದ್ರು.

ಹೀಗೆಲ್ಲ ಉಗ್ರವಾದದ ವಿಷಯದಲ್ಲಿ ಭಾರತದ ನಿಲುವನ್ನು ಪ್ರತಿಪಾದಿಸಿದ ಮೋದಿ ಇನ್ನೊಂದು ಮಾತನ್ನೂ ಸೇರಿಸಿದ್ದಾರೆ.  ‘ಉಗ್ರವಾದದ ಜತೆ ಧರ್ಮದ ಕೊಂಡಿಯನ್ನು ತೆಗೆಯಬೇಕಿದೆ.  ಭಯೋತ್ಪಾದನೆಯನ್ನು ಕೇವಲ ಬಂದೂಕಿನ ಸಹಾಯದಿಂದ ಮಾತ್ರವೇ ಮುಗಿಸುವುದಕ್ಕೆ ಆಗುವುದಿಲ್ಲ. ಸಮಾಜದಲ್ಲಿ ಯುವಕರು ಮೂಲಭೂತವಾದದ ಕಡೆ ವಾಲದಂಥ ವಾತಾವರಣವನ್ನೂ ನಿರ್ಮಿಸಬೇಕು.’

Leave a Reply