ನಿಮ್ಮ ಅಪೂರ್ಣ ಕನಸನ್ನು ಮಕ್ಕಳ ಬೆನ್ನಿಗೆ ಕಟ್ಟಬೇಡಿ, ಅವರೂ ಹೊಸ ಕನಸು ಕಾಣಲಿ ಬಿಡಿ..

 

author-shama“ಒಂದು ತುಂಬ ಇಂಪಾರ್ಟೆಂಟ್ ವಿಷ್ಯ ಮಾತಾಡೋದಿತ್ತು ಕಣೇ, ಬಿಡುವಾಗಿದೀಯಾ ? ಹೇಳಲಾ?”

“ಹೇಳು ಫ್ರೀ ಇದೀನಿ..”

“ಗೌತಮನ್ನ ಟ್ಯೂಶನ್ ಕ್ಲಾಸಿಗೆ ಸೇರಿಸ್ಬೇಕು ಕಣೇ. ಗಣಿತ ಮತ್ತು ವಿಜ್ಞಾನಗಳಲ್ಲಿ ಟ್ಯೂಶನ್ ಹೇಳೋಕೆ ಯಾರಾದರೂ ಗೊತ್ತಾ ನಿಂಗೆ?”

“ಟ್ಯೂಶನ್ ಹೇಳೋರು ಗೊತ್ತಿಲ್ಲ ಅಂತಲ್ಲ, ಆದ್ರೆ ಈಗ ರಜ ಬಂತು. ಅಲ್ದೇ ಅವನಿನ್ನೂ ಬರೀ ಮೂರನೇ ಕ್ಲಾಸು ತಾನೇ?”

“ಹೌದು ಆದ್ರೆ ಅವನು ಅವೆರಡು ಸಬ್ಜೆಕ್ಟ್ ಗಳಲ್ಲಿ ತುಂಬ ವೀಕ್ ಇದಾನಂತೆ. ಮೊನ್ನೆ ಪ್ರೊಗ್ರೆಸ್ ಕಾರ್ಡ್ ಕೊಡುವಾಗ ಅವರ ಕ್ಲಾಸ್ ಟೀಚರ್ ಹೇಳಿದ್ರು..”

“ಬಿಡೋ ಅಷ್ಟೆಲ್ಲ ತಲೆ ಕೆಡಿಸ್ಕೋಬೇಡ. ಇನ್ನೂ ಚಿಕ್ಕೋನು ಕಲೀತಾನೆ. ಸುಮ್ನೇ ರಜದಲ್ಲೂ ಓದೋಕೆ ಹೇಳಿ ಯಾಕೋ ಹಿಂಸೆ ಕೊಡ್ತೀ. ಅವನಿಗಿಷ್ಟ ಆಗೋ ಈಜು ಅಥವಾ ಡ್ರಾಯಿಂಗ್ ಕಲಿಯೋಕೆ ಕಳ್ಸು.”

“ಓ ಯಾಕ್ಹೇಳು.. ಹೀಗೇ ಬಿಟ್ರೆ ಅಷ್ಟೇ ಆಮೇಲೆ. ಅದೂ ಅವೆರಡು ವಿಷ್ಯಗಳಲ್ಲೇ ವೀಕ್ ಆದ್ರೆ ಮುಂದೆ ಡಾಕ್ಟರ್ ಆಗೋದು ಹ್ಯಾಗೆ ಇವನು?”

“ಯಪ್ಪಾ ಮಾರಾಯಾ ಯಾಕೋ ಅವನು ಡಾಕ್ಟರೇ ಆಗಬೇಕು? ಹಾಗೇನಾದ್ರೂ ರೂಲ್ಸ್ ಇದೆಯಾ ? ಫುಟ್ ಬಾಲ್ ಪ್ಲೇಯರೇ ಆಗ್ಲಿ ಬಿಡು ಏನೀಗ?”

“ನಿಂಗಿದೆಲ್ಲ ಗೊತ್ತಾಗಲ್ಲ ಬಿಡು; ನಂಗೆಷ್ಟು ಆಸೆ ಇತ್ತು ಗೊತ್ತಾ ಡಾಕ್ಟರ್ ಆಗೋಕೆ ? ಅಷ್ಟು ಮಾರ್ಕ್ಸ್ ತೊಗೊಂಡ್ರೂ ಓದಿಸೋಕೆ ಆವಾಗ ದುಡ್ಡಿರಲಿಲ್ಲ. ನನಗಂತೂ ಆಗಲಿಲ್ಲ, ಅವನನ್ನಾದ್ರೂ ಡಾಕ್ಟರ್ ಮಾಡೋಣ ಅಂತ ಈಗ ನಾವಿಬ್ರೂ ಕೈ ತುಂಬ ದುಡೀತಿದೀವಿ. ನಿಂಗೆ ಒಳ್ಳೆ ಟೀಚರ್ ಗೊತ್ತಿದ್ರೆ ಹೇಳು ಇಲ್ಲ ಅಂದ್ರೆ ಹೋಗ್ಲಿ ಬಿಡು.”

ಇದು ವಾರದ ಹಿಂದೆ ಪೋನ್ ಮಾಡಿದ ಗೆಳೆಯನಿಗೂ ನಂಗೂ ನಡೆದ ಸಂಭಾಷಣೆಯಿಂದ ಆಯ್ದ ಭಾಗ. ಇದು ಅವನೊಬ್ಬನ ಕಥೆಯಲ್ಲ. ಬಹಳಷ್ಟು ಅಪ್ಪ ಅಮ್ಮಂದಿರ ಕಥೆ. ತಮ್ಮ ಜೀನ್ ಗಳನ್ನು ಹೊತ್ತು ಹುಟ್ಟಿದ ಮಕ್ಕಳು ತಮ್ಮ ಅಪೂರ್ಣ ಕನಸುಗಳನ್ನ ತಮ್ಮ ಬೆನ್ನಿಗೆ ಕಟ್ಟಿಕೊಂಡು ನಡೆಯಲಿ ಎಂಬ ಆಸೆ. ತಾವು ಸಾಧಿಸಲಾಗದ್ದನ್ನು ಅವರು ಸಾಧಿಸಿದರೆ ಅದನ್ನು ತಮ್ಮದೇ ಎಂಬಂತೆ ಬೀಗುವ ಹಂಬಲ. ದುಡ್ಡೊಂದು ದುಡಿದು ಗುಡ್ಡೆ ಹಾಕಿ “ನೀ ಹೀಗೇ ಆಗಬೇಕ್” ಎಂದು ಹುಕುಂ ಜಾರಿ ಮಾಡುವ ಪೋಷಕರ ಸಂಖ್ಯೆ ನಮ್ಮ ನಡುವೆ ಕಡಿಮೆಯಿಲ್ಲ.

ಮಕ್ಕಳು ತಮ್ಮ ಆಸೆಯನ್ನು ಈಡೇರಿಸಲಿ ಎನಿಸುವುದು ತಪ್ಪೇನಲ್ಲ, ಆದರೆ ಮಕ್ಕಳ ಮೇಲೆ ಹಾಗೆ ಒತ್ತಡ ಹೇರುವುದು ತಪ್ಪು. ಅಂದಿನ ಕಾಲವೇ ಬೇರೆಯಿತ್ತು. ದುಡ್ಡಿರುವವರಿಗೆ ಡಾಕ್ಟರು, ಇಂಜಿನಿಯರಿಂಗ್ ಅಂತಾದರೆ ಇಲ್ಲದವರಿಗೆ ಬಹುತೇಕ ಟಿ.ಸಿ.ಹೆಚ್, ಬಿ.ಎಡ್ ಅಥವಾ ಕಾನೂನು ಪದವಿಯಂಥ ಒಂದಷ್ಟು ಆಯ್ಕೆಗಳು ಮಾತ್ರ ಇದ್ದವು. ಬಿ.ಎಸ್.ಆರ್.ಬಿ ಬರೆದರೆ ಬ್ಯಾಂಕು, ಕೆ.ಪಿ.ಎಸ್.ಸಿ ಬರೆದರೆ ಸರ್ಕಾರಿ ನೌಕರಿ ಅನ್ನೋದು ಭದ್ರ ನಂಬಿಕೆ. ಆಸಕ್ತಿಗೆ ತಕ್ಕಂತೆ ಓದುವ ಅವಕಾಶ ಸಿಕ್ಕುತ್ತಿದ್ದುದು ಬಹಳ ಕಡಿಮೆ ಮಂದಿಗೆ. ಈಗಿನ ಮಕ್ಕಳಿಗೆ ಹಾಗಲ್ಲ. ದಶದಿಕ್ಕುಗಳಲ್ಲೂ ಸಾವಿರಗಟ್ಟಲೇ ಆಯ್ಕೆಯಿದೆ. ಅವರವರ ಆಸಕ್ತಿಗೆ ತಕ್ಕನಾಗಿ ಓದಬಹುದಾದ ಕೋರ್ಸುಗಳಿದ್ದಾವೆ. ಕೆಲವು ಸಂಸ್ಥೆಗಳು ಒಂದಷ್ಟು ‘ಕಸ್ಟಮೈಸ್ಡ್’ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿದ್ದಾವೆ ಎನ್ನುವುದನ್ನ ಹೆಗ್ಗಳಿಕೆಯೆಂದು ಜಾಹೀರಾತು ನೀಡುತ್ತಿದ್ದಾವೆ.

ಅಚ್ಚರಿ ಮತ್ತು ಖುಷಿಯ ವಿಚಾರ ಅಂದರೆ ಇಂದಿನ ಮಕ್ಕಳೂ ಕೂಡ ತಮ್ಮ ಆಸಕ್ತಿಗೆ ಅನುಗುಣವಾಗಿ ಮಾಡಿಕೊಂಡ ಆಯ್ಕೆ ಎಷ್ಟು ಅಪರೂಪದ್ದು ಅಥವಾ ಕಷ್ಟದ್ದಾಗಲೀ ಅದನ್ನು ದಕ್ಕಿಸಿಕೊಳ್ಳುವ ಛಾತಿ ಹೊಂದಿದ್ದಾರೆ. ಈ ಯುಗದಲ್ಲಿ ಮಕ್ಕಳಿಗೆ ಬೇಕಾದ್ದಕ್ಕಿಂತ  ಹೆಚ್ಚಿನದನ್ನೇ ತಂದು ಕಣ್ಣ ಮುಂದಿಡುತ್ತಿದೆ ನಡು ಮನೆಯಲ್ಲಿರುವ ಟಿ.ವಿ ಯೆಂಬ ಪುಟ್ಟ ಪೆಟ್ಟಿಗೆ ಮತ್ತು ಒಳ ಮನೆಯಲ್ಲಿರುವ ಇಂಟರ್ ನೆಟ್ ಎಂಬ ಮಾಯಾ ಜಾಲಗಳು. ಅರಗಿಸಿಕೊಳ್ಳುವಲ್ಲಿ ಮಕ್ಕಳೂ ಕೂಡ ನಮ್ಮ ತಲೆಮಾರಿಗಿಂತ ಅದೆಷ್ಟೋ ಮುಂದಿದ್ದಾರೆ.

ಇತ್ತೀಚಿನ ಸಂಶೋಧನೆಗಳು ಹೇಳುವ ಪ್ರಕಾರ “ಪೋಷಕರ ಕನಸು ಈಡೇರಿಸಲು ಓದುವ ಮಕ್ಕಳಿಗಿಂತ ತಮ್ಮದೇ ಗುರಿ ಇಟ್ಟುಕೊಂಡು ಅದರ ಕಡೆಗೆ ಮುಖ ಮಾಡಿ ನಡೆವ ಮಕ್ಕಳು ಓದಿನಲ್ಲಿ ಮುಂದಿರುತ್ತಾರೆ. ಪಠ್ಯೇತರ ಚಟುವಟಿಕೆಗಳಲ್ಲೂ ಗಣನೀಯ ಸಾಧನೆ ಮಾಡುವ ಶಕ್ತಿ ಸಾಮರ್ಥ್ಯ ಹೊಂದಿ ಖುಷಿಯಾಗಿರುತ್ತಾರೆ”. ಕಾರಣ ತುಂಬ ಸರಳ ತಮ್ಮ ಇಷ್ಟದ ದಾರಿಯಲ್ಲಿ ನಡಿಗೆ ತ್ರಾಸದಾಯಕ ಎನಿಸುವುದಿಲ್ಲ. ಜತೆಗೇ ತನ್ನ ಆಯ್ಕೆಯನ್ನು ಸರಿಯಾಗಿರುವಂತೆ ನೋಡಿಕೊಳ್ಳುವುದು ತನ್ನ ಜವಾಬ್ದಾರಿ ಎಂಬುದು ಸುಪ್ತ ಚಾಲಕ ಶಕ್ತಿಯಾಗಿ ಕೆಲಸ ಮಾಡುತ್ತದೆ. ಯಾವುದೋ ಒಂದು ಸಂದರ್ಭದಲ್ಲಿ ಪೋಷಕರು ನಮ್ಮ ಆಸೆ ಹೀಗಿದೆ ಎಂದು ಮಕ್ಕಳ ಬಳಿ ಹೇಳಿದರೆ ಸಾಕು ಇಂದಿನ ಮಕ್ಕಳಿಗೆ ಅರ್ಥವಾಗುತ್ತದೆ. ಅದರೊಂದಿಗೆ ವಿವಿಧ ಓದು ಮತ್ತು ಉದ್ಯೋಗಗಳ ಬಗ್ಗೆ ಒಂದಷ್ಟು ಮಾಹಿತಿ ನೀಡಿದರಾಯ್ತು. ಪೋಷಕರ ಆಸೆಯೇ  ಅವರದೂ ಆದರೆ ಸರಿ ಇಲ್ಲದೇ ಹೋದರೆ ತಮಗೆ ಖುಷಿ ಕೊಡುವಂಥದ್ದನ್ನು ಆಯ್ಕೆ ಮಾಡುತ್ತಾರೆ. ಮತ್ತು ಅದುವೇ ಸರಿಯಾದದ್ದು ಕೂಡ. ಒತ್ತಾಯದ  ಕಲಿಕೆ ಬಹಳ ದಿನ ಬಾಳದು.

ಜಗತ್ತನ್ನು ಬೇರೆಯದೇ ದೃಷ್ಟಿಕೋನದಿಂದ ನೋಡುತ್ತಿರುವ ಇಂಥ ಕನಸು ಕಣ್ಣುಗಳ ಮುಂದೆ ಇಂದು ಇಡಬೇಕಾಗಿರುವುದು ಅವಕಾಶಗಳ ವಿವರ ಮತ್ತು ಅವನ್ನು ತಲುಪಲು ಹಿಡಿಯಬೇಕಿರುವ ದಾರಿಗಳ ನೀಲ ನಕ್ಷೆ. ಬದಲಿಗೆ ಒತ್ತಾಯದ ಹೊರೆಯನ್ನು ಕಟ್ಟಿದರೆ ಅರ್ಧ ದಾರಿ ಹೋಗಿ ಹಿಂದಕ್ಕೆ ಬಂದಾರು. ಕೆಲವೊಮ್ಮೆ ಹಿಂದೆ ಬರದೆ ತಮ್ಮದೇ ದಾರಿ ಹಿಡಿದು ಹೋದರೂ ಆಶ್ಚರ್ಯವಿಲ್ಲ. ಹೀಗಾದರೆ ಮಕ್ಕಳು ಮತ್ತು ಕನಸು ಎರಡೂ ದಕ್ಕುವುದಿಲ್ಲ. ತಪ್ಪು ಸರಿಗಳ ತಿಳುವಳಿಕೆ, ಪರಿಣಾಮಗಳ ವಿವರಣೆ ಮಾತ್ರ ಅರ್ಥ ಮಾಡಿಸಿ, ಅವರ ಆಕಾಂಕ್ಷೆಗಳಿಗೆ ಬೆಂಬಲದ ಬೆಳಕಾಗಿ ನಿಲ್ಲಬೇಕಿದೆ. ಅಪೂರ್ಣ ಕನಸುಗಳ ಮುಂದುವರಿಕೆಗಿಂತ ಹೊಸ ಕನಸಿನ ಹುಟ್ಟು ಪೂರ್ಣವಾಗುವತ್ತ ಮನಸು ಮಾಡಿದಾಗ ಭವಿಷ್ಯದಲ್ಲಿ ಮಕ್ಕಳು ಹೆಮ್ಮೆಯ ವಿಜಯ ಮಾಲೆ ತೊಡಿಸುತ್ತಾರಲ್ಲ ಅದು ಹೆಚ್ಚಿನ ಸಂಭ್ರಮ ಮತ್ತು ಮೌಲಿಕ.

2 COMMENTS

  1. ಲೇಖನದ ವಿಷಯ ಮತ್ತು ಆಶಯ ಚೆನ್ನಾಗಿದೆ. ಮಕ್ಕಳನ್ನು ಇಂದಿನ ಪೋಷಕರು ಅವರಿಷ್ಟದ ಹಾಗೆ ಬಿಟ್ಟು ಬಿಡಬೇಕೆ ಅಥವಾ ಅವರಿಗೊಂದು ಚಾನೆಲ್ ಹಾಕಿ ಕೊಡಬೇಕೆ ಎಂಬುದು ಒಂದು ರೀತಿಯ ಸಂದಿಗ್ಧ ವಿಚಾರವಾಗಿ ನಿಂತಿದೆ. ಎರಡರಲ್ಲೂ ವೈಪರೀತ್ಯಗಳಿವೆ. ಅಪ್ಪಾ ಅಮ್ಮಾ ಹೇಗೋ ಮಾಡ್ತಾರೆ ಅಂತ ಸುಮ್ಮನೆ ಬಿಟ್ಟ ಮಕ್ಕಳು ತಮ್ಮ ಬದುಕನ್ನು ಹಲವು ತಿರುವುಗಳಲ್ಲಿ ಸವೆಸಿ ತಾವೇ ಉತ್ತಮ ಜೀವನ ರೂಪಿಸಿಕೊಂಡವರೂ ಇದ್ದಾರೆ, ತಪ್ಪು ಹಾದಿಗೆ ಹೋದವರೂ ಇದ್ದಾರೆ. ಇದೇ ರೀತಿ ಮಕ್ಕಳಿಗಾಗಿ ಒಂದು ಯೋಜನೆ ರೂಪಿಸಿ ಅದಕ್ಕೆ ತಕ್ಕ ಹಾಗೆ ಸಿದ್ಧ ಮಾಡಿದಾಗ ಮಕ್ಕಳು ಉತ್ತಮತೆ ತಲುಪಿದ ನಿದರ್ಶನಗಳೂ ಇವೆ. ವೆತ್ಯಾಸವಾದವುಗಳೂ ಇವೆ. ಎಲ್ಲಾ ಅಪ್ಪ ಅಮ್ಮಂದಿರೂ ತಾವು ಬದುಕಿನ ರೀತಿ ನೀತಿಯಲ್ಲಿ ತಮ್ಮದೇ ಆದ ಔನ್ನತ್ಯ ಕಾಪಾಡಿಕೊಂಡಿಲ್ಲದೆ ಅದನ್ನು ಮಕ್ಕಳಲ್ಲಿ ಬೆಳೆಸುವುದು ಸಾಧ್ಯವಿಲ್ಲ. ಅದೇ ರೀತಿ ಅಂತಹ ಔನ್ನತ್ಯವನ್ನು ನಿರ್ಮಿಸುವಲ್ಲಿ ಶಾಲೆಯ ಶಿಕ್ಷಕರ ಪಾತ್ರವೂ ಮುಖ್ಯ. ಇಂದು ಸಾಗರದಂತೆ ತುಂಬಿರುವ ಶಾಲಾ ಕೊಠಡಿಗಳಲ್ಲಿ ಶಿಕ್ಷಕರು ಮತ್ತು ಮಕ್ಕಳ ನಡುವೆ ವೈಯಕ್ತಿಕ ಗಮನದ ಶಿಕ್ಷಣ ಕ್ರಮಗಳು ದುರ್ಲಭವಾಗುತ್ತಿರುವ ಹಾದಿಯಲ್ಲಿ ಇದೂ ಕಡಿಮೆ ಆಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಯಾವುದು ಹೇಗೆ ಸಾಗಬೇಕು ಎಂಬುದು ಎಲ್ಲೋ ಒಂದು ರೀತಿಯ ಪ್ರಬಂಧ ಮಂಡನೆಯ ವಸ್ತುವಾಗುತ್ತಿದೆಯೇ ವಿನಃ ವಾಸ್ತವ ಬದುಕಿನ ಸೂತ್ರವಾಗಿ ರೂಪುಗೊಳ್ಳುವುದರಲ್ಲಿ ಸಫಲವಾಗುತ್ತಿಲ್ಲವೇನೋ ಅನಿಸುತ್ತಿದೆ.

  2. @ ತಿರು ಶ್ರೀಧರ

    “ಎಲ್ಲಾ ಅಪ್ಪ ಅಮ್ಮಂದಿರೂ ತಾವು ಬದುಕಿನ ರೀತಿ ನೀತಿಯಲ್ಲಿ ತಮ್ಮದೇ ಆದ ಔನ್ನತ್ಯ ಕಾಪಾಡಿಕೊಂಡಿಲ್ಲದೆ ಅದನ್ನು ಮಕ್ಕಳಲ್ಲಿ ಬೆಳೆಸುವುದು ಸಾಧ್ಯವಿಲ್ಲ. ಅದೇ ರೀತಿ ಅಂತಹ ಔನ್ನತ್ಯವನ್ನು ನಿರ್ಮಿಸುವಲ್ಲಿ ಶಾಲೆಯ ಶಿಕ್ಷಕರ ಪಾತ್ರವೂ ಮುಖ್ಯ. ಇಂದು ಸಾಗರದಂತೆ ತುಂಬಿರುವ ಶಾಲಾ ಕೊಠಡಿಗಳಲ್ಲಿ ಶಿಕ್ಷಕರು ಮತ್ತು ಮಕ್ಕಳ ನಡುವೆ ವೈಯಕ್ತಿಕ ಗಮನದ ಶಿಕ್ಷಣ ಕ್ರಮಗಳು ದುರ್ಲಭವಾಗುತ್ತಿರುವ ಹಾದಿಯಲ್ಲಿ ಇದೂ ಕಡಿಮೆ ಆಗುತ್ತಿದೆ. ”

    ಈ ಮಾತು ನನ್ನದೂ ಕೂಡ. ಇದೇ ಕಾರಣಕ್ಕೆ ಬಹಳಷ್ಟು ಗೊಂದಲಗಳು ಸೃಷ್ಟಿಯಾಗಿ ಮಕ್ಕಳು ಕೂಡ ಅತಂತ್ರರಾಗುವುದು. ಒಟ್ಟಿನಲ್ಲಿ parenting ಅನ್ನುವುದು ಶತಮಾನದ ಬಹು ದೊಡ್ಡ ಚಾಲೆಂಜ್ ಆಗಿರೋದಂತೂ ಸತ್ಯ.

Leave a Reply