ಪಿಯು ಬೋರ್ಡ್ ನಿರ್ಲಕ್ಷಕ್ಕೆ ಮಿತಿ ಇಲ್ಲ.. ವಿದ್ಯಾರ್ಥಿಗಳ ಕಷ್ಟ ಕೇಳೋರಿಲ್ಲ..!

Students of PUC Science protest at PU Board for their various demand at Malleshwaram on Thursday.

ಡಿಜಿಟಲ್ ಕನ್ನಡ ಟೀಮ್

ಪ್ರತಿ ವರ್ಷ ಪಿಯುಸಿ ಪರೀಕ್ಷೆ ಬಂದರೆ ಸಾಕು ಒಂದಿಲ್ಲೊಂದು ಗೊಂದಲ. ಪ್ರತಿ ಬಾರಿಯ ತಪ್ಪಿನಿಂದ ಪಾಠ ಕಲಿಯಲು ಪಿಯು ಬೋರ್ಡ್ ಬಿಲ್ ಕುಲ್ ಸಿದ್ಧವಾಗಿಲ್ಲ. ಮಾ.21ರಂದು 1.74 ಲಕ್ಷ ವಿದ್ಯಾರ್ಥಿಗಳು ರಸಾಯನಿಕ ಶಾಸ್ತ್ರ ವಿಷಯದ ಪರೀಕ್ಷೆ ಬರೆದಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಅದನ್ನು ರದ್ದು ಮಾಡಿದ್ದ ಸರ್ಕಾರ ಮಾ.31ಕ್ಕೆ ಮರು ಪರೀಕ್ಷೆ ನಿಗದಿಪಡಿಸಿತ್ತು. ಈ ಬಾರಿ ಮತ್ತೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರೋದು ಕ್ರೂರ ವ್ಯಂಗ್ಯ ಹಾಗೂ ಇಲಾಖೆಯ ಅದಕ್ಷತೆಗೆ ಹಿಡಿದ ಕನ್ನಡಿ. ಇದೀಗ ಏಪ್ರಿಲ್ 12ಕ್ಕೆ ಮರುಪರೀಕ್ಷೆ ಘೋಷಣೆಯಾಗಿದೆ. ಇದೂ ಸಹ ಲೀಕ್ ಆಗಲ್ಲ ಅಂತ ಏನ್ ಗ್ಯಾರಂಟಿ ಅಂತ ಕೇಳುವಷ್ಟರಮಟ್ಟಿಗೆ ಪರೀಕ್ಷೆ ಎಂಬುದೇ ಜೋಕ್ ಆಗುವ ಸನ್ನಿವೇಶ ಬಂದಿದೆ.

 ತಮ್ಮ ಬದುಕಿಗೆ ತಿರುವು ಪಡೆಯುವ ಈ ಮಹತ್ವದ ದ್ವಿತೀಯ ಪಿಯು ಪರೀಕ್ಷೆಗಾಗಿ ವಿದ್ಯಾರ್ಥಿಗಳು ವರ್ಷವಿಡೀ ಹಗಲು ರಾತ್ರಿ ಎನ್ನದೇ ಓದಿರುತ್ತಾರೆ. ಇಂತಹ ಸಂದರ್ಭದಲ್ಲಿ ಪಿಯು ಬೋರ್ಡ್ ಅಧಿಕಾರಿಗಳ ಬೇಜವಾಬ್ದಾರಿತನ, ವಿದ್ಯಾರ್ಥಿಗಳ ಪರಿಶ್ರಮಕ್ಕೆ ಎಳ್ಳು ನೀರು ಬಿಡುತ್ತಿದೆ.

ಒಮ್ಮೆ ಪಿಯು ವಿದ್ಯಾರ್ಥಿಗಳ ಜಾಗದಲ್ಲಿ ನಿಂತು ನೋಡೋಣ. ಈ ಹಿಂದೆ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗ ಮರು ಪರೀಕ್ಷೆ ಮಾಡುವುದಾಗಿ ತಿಳಿಸಿದಾಗಲೇ ವಿದ್ಯಾರ್ಥಿಗಳು ಹೈರಾಣಾಗಿದ್ದರು. ಹೇಗೊ ಕಷ್ಟವೋ ಸುಖವೋ ಮತ್ತೆ ಬರೆಯೋಣ ಎಂದು ಮಾನಸಿಕವಾಗಿ ಸಿದ್ಧವಾಗಿ ಪರೀಕ್ಷೆ ಬರೆಯಲು ಮುಂದಾದ್ರು. ಆದರೆ, ಮತ್ತೆ ಪಶ್ರೆಪತ್ರಿಕೆ ಸೋರಿಕೆಯಾಗಿದೆ. ಇವೆಲ್ಲ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸೃಷ್ಟಿಸುವ ಒತ್ತಡ ಎಂಥಾದ್ದು?

ಏಪ್ರಿಲ್ 3ಕ್ಕೆ ಐಐಟಿ ಪ್ರವೇಶ ಪರೀಕ್ಷೆಯಾದ ಜೆಇಇ ಪರೀಕ್ಷೆ ನಡೆಯಲಿದೆ. ಇನ್ನೂ ಪಿಯು ಪರೀಕ್ಷೆ ಗುಂಗಿನಿಂದಲೇ ಹೊರಬರಲು ಸಾಧ್ಯವಾಗದೇ ಮತ್ತೊಂದನ್ನು ಅಪ್ಪಿಕೊಳ್ಳಬೇಕಾದ ಸವಾಲು ವಿದ್ಯಾರ್ಥಿಗಳಿಗೆ. ಈ ಜೆಇಇ ಪರೀಕ್ಷೆ ನಂತರ ಜೆಎಸ್ ಡಬ್ಲ್ಯೂ, ಕಾಮೆಡ್ ಕೆ, ಸಿಇಟಿ ಹೀಗೆ ಸಾಲು ಸಾಲು ಪರೀಕ್ಷೆ ಬರುತ್ತದೆ. ಪಿಯುಸಿ ಪರೀಕ್ಷೆಗಾಗಿ ಕೆಮಿಸ್ಟ್ರಿ ವಿಷಯವನ್ನೇ ಕೈಯಲ್ಲಿ ಹಿಡಿದುಕೊಂಡು ಕೂತರೆ, ಈ ಪ್ರವೇಶ ಪರೀಕ್ಷೆಗಳಿಗೆ ಓದೋದ್ಯಾವಾಗ?

ಇದಕ್ಕೆಲ್ಲ ಯಾಕೆ ತಲೆಕೆಡಿಸಿಕೊಳ್ಳಬೇಕು? ವಿದ್ಯಾರ್ಥಿಗಳೆಂದರೆ ಯಾವಾಗ ಕೇಳಿದರೂ ಬರೆಯಲು ಸಿದ್ಧರಿರಬೇಕು ಎಂತ ವಾದಿಸಬಹುದು. ಆದರೆ ಪರೀಕ್ಷೆ ಅಂಕಗಳೇ ಮುಂದಿನ ವೃತ್ತಿಜೀವನ ನಿರ್ಧರಿಸಲಿರುವ ವ್ಯವಸ್ಥೆಯನ್ನು ನಾವು ಪೊರೆದುಕೊಂಡಿರುವಾಗ, ಇವೆಲ್ಲ ಹೇಳಲಿಕ್ಕೆ ಸುಲಭವೇ ಹೊರತು ವಿದ್ಯಾರ್ಥಿಗಳಿಗೆ ಇಂಥ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ಯಾರೂ ಮಾಡುತ್ತಿಲ್ಲ.

ಯಾವುದೇ ಪರೀಕ್ಷೆ ನಡೆಸುವಾಗ ಪ್ರತಿ ವಿಷಯಕ್ಕೂ ಕನಿಷ್ಠ ಮೂರು ಪ್ರಶ್ನೆ ಪತ್ರಿಕೆ ಸಿದ್ಧಪಡಿಸೋದು ಸಾಮಾನ್ಯ ಪದ್ಧತಿ. ಗುರುವಾರ ಬೆಳಗಿನ ಜಾವ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಂತಿಮ ಕ್ಷಣದಲ್ಲಿ ಆ ಪ್ರಶ್ನೆ ಪತ್ರಿಕೆ ಬದಲಿಗೆ ಮತ್ತೊಂದು ಪ್ರಶ್ನೆ ಪತ್ರಿಕೆ ನೀಡಿ ಪರೀಕ್ಷೆ ನಡೆಸಬಹುದಿತ್ತು. ಆದರೆ, ನಡೆಸಲಿಲ್ಲ. ಅಷ್ಟರಮಟ್ಟಿಗೆ ಪರ್ಯಾಯ ವ್ಯವಸ್ಥೆ ಗಟ್ಟಿಯಿಲ್ಲ ಎಂಬುದಕ್ಕೆ ಸಚಿವರು, ಇಲಾಖೆ ಉತ್ತರಿಸಬೇಕು.

ಕೆಲ ದಿನಗಳ ಹಿಂದೆಯಾದ ಪ್ರಶ್ನೆಪತ್ರಿಕೆ ಸೋರಿಕೆಯಾದಾಗಲೇ ಸರ್ಕಾರ, ಶಿಕ್ಷಣ ಸಚಿವರು, ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿತ್ತು. ಇಷ್ಟೆಲ್ಲಾ ತಂತ್ರಜ್ಞಾನ ಮುಂದುವರಿದಿದ್ದರೂ ಒಂದು ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ನೋಡಿಕೊಳ್ಳೋದು ಇಷ್ಟೊಂದು ಕಷ್ಟವೇ ಎಂಬ ಅನುಮಾನ ಮೂಡುತ್ತದೆ. ಇಲ್ಲಿ ಪ್ರಶ್ನೆಪತ್ರಿಕೆಯನ್ನು ಕಾಪಾಡಿಕೊಳ್ಳುವುದು ಕಷ್ಟವೇನಲ್ಲ. ಆದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ, ಅಧಿಕಾರಿಗಳೇ ಭ್ರಷ್ಟರಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದಾಗ ಈ ರೀತಿಯ ಪರಿಸ್ಥಿತಿ ಎದುರಾಗುವುದು ಸಹಜ.

2000ದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗ ಆಗಿನ ನಿರ್ದೇಶಕರು ತನಿಖೆ ನಡೆಸಿ ನೀಡಿದ ವರದಿಯಲ್ಲಿ 14 ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿರೋದಾಗಿ ತಿಳಿಸಿದ್ದರು. ಆ 14 ಅಧಿಕಾರಿಗಳ ಪೈಕಿ 4 ಅಧಿಕಾರಿಗಳು ಇನ್ನೂ ಇದೇ ಮಂಡಳಿಯಲ್ಲಿ ಕಾರ್ಯ ನಿರ್ವಹಿಸಿಸುತ್ತಿದ್ದಾರೆ. ಇವೆಲ್ಲ ಏನನ್ನು ಸೂಚಿಸುತ್ತವೆ.

ಈ ನಡುವೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿರೋ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಈ ಬಗ್ಗೆ ಸಿಐಡಿ ತನಿಖೆ ಮಾಡ್ತಿವಿ, ತಪ್ಪಿತಸ್ಥರ ವಿರುದ್ಧ ಕ್ರಮ ತಗೋತಿವಿ’ ಎಂಬ ತಮ್ಮ ಹಳೇಯ ಪುಂಗಿಯನ್ನೇ ಊದಿದರು. ಆದರೆ, ವಿದ್ಯಾರ್ಥಿಗಳ ಪರಿಸ್ಥಿತಿ ಬಗ್ಗೆ, ಮುಂದೇನು ಮಾಡಬೇಕು, ಇದಕ್ಕೆ ಯಾರು ಹೊಣೆ ಹೊರಬೇಕು? ಎಂಬುದರ ಬಗ್ಗೆ ತುಟಿಬಿಚ್ಚಲಿಲ್ಲ. ಇದು ವಿದ್ಯಾರ್ಥಿಗಳ ಬಗ್ಗೆ ಸರ್ಕಾರದ ನಿರ್ಲಕ್ಷವನ್ನು ಎತ್ತಿ ತೋರಿದೆ.

ಈ ಬಗ್ಗೆ ಮಾತನಾಡಿದ ಸರ್ಕಾರದ ಪ್ರತಿನಿಧಿಗಳು ಸಹ ಶಿಕ್ಷಣ ಸಚಿವರನ್ನು ರಕ್ಷಿಸುವಂತೆ ಮಾತನಾಡುತ್ತಿರೋದು, 40 ಅಧಿಕಾರಿಗಳ ತಲೆ ತಂಡಕ್ಕೆ ಮುಂದಾಗಿದೆ. ಸರ್ಕಾರದ ಈ ನಿರ್ಧಾರ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳೋಣ, ನಂತರ ಬಂದಿದ್ದನ್ನು ಎದುರಿಸೋಣ ಎಂಬಂತಿದೆ. ಈ ಪ್ರಕರಣದಲ್ಲಿ ಕೇವಲ ಅಧಿಕಾರಿಗಳಷ್ಟೇ ಅಲ್ಲ ಸರ್ಕಾರ, ಸಚಿವರು ಈ ಬಗ್ಗೆ ನೈತಿಕ ಹೊಣೆ ಹೊರಲೇಬೇಕು. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳೋ ಮುನ್ನ ಸರ್ಕಾರವೂ ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕು. ಅದನ್ನು ಬಿಟ್ಟು, ಯಾರಿಗೆ ಏನೇ ಆದರೂ, ಯಾರೇನೆ ಅಂದರು ನಾವು ಮಾತ್ರ ಹೀಗೆ ಇರ್ತಿವಿ ಅಂತಾ ಸರ್ಕಾರ ತಮ್ಮ ಪಾಡಿಗೆ ತಾವಿದ್ದರೆ, ಜನರಿಂದ ತಕ್ಕ ಉತ್ತರ ಪಡಿಯೋದ್ರಲ್ಲಿ ಅನುಮಾನವಿಲ್ಲ.

1 COMMENT

Leave a Reply