ಮುಗಿದ ಶಿರಸಿ ಜಾತ್ರೆ, ಮಿಸ್ ಮಾಡಿಕೊಂಡವರಿಗೆಂದು ಇಲ್ಲಿದೆ ಬಿಂಬಗಳು ತುಂಬಿದ ಪಾತ್ರೆ

(ಚಿತ್ರಗಳು- ಶಿವಾನಂದ ಕಳವೆ)

ಲಹರಿ ಎಂ. ಎಚ್

ಕರ್ನಾಟಕದ ಅತ್ಯಂತ ಸುಪ್ರಸಿದ್ಧ ಮತ್ತು ಅತಿ ದೊಡ್ಡ ಜಾತ್ರೆಯಾದ ಪ್ರತಿ ಎರಡು ವರುಷಗಳಿಗೊಮ್ಮೆ ನಡೆಯುವ ಮಲೆನಾಡಿನ ಪುಟ್ಟ ಪಟ್ಟಣವಾದ ಶಿರಸಿ ನಗರದ ಅಧಿದೇವತೆ ಶ್ರೀ ಮಾರಿಕಾಂಬಾ ದೇವಿಯ ಪ್ರಸಕ್ತ ಸಂವತ್ಸರದ ಜಾತ್ರೆಯ ಮಹೋತ್ಸವವು ಮಾರ್ಚ್ 22ಕ್ಕೆ ಆರಂಭವಾಗಿ 30 ಮಾರ್ಚ್ ಗೆ ಕೊನೆಗೊಂಡಿತು.

ಕರ್ನಾಟಕದ ಯಾವುದೇ ಊರಿನ ಜಾತ್ರೆಯ ಯಶಸ್ಸು ಏಕೆ ಮುಖ್ಯವಾಗುತ್ತದೆಂದರೆ ಸಾಂಸ್ಕೃತಿಕ ಎಳೆ ಹಿಡಿದು ಆರ್ಥಿಕತೆಗೆ ಚುರುಕು ನೀಡುವ ಪ್ರಯತ್ನವೊಂದು ಇಲ್ಲಿರುತ್ತದೆ. ಹೀಗಾಗಿ ದೊಡ್ಡ ನಗರಗಳ ಜನ ಇಲ್ಲಿಗೆ ಬರುವುದು, ಜಾತ್ರೆ ನೆಪದಲ್ಲಿಇಲ್ಲಿನ ಹಲವು ಚಟುವಟಿಕೆಗಳಿಗೆ ಕಾರಣವಾಗುವುದು ಸಂಭ್ರಮದ ಸಂಗತಿ. ಈ ಸಲದ ಶಿರಸಿ ಜಾತ್ರೆಯನ್ನು ಈ ಅಂಶಗಳಲ್ಲಿ ಸೆರೆ ಹಿಡಿಯಬಹುದು.

shirasi jaatre1

ಈ ಬಾರಿಯ ಜಾತ್ರೆಯಲ್ಲಿ ಜನರ ಪ್ರವಾಹವೇ ಹರಿದಿತ್ತು. ಶುಕ್ರ, ಶನಿ, ಆದಿತ್ಯ ಮತ್ತು ಸೋಮವಾರದ ದಿನಗಳಲ್ಲಿ ದೇವಿಕೆರೆ ರಸ್ತೆಯಿಂದ ಕೋಟೆಕೆರೆ ರಸ್ತೆಯ ತನಕದ ಹಾದಿಗಳಲ್ಲಿ ಹೆಜ್ಜೆ ಹಾಕಿ ಮುಂದೆ ಸಾಗುವುದಕ್ಕಿಂತ ಹಿಂದಿನವರಿಂದ ನೂಕಿಸಿಕೊಂಡು ಹೋಗುವುದೇ ಆಗಿತ್ತು. ಓಡಾಡಿ ಓಡಾಡಿ ಕಾಲು ನೋವುಂಡವರಿಗಿಂತ ಅತ್ತಲಿಂದ ಇತ್ತಲಿಂದ ತಳ್ಳಿಸಿಕೊಂಡು ಬೆನ್ನು, ಕೈ ನೋಯಿಸಿಕೊಂಡವರೇ ಹೆಚ್ಚು. ಶನಿವಾರ ಮತ್ತು ಆದಿತ್ಯವಾರಗಳಂದು ಒಂದೂವರೆ ಗಂಟೆಯ ರಾತ್ರಿಯಲ್ಲೂ ತೊಟ್ಟಿಲು ಹತ್ತುವವರ ದೊಡ್ಡ ಕ್ಯೂ ಇತ್ತೆಂದರೆ ಅದೆಷ್ಟು ಜನರು ಈ ಬಾರಿಯ ಜಾತ್ರೆಯಲ್ಲಿ ಪಾಲ್ಗೊಂಡಿದ್ದಿರಬಹುದು. ಏನಿಲ್ಲವೆಂದರೂ ಪ್ರತಿದಿನವೂ ಎರಡು ಲಕ್ಷದಷ್ಟು ಜನರು ಸೇರುತ್ತಿದ್ದರು ಎನ್ನುವುದು ಸ್ಥಳೀಯರ ಅಂದಾಜು. ಆದರೆ, ಮೂಲ ಶಿರಸಿಗರು ಈ ಬಾರಿ ಕಡಿಮೆ ಸಂಖ್ಯೆಯಲ್ಲಿದ್ದದ್ದು, ಹೊರಗಿನವರೇ ಹೆಚ್ಚಾಗಿ ಬಂದಿದ್ದು ಒಂದು ಬಾರಿ ಜಾತ್ರೆ ಪೇಟೆ ಸುತ್ತಿ ಬಂದರೆ ಚೆನ್ನಾಗಿ ಕಣ್ಣಿಗೆ ಕಾಣಿಸುವ ಸಂಗತಿಯಾಗಿತ್ತು.

ಹಳೆಯ ಬೆರಗುಗಳನ್ನು ಉಳಿಸಿಕೊಳ್ಳುತ್ತಲೇ, ಕಾಲಕ್ಕೆ ತಕ್ಕ ಕಜ್ಜಾಯ ಒದಗಿಸೋದೂ ಯಾವುದೇ ಆರ್ಥಿಕ ಚಟುವಟಿಕೆಯ ಹೆಗ್ಗುರುತು. ಹಿಂಗಾಗಿ ಈ ಬಾರಿ ಶಿರಸಿ ಜಾತ್ರೆಯಲ್ಲಿ ಹೆಲಿಕಾಪ್ಟರ್ ಸವಾರಿ ಮತ್ತು ಡ್ರೋಣ್ ಕ್ಯಾಮೆರಾ ಮಹಿಮೆಗಳೇ ವಿಶೇಷ. ಮೊದಲು 10 ನಿಮಿಷಗಳ ಹೆಲಿಕಾಪ್ಟರ್ ಹಾರಾಟಕ್ಕೆ ವ್ಯಕ್ತಿಯೊಬ್ಬನಿಗೆ ನಾಲ್ಕು ಸಾವಿರ ರೂಪಾಯಿಗಳೆಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದ್ದು ನೋಡಿ, ದುಬಾರಿಯೆಂದುಕೊಂಡು ದೂರ ಉಳಿಯಲು ನಿರ್ಧರಿಸಿದವರೇ ಹೆಚ್ಚು. ನಂತರದಲ್ಲಿ ’ಒಬ್ಬರಿಗೆ 500/600/700 ರೂಪಾಯಿಗಳಂತೆ, ಫ್ಯಾಮಿಲಿಯವರೆಲ್ಲ ಸೇರಿ ಹೋಗಬೇಕಂತೆ’ ಎಂಬ ಅಂತೆಕಂತೆಗಳೂ ಹಬ್ಬಿದವು. ಈ ಎಲ್ಲ ಸುದ್ದಿಸಂತೆಗಳಿಗೆ ಕಿವಿಗೊಡದೇ ಚೌಕಾಶಿ ಮಾಡಿ ಹೆಲಿಕಾಪ್ಟರ್ ಹಾರಾಟದ ಸವಿ ಉಂಡವರೇ ಭಾಗ್ಯವಂತರು. ಮೊದಲನೆ ದಿನವೇ ಬರೋಬ್ಬರಿ 234 ಮಂದಿ ಟಿಕೇಟು ಖರೀದಿಸಿದ್ದರೆಂದರೆ ಈ ಹೆಲಿಕಾಪ್ಟರ್ ಹಾರಾಟದ ಆಳ, ಅಗಲ, ವಿಸ್ತಾರಗಳ ಅರಿವು ತಿಳಿದೀತು. ಈ ಸಲದ ಮಾರಿಯಮ್ಮನ ಮೆರವಣಿಗೆ, ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆ, ಉತ್ಸವ ವಿಸರ್ಜನೆ – ಎಲ್ಲವನ್ನೂ ಚೊಕ್ಕವಾಗಿ ಚೆಂದವಾಗಿ ಸೆರೆ ಹಿಡಿದ ಕೀರ್ತಿ ಡ್ರೋಣ್ ಮಹಾಶಯನದ್ದು. ಜೊತೆ ಜೊತೆಗೆ ಜಾತ್ರೆಯ ಖಾಯಂ ಅತಿಥಿಗಳಾದ ಬಳೆ ಪೇಟೆ, ಮನೋರಂಜನಾ ಆಟಗಳ ಬಿಡ್ಕಿ ಬಯಲು, ಕೋಟೆಕೆರೆ – ಇವುಗಳ ಅಂದವನ್ನೂ ಡ್ರೋಣ್ ಕ್ಯಾಮೆರಾ ಕ್ಲಿಕ್ಕಿಸಿದ್ದು ವಿಶೇಷ.

ಹನುಮಾನ್ ವ್ಯಾಯಾಮ ಶಾಲೆ ಮತ್ತು ರಾಯಪ್ಪಾ ಹುಲೇಕಲ್ ಶಾಲೆಗಳ ಎದುರಿನಲ್ಲಿ ಪರ್ಯಾಯ ಮಿನಿ ಬಸ್ ಸ್ಟ್ಯಾಂಡ್ ವ್ಯವಸ್ಥೆ ಕಲ್ಪಿಸಿದ್ದು, ಟ್ರಾಫಿಕ್ ನಿಯಂತ್ರಣಕ್ಕಾಗಿ ಅಲ್ಲಲ್ಲಿ ಕೆ.ಎಸ್.ಆರ್.ಟಿ.ಸಿ. ಮತ್ತು ಪೊಲೀಸ್ ಜಂಟಿ ಚೆಕ್ ಪಾಯಿಂಟ್ ವ್ಯವಸ್ಥೆ ಮಾಡಿದ್ದು, ದೇವರ ದರ್ಶನಕ್ಕಾಗಿ ಸರತಿ ಸಾಲಿನ ವ್ಯವಸ್ಥೆ ಮಾಡಿದ್ದು, ಜನರ ಭದ್ರತೆಗಾಗಿ ಅಷ್ಟಷ್ಟು ದೂರಕ್ಕೆ ಒಂದೆರಡು ಪೊಲೀಸ್ ಪೇದೆಗಳು ನಿಂತಿದ್ದು, ಬಳೆ ಪೇಟೆಯಲ್ಲಿ ವಿಶೇಷವಾಗಿ ಮಹಿಳಾ ಪೊಲೀಸ್ ಪೇದೆಗಳು ಕಾವಲಿಗೆ ಇದ್ದದ್ದು – ಎಲ್ಲವೂ ಅತ್ಯುತ್ತಮವಾಗಿತ್ತು. ಇವೆಲ್ಲವುಗಳಿಗಿಂತ ರಾತ್ರಿ 2 ಗಂಟೆಗೆ ಮೊದಲು ಮಾಡಿ ಬೆಳಗಾಗುವುದರೊಳಗೆ ಮುನಿಸಿಪಾಲಿಟಿಯ ಕೆಲಸಗಾರರು ಕಸ ಗುಡಿಸಿ ಹಾಕುತ್ತಿದ್ದ ಪರಿಯನ್ನು ಮೆಚ್ಚಲೇಬೇಕು. ಈ ಎಲ್ಲ ಉತ್ತಮ ವ್ಯವಸ್ಥೆಗಳ ನಡುವೆಯೂ ಕೆಲವೊಂದು ವನ್ ವೇ ಗಳಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದು ಕಿರಿಕಿರಿಯಾಯಿತೆಂದೂ, ದೇವಿಯ ಸನ್ನಿಧಿಯಲ್ಲಿ ಹಣ್ಣು ಕಾಯಿ ಮಾಡಿಸುವ ವ್ಯವಸ್ಥೆ ಸರಿಯಿರಲಿಲ್ಲವೆಂದೂ ಮಂದಿ ಮಾತನಾಡಿಕೊಳ್ಳುತ್ತಿದ್ದರು. ಒಟ್ಟಾಗಿ ಹೇಳುವುದಾದರೆ ಸಣ್ಣ ಪುಟ್ಟ ಲೋಪಗಳಿದ್ದರೂ ಸುರಕ್ಷತೆ- ಸ್ವಚ್ಛತೆಗಳಲ್ಲಿ ಇತರರು ಹೆಕ್ಕಿಕೊಳ್ಳಬಹುದಾದ ಪಾಠವನ್ನು ಕೊಟ್ಟಿದೆ ಈ ಜಾತ್ರೆ.

Shirasi jaatre

ಬಿಡ್ಕಿ ಬಯಲು, ಕೋಟೆಕೆರೆಯ ಅಕ್ಕ ಪಕ್ಕ – ಒಟ್ಟೂ ಮೂರು ಕಡೆಗಳಲ್ಲಿ ಮನೋರಂಜನಾ ಆಟಗಳಿದ್ದ ಕಾರಣ ಹಿಂದೆಂದಿಗಿಂತಲೂ ವ್ಯಾಪಾರ ಭರ್ಜರಿಯಾಗಿತ್ತು. ಮೊದಲೆಲ್ಲ ರೂಢಿಯಲ್ಲಿದ್ದ ಇಂತಿಷ್ಟು ಗಂಟೆಗೆ ಆಟಗಳನ್ನು ನಿಲ್ಲಿಸಬೇಕು ಎನ್ನುವ ನಿಯಮ ಈ ಬಾರಿ ಜಾರಿಯಲ್ಲಿದ್ದಂತೆ ಕಾಣಲಿಲ್ಲ. ಅಂತೆಯೇ ಅಂಗಡಿಗಳ ಸಂಖ್ಯೆಯೂ ಈ ಬಾರಿ ಹೆಚ್ಚಾಗಿತ್ತು. ಹೊಸತು ಎನ್ನುವಂತಹ ಖರೀದಿಯ ಸಾಮಗ್ರಿಗಳು ಕಡಿಮೆಯೇ ಆಗಿದ್ದರೂ, ಯಾವ ವಸ್ತುಗಳದ್ದೂ ರೇಟು ಜಾಸ್ತಿ ಎನ್ನುವಂತಿರಲಿಲ್ಲ. ಗುಣಮಟ್ಟಕ್ಕೆ ತಕ್ಕಂತೆ ದರವಿದ್ದ ಕಾರಣ ಜನತೆಯೂ ಜಿಪುಣತನ ತೋರಿಸಲಿಲ್ಲ. ಆಟಗಳಿಗೆ ಟಿಕೇಟಿನ ದರವೂ ಜಾಸ್ತಿಯಿರದ ಕಾರಣ ಮತ್ತೆ ಮತ್ತೆ ತೊಟ್ಟಿಲು, ಅಕ್ಟೋಪಸ್ ಎಂದು ಜನರು ಹತ್ತಿ, ಆಟವಾಡಿ ಖುಷಿ ಪಡುತ್ತಿದ್ದರು. ಅತ್ತ ಅವರಿಗೆ ವ್ಯಾಪಾರದ ನಷ್ಟವಿರಲಿಲ್ಲ. ಇತ್ತ ಇವರಿಗೆ ಮೋಜಿಗೆ ಮೋಸವಿರಲಿಲ್ಲ. ಜೊತೆಯಲ್ಲೇ ದೇವಸ್ಥಾನದವರಿಗೂ, ಮುನಿಸಿಪಾಲಿಟಿಗೂ ಸಾಕಷ್ಟು ಆದಾಯ ಹರಿದು ಬಂದಿದ್ದೂ ಹೌದು.

Leave a Reply