ಸುದ್ದಿಸಂತೆ: ಕೋಲ್ಕತಾ ದುರಂತ, ರಾಘವೇಶ್ವರರಿಗೆ ರಿಲೀಫ್… ಇತರ ಸುದ್ದಿಗಳು

ಕೋಲ್ಕತಾದಲ್ಲಿ ನಿರ್ಮಾಣ ಹಂತದ ಫ್ಲೈಓವರ್ ಕುಸಿತ 18 ಸಾವು

ಕೋಲ್ಕತಾದ ಉತ್ತರ ಭಾಗದಲ್ಲಿರುವ ಗಣೇಶ್ ಟಾಕೀಸ್ ಪ್ರದೇಶದ ವಿವೇಕಾನಂದ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಫ್ಲೈಓವರ್ ಕುಸಿದು ಸುಮಾರು 18 ಮಂದಿ ಸಾವನಪ್ಪಿದ ದುರ್ಘಟನೆ ಗುರುವಾರ ಸಂಭವಿಸಿದೆ. ಈ ಅವಘಡದಲ್ಲಿ ಸುಮಾರು 80 ಮಂದಿ ಗಾಯಗೊಂಡಿದ್ದಾರೆ.

ನಿರ್ಮಾಣ ಹಂತದಲ್ಲಿರುವಾಗಲೇ ಮೇಲ್ಸೆತುವೆ ಬಿದ್ದು ಪ್ರಾಣ ಕಳೆದುಕೊಳ್ಳಬೇಕಾದಷ್ಟರಮಟ್ಟಿಗೆ ಜನರ ಜೀವ ಅಗ್ಗವಾಗಿಹೋಯಿತಾ ಎಂಬ ಪ್ರಶ್ನೆಗಳೆದ್ದಿರುವಾಗಲೇ, ಗಾಯದ ಮೇಲೆ ಬರೆ ಎಳೆಯುವಂತೆ ಈ ಫ್ಲೈಓವರ್ ನಿರ್ಮಿಸುತ್ತಿದ ಬಿಲ್ಡರ್- ‘ಏನ್ಮಾಡೋಕಾಗುತ್ತೆ? ಇದು ದೇವರ ಆಟ. ನಮ್ಮ ಕಡೆಯಿಂದ ಎಲ್ಲವೂ ಸರಿಯಿತ್ತು’ ಎಂದಿರುವುದು ಇವರ ಅಸಡ್ಡೆಯ ಪರಮಾವಧಿಯಾಗಿ ಗೋಚರಿಸುತ್ತಿದೆ.

ರಾಘವೇಶ್ವರ ಶ್ರೀ ವಿರುದ್ಧದ ಅತ್ಯಾಚಾರ ಆರೋಪ ವಜಾ

ಗಾಯಕಿ ಪ್ರೇಮಲತಾ ಮೇಲೆ ರಾಘವೇಶ್ವರ ಶ್ರೀಗಳು ಅತ್ಯಾಚಾರ ಮಾಡಿದ್ದರೆಂಬುದಕ್ಕೆ ಸಾಕ್ಷ್ಯಾಧಾರಗಳಿಲ್ಲ ಎಂದು ಸೆಷನ್ಸ್ ಕೋರ್ಟ್ ಗುರುವಾರ ತೀರ್ಪಿತ್ತಿದೆ.

ತಮ್ಮ ವಿರುದ್ಧ ಪ್ರಕರಣ ಕೈಬಿಡುವಂತೆ ರಾಘವೇಶ್ವರರು ಸಲ್ಲಿಸಿದ್ದ ಅರ್ಜಿ ಪುರಸ್ಕೃತಗೊಂಡಿದೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನನ್ವಯ ಘಟನೆ ಬಗ್ಗೆ ಸಿಐಡಿ ಪೋಲೀಸರು ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು. ಈ ನಡುವೆ ಸೆಷನ್ಸ್ ಕೋರ್ಟಿನಲ್ಲಿ ನಡೆಯುತ್ತಿರುವ ಪ್ರಕರಣವನ್ನು ಬೇರೆಡೆ ವರ್ಗಾಯಿಸಬೇಕು ಎಂದು ಗಾಯಕಿ ಹೈಕೋರ್ಟ್ ಮೆಟ್ಟಿಲನ್ನೂ ಹತ್ತಿದ್ದರು. ಇದನ್ನು ಪುರಸ್ಕರಿಸದ ಹೈಕೋರ್ಟ್, ವಿಚಾರಣೆಯನ್ನು ತ್ವರಿತವಾಗಿ ಮುಗಿಸುವಂತೆ ಸೆಷನ್ಸ್ ಕೋರ್ಟಿಗೆ ಸೂಚಿಸಿತ್ತು.

ಜಾಟ್ ಸಮುದಾಯಕ್ಕೆ ಮೀಸಲು ಪ್ರಶ್ನಿಸಿ ಕೋರ್ಟ್ ಗೆ ಅರ್ಜಿ

ಹರ್ಯಾಣದಲ್ಲಿ ಜಾಟ್ ಸಮುದಾಯ ಸೇರಿದಂತೆ ಒಟ್ಟು 5 ಸಮುದಾಯಗಳಿಗೆ ಮೀಸಲು ನೀಡುವ ಮಸೂದೆಯ ವಿರುದ್ಧ ಸ್ಥಳೀಯರೊಬ್ಬರು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮನೋಹರ್ ಲಾಲ್ ಖಟ್ಟರ್ ಸರ್ಕಾರದ ಈ ನಿರ್ಧಾರ, ಸ್ವೇಚ್ಛಾನುಸಾರ ಹಾಗೂ ದುರುದ್ದೇಶದಿಂದ ಕೂಡಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಈ ಅರ್ಜಿಯ ಕುರಿತ ವಿಚಾರಣೆಯನ್ನು ನ್ಯಾಯಾಲಯ ಇದೇ ವಾರ ನಡೆಸಲಿದೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಬಿಹಾರದಲ್ಲಿ ಕಂಟ್ರಿ ಸಾರಾಯಿ ನಿಷೇಧ

ಮುಂಬರುವ ಏಪ್ರಿಲ್ 1ರಿಂದ ಬಿಹಾರ ರಾಜ್ಯದಲ್ಲಿ ಸಾರಾಯಿಯನ್ನು ನಿಷೇಧಿಸಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ಬುಧವಾರ ನಡೆದ ವಿಧಾನ ಸಭೆ ಕಲಾಪದಲ್ಲಿ ಈ ಮಸೂದೆ ಬಗ್ಗೆ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಯಿತು. ಇದೇ ವೇಳೆ ಕಾನೂನು ಬಾಹೀರವಾಗಿ ಸಾರಾಯಿ ತಯಾರಿಕೆ ಮಾಡುವವರಿಗೆ ಜೀವಾವಧಿ ಶಿಕ್ಷೆಯನ್ನು ನೀಡುವಷ್ಟು ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

Leave a Reply