ಇದು ಸೆಕೆ ಭವಿಷ್ಯ… ನಮ್ಮೆಲ್ಲರ ಆತಂಕ ನಿಜ ಎನ್ನುತ್ತಿದೆ ಹವಾಮಾನ ಇಲಾಖೆ!

ಡಿಜಿಟಲ್ ಕನ್ನಡ ಟೀಮ್

ಈ ಮಾರ್ಚ್ ನಲ್ಲೇ ಈ ಥರ ಸೆಕೆ ಆದ್ರೆ ಏಪ್ರಿಲ್- ಮೇನಲ್ಲಿ ಹೆಂಗಿರಬಹುದು ಮಾರಾಯಾ- ಅನ್ನೋದು ಇಂದಿನ ಮಾತುಕತೆಯ ಮಾಮೂಲಿ ಡೈಲಾಗ್.

ಈ ಸಾರ್ವಜನಿಕರ ಆತಂಕ ನಿಜವಾಗಲಿದೆ ಅಂತ ಈಗ ಭಾರತೀಯ ಹವಾಮಾನ ಇಲಾಖೆಯೂ ಹೇಳಿಬಿಟ್ಟಿದೆ.

ಭಾರತದ ಹವಾಮಾನ ಇಲಾಖೆಯ ವರದಿಯ ಪ್ರಕಾರ ಮುಂದಿನ ಮೂರು ತಿಂಗಳುಗಳ ಕಾಲ ದೇಶದ ಮಧ್ಯ ಮತ್ತು ವಾಯುವ್ಯ ಭಾಗದಲ್ಲಿ ಈ ಬಾರಿಯ ಬೇಸಿಗೆ ನೈಜರೂಪ ಪಡೆಯಲಿದೆ. ಇದರಿಂದ ವಾತಾವರಣ ಕಠಿಣ ಸ್ಥಿತಿ ತಲುಪಿ, ಜನರು ತೀವ್ರ ತೊಂದರೆಗೆ ಸಿಲುಕುವಂತೆ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ಬಾರಿ ಗರಿಷ್ಟ ಉಷ್ಣಾಂಶ ದಾಖಲಾಗಲಿದ್ದು, ದೇಶದ ಶೇಕಡಾ 75 ರಷ್ಟು ಭಾಗ ಬಿಸಿ ಅಲೆಗಳ ವಲಯವಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿ, ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್ ಗಡ, ಬಿಹಾರ್, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ತೆಲಂಗಾಣ ರಾಜ್ಯಗಳು ಹಾಗೂ ಆಂಧ್ರ ಪ್ರದೇಶದ ಕರಾವಳಿ, ಮಹಾರಾಷ್ಟ್ರದ ಮರಾಠಾವಾಡ, ವಿದರ್ಭ, ಕೇಂದ್ರದ ಕೆಲವು ಭಾಗಗಳಲ್ಲೂ ವಾತಾವರಣ ಹೆಚ್ಚು ಬಿಸಿಯಾಗಲಿದೆ.

ಈ ಬಿಸಿ ಸಾಧ್ಯತೆಗೆ ಇನ್ನೊಂದು ಪರಿವೀಕ್ಷಣೆಯನ್ನೂ ಹವಾಮಾನ ಇಲಾಖೆ ಮುಂದಿಟ್ಟಿದೆ. ಸಮುದ್ರ ತಾಪಮಾನ ಮತ್ತು ಮಳೆ ಪ್ರಮಾಣದ ಲೆಕ್ಕಾಚಾರದಲ್ಲಿ ಎಲ್ ನಿನೋ ಪರಿಣಾಮ ಎಂಬುದೊಂದಿದೆಯಲ್ಲ? ಈ ಎಲ್ ನಿನೊ ಪ್ರಭಾವಕ್ಕೆ ಒಳಪಟ್ಟ ವರ್ಷವಾಗಿತ್ತು 2015. ಎಲ್ ನಿನೊ ಪರಿಣಾಮಕ್ಕೆ ಒಳಗಾದ ಮರು ವರ್ಷದಲ್ಲಿ ಧಗೆ ಜೋರಿರುತ್ತದೆ ಎಂಬುದು ಒಂದು ಪರಾಮರ್ಶೆ. ಈ ಹಿಂದಿನ ಎಲ್ ನಿನೋ ವರ್ಷಗಳನ್ನು ಗಮನಿಸಿದರೆ 1973, 1995, 1998, 2003 ಮತ್ತು 2010 ರ ವಾತಾವರಣದ ಹಿಂದೆ 1972, 1994,1997, 2002, ಮತ್ತು 2009 ರಲ್ಲಿನ ಎಲ್ ನಿನೋ ಕಾರಣ.

Leave a Reply