ಉಗ್ರ ಮಸೂದನ ನಿಷೇಧಕ್ಕೆ ಚೀನಾ ಅಡ್ಡಗಾಲು, ಅಮೆರಿಕ ಹೆಂಗೋ ಸರಿಯಾಗ್ತಿದೆ ಎಂಬಂತಿರುವಾಗ ಭಾರತಕ್ಕೆ ಇದೊಂದು ಸವಾಲು

ಡಿಜಿಟಲ್ ಕನ್ನಡ ಟೀಮ್

ಪಾಕಿಸ್ತಾನದ ಜೈಶೆ ಮೊಹಮ್ಮದ್ ಸಂಘಟನೆಯ ಮಸೂದ್ ಅಜರ್ ಮೇಲೆ ನಿರ್ಬಂಧ ಹೇರುವ ಪ್ರಸ್ತಾವವನ್ನು ಭಾರತವು ವಿಶ್ವಸಂಸ್ಥೆಗೆ ಸಲ್ಲಿಸಿತ್ತು. ಆದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರವಾಗಿರುವ ಚೀನಾ ಅಡ್ಡಗಾಲು ಹಾಕಿ, ಈ ಪ್ರಸ್ತಾಪವನ್ನು ಕಾಯ್ದಿರಿಸುವಂತೆ ಹೇಳಿರುವುದಾಗಿ ವರದಿಯಾಗಿದೆ.

ಅಲ್ಲಿಗೆ ಉಗ್ರವಾದದ ವಿರುದ್ಧ ಜಾಗತಿಕ ಸಮರ ಎಂಬುದು ಹಳ್ಳ ಹಿಡಿದಂತಾಯಿತು. ಈ ಮಸೂದ್ ಅಜರ್ ಭಾರತದ ಪಠಾಣ್ ಕೋಟ್ ವಾಯುನೆಲೆ ಮೇಲೆ ಇತ್ತೀಚೆಗೆ ಆದ ಉಗ್ರದಾಳಿಯ ಸಂಚಿನ ರೂವಾರಿ ಎಂದು ಭಾರತ ಆಪಾದಿಸಿದೆಯಲ್ಲದೇ, ಈ ಸಂಬಂಧ ಪಾಕಿಸ್ತಾನಕ್ಕೆ ಸಾಕ್ಷ್ಯಗಳನ್ನೂ ನೀಡಿದೆ. ಪಠಾಣ್ ಕೋಟ್ ದಾಳಿಯಲ್ಲಿ ಮಸೂದ್ ಪಾತ್ರ ಸಾಬೀತಾಗುವ ಕತೆ ಹಾಗಿರಲಿ. ಇಷ್ಟಕ್ಕೂ ಈತ ಯಾರು? ಜಮ್ಮು-ಕಾಶ್ಮೀರದಲ್ಲಿ 90ರ ದಶಕದ ಉಗ್ರವಾದ, ಅಪಹರಣ, ಕೊಲೆ ಇಂಥವೆಲ್ಲದರ ಮೂಲಕ ಪ್ರತ್ಯೇಕತೆಗೆ ನೀರೆರೆದುಕೊಂಡಿದ್ದವ. ನಂತರ ಭಾರತದ ಜೈಲಿನಲ್ಲಿ ಬಂಧಿಯಾಗಿದ್ದ ಇವನನ್ನು ಕಂದಹಾರ್ ವಿಮಾನ ಅಪಹರಣಕಾರರು ತಮ್ಮ ಬೇಡಿಕೆ ಪಟ್ಟಿಯಲ್ಲಿಟ್ಟು ಬಿಡಿಸಿಕೊಂಡು ಹೋಗಿರುವುದು, ಆತ ಪಾಕಿಸ್ತಾನಕ್ಕೆ ಹೋಗಿ ದೊಡ್ಡ ಸಮಾವೇಶದ ಎದುರು ಭಾರತವನ್ನು ನಾಶ ಮಾಡುವವರೆಗೂ ಮುಸ್ಲಿಮರು ವಿರಮಿಸಬಾರದು ಎಂದಿರುವುದು ಎಲ್ಲವೂ ಖುಲ್ಲಂ ಖುಲ್ಲ ಇತಿಹಾಸ. ಇಂಥವನ ಮೇಲೆ ವಿಶ್ವಸಂಸ್ಥೆ ಅಧಿಕೃತ ನಿಷೇಧವಾದರೆ ಅದರ ಪರಿಣಾಮ ತೀವ್ರವಾಗಿರುತ್ತದೆ. ಯಾವುದೇ ಬ್ಯಾಂಕ್ ಗಳಿಂದ ಕವಡೆ ಕಾಸೂ ಆತನ ಖಾತೆಗೆ ಹೋಗದಂತೆ ಆಗುತ್ತದೆ.

ಇಂಥ ಮನುಷ್ಯನ ಮೇಲೆ ಪ್ರತಿಬಂಧಕ್ಕೆ ಚೀನಾದ ಅಡ್ಡಗಾಲು! ಗ್ವಾದಾರ್ ಬಂದರಿನಿಂದ ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರವನ್ನು ಸೀಳಿಕೊಂಡು ಹೋಗುವ ಕಾರಿಡಾರ್ ನಕಾಶೆ ಹಾಕಿಕೊಂಡಿದ್ದಾರಲ್ಲ. ಹೀಗಾಗಿ ಪಾಕಿಸ್ತಾನವನ್ನು ಸಂಪ್ರೀತಗೊಳಿಸುವ ಇಂಥ ಎಲ್ಲ ಎಡವಟ್ಟು ಕಾರ್ಯಗಳಿಗೆ ಅವರು ಸಿದ್ಧ.

ಇಂಥ ಜಾಗತಿಕ ರಾಜಕೀಯದ ಆಟಗಳೇ ಭಯೋತ್ಪಾದನೆ ಹತ್ತಿಕ್ಕುವಲ್ಲಿ ಮುಖ್ಯ ಅಡ್ಡಿ. ಇತಿಹಾಸ ನೋಡಿದರೆ ಇವತ್ತಿನ ತಾಲಿಬಾನಿಗೆ ಅವತ್ತು ಶಸ್ತ್ರ- ದುಡ್ಡು ನೀಡಿದ್ದು ಅಮೆರಿಕವೇ ಆಗಿತ್ತು. ಕಾರಣ, ಸೋವಿಯತ್ ಒಕ್ಕೂಟವನ್ನು ಹಣಿಯುವ ತವಕ.

‘ಅಮೆರಿಕದ ಅವಳಿ ಕಟ್ಟಡಗಳ ಮೇಲೆ ದಾಳಿ ಆಗುವವರೆಗೂ, ಅತ್ತ 40 ವರ್ಷಗಳಿಂದ ಭಾರತದ ಮೇಲಾಗುತ್ತಿದ್ದ ಭಯೋತ್ಪಾದನೆಯನ್ನು ಜಾಗತಿಕ ಶಕ್ತಿಗಳು ಲೆಕ್ಕಕ್ಕೇ ತೆಗೆದುಕೊಂಡಿರಲಿಲ್ಲ’ ಅಂತ ನಿನ್ನೆಯ ಬೆಲ್ಜಿಯಂ ಭಾಷಣದಲ್ಲಿ ಪ್ರಧಾನಿ ಮೋದಿ ನೇರವಾಗಿಯೇ ಹೇಳಿದ್ದರು. ಈಗ ಅಮೆರಿಕಕ್ಕೆ ಇದ್ದಿದ್ದರಲ್ಲೇ ಸ್ವಲ್ಪ ಬುದ್ಧಿ ಬಂದಂತಿದೆ. ಆದರೆ ಚೀನಾ ತನ್ನ ಆಟ ಶುರುಮಾಡಿಕೊಂಡಿದೆ.

ಬೆಲ್ಜಿಯಂ ಭೇಟಿ ಮುಗಿಸಿಕೊಂಡು ವಾಷಿಂಗ್ಟನ್ ಡಿ. ಸಿ. ಯಲ್ಲಿರುವ ಪ್ರಧಾನಿ ಮೋದಿ ಸೌದಿ ಅರೇಬಿಯಾಕ್ಕೆ ಭೇಟಿ ಕೊಟ್ಟು ಭಾರತಕ್ಕೆ ಮರಳಲಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕ ಮತ್ತು ಸೌದಿ ಅರೇಬಿಯಗಳು ಜತೆಗೂಡಿ ಒಂದು ಘೋಷಣೆ ಮಾಡಿವೆ. ಲಷ್ಕರೆ, ಆಲ್ ಕಾಯಿದಾ ಜತೆ ತಳುಕು ಹಾಕಿಕೊಂಡಿರುವ ಪಾಕಿಸ್ತಾನದ ನಾಲ್ವರ ಮೇಲೆ ನಿಷೇಧ ಪ್ರಕಟಿಸಿವೆ. ಇವರಲ್ಲೊಬ್ಬನಾದ ಮೊಹಮದ್ ಸಫರಾಜ್ ಎಂಬಾತ ಜಾಕಿ ಉರ್ ಲಖ್ವಿಗೆ ಹಣಕಾಸು ಒದಗಿಸುತ್ತಿದ್ದವ. ಈ ಲಖ್ವಿ ಮುಂಬಯಿ ದಾಳಿಯ ರೂವಾರಿ ಎಂದು ಭಾರತ ಅದಾಗಲೇ ಘೋಷಿಸಿದೆ. ಹೀಗಿರುವಾಗ ತಮ್ಮ ಸ್ನೇಹಿತನ ಪಟ್ಟಿಯಲ್ಲೇ ಇರುವ ಪಾಕಿಸ್ತಾನ ಏನಂದುಕೊಳ್ಳುತ್ತದೇನೋ ಎಂದು ಹೆದರದೇ ಈ ಕ್ರಮಕ್ಕೆ ಮುಂದಾದ ಅಮೆರಿಕ- ಸೌದಿಗಳ ಕ್ರಮ ಅಷ್ಟರಮಟ್ಟಿಗೆ ಮೋದಿ ಸರ್ಕಾರದ ರಾಜತಾಂತ್ರಿಕ ವಿಜಯ.

ಆದರೇನು ಮಾಡೋದು? ಅಮೆರಿಕವನ್ನು ಸರಿ ಮಾಡಿಕೊಳ್ಳುವಷ್ಟರಲ್ಲಿ ಚೀನಾ ಕಿಡಿಗೇಡಿತನ ಶುರುಮಾಡಿಕೊಂಡಿತಲ್ಲ?

Leave a Reply