ತೈಲಯುಗ ಮುಗಿಯುವ ಹೊತ್ತಿಗೆ ಡಿಜಿಟಲ್ ಯುಗಕ್ಕೆ ಉದ್ಯಮ ಸಿದ್ಧ- ಇದು ಮುಕೇಶ್ ಅಂಬಾನಿ ಕೊಟ್ಟಿರುವ ಸುಳಿವು!

ಡಿಜಿಟಲ್ ಕನ್ನಡ ಟೀಮ್

ಮಾಹಿತಿ ಇಲ್ಲವೇ ದತ್ತಾಂಶಗಳೇ ಹೊಸ ತೈಲವಾದರೆ, ವಿಶ್ಲೇಷಣಾತ್ಮಕ ದತ್ತಾಂಶಗಳೇ ಹೊಸ ಪೆಟ್ರೋಲ್ ಆಗುತ್ತೆ.. ಇದು ಡಿಜಿಟಲ್ ಯುಗದ ಬಗ್ಗೆ ಅಂಬಾನಿ ನುಡಿದ ಭವಿಷ್ಯ!

ಸದ್ಯ ಭಾರತದಲ್ಲಿ ತೈಲ ವ್ಯಾಪಾರ, ಉದ್ದಿಮೆ ಅಂದರೆ ತಕ್ಷಣಕ್ಕೆ ಕಣ್ಮುಂದೆ ಬರೋದು ಮುಕೇಶ್ ಅಂಬಾನಿ. ರಿಲಯನ್ಸ್ ಜಿಯೋ ಮೂಲಕ ಟೆಲಿಕಾಮ್ ಉದ್ದಿಮೆಯಲ್ಲಿ ಹೊಸ ಹೆಜ್ಜೆ ಇಡುತ್ತಿರುವ ಅಂಬಾನಿ ಡಿಜಿಟಲ್ ಯುಗದ ಭವಿಷ್ಯ ನುಡಿಯುತ್ತಿದ್ದಾರೆ. ಎಫ್ಐಸಿಸಿಐ ಫ್ರೇಮ್ಸ್ 2016 ಕಾರ್ಯಕ್ರಮದಲ್ಲಿ ಈ ಮೇಲಿನ ಆಕರ್ಷಕ ನುಡಿಮುತ್ತು ಉದುರಿಸಿರುವ ಅಂಬಾನಿ, ತಾವೂ ಡಿಜಿಟಲ್ ಸಾಮ್ರಾಜ್ಯ ಕಟ್ಟುವ ಇರಾದೆ ತೋರಿದ್ದಾರೆ.

ಈ ಡಿಜಿಟಲ್ ಭವಿಷ್ಯವನ್ನು ಅಂಬಾನಿ ಹೆಂಗೆ ಅರ್ಥ ಮಾಡಿಕೊಂಡಿದ್ದಾರೆ ಎಂಬುದು ಅವರ ಮಾತುಗಳಲ್ಲಿ ಗೋಚರವಾಯಿತು. ‘ಕೇವಲ ಸಂಪರ್ಕ ಸಾಧಿಸೋದಷ್ಟೆ ಟೆಲಿಕಾಂ ಕಂಪನಿಗಳ ಕೆಲಸವಾಗಿ ಉಳಿದಿಲ್ಲ. ಸ್ಕೈಪ್ ಮತ್ತು ವ್ಯಾಟ್ಸ್ಆ್ಯಪ್ ಇಡೀ ಟೆಲಿಕಾಂ ವ್ಯವಹಾರದ ಮಾದರಿಯನ್ನೇ ಬದಲಿಸಿವೆ. ರಿಲಾಯನ್ಸ್ ಜಿಯೊ ಸಹ ಕೇವಲ ಸಂಪರ್ಕ ಸಾಧನೆ ಉದ್ದೇಶಕ್ಕಾಗಿರದೇ ಡಿಜಿಟಲ್ ಉತ್ಪನ್ನಗಳನ್ನು ಜನರಿಗೆ ಅನನ್ಯವಾಗಿ ತಲುಪಿಸುವುದಕ್ಕೆ ತನ್ನ ಗಮನ ಕೇಂದ್ರೀಕರಿಸಿಕೊಂಡಿರುತ್ತದೆ.’

ಡಿಜಿಟಲ್ ಯುಗದಲ್ಲಿ ಅಕ್ಷರ ರೂಪ ಮಾಯವಾಗಿ ವಿಡಿಯೋ ಮತ್ತು ಚಿತ್ರಗಳು ಪ್ರಾಮುಖ್ಯ ಪಡೆಯುತ್ತವೆ ಎಂಬುದು ಅಂಬಾನಿ ಅಭಿಪ್ರಾಯ. ಮುಂದುವರೆದು ಹೇಳಿದ್ದಿಷ್ಟು-

‘ಡಿಜಿಟಲ್ ಬೆಳವಣಿಗೆಯ ವೇಗ ತೀವ್ರವಾಗಿರುತ್ತದೆ. ಮನುಷ್ಯ ಹತ್ತು ಹೆಜ್ಜೆ ಇಟ್ಟರೆ, ಹತ್ತು ಹೆಜ್ಜೆಯಷ್ಟೇ ಮುಂದೆ ಸಾಗಿರುತ್ತಾನೆ. ಆದರೆ, ಡಿಜಿಟಲ್ ಆಗಲ್ಲ, ಎರಡು ಹೆಜ್ಜೆ ಇಟ್ಟರೆ ಸಾವಿರ ಹೆಜ್ಜೆಗೆ ಸಮನಾಗಿರುತ್ತದೆ. ಈ ಹಿಂದೆ ಟೆಲಿಕಮ್ಯುನಿಕೇಷನ್, ಮಾಧ್ಯಮ ಮತ್ತು ಮನರಂಜನೆ, ಟಿವಿ ಮತ್ತು ಪ್ರಸಾರ ಹೆಚ್ಚು ಕಡಿಮೆ ವಿಭಿನ್ನ ಕೈಗಾರಿಕೆಗಳಾಗಿದ್ದವು. ಇನ್ನು ಮುಂದೆ ಟೆಲಿಕಮ್ಯುನಿಕೇಷನ್ ಕಂಪನಿಗಳು ಈ ಎಲ್ಲ ಅಂಶಗಳನ್ನು ಒಳಗೊಂಡ ವಿಷಯವನ್ನು ಉತ್ಪಾದಿಸಿ ಎಲ್ಲರಿಗೂ ಹಂಚಲಿವೆ. ಈ ಎಲ್ಲ ತಂತ್ರಜ್ಞಾನಗಳು ಮನುಷ್ಯನ ಜೀವನ ಮಟ್ಟವನ್ನು ಅಭಿವೃದ್ಧಿ ಪಡಿಸುತ್ತವೆ.’

ಅಂಬಾನಿ ಮಾತುಗಳಲ್ಲಿ ಉದ್ಯಮ ವಲಯದ ಮುಂದಿನ ಯುದ್ಧಭೂಮಿ ಎಲ್ಲಿದೆ ಎಂಬುದನ್ನು ಸುಲಭಕ್ಕೆ ಊಹಿಸಬಹುದಾಗಿದೆ. ಅಂದಹಾಗೆ ರಿಲಾಯನ್ಸ್ ಜಿಯೊ ಡಿಜಿಟಲ್ ಉದ್ಯಮದಲ್ಲಿ 1,50,000 ಕೋಟಿ ರು. ಹೂಡಿಕೆಯಾಗುತ್ತಿದೆ.

Leave a Reply