ಯಡಿಯೂರಪ್ಪ ಅವರ ಸಂತೋಷ ಕಳೆದು ದೂರ್ವಾಸ ಮುನಿ ಮಾಡಿಟ್ಟಿರುವ ಸಂತೋಷ್!

ಡಿಜಿಟಲ್ ಕನ್ನಡ ವಿಶೇಷ

ತಾವು ಕಣ್ಣಿಟ್ಟ ರಾಜ್ಯಾಧ್ಯಕ್ಷ ಸ್ಥಾನ ಕೈಗೆಟಕದೆ ರೋಸತ್ತಿರುವ ರಾಷ್ಟ್ರೀಯ ಉಪಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿ ರಾಜ್ಯ ರಾಜಕಾರಿಣಿಯನ್ನು ಬಹಿಷ್ಕರಿಸುವ ಮೂಲಕ ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಯಡಿಯೂರಪ್ಪನವರು ಇಲ್ಲಿ ಎರಡು ರೀತಿಯ ಸಂದೇಶ ಕಳುಹಿಸಿದ್ದಾರೆ. ರಾಜ್ಯದಲ್ಲಿ ತಮ್ಮ ವಿರುದ್ಧ ಮಸಲತ್ತು ಮಾಡುತ್ತಿರುವ ನಾಯಕರಿಗೆ ಒಂದಾದರೆ, ಮತ್ತೊಂದು ತಮ್ಮ ತಾಳ್ಮೆ ಪರೀಕ್ಷಿಸುತ್ತಿರುವ ರಾಷ್ಟ್ರೀಯ ನಾಯಕರಿಗೆ. ಅಂದುಕೊಂಡದ್ದು ಆಗಲಿಲ್ಲ ಅಂದರೆ ಏನೂ ಬೇಕಾದರೂ ಮಾಡಬಲ್ಲೆ ಎಂಬ ಸ್ಪಷ್ಟ ಸಂದೇಶ ಅವರ ಕಾರ್ಯಕಾರಿಣಿ ಬಹಿಷ್ಕಾರದ ಹಿಂದೆ ಅಡಗಿದೆ.

ಬಿಜೆಪಿ ತೊರೆದು ಕೆಜೆಪಿ ಕಟ್ಟಿ ಮತ್ತೆ ಬಿಜೆಪಿಗೆ ಮರಳಿರುವ ಯಡಿಯೂರಪ್ಪ ರಾಜ್ಯಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಪ್ರಹ್ಲಾದ ಜೋಷಿ ಅವಧಿ ಮುಗಿದಿರುವ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೊಸಬರ ನೇಮಕ ಸಂಬಂಧ ಮೂರ್ನಾಲ್ಕು ತಿಂಗಳಿಂದ ಆಗಾಗ್ಗೆ ಚರ್ಚೆ ಕೇಳಿ ಬರುತ್ತಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಚುನಾವಣೆ, ವಿಧಾನಸಭೆ ಮೂರು ಕ್ಷೇತ್ರಗಳ ಮರುಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ – ಹೀಗೆ ಚುನಾವಣೆ ಘೋಷಣೆ ಆದಾಗಲೆಲ್ಲ ರಾಜ್ಯಾಧ್ಯಕ್ಷ ಸ್ಥಾನದ ಮಾತು ಯಡಿಯೂರಪ್ಪ ಹೆಸರಿನೊಂದಿಗೆ ಚಾಲ್ತಿ ಪಡೆದು, ಅಷ್ಟೇ ವೇಗವಾಗಿ ಗಾಳಿಯಲ್ಲಿ ಲೀನವಾಗಿದೆ. ಬೆಳಗಾವಿಯಲ್ಲಿ ತಿಂಗಳ ಹಿಂದೆ ನಡೆದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಂದು ಯಡಿಯೂರಪ್ಪ ಅವರ ನೇಮಕ ಘೋಷಣೆ ಆಗಿಯೇಬಿಡುತ್ತದೆ ಎಂಬಷ್ಟರ ಮಟ್ಟಿಗೆ ಹವಾ ಸೃಷ್ಟಿ ಮಾಡಲಾಗಿತ್ತು. ಆದರೆ ಅದು ಠುಸ್ಸಾಗಿ ಹೋಯಿತು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಹೊತ್ತಿಗಾದರೂ ತಮ್ಮ ನೇಮಕ ಆಗಬಹುದು ಎಂದು ನಿರೀಕ್ಷಿಸಿದ್ದ ಯಡಿಯೂರಪ್ಪ ಅದೂ ಹುಸಿಯಾದ ಹಿನ್ನೆಲೆಯಲ್ಲಿ ಬೇಸತ್ತು ಹೋಗಿ, ಬಹಿಷ್ಕಾರದಂತಹ ನಿರ್ಧಾರಕ್ಕೆ ಬಂದಿದ್ದಾರೆ.

ಹಾಗಾದರೆ ಯಡಿಯೂರಪ್ಪನವರ ನೇಮಕ ಏಕೆ ವಿಳಂಬ ಆಗುತ್ತಿದೆ? ವರಿಷ್ಠರಿಗೆ ಅವರ ನೇಮಕ ಇಷ್ಟವಿಲ್ಲವೇ? ಹಾಗಾದರೆ ಅವರಿಗೆ ಫಿಟ್ಟಿಂಗ್ ಇಟ್ಟಿರುವ ರಾಜ್ಯ ನಾಯಕರು ಯಾರು? ಮತ್ತು ಯಾಕಾಗಿ ಇಟ್ಟಿದ್ದಾರೆ? ಹೈಕಮಾಂಡ್ ಗೆ ಇಷ್ಟವಿದ್ದರೂ ಯಾಕಾಗಿ ವಿಳಂಬ ಮಾಡುತ್ತಿದೆ? ಯಡಿಯೂರಪ್ಪನವರ ನೆಮ್ಮದಿ ಕಳೆದಿರುವವರು ಯಾರು ಎಂಬ ಪ್ರಶ್ನೆಗಳು ಇಲ್ಲಿ ಸಹಜ.

ಹಿಂದೆ ಸಿಎಂ ಆಗಿದ್ದಾಗ ತಮ್ಮನ್ನು ಜೈಲಿಗೆ ತಳ್ಳಿದ್ದ ಡಿನೋಟಿಫಿಕೇಷನ್, ಗಣಿ ಹಗರಣಗಳಿಂದ ಯಡಿಯೂರಪ್ಪನವರು ಒಂದೊಂದಾಗಿ ಕಳಚಿಕೊಂಡು ಬಂದಿರುವುದು ದಿಟ. ಆದರೆ ಯು.ಆರ್. ಅನಂತಮೂರ್ತಿ ಅವರ ಸಂಸ್ಕಾರ ಕಾದಂಬರಿಯಲ್ಲಿನ ಪಾತ್ರ ನಾರಾಯಣಪ್ಪ ಬ್ರಾಹ್ಮಣ್ಯ ಬಿಟ್ಟಿದ್ದರೂ ಬ್ರಾಹ್ಮಣ್ಯ ನಾರಾಯಣಪ್ಪನನ್ನು ಬಿಟ್ಟಿಲ್ಲ ಎಂಬಂತೆ ಯಡಿಯೂರಪ್ಪನವರಿಗೆ ಮೆತ್ತಿಕೊಂಡಿರುವ ಹಗರಣಗಳ ಮಸಿ ಸಂಪೂರ್ಣ ತೊಳೆದುಕೊಂಡು ಹೋಗಿಲ್ಲ ಎನ್ನುವ ಚಿತ್ರಣವನ್ನು ಅವರನ್ನು ಕಂಡರಾಗದ ರಾಜ್ಯದ ಕೆಲ ನಾಯಕರು ವರಿಷ್ಠರಿಗೆ ಕೊಟ್ಟಿದ್ದಾರೆ, ಈಗಲೂ ಕೊಡುತ್ತಿದ್ದಾರೆ. ಆದರೆ ಇನ್ನೆರಡು ವರ್ಷ ಮಾತ್ರ ಬಾಕಿ ಉಳಿದಿರುವ ವಿಧಾನಸಭೆ ಚುನಾವಣೆಗೆ ಪಕ್ಷ ಸಂಘಟಿಸಲು ಸಾಮರ್ಥ್ಯ ಇರುವ ನಾಯಕರಲ್ಲಿ ಯಡಿಯೂರಪ್ಪ ಅವರೇ ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂಬುದು ಅಷ್ಟೇ ನಿಜ. ಆದರೆ ಹಿಂದೆ ಇದೇ ಯಡಿಯೂರಪ್ಪನವರು ಬಿಜೆಪಿಗೆ ಕರೆದು ತಂದಿದ್ದ, ಪ್ರಸ್ತುತ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಆಗಿರುವ ಸಂತೋಷ್ ಯಡಿಯೂರಪ್ಪನವರ ಬಯಕೆಗೆ ಕಂಟಕವಾಗಿದ್ದಾರೆ. ಸ್ವಕ್ಷೇತ್ರ ಶಿವಮೊಗ್ಗದಲ್ಲಿ ಆರೆಸ್ಸೆಸ್ ಪ್ರಚಾರಕರಾಗಿದ್ದ ಸಂತೋಷ್ ಅವರನ್ನು ಕರೆತಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಡಿದ್ದರು. ಅವರೀಗ ಮುಳುಗು ನೀರಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ರಾಜ್ಯದಲ್ಲಿ ಬೇರಾರೂ ಆಕಾಂಕ್ಷಿಗಳೇ ಇಲ್ಲ, ಎಲ್ಲರೂ ಯಡಿಯೂರಪ್ಪ ಉಮೇದುವಾರಿಕೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಅರ್ಥವಲ್ಲ. ಕೇಂದ್ರ ಸಚಿವ ಅನಂತಕುಮಾರ್, ಮಾಜಿ ಉಪಮುಖ್ಯಮಂತ್ರಿಗಳಾದ ಈಶ್ವರಪ್ಪ, ಆರ್. ಅಶೋಕ್, ಮಾಜಿ ಸಚಿವ ಸಿ.ಟಿ. ರವಿ, ನಳೀನ್ ಕುಮಾರ್ ಕಟೀಲು ಅವರಂಥ ಆಕಾಂಕ್ಷಿಗಳಿಂದ ಯಡಿಯೂರಪ್ಪ ನೇಮಕಕ್ಕೆ ವಿರೋಧ ಇದ್ದರೂ, ಯಡಿಯೂರಪ್ಪನವರ ಸಂತೋಷ ಕಳೆದಿರುವಲ್ಲಿ ಸಂತೋಷ್ ಅವರ ಪಾತ್ರದ ತೂಕವೇ ಬೇರೆ!

ಅದಕ್ಕೆ ಕಾರಣ ಏನಪ್ಪಾ ಅಂತಂದರೇ.. ಪಕ್ಷಕ್ಕೆ ಕರೆತಂದು ಸಂತೋಷ್ ಅವರನ್ನು ಪದಾಧಿಕಾರಿ ಮಾಡಿದರೂ ಮಂತ್ರಿಗಳಿಂದ ಕಾರ್ಯಕರ್ತರವರೆಗೆ ಯಾರೂ ಅವರಿಗೆ ಕಿಮ್ಮತ್ತು ಕೊಡುತ್ತಿರಲಿಲ್ಲ. ಕಿಮ್ಮತ್ತು, ಪ್ರಭಾವ, ಗತ್ತು, ಗೈರತ್ತು ಎಲ್ಲವೂ ಯಡಿಯೂರಪ್ಪ, ಅವರು ಅಲಂಕರಿಸಿದ್ದ ಸಿಎಂ ಪಟ್ಟದ್ದೇ ಆಗಿತ್ತು. ಹುದ್ದೆ ಪ್ರಭಾವ ಅರಿತುಕೊಂಡ ಸಂತೋಷ್ ಮುಂದೆ ಹಗರಣಗಳಿಗೆ ಸಿಕ್ಕಿಕೊಂಡ ಯಡಿಯೂರಪ್ಪ ಸಿಎಂ ಪಟ್ಟದಿಂದ ಕೆಳಗಿಳಿಯುವ ಹಂತದಲ್ಲಿ ವರಿಷ್ಠರಿಗೆ ಕೊಂಡಿಯಾಗಿ ಸಾಕಷ್ಟು ಕೆಲಸ ಮಾಡಿದ್ದರು. ಇದನ್ನೆಲ್ಲ ಗಮನಿಸಿದ್ದ ಡಿ.ವಿ. ಸದಾನಂದಗೌಡರು ಮುಂದೆ ಸಿಎಂ ಆಗಿ ಬಂದರು. ಅವರ ಆಪ್ತವಲಯದ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ ಸಂತೋಷ್ ಮಂತ್ರಿ ಮಂಡಲ ಹಾಗೂ ಪದಾಧಿಕಾರಿಗಳ ವಲಯವನ್ನು ಹಂತ-ಹಂತವಾಗಿ ತಮ್ಮ ತೆಕ್ಕೆಗೆ ತೆಗೆದುಕೊಂಡರು. ಅದ್ಯಾವ ಮಟ್ಟಿಗೆ ಅಂದರೆ ಮುಂದೆ ಸದಾನಂದಗೌಡರು ಕೆಳಗಿಳಿದು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗುವಾಗ ತಾವೂ ಆ ಹುದ್ದೆಗೆ ಒಬ್ಬ ಆಕಾಂಕ್ಷಿ ಎಂದು ಬಿಂಬಿಸಿಕೊಳ್ಳುವಷ್ಟರ ಮಟ್ಟಿಗೆ. ಅದಕ್ಕೆಲ್ಲ ಅವರು ಬಳಕೆ ಮಾಡಿಕೊಂಡದ್ದು ರಾಷ್ಟ್ರೀಯ ಮಟ್ಟದಲ್ಲಿ ತಾವು ಬೆಳೆಸಿ, ಗಟ್ಟಿಮಾಡಿಕೊಂಡ ಪಕ್ಷ ನಾಯಕರ ಸಂಪರ್ಕವನ್ನು.

ಇದೀಗ ಮತ್ತೆ ಪಕ್ಷದ ರಾಜ್ಯ ನಾಯಕತ್ವ ಯಡಿಯೂರಪ್ಪ ಅವರಂತ ಪ್ರಭಾವಿ ನಾಯಕರ ಕೈಗೆ ಹೋದರೆ ತಾವು ಕಟ್ಟಿರುವ ಒಳಸಾಮ್ರಾಜ್ಯ ಕುಸಿಯುತ್ತದೆ, ತಮ್ಮನ್ನು ಯಡಿಯೂರಪ್ಪ ಆಪೋಶನ ತೆಗೆದುಕೊಳ್ಳುತ್ತಾರೆ, ಹಿಂದೆ ತಾವು ಮಾಡಿರುವ ಉಪಕಾರ ಬಡ್ಡಿಸಮೇತ ವಾಪಾಸಾಗುತ್ತದೆ  ಎಂಬ ಭಯ ಸಂತೋಷ್ ಅವರಿಗಿದೆ. ಅವರು ರಾಷ್ಟ್ರ ಮಟ್ಟದಲ್ಲಿ ಒಡ್ಡಿರುವ ಪ್ರಬಲ ಕಂಟಕ ಯಡಿಯೂರಪ್ಪ ಪಟ್ಟಾಭಿಷೇಕವನ್ನು ತೂಗುಯ್ಯಾಲೆಯಲ್ಲಿಟ್ಟಿದೆ. ಈ ಹೊಯ್ದಾಟ ಯಡಿಯೂರಪ್ಪ ಅವರನ್ನು ದೂರ್ವಾಸ ಮುನಿ ಮಾಡಿಟ್ಟಿದೆ.

Leave a Reply