ಸಿನಿಮಾಕ್ಕೆ ಹೊಸ ಈಡಂ ನೀಡಿದ  ‘ಮಸಾನ್’, ಪ್ರಶಸ್ತಿ ಮೌಲ್ಯ ಮಸಣ ಸೇರಿಸಿದ ಆಯ್ಕೆ ಸಮಿತಿ!

sridharamurthyಎನ್.ಎಸ್.ಶ್ರೀಧರ ಮೂರ್ತಿ

63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಹಲವು ಅಚ್ಚರಿಗಳನ್ನು ಮೂಡಿಸಿದೆ. ಬಾಹುಬಲಿಯಂತಹ ಶುದ್ದ ವ್ಯಾಪಾರಿ ಚಿತ್ರ ಸ್ವರ್ಣ ಕಮಲದ ಗೌರವ ಪಡೆದಿದ್ದು ಒಂದು ಅಚ್ಚರಿಯಾದರೆ, ಬಹುತೇಕ ಎಲ್ಲಾ ಪ್ರಮುಖ ಪ್ರಶಸ್ತಿಗಳು ಬಾಲಿವುಡ್‍ನ ಪಾಲಾಗಿರುವುದು ಇನ್ನೊಂದು ಅಚ್ಚರಿಯಾಗಿದೆ. ಭಾರತೀಯ ಚಿತ್ರರಂಗ ಎಂದರೆ ಬಾಲಿವುಡ್ ಮಾತ್ರ  ಎನ್ನುವಂತೆ ಇತ್ತೀನ ವರ್ಷಗಳಲ್ಲಿ ಬಿಂಬಿತವಾಗುತ್ತಾ  ವಿವಿಧ ಭಾಷೆಗಳ ಚಿತ್ರರಂಗದ ಪ್ರಯೋಗಶೀಲತೆ ಕಡೆಗಣಿತವಾಗುತ್ತಾ ಬಂದ ಪ್ರವೃತ್ತಿ  ಈ ವರ್ಷ ಅಘಾತಕಾರಿ ಹಂತವನ್ನೇ ತಲುಪಿದೆ. ಚಲನಚಿತ್ರ ಪ್ರಶಸ್ತಿಗಳು ಚಿತ್ರ ಮಾಧ್ಯಮವನ್ನು ಬೆಳೆಸುವಲ್ಲಿ ಎಂತಹ ಕೊಡುಗೆ ನೀಡಿದೆ ಎನ್ನುವುದನ್ನು ಗಮನಿಸಬೇಕೆ ಹೊರತು ಮನೋರಂಜನೆಯಲ್ಲ ಎನ್ನುವ  ಗುಣಾತ್ಮಕ ಮಾನದಂಡ. ಬಾಹುಬಲಿಯ ಆಯ್ಕೆಯೊಂದಿಗೆ ಹಳ್ಳ ಹಿಡಿದಿದೆ. ಇದು ಇನ್ನೊಂದು ರೀತಿಯಲ್ಲಿ ಚಲನಚಿತ್ರ ಕಲೆ ಎಂಬದಕ್ಕಿಂತ ಮನೋರಂಜನಾ ಮಾಧ್ಯಮ ಎನ್ನುವುದಕ್ಕೆ ಒತ್ತು ಸಿಕ್ಕಿರುವುದರ ಸಂಕೇತವೂ ಹೌದು. ಇದರ ಜೊತೆಗೆ ಬಾಹುಬಲಿ ಚಿತ್ರ ಬಿಂಬಿಸುವ ಹಿಂಸೆ ಮತ್ತು ಜನಾಂಗೀಯ ದ್ವೇಷವನ್ನು ಆಯ್ಕೆ ಸಮಿತಿ ಹೇಗೆ ಸಮರ್ಥಿಸುತ್ತದೆ ಎನ್ನುವುದು ಯಕ್ಷ ಪ್ರಶ್ನೆಯೇ ಸರಿ.

ಈ ವರ್ಷದ ಸ್ಪರ್ಧೆಯಲ್ಲಿ ಭಾರತೀಯ ಚಲನಚಿತ್ರ ಗ್ರಾಮರ್ ಬದಲಾಯಿಸಿದೆ ಎಂಬ ಹೆಗ್ಗಳಿಕೆಯ ‘ಮಸಾನ್‍’ ಎನ್ನುವ ಹಿಂದಿ ಚಿತ್ರ ಕೂಡ ಇತ್ತು.  ಅದು ಪ್ರತಿಷ್ಠಿತ ಕಾನ್ ಚಿತ್ರೋತ್ಸವದಲ್ಲಿ ಎರಡು ಪ್ರಶಸ್ತಿಗಳನ್ನು ಗೆಲ್ಲುವುದರ ಜೊತೆಗೆ ಪ್ರದರ್ಶಿತವಾದ ಚಿತ್ರೋತ್ಸವಗಳಲ್ಲೆಲ್ಲಾ ಮೆಚ್ಚಿಗೆಯನ್ನೇ ಪಡೆಯುತ್ತಾ ಬಂದಿದೆ. ಈ ಚಿತ್ರಕ್ಕೆ ನಿರ್ದೇಶಕರ ಚೊಚ್ಚಲ ನಿರ್ದೇಶನಕ್ಕೆ ದೊರಕುವ ಪ್ರಶಸ್ತಿ ಸಮಾಧಾನಕರ ಬಹುಮಾನದ ರೀತಿ ಬಂದಿದೆ.  ಈ ಮಟ್ಟಿಗೆ ಚಿತ್ರಕ್ಕೆ ಅನ್ಯಾಯವೇ ಆಗಿದೆ. ‘ಮಸಾನ್’ ನೀರಜ್ ಗ್ಯಾನ್ ಅವರ ಚೊಚ್ಚಲ ನಿರ್ದೇಶನದ ಚಿತ್ರ. ಇದು ಪುರಾಣ ಪ್ರಸಿದ್ಧ ವಾರಣಾಸಿಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಎರಡು ದುರಂತ ಕಥೆಗಳನ್ನು ಒಂದೇ ದಾರದಲ್ಲಿ ಪೋಣಿಸಿದಂತಹ ಚಿತ್ರ. ಮೊದಲ ಕಥೆ ದೇವಿ ಪಾಠಕ್‍ಳದು. ಚಿತ್ರ ಆರಂಭವಾಗುವುದೇ ಅವಳು ಹೋಟಲ್ ರೂಂ ಒಂದರಲ್ಲಿ ಸ್ನೇಹಿತನ ಜೊತೆಗೆ ಹೋಗುವುದರೊಂದಿಗೆ. ಈ ಹೋಟಲ್‍ನ ಮೇಲೆ ಪೋಲೀಸ್ ದಾಳಿ ನಡೆಯುತ್ತದೆ. ಭಯದಲ್ಲಿ ಅವಳ ಸ್ನೇಹಿತ ಪಿಯೂಷ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಪೋಲೀಸ್ ಅಧಿಕಾರಿ ಮಿಶ್ರ  ಘಟನೆ ಬಳಸಿ ದೇವಿ ಕುಟುಂಬವನ್ನು ಬ್ಲಾಕ್ ಮೇಲ್ ಮಾಡುತ್ತಾನೆ. ದೇವಕಿ ತಂದೆ ವಿದ್ಯಾಧರ್ ಪಾಠಕ್ ನಿವೃತ್ತ ಸಂಸ್ಕೃತ ಅಧ್ಯಾಪಕ ಜೀವನೋಪಾಯಕ್ಕೆ ಗಂಗಾನದಿ ದಡದಲ್ಲಿ ಪವಿತ್ರ ವಸ್ತುಗಳನ್ನು ಮಾರುವ ಅಂಗಡಿ ನಡೆಸುತ್ತಿರುವವನು.  ಈ ಘಟನೆ ಅವನ ನಂಬಿಕೆಯ ಬುನಾದಿಯನ್ನೇ ಅಲುಗಾಡಿಸುತ್ತದೆ. ಆದರೆ ದೇವಿ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸುತ್ತಾಳೆ. ನೆರೆಹೊರೆಯವರ ಟೀಕೆಗಳಿಗೆ ಅಂಜದೆ ಗಟ್ಟಿಯಾಗಿ ನಿಂತು ಕೆಲಸಕ್ಕೆ ಸೇರುತ್ತಾಳೆ. ಸಮಸ್ಯೆ ಪರಿಹಾರವಾದ ನಂತರ ಅಲಹಾಬಾದ್‍ಗೆ ಹೆಚ್ಚಿನ ಕಲಿಕೆಗಾಗಿ ಹೋಗುವ ಮೂಲಕ ಬಿಡುಗಡೆ ದಾರಿ ಕಂಡು ಕೊಳ್ಳುತ್ತಾಳೆ.

ಇನ್ನೊಂದು ಎಳೆಯಲ್ಲಿ ಗಂಗಾನದಿ ದಡದಲ್ಲಿ ಹೆಣಗಳನ್ನು ಸುಡುವ ಕೆಲಸ ಮಾಡುವ ಕುಟುಂಬದಿಂದ ದೀಪಕ್‍ನ ಕಥೆ ಇದೆ. ಅವನು ಸುತ್ತಲಿನ ಪರಿಸ್ಥಿತಿಯನ್ನು ಎದುರಿಸಿ ಇಂಜಿನಿಯರಿಂಗ್ ಓದುತ್ತಿದ್ದಾನೆ. ಆಕಸ್ಮಿಕವಾಗಿ ಪರಿಚಿತಳಾದ  ಮೇಲ್ವರ್ಗದ ಹುಡುಗಿ ಶಾಲುವನ್ನು ಪ್ರೀತಿಸುತ್ತಾನೆ. ತಮ್ಮ ಪ್ರೀತಿಯನ್ನು ಹೆತ್ತವರು ಒಪ್ಪಲಾರರು ಎನ್ನುವುದು ಶಾಲುವಿಗೆ ಗೊತ್ತು ಆದರೆ ಅವರನ್ನು ಒಪ್ಪಿಸುವ ವಿಶ್ವಾಸವಿದೆ. ಹೀಗೆ ನವಿರಾಗಿ ಸಾಗುವ ಪ್ರೇಮಕಥೆ ಬಸ್ ಅಪಘಾತದಲ್ಲಿ ಶಾಲು ಸಾಯುವದರೊಂದಿಗೆ ದುರಂತ ತಿರುವನ್ನು ಪಡೆಯುತ್ತದೆ. ಅವಳ ಶವ,  ದಹನಕ್ಕಾಗಿ ದೀಪಕ್‍ನ ಬಳಿಯೇ ಬರುತ್ತದೆ. ಈ ಅಘಾತದಿಂದ ಹೊರ ಬರಲು ಅವನು ಅಲಹಾಬಾದ್‍ನಲ್ಲಿ ಇಂಜಿನಿಯರ್ ಕೆಲಸ ಪಡೆಯುದರೊಂದಿಗೆ ವಾರಣಾಸಿಯನ್ನು ಬಿಡುತ್ತಾನೆ. ದೇವಿ ಮತ್ತು ದೀಪಕ್ ಅಲಹಾಬಾದ್‍ನಲ್ಲಿ ಭೇಟಿಯಗುವುದರೊಂದಿಗೆ ಚಿತ್ರ ಮುಗಿಯುತ್ತದೆ. ಅವರ ಬದುಕಿನ ಎಳೆಗಳು ಒಂದಾಗುತ್ತವೆಯೇ ಇಲ್ಲವೆ ಎನ್ನುವುದು ಚಿತ್ರದ ಧ್ವನಿಯಲ್ಲ ಸಾವುಗಳ ನೆರಳಿನಲ್ಲೇ  ಬದುಕು ಹೇಗೆ ಮುಂದುವರೆಯುತ್ತದೆ ಎಂದು ಹೇಳುವದು ಚಿತ್ರದ ಉದ್ದೇಶ.

‘’ಮಸಾನ್’ ಮುಖ್ಯವಾಗುವುದು ಅದು ಬಳಸಿರುವ ಹೊಸ ಈಡಂಗಳಿಗೆ. ಶಾಲುವಿನ ಬೆರಳಲ್ಲಿದ್ದ ಉಂಗುರವನ್ನು ಹಿಡಿದು ದೀಪಕ್ ಹುಚ್ಚನಂತೆ ಅಲೆಯುತ್ತಾನೆ. ಅದಿರುವವರೆಗೂ ಅವಳ ನೆನಪುಗಳಿಂದ ಮುಕ್ತಿ ಇಲ್ಲ ಎಂದು ಅರಿತು ಅದನ್ನು ಗಂಗಾ ನದಿಗೆ ಎಸೆಯುತ್ತಾನೆ. ಈ ಉಂಗುರ ವಿದ್ಯಾಧರ ಪಾಠಕ್‍ಗೆ ಸಿಗುತ್ತದೆ ಅದನ್ನು ಮಾರುವ ಮೂಲಕವೇ ದೇವಿಗೆ ಬಿಡುಗಡೆ ಸಿಗುತ್ತದೆ. ಇಬ್ಬರೂ ವಾರಣಾಸಿಯಿಂದ ಅಲಹಾಬಾದ್‍ಗೆ ಬರಲು ಇದು ಕಾರಣವಾಗುತ್ತದೆ. ಇದೊಂದು ಚಿಕ್ಕ ಉದಾಹರಣೆ ಮಾತ್ರ. ಇಡೀ ಚಿತ್ರದಲ್ಲಿ ಇಂತಹ ಬಂಧನ ಮತ್ತು ಬಿಡುಗಡೆಯ ಹಲವು ರೂಪಕಗಳಿವೆ. ದೃಶ್ಯ ರೂಪಕಗಳ ಮೂಲಕವೇ ಕಥೆ ಹೇಳುವ ತಂತ್ರಗಾರಿಕೆ ಇಲ್ಲಿ ಬಳಕೆಯಾಗಿದೆ.  ಗಂಗಾ ನದಿಯ ಹರಿವು, ಹರಿಶ್ಚಂದ್ರ ಘಾಟ್‍ನಲ್ಲಿ ಜ್ವಲಿಸುವ ಚಿತಾಗ್ನಿಗಳು. ಸಾವಿನ ನೆರಳಲ್ಲೇ ಬೆಳೆಯುವ ಅರಳು ಪ್ರೀತಿ, ಪ್ರೀತಿಯನ್ನು ಹಿಂಬಾಲಿಸುವ ಸಾವು, ಸಾವಿನಾಚೆಗೂ ಬೆಳೆಯುವ ಬದುಕು  ಹೀಗೆ ಚಿತ್ರ ರೂಪಕಗಳನ್ನು ಪೋಣಿಸುತ್ತಲೇ ಚಲನೆಯನ್ನು ಕಂಡು ಕೊಳ್ಳುತ್ತದೆ. ಅವಿನಾಶ್ ಅರಣ್ ಧಾವ್ರೆ ಅವರ ಛಾಯಾಗ್ರಹಣ ಮನ್ ಕಸ್ತೂರಿಯವರ ಸಂಗೀತ ಚಿತ್ರವನ್ನು ಇನ್ನಷ್ಟು ಕಾಡುವಂತೆ ಬೆಳೆಸಿದೆ. ಚಿತ್ರದಲ್ಲಿನ ಮೂರೂ ಗೀತೆಗಳೂ ರೂಪಕದ ಮಾದರಿಯಲ್ಲೇ ಚಿತ್ರವನ್ನು ಗಾಢವಾಗಿಸಿವೆ. ಅದರಲ್ಲೂ ದುಷ್ಯಂತ್ ಕುಮಾರ್ ಅವರ ಕವಿತೆಯನ್ನು ಆಧರಿಸಿದ ಚಿತ್ರಗೀತೆ  ‘ತು ಕಿಸಿ ರೈಲ್‍ಸೆ’ ಚಿತ್ರ ಮುಗಿದ ನಂತರವೂ ಕಾಡುತ್ತದೆ. ದೇವಿ ಪಾತ್ರದಲ್ಲಿ ರಿಚಾ ಚೆಡ್ಡಾ, ದೀಪಕ್ ಪಾತ್ರದಲ್ಲಿ ವಿಕ್ಕಿ ಕೌಶಲ್ ಮತ್ತು ದೇವಕಿ ತಂದೆ ಪಾತ್ರದಲ್ಲಿ ಸಂಜಯ್ ಮಿಶ್ರ ಅವಿಸ್ಮರಣೀಯ ಅನುಭವ ನೀಡಿದ್ದಾರೆ. ಸಿದ್ದಾಂತದ ಗೋಜಲಿಲ್ಲದೆ, ಭಾವನಾತ್ಮಕತೆಯ ತೊಡಕುಗಳಿಲ್ಲದೆ ಕೇವಲ ದೃಶ್ಯಗಳ ಸಂಯೋಜನೆಯಿಂದಲೇ ಚಿತ್ರವನ್ನು ಹೇಗೆ ರೂಪಿಸಬಹುದು ಎನ್ನುವುದಕ್ಕೆ ‘ಮಸಾನ್’ ಅದ್ಭುತ ಉದಾಹರಣೆಯಾಗಿದೆ.

ಪ್ರಶಸ್ತಿಗಳ ಮಾತು ಬಿಡಿ ‘ಮಸಾನ್‍’ನೋಡುವುದರಿಂದ ನೀವು ಬದುಕನ್ನು ಗ್ರಹಿಸುವ ಕ್ರಮ ಗಮನಾರ್ಹವಾಗಿ ಬದಲಾಗುತ್ತದೆ ಎನ್ನುವುದಂತೂ ಖಚಿತ. ಹೀಗೆ ಹೇಳಬಲ್ಲ ಸಿನಿಮಾಗಳು ಎಷ್ಟಿವೆ ಹೇಳಿ?

Leave a Reply