ಸುದ್ದಿಸಂತೆ: ಅಡುಗೆ ಅನಿಲ ದರ ಇಳಿಕೆ, ಚಂಡಿಗಡ ಮೊದಲ ಸೀಮೆಎಣ್ಣೆ ಮುಕ್ತ ನಗರ,  ಕಾಶ್ಮೀರದಲ್ಲಿ ಇಬ್ಬರು ಉಗ್ರರ ಬಂಧನ

ಡಿಜಿಟಲ್ ಕನ್ನಡ ಟೀಮ್

ಅನುದಾನ ರಹಿತ ಅಡುಗೆ ಅನಿಲದ ಪ್ರತಿ ಸಿಲಿಂಡರ್ ಬೆಲೆಯಲ್ಲಿ 4 ರುಪಾಯಿ ಇಳಿಕೆಯಾಗಿದೆ. 14.2 ಕೆಜಿ ಸಾಮರ್ಥ್ಯದ ಸಿಲಿಂಡರ್ ಗೆ ಇದು ಅನ್ವಯವಾಗಲಿದೆ. ಈ ಹಿಂದೆ ಪ್ರತಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ ₹ 513.50 ಇದ್ದು, ಪರಿಷ್ಕೃತ ದರ ₹ 509.50 ಆಗಲಿದೆ. ಪ್ರಸಕ್ತ ಸಾಲಿನಲ್ಲಿ ಇದು ಮೂರನೆ ಬಾರಿಗೆ ಇಳಿಕೆಯಾಗಿದ್ದು, ಈ ಹಿಂದೆ ಮಾರ್ಚ್ 1 ರಂದು ₹ 61.50 ಮತ್ತು ಫೆಬ್ರವರಿ 1 ರಂದು ₹ 82.50 ರಷ್ಟು ಕಡಿಮೆಗೊಂಡಿತ್ತು. ಅನುದಾನ ಸಹಿತ ಪ್ರತಿ ಸಿಲಿಂಡರ್ ದರ ದೆಹಲಿಯಲ್ಲಿ ₹ 419.33 ಗೆ ದೊರೆಯಲಿದೆ.

ಚಂಡಿಗಡ ಮೊದಲ ಸೀಮೆಎಣ್ಣೆ ಮುಕ್ತ ನಗರ

ದೇಶದ ಮೊದಲ ಸೀಮೆಎಣ್ಣೆ ಮುಕ್ತ ನಗರ ಎಂಬ ಹೆಗ್ಗಳಿಕೆಗೆ ಚಂಡಿಗಡ ಪಾತ್ರವಾಗಿದೆ. ನಗರದಲ್ಲಿ ಸಬ್ಸಿಡಿ ಅಡುಗೆ ಮತ್ತು ದೀಪದ ಎಣ್ಣೆ ಮಾರಾಟ ಮಾಡುವುದನ್ನು ಪೂರ್ಣ ಪ್ರಮಾಣದಲ್ಲಿ ಶುಕ್ರವಾರದಿಂದ ನಿಷೇಧಿಸಲಾಗಿದೆ. ನಗರದ ಎಲ್ಲಾ ಕುಟುಂಬದವರು ಎಲ್ ಪಿಜಿ ಸಂಪರ್ಕ ಪಡೆದಿದ್ದಾರೆ ಎಂದು ಕೇಂದ್ರ ತೈಲ ಸಚಿವಾಲಯ ಘೋಷಣೆ ಮಾಡಿದೆ. ಸ್ಥಳೀಯ ಆಡಳಿತ ಕೆಲ ತಿಂಗಳುಗಳಿಂದ ಅಭಿಯಾನ ಕೈಗೊಂಡಿದ್ದು, ಹೊಸದಾಗಿ ಬಿಪಿಎಲ್ ನ 1574 ಸಂಪರ್ಕಗಳು ಸೇರಿ ಒಟ್ಟು 15249 ಎಲ್ ಪಿ ಜಿ ಸಂಪರ್ಕಗಳನ್ನು ವಿತರಿಸಲಾಗಿದೆ.

ಕಾಶ್ಮೀರದಲ್ಲಿ ಇಬ್ಬರು ಉಗ್ರರ ಬಂಧನ

ಹಿಜ್ಬಲ್ ಮುಜಾಹಿದ್ದಿನ್ (ಹೆಚ್ಎಂ) ಸಂಘಟನೆಯ ಶಂಕಿತ ಉಗ್ರ ಸೇರಿ ಇಬ್ಬರನ್ನು ಕಾಶ್ಮೀರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ತಸ್ಸದುಖ್ ರಸೂಲ್ ಎಂಬಾತನ್ನು ಕುಪವಾರ ಜಿಲ್ಲೆಯ ಹಂಡ್ ವಾರ್ ಪ್ರದೇಶದಲ್ಲಿ ವಾಹನ ಪರಿಶಿಲಿಸುವ ವೇಳೆ ಬಂಧಿಸಲಾಗಿದೆ. ಮತ್ತೊಬ್ಬ ಉಗ್ರ ಖಾಕಿ ಹುಸೈನ್ ಎಂಬಾತನನ್ನು ಉಗ್ರರ ಚಟುವಟಿಕೆಗಳಲ್ಲಿ ಭಾಗಿಯಾಗಿಯಾಗಿರುವ ಹಿನ್ನೆಲೆಯಲ್ಲಿ ಬರಮುಲ್ಲ ಜಿಲ್ಲೆಯ ದಾಚಿ ಎಂಬ ಹಳ್ಳಿಯಲ್ಲಿ ಬಂಧಿಸಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ₹ 500 ದಂಡ

ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಲು ಲಖನೌ ಪಾಲಿಕೆ ಹೊಸ ನಿಯಮ ಜಾರಿಗೆ ತರಲು ನಿರ್ಧರಿಸಿದೆ. ಅದೇನಪ್ಪಾ ಅಂದ್ರೆ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ, ಉಗುಳೋದು ಮಾಡಿದ್ರೆ  ₹ 500 ದಂಡ ವಿಧಿಸಲು ಮುಂದಾಗಿದೆ. ಈ ಹಿಂದೆ ₹ 50 ದಂಡ ನಿಗದಿ ಪಡಿಸಲಾಗಿತ್ತು. ಆದರೆ, ಇದು ಹೆಚ್ಚು ಪರಿಣಾಮಕಾರಿಯಾಗದ ಹಿನ್ನೆಲೆಯಲ್ಲಿ ದಂಡದ ಪ್ರಮಾಣ ಹೆಚ್ಚಿಸಲು ಮುಂದಾಗಿದೆ.

Leave a Reply