ಸ್ಪಿನ್ನರ್ ಗಳಿಗೆ ಮುಳುವಾದ ಇಬ್ಬನಿ, ಟೀಂ ಇಂಡಿಯಾ ವಿಶ್ವಕಪ್ ಆಸೆಗೆ ತಣ್ಣೀರೆರೆಚಿತು ಸ್ವಯಂಕೃತ ತಪ್ಪು!

West Indies Lendl Simmons bats during their ICC World Twenty20 2016 cricket semifinal match against India at Wankhede stadium in Mumbai, India, Thursday, March 31, 2016.(AP Photo/Rajanish Kakade)

 

ಟೂರ್ನಿಯ ಆರಂಭಿಕ ಹಂತದಿಂದ ಪ್ರಶಸ್ತಿ ಗೆಲ್ಲೋ ಫೇವರಿಟ್ ತಂಡವಾಗಿ ಬಿಂಬಿತವಾಗಿದ್ದ ಟೀಂ ಇಂಡಿಯಾ ಸೆಮಿಫೈನಲ್ ನ ತನ್ನ ಪಯಣಕ್ಕೆ ಅಂತ್ಯವಾಡಿದೆ. ಪಂದ್ಯದಲ್ಲಿ ಬಹುತೇಕ ಶೇ. 65 ರಷ್ಟು ಹಾದಿಯಲ್ಲಿ ಅಂದರೇ, ವೆಸ್ಟ್ ಇಂಡೀಸ್ ಇನಿಂಗ್ಸ್ ನ 6.4 ನೇ ಓವರ್ ವರೆಗೂ ಜಯ ಭಾರತದ ಮಡಿಲಲ್ಲೇ ಸುರಕ್ಷಿತವಾಗಿರುವಂತೆ ಕಂಡು ಬಂದಿತ್ತು. ಆದರೆ, 6.5 ನೇ ಓವರ್ ನಲ್ಲಿ ಆರ್.ಅಶ್ವಿನ್ ಅವರು ಸಿಮನ್ಸ್ ವಿಕೆಟ್ ಪಡೆದರೂ ನೋಬಾಲ್ ಎಸೆದಿದ್ದು ಪಂದ್ಯಕ್ಕೆ ನಾಟಕೀಯ ತಿರುವು ನೀಡಿತು. ಅಲ್ಲಿಂದ ಮುಂದೆ ಸಂಪೂರ್ಣ ಚಿತ್ರಣ ಬದಲಾಯ್ತು. ಪರಿಣಾಮ ವೆಸ್ಟ್ ಇಂಡೀಸ್ 7 ವಿಕೆಟ್ ಅಂತರದಲ್ಲಿ ಭಾರತವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತು.

ಹೌದು.. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬಹುತೇಕ ಎಲ್ಲ ಹಂತದಲ್ಲೂ ಉತ್ತಮ ಪ್ರದರ್ಶನ ನೀಡಿತು. ಆದರೆ, ವಿಂಡೀಸ್ ನ ಲೆಂಡ್ಲ್ ಸಿಮನ್ಸ್ ಗೆ ಉಡುಗೊರೆ ರೀತಿ ನೀಡಿದ ಅತ್ಯಮೂಲ್ಯ 3 ಅವಕಾಶಗಳು ಆತಿಥೇಯರಿಗೆ ದುಬಾರಿಯಾಗಿ ಪರಿಣಮಿಸಿತು. ಪಂದ್ಯದ ಆರಂಭದಲ್ಲಿ ಟಾಸ್ ಕೈಕೊಟ್ಟಾಗಲೇ ಧೋನಿ, ಪಂದ್ಯದಲ್ಲಿ ಇಬ್ಬನಿಯ ಪಾತ್ರ ಮಹತ್ವವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಂತಿಮವಾಗಿ ವಿಂಡೀಸ್ ಗೆ ಇದು ವರವಾಗಿ ಪರಿಣಮಿಸಿತು. ವಿಂಡೀಸ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಭಾರತ ತಂಡದಲ್ಲಿ ಶಿಖರ್ ಧವನ್ ಬದಲಿಗೆ ಸ್ಥಳೀಯ ಆಟಗಾರ ಅಜಿಂಕ್ಯ ರಹಾನೆ, ಯುವರಾಜ್ ಬದಲಿಗೆ ಮನೀಷ್ ಪಾಂಡೆ ಕಣಕ್ಕಿಳಿಸಿದ್ದು, ಆರಂಭದಲ್ಲಿ ವರ್ಕ್ ಔಟ್ ಆಗಿತ್ತು. ಮತ್ತೆ ಕೊಹ್ಲಿ ಮನಮೋಹಕ ಆಟ ಎಲ್ಲರ ಮನ ಗೆದ್ದಿತ್ತು. ಆರಂಭದಲ್ಲಿ ಗೇಲ್ ಮತ್ತು ಸ್ಯಾಮುಯೆಲ್ಸ್ ವಿಕೆಟ್ ಪಡೆದ ಭಾರತ ಜಯದತ್ತ ದಾಪುಗಾಲು ಹಾಕಿತ್ತು. ನಂತರ ವೆಸ್ಟ್ ಇಂಡೀಸ್ ತಂಡದ ಪರ ಜಾನ್ಸನ್ ಚಾರ್ಲ್ಸ್ ಹಾಗೂ ಲೆಂಡ್ಲ್ ಸಿಮನ್ಸ್ ಜತೆಯಾಟ ಭಾರತ ಕೈಯಲ್ಲಿದ್ದ ಜಯವನ್ನು ಕಸಿದುಕೊಳ್ಳಲು ಪ್ರಮುಖ ಪಾತ್ರ ವಹಿಸಿತು.

ವೆಸ್ಟ್ ಇಂಡೀಸ್ ತಂಡದ ಗ್ಯಾಂಬ್ಲಿಂಗ್ ಪಂದ್ಯದಲ್ಲಿ ಉತ್ತಮ ಫಲಿತಾಂಶ ನೀಡಿತು. ಏನದು ಗ್ಯಾಂಬ್ಲಿಂಗ್? ಅದೇ ಟೂರ್ನಿಯಲ್ಲಿ ಮೊದಲ ಬಾರಿಗೆ ಲೆಂಡ್ಲ್ ಸಿಮನ್ಸ್ ಕಣಕ್ಕಿಳಿಸಿದ್ದು. ಈ ಹಿಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದ ಆಂಡ್ರೆ ಫ್ಲೆಚರ್ ಸ್ಥಾನದಲ್ಲಿ ಲೆಂಡ್ಲ್ ಸಿಮನ್ಸ್ ಆಡಿದ್ದು, ಪಂದ್ಯಕ್ಕಾಗಿ ವಿಂಡೀಸ್ ತಂಡ ಮಾಡಿದ್ದ ಹೋಂ ವರ್ಕ್ ಎಷ್ಟರ ಮಟ್ಟಿಗಿತ್ತು ಎಂಬುದಕ್ಕೆ ಸಾಕ್ಷಿಯಾಗಿತ್ತು. ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಇದೇ ವಾಂಖೆಡೆ ಕ್ರೀಡಾಂಗಣದಲ್ಲಿ ಅತ್ಯದ್ಭುತ ಪ್ರದರ್ಶನ ತೋರಿ ಪಿಚ್ ನ ಸಂಪೂರ್ಣ ಸ್ವಭಾವ ಸಿಮನ್ಸ್ ಅರಿತಿದ್ದರು. ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳೊದು ವಿಂಡೀಸ್ ನ ಗೇಮ್ ಪ್ಲಾನ್ ಆಗಿತ್ತು.

ಪಂದ್ಯದಲ್ಲಿ ಭಾರತೀಯ ಸ್ಪಿನ್ನರ್ ಗಳಿಗೆ ವಿಲನ್ ಆಗಿದ್ದು, ದ್ವಿತಿಯಾರ್ಧದಲ್ಲಿ ಬಿದ್ದ ಇಬ್ಬನಿ. ಇದರಿಂದ ಚೆಂಡಿನ ಗ್ರಿಪ್ ಪಡೆಯೋದು ಸ್ಪಿನ್ನರ್ ಗಳಿಗೆ ಸವಾಲಾಗಿ ಪರಿಣಮಿಸಿತು. ಮತ್ತೊಂದೆಡೆ ಸಿಮನ್ಸ್, ಜಾನ್ಸನ್  ಮತ್ತು ರಸ್ಸೆಲ್ ಸ್ಫೋಟಕ ಹೊಡೆತ ಪಂದ್ಯದ ದಿಕ್ಕು ಬದಲಿಸಿತು.

ತವರಿನಲ್ಲಿ ಮತ್ತೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸೋ ಟೀಂ ಇಂಡಿಯಾ ಆಸೆ, ಇದನ್ನು ಕಣ್ತುಂಬಿಕೊಳ್ಳಬೇಕು ಎಂಬ ಅಭಿಮಾನಿಗಳ ಕನಸು ನುಚ್ಚುನೂರಾಗಿದೆ. ಭಾರತ ಉತ್ತಮ ಪ್ರದರ್ಶನವನ್ನೇ ನೀಡಿತು. ಬೌಲಿಂಗ್ ವೇಳೆ ಆದ ತಪ್ಪುಗಳು ದುಬಾರಿಯಾಯಿತು. ಒಟ್ಟಿನಲ್ಲಿ ಫಲಿತಾಂಶವನ್ನು ಒಂದೇ ವಾಕ್ಯದಲ್ಲಿ ಹೇಳೋದಾದ್ರೆ ಭಾರತಕ್ಕೆ ಇದು ಬ್ಯಾಡ್ ಡೇ ಆಗಿತ್ತು. ಕ್ರೀಡೆಯಲ್ಲಿ ಅದರಲ್ಲೂ ಕ್ರಿಕೆಟ್ ನಲ್ಲಿ ಈ ರೀತಿಯಾದ ಪರಿಸ್ಥಿತಿ ಬರುವುದು ಸಹಜ. ಗೆದ್ದಾಗ ಜೈಕಾರ ಹಾಕೋ ನಾವು, ಸೋತಾಗ ತಂಡವನ್ನು ಬೆಂಬಲಿಸಬೇಕು. ಅದೇ ನಾವು ಕ್ರೀಡೆಯಿಂದ ಕಲಿಯಬೇಕಿರೋ ಕ್ರೀಡಾಸ್ಫೂರ್ತಿ.

ಗುರುವಾರ ವೆಸ್ಟ್ ಇಂಡೀಸ್ ಮಹಿಳಾ ತಂಡ ಸಹ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ. ಆ ಮೂಲಕ ಕೆರಿಬಿಯನ್ನರಿಗೆ ಜಯದ ಡಬಲ್ ಧಮಾಕ ಸಿಕ್ಕಿದೆ. ಕಳೆದ ಫೆಬ್ರವರಿಯಲ್ಲಿ 19 ವರ್ಷದೊಳಗಿನ ವಿಶ್ವಕಪ್ ಟೂರ್ನಿಯಲ್ಲಿ ವಿಂಡೀಸ್ ಕಿರಿಯರ ತಂಡ ಚಾಂಪಿಯನ್ ಆಗಿದ್ದು, ಈ ತಂಡಕ್ಕೆ ಸ್ಫೂರ್ತಿಯಾಗಿದೆ. ಈಗ ಪುರುಷ ಹಾಗೂ ಮಹಿಳಾ ತಂಡ ಫೈನಲ್ ತಲುಪಿದೆ. ವೆಸ್ಟ್ ಇಂಡೀಸ್ ತಂಡ ಪ್ರಸ್ತುತ ತನ್ನ ಆಟವನ್ನು ಇನ್ನಿಲ್ಲದಂತೆ ಆನಂದಿಸುತ್ತಿದ್ದು, ಕಿರಿಯರು ಮಾಡಿದ ಸಾಧನೆಯನ್ನು ಹಿರಿಯರು ಮಾಡುವರೇ ಎಂಬುದಕ್ಕೆ ಏಪ್ರಿಲ್ 3ರಂದು ನಡೆಯಲಿರುವ ಫೈನಲ್ ಕಾಳಗವನ್ನು ಕಾದು ನೋಡಬೇಕು.

ನಿವೃತ್ತಿ ಬಗ್ಗೆ ಕೇಳಿದ ಪತ್ರಕರ್ತನ ಕಾಲೆಳೆದ ಮಹಿ

ಭಾರತ ಸೋತಿದೆ ನಿರಾಸೆಗೊಂಡಿರೋ ಅಭಿಮಾನಿಗಳಿಗೆ ಪತ್ರಿಕಾಗೋಷ್ಠಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೀಡಿದ ತಮಾಷೆ ನಿಮಗೆ ಮುಗುಳ್ನಗೆ ತರುವುದರಲ್ಲಿ ಅನುಮಾನವಿಲ್ಲ.

ಎಂದಿನಂತ ಪಂದ್ಯದ ನಂತರ ಧೋನಿ ಪತ್ರಿಕಾಗೋಷ್ಠಿಗೆ ತೆರಳಿದರು. ಈ ವೇಳೆ ಆಸ್ಟ್ರೇಲಿಯಾ ಪತ್ರಕರ್ತನೊಬ್ಬ ನೀವು ನಿವೃತ್ತಿಯಾಗುತ್ತೀರಾ ಎಂಬ ಹಳೇ ರಾಗ ಎತ್ತಿದ. ಕಳೆದ ಬಾರಿ ಕೋಪದಿಂದ ಉತ್ತರ ನೀಡಿದ್ದ ಮಹಿ, ಈ ಬಾರಿ ನಗುತ್ತಲೇ ಉತ್ತರ ನೀಡಿದರು. ಆ ಪತ್ರಕರ್ತನನ್ನು ವೇದಿಕೆ ಮೇಲೆ ಕರೆದು ತನ್ನ ಪಕ್ಕ ಕೂರಿಸಿಕೊಂಡು, ನಾನು ಫಿಟ್ ಆಗಿಲ್ಲವೇ? ಉತ್ತಮವಾಗಿ ಆಡುತ್ತಿಲ್ಲವೇ? ಎಂದು ಕೇಳಿದರು. ಆಗ ಪತ್ರಕರ್ತ ಹೌದು ಎಂದ. ಆಗ ನಾನು 2019 ವಿಶ್ವಕಪ್ ನಲ್ಲಿ ಆಡಲು ಯೋಗ್ಯನಲ್ಲವೇ ಎಂದು ಕೇಳಿದಾಗ, ಪತ್ರಕರ್ತನ ಉತ್ತರ ಖಂಡಿತವಾಗಿಯೂ ಆಡಬಹುದು ಎಂಬುದಾಗಿತ್ತು. ಆಗ ಧೋನಿ ಇದೇ ನನ್ನ ಉತ್ತರ ಎನ್ನುವ ಮೂಲಕ ಎಲ್ಲರ ಮುಖದಲ್ಲೂ ನಗು ತಂದರು.

Leave a Reply