ಈ ರಾಜಕೀಯ ಮುಖಂಡರಿಗೆ ಬುದ್ಧಿ ಬರೋಲ್ಲ, ಕಳಸಾ ಬಂಡೂರೀಲಿ ನೀರು ಹರಿಯೋಲ್ಲ.. ರೈತರ ಬವಣೆ ತಪ್ಪೋದಿಲ್ಲ..!

Crowed out side the Conference hall during the Kalasa Banduri Meeting at Vidhana Soudha in Bengaluru on Saturday.

ಡಿಜಿಟಲ್ ಕನ್ನಡ ಟೀಮ್

ಆಡಳಿತ ಪಕ್ಷಕ್ಕಾಗಲಿ, ಪ್ರತಿಪಕ್ಷಗಳಿಗಾಗಲಿ ಸಮಸ್ಯೆ ಬಗೆಹರಿಯುವುದು ಬೇಕಿಲ್ಲ. ಬದಲಿಗೆ ಸಮಸ್ಯೆ ಜ್ವಲಂತವಾಗಿಟ್ಟು ರಾಜಕೀಯ ಮಾಡುವುದು ಬೇಕು. ಹೀಗಾಗಿ ಕಳಸಾ ಬಂಡೂರಿ ನಾಲೆ ಹಾಗೂ ಮಹದಾಯಿ-ಮಲಪ್ರಭ ನದಿ ಜೋಡಣೆ ಯೋಜನೆ ವಿವಾದಕ್ಕೆ ಪರಿಹಾರ ಕಂಡುಹಿಡಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶನಿವಾರ ನಡೆದ ಸರ್ವಪಕ್ಷಗಳ ಸಭೆ ಒಮ್ಮತದ ಕೊರತೆಯಿಂದ ಅಪೂರ್ಣಗೊಂಡಿದೆ.

ಸಭೆ ನಡೆದ ಶೈಲಿ, ವಾದ-ಪ್ರತಿವಾದದ ಸ್ವರೂಪ ನೋಡಿದ ಯಾರಿಗೆ ಆಗಲಿ ಆಡಳಿತ-ಪ್ರತಿಪಕ್ಷಗಳಿಗೆ ರಾಜಕೀಯ ಪ್ರತಿಷ್ಠೆ ಮೆರೆಯುವುದು ಬಿಟ್ಟು ಸತತ ಬರದ ಬೇಗೆ ಅನುಭವಿಸುತ್ತಿರುವ ಆ ಭಾಗದ ರೈತಾಪಿ ಜನರ ಸಮಸ್ಯೆ ಬಗ್ಗೆ ನೈಜ ಕಾಳಜಿ ಇರುವಂತೆ ಕಾಣಲಿಲ್ಲ. ಅವರ ರಾಜಕೀಯ ಕಾದಾಟ, ಪ್ರತಿಷ್ಠೆ ಮೂಲ ವಿವಾದವನ್ನೇ ಮರೆಸಿತ್ತು.

ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಣ ಈ ವಿವಾದವನ್ನು ನ್ಯಾಯಾಲಯದ ಹೊರಗೆ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕು ಎಂಬುದು ರೈತ ಮುಖಂಡರು ಹಾಗೂ ರಾಜ್ಯ ಸರಕಾರದ ಅಭಿಪ್ರಾಯ. ಏಕೆಂದರೆ ಉಳಿದೆರಡು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಸಮಸ್ಯೆಯನ್ನು ಆ ರಾಜ್ಯಗಳಲ್ಲಿ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ಸರಕಾರದ ಕೊರಳಿಗೆ ಕಟ್ಟಿ ತಾವು ನಿರಾಳ ಆಗಬಹುದು ಎಂಬುದು ಕಾಂಗ್ರೆಸ್ ಮುಖಂಡರ ದೂರಾಲೋಚನೆ. ಆದರೆ ಬಿಜೆಪಿ ನಾಯಕರೇನು ಬಾಯಲ್ಲಿ ಬೆರಳಿಟ್ಟುಕೊಂಡಿದ್ದಾರೆಯೇ. ಈ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಅಲ್ಲಿನ ಪ್ರತಿಪಕ್ಷ ಕಾಂಗ್ರೆಸ್ ಮುಖಂಡರ ಮನವೊಲಿಸುವ ಕೆಲಸವನ್ನು ಕರ್ನಾಟಕದ ಆಡಳಿತರೂಢ ಕಾಂಗ್ರೆಸ್ ಮುಖಂಡರು ಮೊದಲು ಮಾಡಲಿ. ಆನಂತರ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯೋಣ ಎಂಬುದು ಬಿಜೆಪಿ ನಾಯಕರ ಅಂಬೋಣ. ಏಕೆಂದರೆ ನೆಲ, ಜಲ ವಿಚಾರ ಬಂದಾಗ ಆ ರಾಜ್ಯಗಳ ಆಡಳಿತ ಹಾಗೂ ಪ್ರತಿಪಕ್ಷಗಳ ಮುಖಂಡರು ಏಕತೆ ಕಾಪಾಡಿಕೊಳ್ಳುತ್ತಾರೆ. ಕರ್ನಾಟಕದ ಒತ್ತಡಕ್ಕೆ ಮಣಿಯುವುದಿಲ್ಲ ಎಂಬ ಅಚಲ ನಂಬಿಕೆ ಇವರಿಗೆ ಇದೆ. ಆದರೆ ಸಮಸ್ಯೆ ವಿಚಾರ ಬಂದಾಗ ಅವರಿಗಿರುವ ಒಗ್ಗಟ್ಟು ತಮಗಿಲ್ಲವಲ್ಲ ಎಂಬ ನಾಚಿಕೆ. ಮುಜುಗರ ಇಲ್ಲಿನ ಯಾವುದೇ ಪಕ್ಷಗಳ ಮುಖಂಡರಿಗೆ ಇಲ್ಲ. ಆ ಒಗ್ಗಟ್ಟು ಬರಬಾರದು ಎಂಬ ಕಾರಣಕ್ಕಾಗಿಯೇ ಇವರು ಕಿತ್ತಾಡುತ್ತಿರುವುದರಿಂದ ಯಾವುದೇ ನಿರ್ಣಯ ಇಲ್ಲದೆ ಸಭೆ ಬರ್ಕಸ್ತಾಗಿದೆ. ಸಮಸ್ಯೆ ಮಾತ್ರ ಸ್ಟ್ಯಾಂಡು ಹಾಕಿಕೊಂಡು ನಿಂತಲ್ಲಿಯೇ ಸೈಕಲ್ ತುಳಿಯುತ್ತಿದೆ.

Chief Minister Siddaramaiah, Former CM B.S.Yediyurappa, Union Ministers Ananth Kumar, G.M.Siddesh, Ministers S.R.Patil, H.K.Patil, and others during the Kalasa Banduri Meeting at Vidhana Soudha in Bengaluru on Saturday.

ಸಭೆಯಲ್ಲಿ ಸಿದ್ದರಾಮಯ್ಯ, ಅವರ ಸಂಪುಟದ ಸದಸ್ಯರು, ಕೆಲ ಸಂಸದರು, ಬಿಜೆಪಿಯ ಬಹುತೇಕ ನಾಯಕರು, ಸಂಸದರು, ಕಳಸಾ ಬಂಡೂರಿ ನಾಲೆ, ಮಲ್ಲಪ್ರಭ ನದಿ ಭಾಗದ ರೈತ ಮುಖಂಡರು, ಮಠಾಧಿಪತಿಗಳು ಭಾಗವಹಿಸಿದ್ದರು. ಸಭೆ ನಂತರ ಆಡಳಿತ ಮತ್ತು ಪ್ರತಿಪಕ್ಷ ಮುಖಂಡರ ಪರಸ್ಪರ ಕೆಸರೆರಚಾಟ ಮುಂದುವರಿಸಿದರು. ಒಬ್ಬರ ಮೇಲೊಬ್ಬರು ಗೂಬೆ ಕೂರಿಸಿದರು. ಸಭೆ ಒಳಗಿನ ಬೆಳವಣಿಗೆಗಳೇ ಹೊರಗೂ ಪ್ರತಿಬಿಂಬಿತ ಆಗಿದ್ದರಿಂದ ವಿಶೇಷವೇನೂ ಗೋಚರಿಸಲಿಲ್ಲ. ರೈತರ ಸಮಸ್ಯೆಗೆ ಪರಿಹಾರ ಸಿಗಲಿಲ್ಲ.

ಈ ಮಧ್ಯೆ, ಕಳಸಾ ಬಂಡೂರಿ ಯೋಜನೆಗಾಗಿ 300 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ‘ಯೋಜನೆವ್ಯಾಪ್ತಿ’ ರೈತ ಮುಖಂಡರನ್ನು ಸಭೆಯೊಳಗೆ ಬಿಡಲಿಲ್ಲ. ಅದನ್ನು ಖಂಡಿಸಿ ಬಾಧಿತ ರೈತರು ಸಭೆ ನಡೆಯುತ್ತಿದ್ದ ವಿಧಾನಸೌಧದ ಸಮ್ಮೇಳನ ಸಭಾಂಗಣದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದರೆ,  ಮುಖಂಡರು ಒಳಗೆ ರಾಜಕೀಯ ನಾಟಕ ಆಡುತ್ತಿದ್ದುದು ಇಂದಿನ ವಿಶೇಷವಾಗಿತ್ತು.

Leave a Reply