ಹುಡುಗರ ಮದುವೆ ವಯಸ್ಸು18 ಕ್ಕೆ ಇಳಿಸೋ ಬದಲು ಹುಡುಗಿಯರದನ್ನೇ 21 ಕ್ಕೆ ಏರಿಸೋದು ಸಮಾನತೆ ಆಗೋದಿಲ್ವೇ..?

ಡಿಜಿಟಲ್ ಕನ್ನಡ ಟೀಮ್

ಲಿಂಗ ಸಮಾನತೆ.. ಪ್ರತಿ ಕ್ಷೇತ್ರದಲ್ಲೂ ಜಾರಿ ಆಗಬೇಕು ಅನ್ನೋದು ಹಳೇ ಬೇಡಿಕೆ. ಈಗ ಈ ಕೂಗು ಮದುವೆ ವಯೋಮಿತಿಗೂ ಅನ್ವಯವಾಗ್ತಿದೆ. ಹುಡುಗಿಯರು 18 ವಯಸ್ಸಿಗೆ ಮದುವೆ ಆಗೋದಾದ್ರೆ, ಹುಡುಗರು ಯಾಕೆ 21 ರವರೆಗೆ ಕಾಯಬೇಕು. ಅವರ ಮದುವೆ ಏಜನ್ನೂ 18 ಕ್ಕೇ ಇಳಿಸಿ. ಗಂಡೈಕಳು 18 ಕ್ಕೇ ಮತದಾನದ ಹಕ್ಕು ಪಡೆಯೋದಾದ್ರೆ, ಆ ವಯಸ್ಸಿಗೆ ಮದುವೆ ಯಾಕಾಗಬಾರದು ಅಂತ ಹದಿನಾಲ್ಕು ಸದಸ್ಯರ ಉನ್ನತಾಧಿಕಾರಿಗಳ ಸಮಿತಿಯು ಕೇಂದ್ರ ಸರ್ಕಾರಕ್ಕೆ ಇಳಿಸಲು ಶಿಫಾರಸ್ಸು ಮಾಡಿದ್ದು, ಒಪ್ಪಿಗೆಯಷ್ಟೇ ಬಾಕಿ ಇದೆಯಂತೆ.

ಈ ಶಿಫಾರಸ್ಸಿಗೆ ಸಮಿತಿ ಬಳಿ ಯಾವುದೇ ವೈಜ್ಞಾನಿಕ ಸಮಜಾಯಿಷಿಯಾಗಲಿ, ತರ್ಕವಾಗಲಿ ಇಲ್ಲ.  ಹಂಗಂತ ಸಮಿತಿಯೇ ಹೇಳಿಕೊಂಡಿದೆ. ಆದರೂ  ಪುರುಷ ಹಾಗೂ ಮಹಿಳೆಯರ ವಿವಾಹ ವಯೋಮಿತಿಯಲ್ಲಿ ತಾರತಮ್ಯ ಏಕೆ ಎಂಬ ಪ್ರಶ್ನೆಯನ್ನುಅದು ಎತ್ತಿದೆ. ಬರೀ ಸಮಾನತೆ ಅನ್ನೋ ಕಾರಣಕ್ಕೆ ವಯೋಮಿತಿ ಇಳಿಸಬೇಕು ಅನ್ನುತ್ತಿರುವ ಈ ಸಮಿತಿ ಬರುಡೇಲಿ ಏನಿದೆ ಅಂತಾನೇ ಗೊತ್ತಾಗುತ್ತಿಲ್ಲ.

ಏಕೆಂದರೆ, ಸಮಾನತೆ ತರಲೇಬೇಕು ಅಂತಾದರೆ, ಹುಡುಗಿಯರ ವಯೋಮಿತಿಯನ್ನೇ 21ಕ್ಕೆ ಏರಿಸಬಹುದಲ್ಲವೇ? ಇತ್ತೀಚಿನ ದಿನಮಾನದಲ್ಲಿ ಮಹಿಳಾ ಸಾಕ್ಷರತೆ ಶೇಕಡಾ 65 ಕ್ಕೆ ಹೆಚ್ಚಿದೆ. ತತ್ಪರಿಣಾಮ ಓದು ಮುಗಿಸಿದ ಯುವತಿಯರು ಉದ್ಯೋಗ ಬಯಸುತ್ತಿದ್ದಾರೆ. ಒಂದಷ್ಟು ದುಡಿದ ನಂತರವೋ, ಮನಸ್ಥಿತಿಯ ಮಾರ್ಪಾಡಿನ ಪರಿಣಾಮ ಹುಡುಗಿಯರು ಸಾಮಾನ್ಯವಾಗಿ 23 ರ ನಂತರ ಮದುವೆ ಆಗುತ್ತಿದ್ದಾರೆ. ಹೀಗಾಗಿ ಅವರ ಮದುವೆ ವಯೋಮಿತಿಯನ್ನು ಹೆಚ್ಚಿಸಿದರೆ, ಓದು ಮತ್ತು ಉದ್ಯೋಗ ಸೇರುವ ಅವರ ಬಯಕೆಗೆ ಪೂರಕ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತಿತ್ತು.

ಅದನ್ನು ಬಿಟ್ಟು ಪುರುಷರ ವಯೋಮಿತಿ ಇಳಿಕೆಗೆ ಹೊರಟಿರುವುದರ ಹಿಂದೆ ಅದ್ಯಾವ ಪುರುಷಾರ್ಥ ಅಡಗಿದೆಯೋ ಗೊತ್ತಿಲ್ಲ. ಏಕೆಂದರೆ 18 ಕ್ಕೆ ಅವರ ಓದೇ ಮುಗಿದಿರುವುದಿಲ್ಲ. ಇನ್ನು ಕೆಲಸದ ಮಾತಂತೂ ದೂರವೇ ಉಳಿಯಿತು. ಡಿಗ್ರಿ ಮುಗಿಯೋದಿಕ್ಕೆ ಕನಿಷ್ಟ 21 ವರ್ಷ ಬೇಕು. ಅಷ್ಟರ ಮೇಲೆ ಕೆಲಸ ಹುಡುಕಬೇಕು. ಅದು ಸಿಗಬೇಕು. ಕೆಲಸ ಸಿಕ್ಕ ನಂತರ ಮದುವೆ, ಹೆಂಡತಿ, ಮಕ್ಕಳ ಜವಾಬ್ದಾರಿ. ಆದರೆ 18 ಕ್ಕೆ ಅದೂ ಅಪ್ಪ-ಅಮ್ಮನ ಮೇಲೆ ಅವಲಂಬಿತ ಆಗಿರುವ ಹುಡುಗನಿಗೆ ಮದುವೆ ಮಾಡಿ, ಆತನ ಸಂಸಾರದ ಜವಾಬ್ದಾರಿಯನ್ನೂ ಪೋಷಕರ ಮೇಲೆ ಹೇರೋ ಈ ಶಿಫಾರಸ್ಸು ಮಾಡಿರುವ ಸಮಿತಿ ಸದಸ್ಯರಿಗೆ ಬಹುಶಃ ಪೋಷಕ ಸಮುದಾಯದ ಮೇಲೆ ಸಿಟ್ಟಿರಬೇಕು. ಇಲ್ಲ ಹುಡುಗನಿಗೆ ಮದುವೆಯನ್ನೇ ಉದ್ಯೋಗವಾಗಿಸುವ ಹುನ್ನಾರವಿರಬೇಕು. ಅದೇನಾದರೂ ಆಗಲಿ ಯಾವುದೋ ಒಂದು ವಿಕಲ್ಪ ಈ ಶಿಫಾರಸ್ಸಿನ ಹಿಂದೆ ಇರುವುದಂತೂ ಸುಸ್ಪಷ್ಟ.

ಈ ಶಿಫಾರಸ್ಸು ಯಾರಿಗೆ ಅನುಕೂಲ ಆಗಬಹುದು ಅಂದರೆ, ಈ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಆತುರವಾಗಿ ಮದುವೆ ಮಾಡಿ ಕೈತೊಳೆದುಕೊಳ್ಳುವ ದುರ್ಬಲ ಮನಸ್ಸುಗಳಿಗೆ ಮಾತ್ರ. 18 ವಯಸ್ಸಿಗೆ ಪ್ರಬುದ್ಧತೆ ಇರೋದಿಲ್ಲ. ಜವಾಬ್ದಾರಿ ಹೊರುವ ಮನಸ್ಥಿತಿ ಇರೋದಿಲ್ಲ. ಹುಡುಗಾಟಿಕೆ ವಯಸ್ಸಿನಲ್ಲಿ ಮದುವೆ ಮಾಡೋದು ಎಷ್ಟರ ಮಟ್ಟಿಗೆ ಸರಿ ಎಂಬ ಬಗ್ಗೆ ಚಿಂತನೆ ಅಗತ್ಯವಿದೆ.  ವಿವಾಹ ವಯೋಮಿತಿ ಇಳಿಕೆಯಾದರೆ ಸಾಮಾಜಿಕ ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ಯಾವುದೇ ಖಚಿತ ಭರವಸೆ ಇಲ್ಲ. ಸಮಿತಿಯ ಉಳಿದ ಶಿಫಾರಸ್ಸುಗಳು ಹೀಗಿವೆ:

– 18 ವರ್ಷದೊಳಗಿನ ಯುವತಿಯರ ಜತೆ ಅಕೆ ಪತ್ನಿಯಾಗಿದ್ದರೂ ಸರಿಯೇ, ಲೈಂಗಿಕ ಸಂಪರ್ಕ ಹೊಂದಿದ್ದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಿ ಶಿಕ್ಷೆ ನೀಡಬೇಕು.

– ಮದುವೆ ನೊಂದಣಿ ಕಡ್ಡಾಯ ಮಾಡಬೇಕು.

– 18 ವರ್ಷದೊಳಗಿನ ಮದುವೆಯನ್ನು ಅನೂರ್ಜಿತಗೊಳಿಸಬೇಕು.

– ಲೀವಿಂಗ್ ಟುಗೆದರ್ ಸಂಬಂಧದಲ್ಲೂ ಮಹಿಳೆಗೆ ಜೀವನಾಂಶ ನೀಡಬೇಕು.

– ಮರ್ಯಾದ ಹತ್ಯೆ ಕುರಿತು ಕಾನೂನು ರಚಿಸಬೇಕು.

– ರಿಜಿಸ್ಟರ್ಡ್ ಮದುವೆಗೆ 30 ದಿನಗಳು ಮುಂಚಿತ ಸಾರ್ವಜನಿಕ ಪ್ರಕಟಣೆ ನಿಯಮ ತೆಗೆದು ಹಾಕಬೇಕು.

Leave a Reply