ಎಸಿಬಿ ರಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ಮೊದಲ ದೂರು ದಾಖಲು..!

 

ಡಿಜಿಟಲ್ ಕನ್ನಡ ಟೀಮ್

ವಿಚಿತ್ರ ನೋಡಿ, ಸಿಎಂ ಸಿದ್ದರಾಮಯ್ಯ ವಿರುದ್ಧವೇ ಎಸಿಬಿಗೆ ಮೊದಲ ದೂರು ದಾಖಲು!

ನೋಡಿ ಹಣೆಬರಹ ಹೇಗಿದೆ ಅಂತಾ..? ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧವೇ ಎಸಿಬಿಯಲ್ಲಿ ಮೊದಲ ದೂರು ದಾಖಲಾಗಿದೆ. ಇದು ಸಿಎಂಗೆ ಅಗ್ನಿ ಪರೀಕ್ಷೆ ಆಗಲಿದೆ.

ಸಿದ್ದರಾಮಯ್ಯ ಅವರಿಗೆ ಡೈಮಂಡ್ ವಾಚ್ ಉಡುಗೊರೆಯಾಗಿ ಬಂದ ಹಿನ್ನೆಲೆ ಏನು? ಅವರಿಗೆ ಯಾಕಾಗಿ ಈ ಉಡುಗೊರೆ ನೀಡಲಾಯಿತು? ಈ ಉಡುಗೊರೆ ಕೊಟ್ಟದಕ್ಕೆ ಪಡೆದ ಪ್ರತಿಫಲವಾದರೂ ಏನು? ಅವರಿಗೆ ಕೊಟ್ಟವರನ್ನು ಎಸಿಬಿ ಮುಂದೆ ತಂದು ನಿಲ್ಲಿಸಬಾರದೇಕೆ – ಇವೇ ಮೊದಲಾದ ಪ್ರಶ್ನೆಗಳನ್ನು ಹೈಕೋರ್ಟ್ ವಕೀಲ ನಟರಾಜ್ ಶರ್ಮಾ ರಾಜ್ಯ ಪೊಲೀಸ್ ನಿರ್ದೇಶಕರ ಕಚೇರಿಯಲ್ಲಿರುವ ಎಸಿಬಿಗೆ ದೂರು ಸಲ್ಲಿಸಿದ್ದಾರೆ.

ಲೋಕಾಯುಕ್ತ ದುರ್ಬಲಗೊಳಿಸಲು ಸಿದ್ದರಾಮಯ್ಯ ಅವರು ಎಸಿಬಿ ರಚನೆ ಮಾಡಿದ್ದಾರೆ. ದೇವನಹಳ್ಳಿ ವಿಮಾನ ನಿಲ್ದಾಣ ಬಳಿ ನೂರಾರು ಎಕರೆ ಜಮೀನು ರೀಡೂ ಹೆಸರಿನಲ್ಲಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಕೈಯಲ್ಲಿ ಪತ್ತೆಯಾದ 68 ಲಕ್ಷ ರುಪಾಯಿ ಮೌಲ್ಯದ ವಾಚು ಅವರು ಹೇಳಿಕೊಂಡಿರುವಂತೆ ವಿದೇಶಿ ಮಿತ್ರನಿಂದ ಉಡುಗೊರೆ ಪಡೆದಿದ್ದಲ್ಲ ಎಂಬ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಶರ್ಮಾ ಅವರು ವಾಚ್ ಉಡುಗೊರೆ ಪ್ರಕರಣ ಕುರಿತು ತನಿಖೆ ನಡೆಸುವಂತೆ ಎಸಿಬಿಗೆ ದೂರು ನೀಡಿದ್ದಾರೆ.

ಇಲ್ಲಿ ಸಿದ್ದರಾಮಯ್ಯ ಅವರ ವಿರುದ್ಧದ ದೂರು ಸಂಕೇತ ಮಾತ್ರ. ಆದರೆ ಎಸಿಬಿ ಹೇಗೆ ಕಾರ್ಯ ನಿರ್ವಹಿಸುತ್ತದೆ? ಅದರ ಮೇಲೆ ಸರಕಾರದ ಪ್ರಭಾವ ಏನು ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ದೂರು ನೀಡದಂತಿದೆ.

ವಿಜಯ ಮಲ್ಯಗೆ ಮೂರನೇ ನೋಟಿಸ್

ದೇಶದ ಪ್ರತಿಷ್ಠಿತ ಐಡಿಬಿಐ ಬ್ಯಾಂಕ್ ನಿಂದ ₹ 9000 ಕೋಟಿಗೂ ಹೆಚ್ಚು ಸಾಲ ಮತ್ತು ಹಣ ದುರುಪಯೋಗ ಪ್ರಕರಣದ ತನಿಖೆಯಲ್ಲಿ ಭಾಗಿಯಾಗುವಂತೆ ಜಾರಿ ನಿರ್ದೇಶನಾಲಯ ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ಮೂರನೇ ಬಾರಿಗೆ ಸಮನ್ಸ್ ಜಾರಿ ಮಾಡಿದೆ. ಏ.9ರಂದು ನಡೆಯಲಿರುವ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗುವಂತೆ ಸಮನ್ಸ್ ನಲ್ಲಿ ತಿಳಿಸಲಾಗಿದೆ.

ಆದರೆ ಮಲ್ಯ ಅವರು ಲಂಡನ್ ಗೆ ಪಲಾಯನ ಮಾಡಿದ್ದು, ಸದ್ಯಕ್ಕೆ  4000 ಕೋಟಿ ಸಾಲ ತೀರಿಸಲು ತಾವು ಶಕ್ತರಿರುವುದಾಗಿ ತಿಳಿಸಿದ್ದಾರೆ. ನೋಡಬೇಕು ಕತೆ ಏನಾಗುತ್ತತೋ ಎಂದು.

ಶನಿ ದೇಗುಲ ಪ್ರವೇಶಕ್ಕೆ ಮಹಿಳೆಯರಿಗೆ ಕೋರ್ಟ್ ಸಮ್ಮತಿ

ಮಹಿಳೆಯರಿಗೆ ದೇವಸ್ಥಾನದಲ್ಲಿ ಪ್ರವೇಶ ನೀಡುವುದು ಮೂಲಭೂತ ಹಕ್ಕು ಎಂಬ ಬಾಂಬೆ ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ, ಮಹಿಳಾ ಹಕ್ಕು ಸಂಘಟನೆ ಕಾರ್ಯಕರ್ತೆಯರು ಶನಿವಾರ ಶನಿ ಶಿಂಗ್ನಾಪುರ ದೇವಾಲಯಕ್ಕೆ ಪ್ರವೇಶಿಸಲು ಯತ್ನಿಸಿದರು.
ಬಾಂಬೆ ಹೈಕೋರ್ಟ್ ತೀರ್ಪಿಗೆ ಬದ್ಧರಾಗದಿದ್ದರೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ವಿರುದ್ಧ ಪ್ರಕರಣ ದಾಖಲಿಸುವುದಾಗಿ, ಭೂಮಾತ ರಣರಾಗಿಣಿ ಬ್ರಿಗೇಡ್ ಮುಖ್ಯಸ್ಥೆ ತೃಪ್ತಿ ದೇಸಾಯಿ ತಿಳಿಸಿದ್ದಾರೆ. ಅವರು ಹೋರಾಟದ ಮುಂಚೂಣಿಯಲ್ಲಿದ್ದರು.

Leave a Reply